ಬೆಂಗಳೂರು : ಕ್ರಿಕೆಟ್ ಆಡುತ್ತಿರುವಾಗಲೇ ಹೃದಯಾಘಾತದಿಂದ ಆಟಗಾರ ನಿಧನ

ಬೆಂಗಳೂರು : ಕರ್ನಾಟಕದ ಮಾಜಿ ವೇಗದ ಬೌಲರ್ ಎಸ್.ಎಲ್. ಅಕ್ಷಯ ಅವರು ಭಾನುವಾರ ಕ್ರಿಕೆಟ್ ಪಂದ್ಯವನ್ನಾಡುತ್ತಿದ್ದಾಗಲೇ ಹೃದಯಾಘಾತದಿಂದ ಕುಸಿದುಬಿದ್ದು ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಅವರಿಗೆ 39 ವರ್ಷ ವಯಸ್ಸಾಗಿತ್ತು.
2014-15ರ ಋತುವಿನಲ್ಲಿ ರಣಜಿ ಟ್ರೋಫಿ ಮುಕುಟ ಮುಡಿಗೇರಿಸಿಕೊಂಡ ಕರ್ನಾಟಕ ತಂಡದ ಸದಸ್ಯರಾಗಿದ್ದ ಅಕ್ಷಯ ಅವರು, ಈ ದುರದೃಷ್ಟಕರ ಘಟನೆ ನಡೆದಾಗ ಕೆಎಸ್‌ಸಿಎ (KSCA) ಮೂರನೇ ಡಿವಿಷನ್ ಪಂದ್ಯದಲ್ಲಿ ಸಫೈರ್ ಸಿಸಿ (Sapphire CC) ತಂಡದ ಪರವಾಗಿ ಆಡುತ್ತಿದ್ದರು.
ಪಂದ್ಯದಲ್ಲಿ ಅಕ್ಷಯ ಅವರು ನಾಲ್ಕು ಓವರ್‌ಗಳ ಬೌಲಿಂಗ್ ದಾಳಿ ನಡೆಸಿದ ಬಳಿಕ ತೀವ್ರ ಅಸ್ವಸ್ಥತೆ ಮತ್ತು ಎದೆನೋವಿನ ಕಾರಣ ನೀಡಿ ಮೈದಾನದಿಂದ ಹೊರನಡೆದಿದ್ದರು. ವಿಶ್ರಾಂತಿ ಕೊಠಡಿಗೆ ತೆರಳಿದ್ದ ಅವರು, ಕೆಲವೇ ಕ್ಷಣಗಳಲ್ಲಿ ಕುಸಿದು ಬಿದ್ದಿದ್ದಾರೆ. ಅವರನ್ನು ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ. ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

ಅಕ್ಷಯ ಅವರ ನಿಧನಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ತೀವ್ರ ಸಂತಾಪ ವ್ಯಕ್ತಪಡಿಸಿದೆ.
“ಅಕ್ಷಯ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ತಮ್ಮ ಆಟದ ದಿನಗಳ ನಂತರವೂ ಅವರು ಕ್ರಿಕೆಟ್ ಆಟದ ಮೇಲಿನ ಅಚಲವಾದ ಉತ್ಸಾಹ ಮತ್ತು ಸಮರ್ಪಣಾ ಭಾವದಿಂದ ಸೇವೆಯನ್ನು ಮುಂದುವರಿಸಿದ್ದರು. ಜೂನಿಯರ್ ಮಟ್ಟದ ತರಬೇತುದಾರರಾಗಿ (ಕೋಚ್), ಅವರು ಯುವ ಕ್ರಿಕೆಟಿಗರನ್ನು ತಿದ್ದಿ ತೀಡುವಲ್ಲಿ ಮತ್ತು ಅವರಿಗೆ ಮಾರ್ಗದರ್ಶನ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಾಜ್ಯದಲ್ಲಿ ಕ್ರಿಕೆಟ್ ಪ್ರತಿಭೆಗಳ ಬೆಳವಣಿಗೆಗೆ ಅವರು ನೀಡಿದ ಕೊಡುಗೆ ಎಂದಿಗೂ ಮರೆಯಲಾಗದು ಎಂದು ಹೇಳಿದೆ.

ಪ್ರಮುಖ ಸುದ್ದಿ :-   ಕುಮಟಾ : ಶಾಲೆಯ ಪಕ್ಕವೇ ಭೂ ಕುಸಿತ ; ಕಟ್ಟಡಕ್ಕೆ ಬಂದು ಅಪ್ಪಳಿಸಿದ ಬೃಹತ್‌ ಬಂಡೆ

ಕ್ರಿಕೆಟ್ ಜೀವನದ ಹಾದಿ:
2011 ರಿಂದ 2013ರ ನಡುವಿನ ಅವಧಿಯಲ್ಲಿ ಕರ್ನಾಟಕ ತಂಡದ ಪರವಾಗಿ ಆಡಿದ್ದ ಅಕ್ಷಯ, ಒಟ್ಟು 6 ಪ್ರಥಮ ದರ್ಜೆ ಪಂದ್ಯಗಳು, 3 ಲಿಸ್ಟ್-ಎ ಪಂದ್ಯಗಳು ಮತ್ತು 9 ಟಿ20 ಪಂದ್ಯಗಳನ್ನು ಆಡಿದ್ದರು. ಆಟಗಾರನಾಗಿ ನಿವೃತ್ತರಾದ ಬಳಿಕ ತರಬೇತಿ ಕ್ಷೇತ್ರಕ್ಕೆ ಕಾಲಿಟ್ಟ ಅವರು, ರಾಜ್ಯದ ಅಂಡರ್-19 (U-19) ತಂಡದ ತರಬೇತುದಾರರಾಗಿ ಯುವ ಪ್ರತಿಭೆಗಳನ್ನು ಬೆಳೆಸುವ ಜವಾಬ್ದಾರಿಯನ್ನು ಹೊತ್ತು ಕರ್ನಾಟಕ ಕ್ರಿಕೆಟ್‌ಗೆ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement