ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಮುಂದಿನ ಉತ್ತರಾಧಿಕಾರಿ ಆಯ್ಕೆ ಹಾಗೂ ಸಂಪುಟ ರಚನೆ ಕುರಿತು ಚರ್ಚಿಸಲು ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳುತ್ತಿದ್ದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರಿದ್ದ ವಿಶೇಷ ವಿಮಾನವು ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ದೆಹಲಿ ಬದಲು ಜೈಪುರದಲ್ಲಿ ತುರ್ತು ಲ್ಯಾಂಡಿಂಗ್ ಆಗಿದೆ.
ಗುರುವಾರ ಈ ಕುರಿತು ಅಧಿಕೃತ ಮಾಹಿತಿ ನೀಡಿರುವ ಮುಖ್ಯಮಂತ್ರಿಗಳ ಕಚೇರಿ (CMO), ಹವಾಮಾನ ವೈಪರೀತ್ಯದಿಂದಾಗಿ ವಿಮಾನವನ್ನು ನವದೆಹಲಿಯ ಬದಲಾಗಿ ಜೈಪುರಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದೆ.
ಮುಖ್ಯಮಂತ್ರಿ ಕಚೇರಿಯ ಪ್ರಕಟಣೆಯ ಪ್ರಕಾರ, ಈ ವಿಶೇಷ ವಿಮಾನದಲ್ಲಿ ಸಿದ್ದರಾಮಯ್ಯ ಅವರೊಂದಿಗೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಹಾಗೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪ ಸಿಂಗ್ ಸುರ್ಜೇವಾಲಾ, ಸಿದ್ದರಾಮಯ್ಯ ಅವರ ಪುತ್ರ ಹಾಗೂ ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ, ಸಚಿವರಾದ ಕೆ. ಜೆ. ಜಾರ್ಜ್, ಬೈರತಿ ಸುರೇಶ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ಕಾಂಗ್ರೆಸ್ ಕಾರ್ಯದರ್ಶಿ ಅಭಿಷೇಕ್ ದತ್ ಮೊದಲಾದವರು ಪ್ರಯಾಣಿಸುತ್ತಿದ್ದರು.
ಅಧಿಕೃತ ಮೂಲಗಳ ಪ್ರಕಾರ, ಸಿದ್ದರಾಮಯ್ಯ ಅವರು ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ತಕ್ಷಣವೇ ರಾಜಧಾನಿ ದೆಹಲಿಯತ್ತ ಮುಖ ಮಾಡಿದ್ದರು. ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ, ರಾಜ್ಯದ ಮುಂದಿನ ಮುಖ್ಯಮಂತ್ರಿ ಆಯ್ಕೆ ಮತ್ತು ನೂತನ ಸಚಿವ ಸಂಪುಟ ರಚನೆಯ ಕಸರತ್ತಿನ ಕುರಿತು ಮಹತ್ವದ ಚರ್ಚೆ ನಡೆಸಲು ಈ ಪ್ರವಾಸ ಹಮ್ಮಿಕೊಳ್ಳಲಾಗಿತ್ತು. ಆದರೆ, ದೆಹಲಿ ಸುತ್ತಮುತ್ತಲಿನ ಕೆಟ್ಟ ಹವಾಮಾನದಿಂದಾಗಿ ವಿಮಾನವು ಜೈಪುರದಲ್ಲಿ ಇಳಿಯಬೇಕಾಯಿತು. ಹೀಗಾಗಿ ಸಿದ್ದರಾಮಯ್ಯ ಅವರು ಗುರುವಾರದ ಬದಲಿಗೆ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ರಾಃಉಲ್ ಗಾಂಧಿ ಹಾಗೂ ಕಾಂಗ್ರೆಸ್ ವರಿಷ್ಠರನ್ನು ಭೇಟಿಯಾಗಲಿದ್ದಾರೆ ಎನ್ನಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ