ಕೋಲ್ಕತ್ತಾ: ಪಕ್ಷ ವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ತೃಣಮೂಲ ಕಾಂಗ್ರೆಸ್ (TMC) ಸೋಮವಾರ ತನ್ನ ಇಬ್ಬರು ಶಾಸಕರನ್ನು ಪಕ್ಷದಿಂದ ಉಚ್ಚಾಟಿಸಿದೆ. ಶಾಸಕರಾದ ಸಂದೀಪನ್ ಸಹಾ ಮತ್ತು ರಿತಬ್ರತಾ ಬ್ಯಾನರ್ಜಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಟಿಎಂಸಿ ಹೇಳಿದೆ. 2026ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಅಧಿಕಾರ ಕಳೆದುಕೊಂಡ ಬೆನ್ನಲ್ಲೇ, ಪಕ್ಷದ ನಾಯಕರಲ್ಲಿ ಹೆಚ್ಚಾಗುತ್ತಿರುವ ಅಸಮಾಧಾನದ ಚರ್ಚೆಗಳ ನಡುವೆ ಈ ಪ್ರಮುಖ ಬೆಳವಣಿಗೆ ನಡೆದಿದೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಬೆನ್ನಲ್ಲೇ, ತನ್ನ ನಾಯಕರನ್ನು ಒಟ್ಟಾಗಿ ಹಿಡಿದಿಟ್ಟುಕೊಳ್ಳಲು ಹೆಣಗಾಡುತ್ತಿರುವ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದೊಳಗಿನ ಭಿನ್ನಮತ ಈಗ ಸಂಪೂರ್ಣವಾಗಿ ಬೀದಿಗೆ ಬಂದಿದೆ.
ಚುನಾವಣಾ ಸೋಲಿನ ಆಘಾತದ ನಡುವೆಯೇ, ಈಗ ಪಶ್ಚಿಮ ಬಂಗಾಳ ವಿಧಾನಸಭೆಯನ್ನೇ ನಡುಗಿಸಿರುವ ‘ನಕಲಿ ಸಹಿ ಹಗರಣ’ಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಮಾಡಿರುವ ಸ್ಫೋಟಕ ಪ್ರತಿಪಾದನೆ ಟಿಎಂಸಿಗೆ ಮತ್ತಷ್ಟು ಮುಜುಗರ ತಂದಿಟ್ಟಿದೆ.
ವಿಧಾನಸಭೆಯ ವಿಪಕ್ಷದ ನಾಯಕರನ್ನಾಗಿ ಶೋಭನ್ದೇವ್ ಚಟ್ಟೋಪಾಧ್ಯಾಯ ಅವರನ್ನು ಬೆಂಬಲಿಸುವ ಪತ್ರದಲ್ಲಿ ತಮ್ಮ ಸಹಿಗಳನ್ನು ನಕಲು ಮಾಡಲಾಗಿದೆ ಎಂದು ದೂರು ನೀಡಿದ್ದ ಇಬ್ಬರು ಟಿಎಂಸಿ ಶಾಸಕರ ಹೆಸರುಗಳನ್ನು ಸುವೇಂದು ಅಧಿಕಾರಿ ಇಂದು, ಸೋಮವಾರ ಬಹಿರಂಗಪಡಿಸಿದ್ದಾರೆ.
ಭಾನುವಾರ ಕೋಲ್ಕತ್ತಾದ ಕಾಳೀಘಾಟ್ನಲ್ಲಿರುವ ಪಕ್ಷದ ಸುಪ್ರೀಮೋ ಮಮತಾ ಬ್ಯಾನರ್ಜಿ ಅವರ ನಿವಾಸದಲ್ಲಿ ಕರೆಯಲಾಗಿದ್ದ ಸಭೆಗೆ ಸಹಾ ಮತ್ತು ಬ್ಯಾನರ್ಜಿ ಗೈರುಹಾಜರಾಗಿದ್ದರು ಎಂದು ಟಿಎಂಸಿ ಪ್ರಕಟಣೆಯಲ್ಲಿ ತಿಳಿಸಿದೆ. ಈ ಇಬ್ಬರು ನಾಯಕರು ತೃಣಮೂಲ ಕಾಂಗ್ರೆಸ್ ಹಿತಾಸಕ್ತಿಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡಿರುವುದು ಕಂಡುಬಂದಿದೆ ಎಂದು ಆರೋಪಿಸಿರುವ ತೃಣಮೂಲ ಕಾಂಗ್ರೆಸ್, ಆ ಇಬ್ಬರನ್ನೂ ಪಕ್ಷದಿಂದ ಉಚ್ಚಾಟಿಸಿದೆ.
“ಈ ವಿಷಯವನ್ನು ಸೂಕ್ತವಾಗಿ ಪರಿಶೀಲಿಸಿದ ನಂತರ, ಎಐಟಿಸಿ (AITC) ಸಕ್ಷಮ ಪ್ರಾಧಿಕಾರವು ನಿಮ್ಮನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದ (ಪ್ರಾಥಮಿಕ) ಸದಸ್ಯತ್ವದಿಂದ ಉಚ್ಚಾಟಿಸಲು ನಿರ್ಧರಿಸಿದೆ. ಇದರ ಪರಿಣಾಮವಾಗಿ, ಈ ನೋಟಿಸ್ ಜಾರಿಯಾದ ದಿನಾಂಕದಿಂದ ನೀವು ಪಕ್ಷಕ್ಕೆ ಸಂಬಂಧಿಸಿದ ಯಾವುದೇ ಹುದ್ದೆ, ಜವಾಬ್ದಾರಿ ಅಥವಾ ಸವಲತ್ತುಗಳನ್ನು ಹೊಂದುವುದನ್ನು ನಿಲ್ಲಿಸಲಿದ್ದೀರಿ,” ಎಂದು ಟಿಎಂಸಿ ಉಚ್ಚಾಟಿತ ಶಾಸಕರಿಗೆ ಕಳುಹಿಸಿದ ಪತ್ರದಲ್ಲಿ ತಿಳಿಸಲಾಗಿದೆ. ಇಬ್ಬರು ಟಿಎಂಸಿ ಶಾಸಕರು ತಮ್ಮ ಸಹಿ ಫೋರ್ಜರಿ ಕುರಿತು ದೂರು ನೀಡಿದ್ದಾರೆ ಎಂದು ಸುವೇಂದು ಅಧಿಕಾರಿ ಹೇಳಿಕೆ ನೀಡಿದ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ಈ ಶಿಸ್ತು ಕ್ರಮ ಕೈಗೊಂಡಿದೆ.
ಸ್ವಂತ ಶಾಸಕರ ಸಹಿಯನ್ನೇ ಕದ್ದ ಟಿಎಂಸಿ: ಸುವೇಂದು ಅಧಿಕಾರಿ
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, “ತೃಣಮೂಲ ಕಾಂಗ್ರೆಸ್ನ ಭ್ರಷ್ಟಾಚಾರವು ಕೇವಲ ಬಂಗಾಳದ ಜನರನ್ನು ಮಾತ್ರ ಗುರಿಯಾಗಿಸಿಕೊಂಡಿಲ್ಲ, ಬದಲಿಗೆ ಅದು ತನ್ನದೇ ಆದ ಶಾಸಕರನ್ನೂ ಬಿಟ್ಟಿಲ್ಲ. ಟಿಎಂಸಿ ತನ್ನದೇ ಶಾಸಕರ ಸಹಿಗಳನ್ನು ಕದ್ದಿದೆ. ಈ ಕುರಿತು ಟಿಎಂಸಿ ಶಾಸಕರಾದ ರಿತಬ್ರತಾ ಬ್ಯಾನರ್ಜಿ ಮತ್ತು ಸಂದೀಪನ್ ಸಹಾ ಅವರೇ ದೂರು ನೀಡಿದ್ದಾರೆ. ಇದರಲ್ಲಿ ನಮ್ಮ ಯಾವುದೇ ಪಾತ್ರವಿಲ್ಲ,” ಎಂದು ಲೇವಡಿ ಮಾಡಿದ್ದಾರೆ.
ಪ್ರಸ್ತುತ ಈ ಸಹಿ ಫೋರ್ಜರಿ ಆರೋಪದ ತನಿಖೆಯನ್ನು ಪಶ್ಚಿಮ ಬಂಗಾಳದ ಸಿಐಡಿ (CID) ನಡೆಸುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಟಿಎಂಸಿ ನಾಯಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಸಿಐಡಿಯು ಇಂದು, ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಹಿರಿಯ ಟಿಎಂಸಿ ನಾಯಕ ಅಭಿಷೇಕ ಬ್ಯಾನರ್ಜಿ ಅವರಿಗೂ ಸಮನ್ಸ್ ನೀಡಿತ್ತಾದರೂ, ಅವರು ಸಿಐಡಿ ಮುಂದೆ ಹಾಜರಾಗುತ್ತಿಲ್ಲ ಎನ್ನಲಾಗಿದೆ.
ಉಚ್ಚಾಟಿತ ನಾಯಕರ ಹಿನ್ನೆಲೆ
ರಿತಬ್ರತಾ ಬ್ಯಾನರ್ಜಿ: ಸಿಪಿಐ(ಎಂ) ಪಕ್ಷದಿಂದ ಹೊರಬಂದು 2017ರಲ್ಲಿ ಟಿಎಂಸಿ ಸೇರಿದ್ದ ಮಾಜಿ ರಾಜ್ಯಸಭಾ ಸಂಸದ ರಿತಬ್ರತಾ ಬ್ಯಾನರ್ಜಿ ಅವರು ಉಲುಬೇರಿಯಾ ಪೂರ್ಬಾ ಕ್ಷೇತ್ರದಿಂದ ಪಶ್ಚಿಮ ಬಂಗಾಳ ವಿಧಾನಸಭೆಗೆ ಆಯ್ಕೆಯಾಗಿದ್ದರು. ಇವರು ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ರುದ್ರ ಪ್ರಸಾದ ಬ್ಯಾನರ್ಜಿ ಅವರನ್ನು 11,800ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದರು.
ಸಂದೀಪನ್ ಸಹಾ: ಎಂಟಾಲಿ ಕ್ಷೇತ್ರದ ಶಾಸಕರಾಗಿರುವ ಸಂದೀಪನ್ ಸಹಾ, ಮಾಜಿ ಟಿಎಂಸಿ ಶಾಸಕ ಸ್ವರ್ಣ ಕಮಲ್ ಸಹಾ ಅವರ ಪುತ್ರರಾಗಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಂದೀಪನ್ ಅವರು ಬಿಜೆಪಿಯ ಪ್ರಿಯಾಂಕಾ ಟಿಬ್ರೆವಾಲ್ ಅವರನ್ನು 34,000ಕ್ಕೂ ಹೆಚ್ಚು ಮತಗಳ ಭಾರಿ ಅಂತರದಿಂದ ಸೋಲಿಸಿದ್ದರು.
ಅಭಿಷೇಕ ಬ್ಯಾನರ್ಜಿ ವಿರುದ್ಧ ಉಚ್ಚಾಟಿತ ನಾಯಕನ ಆಕ್ರೋಶ
ಪಕ್ಷದಿಂದ ಉಚ್ಚಾಟನೆಗೊಂಡಿರುವ ಶಾಸಕ ಸಂದೀಪನ್ ಸಹಾ ಈ ಇಡೀ ಹಗರಣಕ್ಕೆ ಅಭಿಷೇಕ ಬ್ಯಾನರ್ಜಿ ಅವರೇ ಜವಾಬ್ದಾರರು ಎಂದು ನೇರ ಆರೋಪ ಮಾಡಿದ್ದಾರೆ. ಶಾಸಕರ ಪಟ್ಟಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿಯೇ ಸಹಿ ಹಾಕಿದ್ದರು ಎಂದು ಅವರು ಹೇಳಿದ್ದಾರೆ.
“ಸಭೆಯಲ್ಲಿ ಉಪಸ್ಥಿತರಿಲ್ಲದವರ ಸಹಿಗಳನ್ನು ಸಲ್ಲಿಕೆ ಮಾಡಿರುವುದು ಬಹಳ ದೊಡ್ಡ ಎಡವಟ್ಟು. ಅಭಿಷೇಕ ಬ್ಯಾನರ್ಜಿ ಅವರು ಪ್ರಧಾನ ಕಾರ್ಯದರ್ಶಿಯಾಗಿ ಶಾಸಕರ ಪಟ್ಟಿಗೆ ಸಹಿ ಹಾಕಿರುವುದರಿಂದ ಸಹಜವಾಗಿಯೇ ಅವರ ಹೆಸರು ಮುಂಚೂಣಿಗೆ ಬರುತ್ತಿದೆ. ಆ ಪಟ್ಟಿಯಲ್ಲೇ ಸಾಕಷ್ಟು ತಪ್ಪುಗಳಿದ್ದವು… ಖಂಡಿತವಾಗಿಯೂ ಪ್ರಶ್ನೆಗಳು ಅಭಿಷೇಕ ಬ್ಯಾನರ್ಜಿ ಅವರ ಕಡೆಗೇ ಬೆರಳು ಮಾಡಲಿವೆ, ಏಕೆಂದರೆ ಅದು ಅವರ ಜವಾಬ್ದಾರಿಯಾಗಿತ್ತು ಮತ್ತು ಅವರು ಅದನ್ನು ನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ,” ಎಂದು ಸಂದೀಪನ್ ಸಹಾ ಸುದ್ದಿ ಸಂಸ್ಥೆ ‘ಎಎನ್ಐ’ಗೆ ತಿಳಿಸಿದ್ದಾರೆ.
ಭಾನುವಾರ ನಡೆದ ಸಭೆಗೆ ಟಿಎಂಸಿಯ 80 ಶಾಸಕರ ಪೈಕಿ ಕೇವಲ 20 ಶಾಸಕರು ಮಾತ್ರ ಉಪಸ್ಥಿತರಿದ್ದರು. ಕಳೆದ ಶನಿವಾರ ಸೋನಾರಪುರದಲ್ಲಿ ಅಭಿಷೇಕ್ ಬ್ಯಾನರ್ಜಿ ಅವರ ಮೇಲೆ ನಡೆದ ದಾಳಿಯ ಕಾರಣದಿಂದಾಗಿ ಶಾಸಕರು ಸಭೆಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಪಕ್ಷವು ಸ್ಪಷ್ಟನೆ ನೀಡಿದೆ. ನಂತರ, ಮಮತಾ ಬ್ಯಾನರ್ಜಿ ಅವರು ತಮ್ಮ ನಿವಾಸಕ್ಕೆ ಬಂದಿದ್ದ ಶಾಸಕರನ್ನು ಭೇಟಿ ಮಾಡಿ ಅನೌಪಚಾರಿಕ ಮಾತುಕತೆ ನಡೆಸಿದ್ದರು ಎನ್ನಲಾಗಿದೆ.
ಭಾನುವಾರದ ಸಭೆಗೆ ಗೈರುಹಾಜರಾಗಿದ್ದ 60 ಶಾಸಕರಲ್ಲಿ ಸಂದೀಪನ್ ಮತ್ತು ರಿತಬ್ರತಾ ಕೂಡ ಸೇರಿದ್ದಾರೆ. ಸೋಮವಾರ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದ ಸಂದೀಪನ್ ಸಹಾ, ಮಮತಾ ಬ್ಯಾನರ್ಜಿ ಅವರ ನಿವಾಸದಲ್ಲಿ ಕರೆಯಲಾಗಿದ್ದ ಸಭೆಯು ಸೂಕ್ತ ನಿಯಮಾವಳಿಗಳನ್ನು ಪಾಲಿಸದೆ ಕರೆಯಲಾಗಿತ್ತು ಎಂದು ಆರೋಪಿಸಿದ್ದರು.
ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಾಗಿನಿಂದ ಟಿಎಂಸಿಯ ಹಲವು ನಾಯಕರು ಪಕ್ಷದ ಕಾರ್ಯವೈಖರಿಯ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ತೃಣಮೂಲ ಕಾಂಗ್ರೆಸ್ ತನ್ನ ನಾಯಕರನ್ನು ಉಳಿಸಿಕೊಳ್ಳಲು ತೀವ್ರವಾಗಿ ಹೋರಾಡುತ್ತಿರುವ ಈ ನಿರ್ಣಾಯಕ ಸಮಯದಲ್ಲಿಯೇ ಈ ಗಂಭೀರ ಆರೋಪಗಳು ಹೊರಬಂದಿವೆ. ಇತ್ತೀಚೆಗಷ್ಟೇ ಲೋಕಸಭಾ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಅವರು ಪಕ್ಷದ ಆಂತರಿಕ ವಿದ್ಯಮಾನಗಳ ಬಗ್ಗೆ ಬೇಸತ್ತು ತಮ್ಮಲ್ಲಾ ಪಕ್ಷದ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ.


ನಿಮ್ಮ ಕಾಮೆಂಟ್ ಬರೆಯಿರಿ