ಮುಂಬೈ: ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಭಾವಂತ ಹಾಗೂ ಜನಪ್ರಿಯ ಹಿನ್ನೆಲೆ ಗಾಯಕಿ, ಪದ್ಮಭೂಷಣ ಪುರಸ್ಕೃತೆ ಸುಮನ್ ಕಲ್ಯಾಣಪುರ (89) ಅವರು ವಯೋಸಹಜ ಕಾಯಿಲೆಯಿಂದ ಭಾನುವಾರ ಸಂಜೆ ಮುಂಬೈನ ಲೋಖಂಡ್‌ವಾಲಾದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಅವರ ಆಪ್ತ ಒಡನಾಡಿ ಹಾಗೂ ಲೇಖಕಿ ಮಂಗಲಾ ಖಾಡಿಲ್ಕರ ಈ ವಿಷಯವನ್ನು ಖಚಿತಪಡಿಸಿದ್ದು, ಭಾನುವಾರ ರಾತ್ರಿ ಸುಮಾರು 8 ಗಂಟೆಯ ಸುಮಾರಿಗೆ ಸುಮನ್ ಅವರು ತಮ್ಮ ನಿವಾಸದಲ್ಲಿ ಶಾಂತಿಯುತವಾಗಿ ಕೊನೆಯುಸಿರೆಳೆದರು ಎಂದು ತಿಳಿಸಿದ್ದಾರೆ. ಸುಮನ್ ಕಲ್ಯಾಣಪುರ ಅವರ ಜೀವನ ಚರಿತ್ರೆ ಆಧಾರಿತ ಪ್ರಸಿದ್ಧ ಮರಾಠಿ ಪುಸ್ತಕ ‘ಸುಮನ್ ಸುಗಂಧ್’ ಅನ್ನು ಮಂಗಲಾ ಖಾಡಿಲ್ಕರ್ ಅವರೇ ಬರೆದಿದ್ದಾರೆ.
ಮೃತರು ಪುತ್ರಿ ಚಾರು ಸೇರಿದಂತೆ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಸೋಮವಾರ ಬೆಳಗ್ಗೆ 11:30 ರಿಂದ 12 ಗಂಟೆಯ ಅವಧಿಯಲ್ಲಿ ಪವನ್ ಹನ್ಸ್ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದೆ.
ಆರು ದಶಕಗಳ ಭವ್ಯ ಸಂಗೀತ ಯಾನ
ಅವಿಭಜಿತ ಭಾರತದ ಢಾಕಾದಲ್ಲಿ ಜನವರಿ 28, 1937 ರಂದು ಜನಿಸಿದ ಅವರು ನಂತರ ಮುಂಬೈನಲ್ಲಿ ನೆಲೆಸಿದ ಸುಮನ್ ಕಲ್ಯಾಣಪುರ ಅವರು ಆರು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಚಿತ್ರಲೋಕವನ್ನು ತಮ್ಮ ಮಧುರ ಧ್ವನಿಯಿಂದ ಶ್ರೀಮಂತಗೊಳಿಸಿದ್ದರು. 1950, 1960 ಮತ್ತು 1970 ರ ದಶಕಗಳಲ್ಲಿ ಅತ್ಯಂತ ಪ್ರೀತಿಯ ಹಿನ್ನೆಲೆ ಗಾಯಕರಲ್ಲಿ ಒಬ್ಬರಾಗಿದ್ದರು ಮತ್ತು ಹಿಂದಿ ಚಲನಚಿತ್ರ ಸಂಗೀತದ ಸುವರ್ಣಯುಗವೆಂದು ಪರಿಗಣಿಸಲಾದ ಅವಧಿಯಲ್ಲಿ ಅವರು ಹೆಸರು ಮಾಡಿದ್ದರು. 1960 ಮತ್ತು 1970 ರ ದಶಕದಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದ ಅವರು, ಅಂದಿನ ಗಾನಕೋಗಿಲೆ ಲತಾ ಮಂಗೇಶ್ಕರ ಅವರ ಸಮಕಾಲೀನರಾಗಿ ತಮ್ಮದೇ ಆದ ವಿಶಿಷ್ಟ ಸ್ಥಾನವನ್ನು ಕಂಡುಕೊಂಡಿದ್ದರು.
ಹಿಂದಿ, ಮರಾಠಿ, ಕನ್ನಡ, ಅಸ್ಸಾಮಿ, ಬೆಂಗಾಲಿ ಮತ್ತು ಒಡಿಯಾ ಸೇರಿದಂತೆ ಹಲವು ಪ್ರಾದೇಶಿಕ ಭಾಷೆಗಳಲ್ಲಿ ಅವರು ಸಾವಿರಾರು ಗೀತೆಗಳನ್ನು ಹಾಡಿದ್ದಾರೆ. ಕೇವಲ ಚಲನಚಿತ್ರ ಗೀತೆಗಳಲ್ಲದೆ ಭಕ್ತಿಗೀತೆಗಳು, ಗಜಲ್‌ಗಳು ಮತ್ತು ಠುಮ್ರಿ ಗಾಯನದಲ್ಲೂ ಅವರು ಸೈ ಎನಿಸಿಕೊಂಡಿದ್ದರು. ಧ್ವನಿಯ ಶುದ್ಧತೆ ಮತ್ತು ಭಾವನಾತ್ಮಕ ಆಳಕ್ಕೆ ಅವರು ಹೆಸರಾಗಿದ್ದರು.
ಹಿಂದಿ ಚಿತ್ರರಂಗದ ಸಾರ್ವಕಾಲಿಕ ಹಿಟ್‌ಗಳಾದ “ಆಜ್ ಕಲ್ ತೇರೆ ಮೇರೆ ಪ್ಯಾರ್ ಕೆ ಚರ್ಚೆ”, “ನಾ ನಾ ಕರ್ತೇ ಪ್ಯಾರ್ ತುಮ್ಹೀ ಸೇ”, ಮತ್ತು “ತುಮ್ನೇ ಪುಕಾರಾ ಔರ್ ಹಮ್ ಚಲೇ ಆಯೇ” ನಂತಹ ಅಮೋಘ ಗೀತೆಗಳನ್ನು ಅವರು ಹಾಡಿದ್ದಾರೆ.
ಲತಾ ಮಂಗೇಶ್ಕರ ಒಡನಾಡಿ
ಅನೇಕರು ಸುಮನ್ ಅವರ ಧ್ವನಿಯನ್ನು ಲತಾ ಮಂಗೇಶ್ಕರ ಅವರಿಗೆ ಹೋಲಿಸುತ್ತಿದ್ದರಾದರೂ, ಸುಮನ್ ಅವರು ಈ ಹೋಲಿಕೆಯನ್ನು ಸದಾ ನಿರಾಕರಿಸುತ್ತಿದ್ದರು. 2022 ರಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಲತಾ ಜಿ ಅವರನ್ನು ತಮ್ಮ ಆಪ್ತ ಗೆಳತಿ ಎಂದು ಕರೆದಿದ್ದ ಸುಮನ್, “ಎಲ್ಲರೂ ಅವರ ಹಾಡುಗಳನ್ನು ಪ್ರೀತಿಸುತ್ತಿದ್ದರು, ಅವರು ಅಮರರು. ನಾವು ‘ಚಾಂದ್’ ಚಿತ್ರಕ್ಕಾಗಿ ಜೊತೆಯಾಗಿ ಯುಗಳ ಗೀತೆಯನ್ನು ರೆಕಾರ್ಡ್ ಮಾಡಿದ್ದೆವು. ಪ್ರತಿ ಬಾರಿ ನಾನು ಅವರನ್ನು ಭೇಟಿಯಾದಾಗಲೂ ಒಬ್ಬ ಆಪ್ತ ಗೆಳತಿಯನ್ನು ಭೇಟಿಯಾದ ಅನುಭವವಾಗುತ್ತಿತ್ತು, ಅವರಿಗೂ ಹಾಗೆಯೇ ಅನಿಸುತ್ತಿತ್ತು ಎಂದು ನಾನು ನಂಬುತ್ತೇನೆ,” ಎಂದು ನೆನಪಿಸಿಕೊಂಡಿದ್ದರು.
ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕಂಬನಿ
ಸುಮನ್ ಕಲ್ಯಾಣಪುರ ಅವರ ನಿಧನಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತೀವ್ರ ಸಂತಾಪ ಸೂಚಿಸಿದ್ದಾರೆ. “ಭಾರತದ ಸಂಗೀತ ಪರಂಪರೆಯನ್ನು ಶ್ರೀಮಂತಗೊಳಿಸಿದ ದೈವಿಕ ಧ್ವನಿಯೊಂದನ್ನು ದೇಶ ಕಳೆದುಕೊಂಡಿದೆ. ಮರಾಠಿ, ಹಿಂದಿ, ಬೆಂಗಾಲಿ ಮತ್ತು ಒಡಿಯಾ ಸಂಗೀತಕ್ಕೆ ಅವರು ನೀಡಿದ ಕೊಡುಗೆ ಅಪಾರ. ಅವರ ಅಮರ ಗೀತೆಗಳು ಕೇಳುಗರ ಹೃದಯದಲ್ಲಿ ಸದಾ ಜೀವಂತವಾಗಿರುತ್ತವೆ. ಈ ಸೌಮ್ಯ ಹಾಗೂ ಶಾಂತಸ್ವರೂಪಿ ಗಾಯಕಿಯ ಗೈರುಹಾಜರಿ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ,” ಎಂದು ಸಿಎಂ ಕಂಬನಿ ಮಿಡಿದಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ