ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕೆಲವು ದಿನ ಗುಡುಗು ಸಹಿತ ಗಾಳಿ ಮಳೆ ; ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ನೈಋತ್ಯ ಮುಂಗಾರು ಮಾರುತಗಳ ಆಗಮನದ ಪ್ರಕ್ರಿಯೆ ಆರಂಭವಾಗಿದ್ದು, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ರಾಜ್ಯದ ಹಲವು ಭಾಗಗಳಿಗೆ ಹವಾಮಾನ ಮುನ್ನೆಚ್ಚರಿಕೆ ನೀಡಿದೆ. ಮುಂದಿನ ಕೆಲವು ದಿನಗಳ ಕಾಲ ರಾಜ್ಯದ ವಿವಿಧೆಡೆ ಗುಡುಗು, ಮಿಂಚು ಹಾಗೂ ಬಲವಾದ ಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಅದು ಹೇಳಿದೆ.
ಹವಾಮಾನ ಇಲಾಖೆಯ ಇತ್ತೀಚಿನ ವರದಿಯ ಪ್ರಕಾರ, ಜೂನ್ ಮೊದಲ ವಾರದಲ್ಲಿ ಕರಾವಳಿ ಕರ್ನಾಟಕ, ಮಲೆನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆಯ ತೀವ್ರತೆ ಮತ್ತಷ್ಟು ಹೆಚ್ಚಾಗಲಿದೆ. ಹಾಗೂ ಉತ್ತರ ಒಳನಾಡಿನ ಹಲವು ಭಾಗಗಳಲ್ಲಿ ಗಂಟೆಗೆ ಗರಿಷ್ಠ 60 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
ಜೂನ್ 3 ರಿಂದ ಭಾರಿ ಮಳೆ ಮುನ್ಸೂಚನೆ
ಜೂನ್ 1 ರಂದು ಹೊರಡಿಸಲಾದ ವರದಿಯ ಪ್ರಕಾರ, ಮುಂದಿನ ಕೆಲವು ದಿನಗಳ ಕಾಲ ರಾಜ್ಯಾದ್ಯಂತ ಅಲ್ಲಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಜೂನ್ 3 ರಿಂದ ಮಳೆಯ ಪ್ರಮಾಣ ಹಂತ-ಹಂತವಾಗಿ ಏರಿಕೆಯಾಗಲಿದ್ದು, ವಿಶೇಷವಾಗಿ ಕರಾವಳಿ ಜಿಲ್ಲೆಗಳಲ್ಲಿ ಜೂನ್ 3 ರಿಂದ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.
ಮುಖ್ಯವಾಗಿ ಜೂನ್ 6 ರಿಂದ ಜೂನ್ 9 ರ ಅವಧಿಯಲ್ಲಿ ಕರಾವಳಿಯ ಹಲವು ಜಿಲ್ಲೆಗಳಲ್ಲಿ ಅತ್ಯಂತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಇದರೊಂದಿಗೆ ಮಲೆನಾಡು ಭಾಗದಲ್ಲೂ ಸಹ ಜೂನ್ 7 ರಿಂದ ಜೂನ್ 9 ರವರೆಗೆ ವ್ಯಾಪಕವಾಗಿ ಸಾಧಾರಣದಿಂದ ಭಾರಿ ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಕುಮಟಾ : ಶಾಲೆಯ ಪಕ್ಕವೇ ಭೂ ಕುಸಿತ ; ಕಟ್ಟಡಕ್ಕೆ ಬಂದು ಅಪ್ಪಳಿಸಿದ ಬೃಹತ್‌ ಬಂಡೆ

ಉತ್ತರ ಒಳನಾಡಿಗೆ ‘ಗುಡುಗು-ಮಿಂಚಿನ’ ಭೀತಿ:
ಜೂನ್ 1: ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಗಂಟೆಗೆ 50-60 ಕಿ.ಮೀ ವೇಗದ ಗಾಳಿಯೊಂದಿಗೆ ಭೀಕರ ಗುಡುಗು-ಮಿಂಚಿನ ಸಾಧ್ಯತೆಯಿದೆ.
ಜೂನ್ 1 ರಿಂದ ಜೂನ್ 5: ಈ ಭಾಗದ ಪ್ರತ್ಯೇಕ ಸ್ಥಳಗಳಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ.
ಉತ್ತರ ಒಳನಾಡಿನ ಜಿಲ್ಲೆಗಳ ಸಾರ್ವಜನಿಕರು ಅದರಲ್ಲೂ ವಿಶೇಷವಾಗಿ ಸಂಜೆ ಮತ್ತು ರಾತ್ರಿಯ ಸಮಯದಲ್ಲಿ ಹೆಚ್ಚು ಜಾಗರೂಕರಾಗಿರಲು ಸೂಚಿಸಲಾಗಿದೆ.
ಕರಾವಳಿ ಕರ್ನಾಟಕ:
ಜೂನ್ 1 ಮತ್ತು 2: ಪ್ರತ್ಯೇಕ ಸ್ಥಳಗಳಲ್ಲಿ ಗಂಟೆಗೆ 30-40 ಕಿ.ಮೀ ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗಬಹುದು.
ಜೂನ್ 3 ರಿಂದ ಜೂನ್ 5: ಕರಾವಳಿಯಾದ್ಯಂತ ಸಿಡಿಲು ಮತ್ತು ಮಿಂಚಿನ ಆರ್ಭಟ ತೀವ್ರಗೊಳ್ಳಲಿದೆ. ಮಳೆಯ ತೀವ್ರತೆ ಹೆಚ್ಚಾಗಲಿರುವುದರಿಂದ ಮೀನುಗಾರರು, ಸಾರ್ವಜನಿಕ ಪ್ರಯಾಣಿಕರು ಮತ್ತು ತಗ್ಗು ಪ್ರದೇಶದ ನಿವಾಸಿಗಳು ಮುಂಜಾಗ್ರತೆ ವಹಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಒಳನಾಡಿನಲ್ಲೂ ಅಸ್ಥಿರ ವಾತಾವರಣ:
ಜೂನ್ 1: ಪ್ರತ್ಯೇಕ ಪ್ರದೇಶಗಳಲ್ಲಿ ಗಂಟೆಗೆ 40-50 ಕಿ.ಮೀ ವೇಗದ ಬಿರುಗಾಳಿ ಹಾಗೂ ಗುಡುಗು-ಮಿಂಚಿನ ಮುನ್ಸೂಚನೆ ಇದೆ.
ಜೂನ್ 2 ರಿಂದ ಜೂನ್ 4: ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದ್ದು, ಜೂನ್ 1 ಮತ್ತು ಜೂನ್ 2 ರಂದು ಸಿಡಿಲು ಸಹಿತ ಮಳೆಯಾಗುವ ಮುನ್ಸೂಚನೆ ದಟ್ಟವಾಗಿದೆ.
ಗುಡುಗು-ಮಿಂಚು ಆರಂಭವಾದಾಗ ಸಾರ್ವಜನಿಕರು ಯಾವುದೇ ಕಾರಣಕ್ಕೂ ಮರಗಳ ಕೆಳಗೆ ಆಶ್ರಯ ಪಡೆಯಬಾರದು. ಸಿಡಿಲಿನ ಮುನ್ಸೂಚನೆ ಅಥವಾ ಶಬ್ದ ಕೇಳಿಸಿದ ತಕ್ಷಣ ಸುರಕ್ಷಿತ ಕಟ್ಟಡಗಳ ಒಳಗೆ ಇರಲು ಪ್ರಯತ್ನಿಸಿ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.

ಪ್ರಮುಖ ಸುದ್ದಿ :-   ಅಪ್ರಾಪ್ತೆಯ ಮೇಲೆ ಅತ್ಯಾಚಾರ; ಜನಿಸಿದ ಮಗು ಮಾರಾಟ ಆರೋಪ, ಆಕೆ ಮತ್ತೆ ಗರ್ಭಿಣಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement