ನಾಳೆ (ಮೇ 30) ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ : ನೂತನ ನಾಯಕರಾಗಿ ಡಿ.ಕೆ. ಶಿವಕುಮಾರ ಆಯ್ಕೆ ಬಹುತೇಕ ಖಚಿತ

ಬೆಂಗಳೂರು : ಇಲ್ಲಿನ ವಿಧಾನ ಸೌಧದಲ್ಲಿ ಶನಿವಾರ (ಮೇ 30) ಸಂಜೆ 4 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆ ನಿಗದಿಯಾಗಿದ್ದು, ನೂತನ ನಾಯಕರಾಗಿ ಡಿ.ಕೆ. ಶಿವಕುಮಾರ ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉತ್ತರಾಧಿಕಾರಿಯಾಗಿ ಶಿವಕುಮಾರ ಅವರನ್ನು ಹೆಸರಿಸಲು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿದ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ.
ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಈ ಸಭೆ ನಡೆಯಲಿದ್ದು, ಹೈಕಮಾಂಡ್ ಸೂಚನೆಯಂತೆ ಸಿದ್ದರಾಮಯ್ಯ ಅವರು ಈಗಾಗಲೇ ಡಿ.ಕೆ. ಶಿವಕುಮಾರ ಅವರನ್ನು ತಮ್ಮ ಉತ್ತರಾಧಿಕಾರಿ ಎಂದು ಘೋಷಿಸಿರುವುದರಿಂದ, ಶನಿವಾರದ ಸಭೆಯಲ್ಲಿ ಅವರ ಆಯ್ಕೆ ಕೇವಲ ಔಪಚಾರಿಕತೆಯಷ್ಟೇ ಆಗಿರಲಿದೆ.

ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲಾ, ವಿಧಾನ ಪರಿಷತ್ತಿನ ಕಾಂಗ್ರೆಸ್ ಸಭಾನಾಯಕ ಹಾಗೂ ಸಚಿವ ಎನ್.ಎಸ್. ಬೋಸರಾಜು ಸೇರಿದಂತೆ ಹಲವು ಹಿರಿಯ ನಾಯಕರು ಭಾಗವಹಿಸಲಿದ್ದಾರೆ. ಕಾಂಗ್ರೆಸ್‌ನ ಎಲ್ಲಾ 136 ಶಾಸಕರು ಹೈಕಮಾಂಡ್ ನಿರ್ದೇಶನದಂತೆ ನೂತನ ಸಿಎಲ್‌ಪಿ ನಾಯಕರನ್ನು ಆಯ್ಕೆ ಮಾಡಲಿದ್ದಾರೆ.
ಶಾಸಕರ ಬೆಂಬಲ ಪತ್ರಗಳನ್ನು ಪಡೆದ ನಂತರ, ನೂತನ ಸಿಎಲ್‌ಪಿ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚಿಸಲು ಅನುಮತಿ ಕೋರಲಿದ್ದಾರೆ. ಅದರೊಂದಿಗೆ ನೂತನ ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕಾರಕ್ಕೆ ದಿನಾಂಕವನ್ನು ಅಂತಿಮಗೊಳಿಸಲಾಗುತ್ತದೆ. ಮೂಲಗಳ ಪ್ರಕಾರ, ಸೋಮವಾರ ಅಥವಾ ಜೂನ್‌ ಮೊದಲ ವಾರದೊಳಗೆ ವಿಧಾನ ಸೌಧದ ಮೆಟ್ಟಿಲುಗಳ ಮೇಲೆ ನೂತನ ಮುಖ್ಯಮಂತ್ರಿ ಹಾಗೂ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆಯಿದೆ.

ಪ್ರಮುಖ ಸುದ್ದಿ :-   ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ; ಸಿಎಂ ಡಿಕೆ ಶಿವಕುಮಾರ ಘೋಷಣೆ

ದೆಹಲಿಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ
ಈ ಮಧ್ಯೆ, ಅಧಿಕಾರ ಹಸ್ತಾಂತರ ಹಾಗೂ ನೂತನ ಸಚಿವ ಸಂಪುಟ ರಚನೆ ಕುರಿತು ಚರ್ಚಿಸಲು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ ಇಬ್ಬರೂ ದೆಹಲಿಯಲ್ಲಿ ಕಾಂಗ್ರೆಸ್ ವರಿಷ್ಠರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇದಕ್ಕೂ ಮುನ್ನ ಶಿವಕುಮಾರ ದೆಹಲಿಯ ಹೋಟೆಲೊಂದರಲ್ಲಿ ಪಕ್ಷದ ಇತರ ನಾಯಕರೊಂದಿಗೂ ಸಮಾಲೋಚನೆ ನಡೆಸಿದರು.
ಬಳಿಕ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ, “ಹೈಕಮಾಂಡ್ ಜೊತೆಗಿನ ಚರ್ಚೆಗಳು ಇನ್ನೂ ನಡೆಯುತ್ತಿವೆ. ಶಾಸಕಾಂಗ ಪಕ್ಷದ ಸಭೆಗಾಗಿ ಎಲ್ಲಾ ಶಾಸಕರನ್ನು ಬೆಂಗಳೂರಿನಲ್ಲಿ ಉಪಸ್ಥಿತರಿರಲು ಸೂಚಿಸಲಾಗಿದೆ. ಹೈಕಮಾಂಡ್ ಸೂಚನೆಯಂತೆಯೇ ಎಲ್ಲವೂ ನಡೆಯುತ್ತಿದೆ. ಶನಿವಾರ ನಮ್ಮ ಕೇಂದ್ರ ನಾಯಕರು ಬರಲಿದ್ದಾರೆ, ಅವರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ” ಎಂದರು.

ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ನಾಯಕತ್ವ ಬದಲಾವಣೆಯ ವದಂತಿಗಳಿಗೆ ಗುರುವಾರ ಸಿದ್ದರಾಮಯ್ಯ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ತೆರೆ ಎಳೆದಿದ್ದರು.
ಶುಕ್ರವಾರ ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಸೇರಿದಂತೆ ಹಿರಿಯ ನಾಯಕರನ್ನು ಭೇಟಿ ಮಾಡಿದ ಸಿದ್ದರಾಮಯ್ಯ, ಕರ್ನಾಟಕ ಸಚಿವ ಸಂಪುಟ ಪುನಾರಚನೆ, ರಾಜ್ಯಸಭಾ ಚುನಾವಣೆ ಹಾಗೂ ಪಕ್ಷದ ಸಾಂಸ್ಥಿಕ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಸಿದ್ದರಾಮಯ್ಯ ಅವರು ಈಗಾಗಲೇ ರಾಜ್ಯಸಭಾ ಸ್ಥಾನದ ಆಫರ್ ಅನ್ನು ನಿರಾಕರಿಸಿದ್ದು, ಕೇಂದ್ರ ರಾಜಕಾರಣದ ಬದಲಿಗೆ ಕರ್ನಾಟಕದಲ್ಲೇ ಸಕ್ರಿಯವಾಗಿರಲು ಬಯಸಿರುವುದರಿಂದ ಈ ಭೇಟಿ ತೀವ್ರ ಮಹತ್ವ ಪಡೆದುಕೊಂಡಿದೆ.

ಪ್ರಮುಖ ಸುದ್ದಿ :-   ಕರ್ನಾಟಕ ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್‌ನಿಂದ ನಾಲ್ವರಿಗೆ ಟಿಕೆಟ್‌ ಘೋಷಣೆ

ಮೇ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಗಳಿಸಿದಾಗ, ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಆಗ ಹೈಕಮಾಂಡ್ ಶಿವಕುಮಾರ ಅವರನ್ನು ಉಪಮುಖ್ಯಮಂತ್ರಿ ಸ್ಥಾನ ಒಪ್ಪಿಕೊಳ್ಳುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿತ್ತು.
ಆ ಸಮಯದಲ್ಲಿ ಇಬ್ಬರು ನಾಯಕರ ನಡುವೆ ‘ಅಧಿಕಾರ ಹಂಚಿಕೆ ಸೂತ್ರ’ (ರೊಟೇಷನಲ್ ಸಿಎಂ ಫಾರ್ಮುಲಾ) ಏರ್ಪಟ್ಟಿದ್ದು, ಅದರಂತೆ ಎರಡೂವರೆ ವರ್ಷಗಳ ನಂತರ ಶಿವಕುಮಾರ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವರದಿಗಳು ಬಿತ್ತರವಾಗಿದ್ದವು. ಆದರೆ, ಈ ಒಪ್ಪಂದದ ಬಗ್ಗೆ ಪಕ್ಷವಾಗಲಿ ಅಥವಾ ಇಬ್ಬರು ನಾಯಕರಾಗಲಿ ಈವರೆಗೆ ಯಾವುದೇ ಅಧಿಕೃತ ಪ್ರಕಟಣೆ ನೀಡಿರಲಿಲ್ಲ. ಈಗ ಹೈಕಮಾಂಡ್ ನಿರ್ಧಾರದೊಂದಿಗೆ ಡಿ.ಕೆ. ಶಿವಕುಮಾರ ರಾಜ್ಯದ ಚುಕ್ಕಾಣಿ ಹಿಡಿಯುವುದು ನಿಚ್ಚಳವಾಗಿದೆ.

1 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement