ಬೆಂಗಳೂರು : ಬೆಂಗಳೂರಿನ ನಾಗದೇವನಹಳ್ಳಿಯಲ್ಲಿ ಸ್ಥಳೀಯ ಶಾಲಾ ಕಟ್ಟಡವೊಂದರಲ್ಲಿ ಇಂದು, ಶನಿವಾರ ಭೀಕರ ಅಗ್ನಿ ಅನಾಹುತ ಸಂಭವಿಸಿದೆ. ಇದರಿಂದಾಗಿ ‘ಕೌಸಲ್ಯ ಶಾಲೆ’ಯ (Kousalya School) ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆಯೇ ಇಡೀ ಕಟ್ಟಡದಿಂದ ದಟ್ಟವಾದ ಹೊಗೆ ಆಕಾಶಕ್ಕೆ ಮುಟ್ಟುವಂತೆ ಹರಡಿದೆ.
ಶನಿವಾರ ಬೆಳಿಗ್ಗೆ 10:15 ರ ಸುಮಾರಿಗೆ ಶಾಲೆಯ 4ನೇ ಮಹಡಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಬೆಂಕಿಯ ಕೆನ್ನಾಲಿಗೆ 3ನೇ ಮಹಡಿಯನ್ನೂ ಆವರಿಸಿಕೊಂಡಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ತುರ್ತು ಸೇವಾ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಸದ್ಯಕ್ಕೆ ಬೆಂಕಿ ಅವಘಡಕ್ಕೆ ನಿಖರವಾದ ಕಾರಣ ಏನೆಂಬುದು ತಿಳಿದುಬಂದಿಲ್ಲ.
ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತಲುಪುವಷ್ಟರಲ್ಲೇ ಶಾಲೆಯ ವಿವಿಧ ಭಾಗಗಳಿಂದ ಭೀಕರ ಜ್ವಾಲೆಗಳು ಹೊರಹೊಮ್ಮುತ್ತಿದ್ದವು. ಬೆಂಕಿ ಅತ್ಯಂತ ವೇಗವಾಗಿ ವ್ಯಾಪಿಸಿದ್ದು, ಶಾಲಾ ಕಟ್ಟಡದ ಬಹುತೇಕ ಭಾಗಕ್ಕೆ ಬೆಂಕಿ ಆವರಸಿತ್ತು ಎಂಬುದು ಸ್ಥಳದಿಂದ ಲಭ್ಯವಾಗಿರುವ ಚಿತ್ರಗಳಿಂದ ಕಂಡುಬಂದಿದೆ.
ಅದೃಷ್ಟವಶಾತ್ ಅವಘಡದ ಸಮಯದಲ್ಲಿ ಶಾಲೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳಾಗಲಿ ಅಥವಾ ಸಿಬ್ಬಂದಿಯಾಗಲಿ ಇರಲಿಲ್ಲ ಎನ್ನಲಾಗಿದೆ. ಕಟ್ಟಡದ ಒಳಗಿದ್ದ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿದ್ದ ಎಲ್ಲಾ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ಯಾವುದೇ ಜೀವಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿಯ ಹರಸಾಹಸ
ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು ತಕ್ಷಣವೇ ಕಾರ್ಯಪ್ರವೃತ್ತರಾಗಿ ಮೂರು ಅಗ್ನಿಶಾಮಕ ವಾಹನಗಳನ್ನು (Fire Tenders) ಸ್ಥಳಕ್ಕೆ ರವಾನಿಸಿದೆ. ಬೆಂಕಿಯು ಪಕ್ಕದ ಕಟ್ಟಡಗಳಿಗೆ ಹಾಗೂ ವಸತಿ ಪ್ರದೇಶಗಳಿಗೆ ಹರಡದಂತೆ ತಡೆಯಲು ಸಿಬ್ಬಂದಿ ಶ್ರಮಿಸಿದ್ದಾರೆ. ದಟ್ಟವಾದ ಹೊಗೆ ಮತ್ತು ವಿಪರೀತ ಶಾಖದ ಮಧ್ಯೆಯೂ ಅಗ್ನಿಶಾಮಕ ದಳದವರು ಅತ್ಯಂತ ಸವಾಲಿನ ಪರಿಸ್ಥಿತಿಯಲ್ಲಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಶಾಲೆಯ ಬೇರೆ ಬೇರೆ ಭಾಗಗಳಿಂದ ಸಣ್ಣದಾಗಿ ಬೆಂಕಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದ್ದರಿಂದ ತುರ್ತು ಕಾರ್ಯಾಚರಣೆ ತಂಡಗಳು ಹೈ ಅಲರ್ಟ್ ಆಗಿದ್ದವು. ಅಗ್ನಿಶಾಮಕ ಸಿಬ್ಬಂದಿ ವಾಟರ್ ಜೆಟ್‌ಗಳ ಮೂಲಕ ನಿರಂತರವಾಗಿ ನೀರು ಹಾರಿಸಿ ಕಟ್ಟಡವನ್ನು ತಂಪಾಗಿಸುವ ಮೂಲಕ ಬೆಂಕಿ ಬೇರೆಡೆ ಹರಡದಂತೆ ಯಶಸ್ವಿಯಾಗಿ ತಡೆದಿದ್ದಾರೆ.
ಸಾರ್ವಜನಿಕರ ಸುರಕ್ಷತೆ ಮತ್ತು ಜನದಟ್ಟಣೆಯನ್ನು ನಿಯಂತ್ರಿಸಲು ಸ್ಥಳೀಯ ಪೊಲೀಸರು ಕೂಡಲೇ ಧಾವಿಸಿದ್ದಾರೆ. ಅಗ್ನಿಶಾಮಕ ವಾಹನಗಳು ಮತ್ತು ತುರ್ತು ಸೇವಾ ಸಿಬ್ಬಂದಿ ಸುಲಭವಾಗಿ ಓಡಾಡಲು ಅನುಕೂಲವಾಗುವಂತೆ ಶಾಲೆಯ ಸುತ್ತಮುತ್ತಲಿನ ರಸ್ತೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಕಾರ್ಯಾಚರಣೆ ನಡೆಯುತ್ತಿದ್ದ ಅವಧಿಯಲ್ಲಿ ಸಾರ್ವಜನಿಕರು ಆ ಪ್ರದೇಶದಿಂದ ದೂರವಿರುವಂತೆ ಸೂಚನೆ ನೀಡಲಾಗಿತ್ತು.


ನಿಮ್ಮ ಕಾಮೆಂಟ್ ಬರೆಯಿರಿ