ಕೋಲ್ಕತ್ತಾ : ಪಶ್ಚಿಮ ಬಂಗಾಳದ ಸೌತ್ 24 ಪರಗಣ ಜಿಲ್ಲೆಯ ಸೋನಾರಪುರಕ್ಕೆ ಶನಿವಾರ ಭೇಟಿ ನೀಡಿದ್ದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಅಭಿಷೇಕ ಬ್ಯಾನರ್ಜಿ ಅವರಿಗೆ ತೀವ್ರ ಪ್ರತಿಭಟನೆಯ ಬಿಸಿ ತಟ್ಟಿದ್ದು, ಅವರ ವಿರುದ್ಧ ಭಾರಿ ಜನಾಕ್ರೋಶ ವ್ಯಕ್ತವಾಗಿದೆ. ಇತ್ತೀಚಿನ ಚುನಾವಣೋತ್ತರ ಹಿಂಸಾಚಾರದಿಂದ ಸಂತ್ರಸ್ತರಾದ ಕುಟುಂಬಗಳನ್ನು ಭೇಟಿ ಮಾಡಲು ಅಭಿಷೇಕ ಬ್ಯಾನರ್ಜಿ ಆಗಮಿಸುತ್ತಿದ್ದಂತೆ, ಕೆರಳಿದ ಜನಸಮೂಹವು ಅವರ ಮೇಲೆ ಕಲ್ಲು ಮತ್ತು ಮೊಟ್ಟೆಗಳನ್ನು ತೂರಿದೆ. ಇದರಿಂದಾಗಿ ಪರಿಸ್ಥಿತಿ ಕ್ಷಣಾರ್ಧದಲ್ಲಿ ಉದ್ವಿಗ್ನತೆಗೆ ತಿರುಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳದಲ್ಲಿ ನಿಯೋಜನೆಗೊಂಡಿದ್ದ ಸ್ಥಳೀಯ ಪೊಲೀಸರು ಸಾರ್ವಜನಿಕರ ಆಕ್ರೋಶವನ್ನು ಹತ್ತಿಕ್ಕಲು ಹರಸಾಹಸ ಪಡಬೇಕಾಯಿತು. ಸಂಸದ ಅಭಿಷೇಕ ಬ್ಯಾನರ್ಜಿ ಅವರಿಗೆ ಯಾವುದೇ ಗಾಯಗಳಾಗದಂತೆ ತಡೆಯಲು ಅವರ ವೈಯಕ್ತಿಕ ಭದ್ರತಾ ಸಿಬ್ಬಂದಿ ಅವರ ಸುತ್ತಲೂ ರಕ್ಷಣಾ ಕವಚವನ್ನು ನಿರ್ಮಿಸಬೇಕಾಗಿ ಬಂತು.
ಈ ಘಟನೆಯ ಬೆನ್ನಲ್ಲೇ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅಭಿಷೇಕ್ಕ ಬ್ಯಾನರ್ಜಿ, ಈ ಗದ್ದಲ ಸಂಪೂರ್ಣವಾಗಿ ಪ್ರಾಯೋಜಿತ ಹಾಗೂ ಸಂಘಟಿತ ದಾಳಿ ಎಂದು ಕರೆದಿದ್ದಾರೆ. ಈ ಅಶಾಂತಿಯ ಹಿಂದೆ ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಕೈವಾಡವಿದೆ ಎಂದು ನೇರವಾಗಿ ಆರೋಪಿಸಿದರು.
ಸೋನಾರಪುರದಲ್ಲಿ ನಡೆದ ಈ ಹಿಂಸಾಚಾರವು ಪಶ್ಚಿಮ ಬಂಗಾಳದ ಅಸ್ಥಿರ ರಾಜಕೀಯ ಪರಿಸ್ಥಿತಿಯನ್ನು ಮತ್ತೊಮ್ಮೆ ಮುನ್ನಲೆಗೆ ತಂದಿದ್ದು, ಚುನಾವಣೋತ್ತರ ಘರ್ಷಣೆಗಳ ಕಿಡಿ ಇನ್ನೂ ಆರಿಲ್ಲ ಎಂಬುದನ್ನು ಸಾಬೀತುಪಡಿಸಿದೆ.
ಆದರೆ, ಬಿಜೆಪಿಯು ಅಭಿಷೇಕ ಬ್ಯಾನರ್ಜಿ ಅವರ ಆರೋಪಗಳನ್ನು ನಿರಾಕರಿಸಿದೆ. ಈ ಪ್ರತಿಭಟನೆಗಳು ವಿಪಕ್ಷವಾದ ಟಿಎಂಸಿಯ ಸ್ಥಳೀಯ ನಾಯಕತ್ವದ ವಿರುದ್ಧ ಸಾರ್ವಜನಿಕರಲ್ಲಿ ಉಂಟಾದ ಸ್ವಯಂಪ್ರೇರಿತ ಆಕ್ರೋಶದ ಪ್ರತಿಫಲನ ಎಂದು ಬಿಜೆಪಿ ಹೇಳಿದೆ. ಸದ್ಯಕ್ಕೆ ಸೋನಾರಪುರದ ಸೂಕ್ಷ್ಮ ಪ್ರದೇಶಗಳಲ್ಲಿ ಶಾಂತಿ ಕಾಪಾಡಲು ಮತ್ತು ಪರಿಸ್ಥಿತಿಯನ್ನು ಹತೋಟಿಗೆ ತರಲು ಸ್ಥಳೀಯ ಪೊಲೀಸರು ದಂಗೆ ನಿರೋಧಕ ಪಡೆಗಳು ಸೇರಿದಂತೆ ಭಾರಿ ಪ್ರಮಾಣದ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಿದ್ದು, ಫ್ಲ್ಯಾಗ್ ಮಾರ್ಚ್ ನಡೆಸುತ್ತಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ