ಧಾರವಾಡ : ಕೆರೆಗೆ ಈಜಲು ಹೋಗಿದ್ದ ಮೂವರು ಅಪ್ರಾಪ್ತ ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಧಾರವಾಡ ತಾಲೂಕಿನ ಸಿಂಗನಳ್ಳಿ ಗ್ರಾಮದ ಸಮೀಪದ ಕರೆಮ್ಮನ ಕೆರೆಯಲ್ಲಿ ಶನಿವಾರ ಸಂಭವಿಸಿದೆ ಎಂದು ವರದಿಯಾಗಿದೆ.
ಸಿಂಗನಳ್ಳಿ ಗ್ರಾಮದ ನಿವಾಸಿಗಳಾದ ಅನ್ವರ್ ಇಬ್ರಾಹಿಂ ವಟ್ನಾಳ (13), ಸುಭಾನಿ ಇಸಾಕ್ ಬಾಗಜಿಕೊಪ್ಪ (12) ಹಾಗೂ ಮೆಹಬೂಬ್ ಸುಭಾನಿ ದಾದಾಪೀರ್ ವಡ್ನಾಳ (15) ಮೃತರು ಎಂದು ಗೊತ್ತಾಗಿದೆ.
ಬಾಲಕರಾದ ಮೆಹಬೂಬ್ ವಟ್ನಾಳ ಹಾಗೂ ಅನ್ವರ್ ವಟ್ನಾಳ ಸಿಂಗನಳ್ಳಿ ಗ್ರಾಮದ ನಿವಾಸಿಗಳಾಗಿದ್ದಾರೆ. ಬಾಲಕ ಸುಭಾನಿ ಭಾಗಜಿಕೊಪ್ಪ ಬೈಲಹೊಂಗಲ ತಾಲೂಕಿನವನು, ಬೇಸಿಗೆ ರಜೆಗಾಗಿ ಸಂಬಂಧಿಕರ ಮನೆಗೆ ಬಂದಿದ್ದ ಎನ್ನಲಾಗಿದೆ.
ಇವರು ಮಧ್ಯಾಹ್ನದ ವೇಳೆ ಈಜಾಡಲು ಕರೆಮ್ಮನಕೆರೆಗೆ ತೆರಳಿದ್ದರು. ಬಾಲಕರು ಸಂಜೆಯಾದರೂ ಮನೆಗೆ ಬಾರದೇ ಇದ್ದಾಗ ಪೋಷಕರು ಹುಡುಕಾಟ ನಡೆಸಿದ್ದಾರೆ. ನಂತರ ಕೆರೆ ಬಳಿ ಹೋಗಿ ನೋಡಿದಾಗ ಬಾಲಕರು ನೀರಿನಲ್ಲಿ ಮುಳುಗಿರುವುದು ಗೊತ್ತಾಗಿದೆ. ಕೆರೆಯ ನೀರಿನ ಹೂಳಿನಲ್ಲಿ ಮುಳಿಗು ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಗರಗ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗ್ರಾಮಸ್ಥರ ನೆರವಿನಿಂದ ಶವಗಳನ್ನು ಹೊರತೆಗೆಯಲಾಗಿದೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


ನಿಮ್ಮ ಕಾಮೆಂಟ್ ಬರೆಯಿರಿ