ಬೆಂಗಳೂರು: ಡಿ.ಕೆ. ಶಿವಕುಮಾರ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಜ್ಜಾಗಿದ್ದಾರೆ. ಇದರೊಂದಿಗೆ, ರಾಜ್ಯದ ಗಮನ ಈಗ ಅವರ ಮೊದಲ ಸಚಿವ ಸಂಪುಟದ ರಚನೆಯತ್ತ ನೆಟ್ಟಿದೆ. ಶಿವಕುಮಾರ ಸಂಪುಟ ಸೇರಲಿರುವ ನಾಯಕರ ಕುರಿತಾಗಿದ್ದ ಕುತೂಹಲಕ್ಕೆ ಸದ್ಯ ತೆರೆ ಬಿದ್ದಿದ್ದು, ಮುಖ್ಯಮಂತ್ರಿ ಸೇರಿದಂತೆ ಒಟ್ಟು 14 ನಾಯಕರು ಇಂದು, ಬುಧವಾರ (ಜೈನ್ ೩) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಡಾ.ಜಿ.ಪರಮೇಶ್ವರ ಅವರು ಉಪಮುಖ್ಯಮಂತ್ರಿಯಾಗಲಿದ್ದಾರೆ. ಹಾಗೂ ಉ.ಟಿ.ಖಾದರ್ ಅವರು ಸಹ ಸಚಿವರಾಗಲಿದ್ದು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.
ಸದ್ಯಕ್ಕೆ ಶಿವಕುಮಾರ್ ಸಂಪುಟದಲ್ಲಿ 13 ಹೆಸರುಗಳು ಖಚಿತವಾಗಿವೆ. ಆ ನಾಯಕರ ಪಟ್ಟಿ ಹೀಗಿದೆ:ಜಿ. ಪರಮೇಶ್ವರ (ಉಪಮುಖ್ಯಮಂತ್ರಿ)
ಪ್ರಿಯಾಂಕ್ ಖರ್ಗೆ
ಯತೀಂದ್ರ ಸಿದ್ದರಾಮಯ್ಯ
ಕೆ.ಜೆ. ಜಾರ್ಜ್
ಸತೀಶ್ ಜಾರಕಿಹೊಳಿ
ಶಿವರಾಜ ತಂಗಡಗಿ
ಯು.ಟಿ. ಖಾದರ್
ರಾಮಲಿಂಗಾರೆಡ್ಡಿ
ಈಶ್ವರ್ ಖಂಡ್ರೆ
ಕೃಷ್ಣ ಬೈರೇಗೌಡ
ಬೈರತಿ ಸುರೇಶ
ಶರಣಪ್ರಕಾಶ ಪಾಟೀಲ
ಎಂ.ಬಿ. ಪಾಟೀಲ
ಕೆ.ಹೆಚ್. ಮುನಿಯಪ್ಪ
ಖರ್ಗೆ ಮತ್ತು ಸಿದ್ದರಾಮಯ್ಯ ಬಣದ ಪ್ರಾತಿನಿಧ್ಯ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರ ಹೆಸರು ಕೂಡ ಪಟ್ಟಿಯಲ್ಲಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಪ್ರಮುಖ ಖಾತೆಗಳನ್ನು ನಿಭಾಯಿಸಿದ್ದರು. ಈ ನಾಯಕತ್ವ ಬದಲಾವಣೆಯ ನಂತರವೂ ಸಂಪುಟದಲ್ಲಿ ಖರ್ಗೆ ಬಣದ ಪ್ರಭಾವ ಮುಂದುವರಿದಿರುವುದನ್ನು ಇವರ ಸೇರ್ಪಡೆ ಧೃಡಪಡಿಸುತ್ತದೆ.
ಮತ್ತೊಂದು ಗಮನಾರ್ಹ ಹೆಸರು ಯತೀಂದ್ರ ಸಿದ್ದರಾಮಯ್ಯ. ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರಿಗೆ ಮಣೆ ಹಾಕಲಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ನಂತರವೂ ಸರ್ಕಾರದಲ್ಲಿ ಅವರ ರಾಜಕೀಯ ನೆಟ್‌ವರ್ಕ್ ಮತ್ತು ಪ್ರಾತಿನಿಧ್ಯವನ್ನು ಮುಂದುವರಿಸುವ ಪ್ರಯತ್ನವಾಗಿ ಯತೀಂದ್ರ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಮೊದಲ ಹಂತದ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ.


ನಿಮ್ಮ ಕಾಮೆಂಟ್ ಬರೆಯಿರಿ