ಕರ್ನಾಟಕ ಸೇರಿ 10 ರಾಜ್ಯಗಳ 24 ರಾಜ್ಯಸಭಾ ಸ್ಥಾನಗಳಿಗೆ ಜೂ.18ರಂದು ಚುನಾವಣೆ ; ರಾಜ್ಯಸಭೆಯಲ್ಲಿ ಎನ್‌ಡಿಎಗೆ ಸಿಗುವುದೇ 3ನೇ 2ರಷ್ಟು ಬಹುಮತ ?

ನವದೆಹಲಿ: ಜೂನ್ ಮತ್ತು ಜುಲೈ ತಿಂಗಳಿನಲ್ಲಿ ತೆರವಾಗಲಿರುವ 10 ರಾಜ್ಯಗಳ ಒಟ್ಟು 24 ರಾಜ್ಯಸಭಾ ಸ್ಥಾನಗಳಿಗೆ ಜೂನ್ 18 ರಂದು ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗವು ಪ್ರಕಟಿಸಿದೆ. ಮತದಾನ ಮುಗಿದ ತಕ್ಷಣ ಅಂದೇ ಸಂಜೆ ಮತ ಎಣಿಕೆ ಕಾರ್ಯವೂ ನಡೆಯಲಿದ್ದು, ಫಲಿತಾಂಶ ಹೊರಬೀಳಲಿದೆ.
ಪ್ರಸಕ್ತ ಸಾಲಿನ ಜೂನ್ 21 ರಿಂದ ಜುಲೈ 19 ರ ಅವಧಿಯಲ್ಲಿ ನಿವೃತ್ತರಾಗಲಿರುವ ಸದಸ್ಯರ ಸ್ಥಾನಗಳಿಗೆ ಈ ಚುನಾವಣೆ ನಡೆಯಲಿದೆ. ಜೂನ್ 8 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ಮೂರನೇ ಎರಡರಷ್ಟು ಬಹುಮತಕ್ಕೆ ಎನ್‌ಡಿಎ ಕಸರತ್ತು
ಸದ್ಯ 245 ಸದಸ್ಯ ಬಲದ ಮೇಲ್ಮನೆಯಲ್ಲಿ (ರಾಜ್ಯಸಭೆ) ಬಿಜೆಪಿ 113 ಸದಸ್ಯರನ್ನು ಹೊಂದಿದ್ದರೆ, ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ಒಟ್ಟು ಬಲ 148 ರಷ್ಟಿದೆ. ಸಂವಿಧಾನ ತಿದ್ದುಪಡಿಯಂತಹ ಪ್ರಮುಖ ಮಸೂದೆಗಳನ್ನು ಅಂಗೀಕರಿಸಲು ಸರ್ಕಾರಕ್ಕೆ ಸದನದಲ್ಲಿ ಮೂರನೇ ಎರಡರಷ್ಟು (2/3) ಬಹುಮತದ ಅಗತ್ಯವಿದೆ. ಅಂದರೆ ಎನ್‌ಡಿಎ ಮೈತ್ರಿಕೂಟಕ್ಕೆ ಇನ್ನೂ 15 ಸಂಸದರ ಕೊರತೆಯಿದೆ.
ಈ ಚುನಾವಣೆಯಲ್ಲಿ ಎನ್‌ಡಿಎಗೆ ಆ ಬಹುಮತ ಸಿಗುವುದು ಅಸಾಧ್ಯವಾದರೂ, ಸಂಖ್ಯಾಬಲದ ಆಧಾರದ ಮೇಲೆ ಆಂಧ್ರಪ್ರದೇಶ ಮತ್ತು ಗುಜರಾತ್‌ನಲ್ಲಿ ಒಟ್ಟಾರೆಯಾಗಿ 4 ಸ್ಥಾನಗಳನ್ನು ಹೆಚ್ಚುವರಿಯಾಗಿ ಗೆಲ್ಲುವ ಸಾಧ್ಯತೆಯಿದೆ. ಆದರೆ, ಕರ್ನಾಟಕ ಮತ್ತು ಜಾರ್ಖಂಡ್‌ನಲ್ಲಿ ತಲಾ ಒಂದು ಸ್ಥಾನವನ್ನು ಕಳೆದುಕೊಳ್ಳಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ.
ನಿವೃತ್ತಿಯಾಗಲಿರುವ ಪ್ರಮುಖರು
ಈ ಬಾರಿ ನಿವೃತ್ತಿ ಹೊಂದುತ್ತಿರುವವರಲ್ಲಿ ದೇಶದ ರಾಜಕಾರಣದ ಹಲವು ಪ್ರಮುಖ ನಾಯಕರಿದ್ದಾರೆ. ಮಲ್ಲಿಕಾರ್ಜುನ ಖರ್ಗೆ – ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು (ಕರ್ನಾಟಕ), ಎಚ್. ಡಿ. ದೇವೇಗೌಡ – ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರು (ಕರ್ನಾಟಕ), ರವನೀತ್ ಸಿಂಗ್ ಬಿಟ್ಟು – ಕೇಂದ್ರ ಸಚಿವರು (ರಾಜಸ್ಥಾನ), ದಿಗ್ವಿಜಯ ಸಿಂಗ್ – ಕಾಂಗ್ರೆಸ್ ಹಿರಿಯ ನಾಯಕ (ಮಧ್ಯಪ್ರದೇಶ), ಶಕ್ತಿ ಸಿನ್ಹ ಗೋಹಿಲ್ – ಕಾಂಗ್ರೆಸ್ ನಾಯಕ (ಗುಜರಾತ್) ಮೊದಲಾದ ಪ್ರಮುಖರು ನಿವೃತ್ತಿಯಾಗಲಿದ್ದಾರೆ.
ಆಂಧ್ರಪ್ರದೇಶ, ಗುಜರಾತ್ ಮತ್ತು ಕರ್ನಾಟಕ: ತಲಾ 4 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ 3 ಸ್ಥಾನಗಳು, ಜಾರ್ಖಂಡದಲ್ಲಿ 2 ಸ್ಥಾನಗಳು,   ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ ಮತ್ತು ಮಿಜೋರಾಂನಲ್ಲಿ ತಲಾ 1 ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement