
ಬೆಂಗಳೂರು: ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ (DK Shivakumar) ಲೋಕಭವನದಲ್ಲಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಥಾವರಚಂ ದ್‌ಗೆಹ್ಲೋಟ್ ಅವರು ನೂತನ ಮುಖ್ಯಮಂತ್ರಿಗೆ ಪ್ರಮಾಣ ವಚನ ಬೋಧಿಸಿದರು.
ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷದ ನಾಯಕ ರಾಹುಲ್ ಗಾಂಧಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ವರಿಷ್ಠರು, ಪಕ್ಷದ ಶಾಸಕರು,ಕುಟುಂಬಸ್ಥರು, ಸೇರಿ ನೂರಾರು ಮಂದಿ ಸಮ್ಮುಖದಲ್ಲಿ ಪದಗ್ರಹಣ ಕಾರ್ಯಕ್ರಮ ನೆರವೇರಿತು.
ವಂದೇ ಮಾತರಂ ಗೀತೆ, ರಾಷ್ಟ್ರಗೀತೆ, ನಾಡಗೀತೆ ನುಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ರಾಜ್ಯಪಾಲರು ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಪ್ರಮಾಣ ವಚನ ಬೋಧಿಸಿದರು. “ಡಿ ಕೆ ಶಿವಕುಮಾರ ಎಂಬ ಹೆಸರಿನಾದ ನಾನು, ಮುಖ್ಯಮಂತ್ರಿಯಾಗಿ ಕರ್ತವ್ಯವನ್ನು ವೀರ ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣ ಮಾಡಿ ನಿರ್ವಹಿಸುತ್ತೇನೆ ಎಂದು ಪ್ರಮಾಣ ಮಾಡಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ, ರಣದೀಪ ಸುರ್ಜೆವಾಲಾ, ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ, ಕೇರಳ ಮುಖ್ಯಮಂತ್ರಿ ವಿ.ಡಿ.ಸತೀಶನ್, ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖವಿಂದರ ಸಿಂಗ್ ಸುಖು, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಪದಗ್ರಹಣಕ್ಕೂ ಮುನ್ನಾ ಡಿ.ಕೆ.ಶಿವಕುಮಾರ ಅವರ ನಿವಾಸದಲ್ಲಿ ವಿಶೇಷ ಪೂಜೆ ನೆರವೇರಿತು. ಈ ವೇಳೆ ತಾಯಿ ಗೌರಮ್ಮ ಅವರ ಆಶೀರ್ವಾದವನ್ನು ಪಡೆದ ಶಿವಕುಮಾರ ನಂತರ ರಾಜ್ಯ ಹಿರಿಯ ರಾಜಕೀಯ ನಾಯಕರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಸಚಿವರಾಗಿ 13 ಶಾಸಕರ ಪ್ರಮಾಣ ವಚನ
ಶಿವಕುಮಾರ ಜೊತೆಗೆ ಮೊದಲ ಹಂತದಲ್ಲಿ ಸಚಿವರಾಗಿ 13 ಶಾಸಕರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಡಾ.ಜಿ.ಪರಮೇಶ್ವರ ಅವರು ರಾಜ್ಯದ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರೆ, ಇದೇ ಮೊದಲ ಬಾರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಸಚಿವರಾಗಿದ್ದಾರೆ. ಸೇರಿದ್ದಾರೆ. ವಿಧಾನಸಭೆ ಸ್ಪೀಕರ್ ಆಗಿದ್ದ ಯು.ಟಿ.ಖಾದರ್ ಸಹ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಇವರಲ್ಲದೆ, ಕೆ.ಎಚ್.ಮುನಿಯಪ್ಪ, ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ, ರಾಮಲಿಂಗಾರೆಡ್ಡಿ, ಸತೀಶ ಜಾರಕಿಹೊಳಿ, ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ, ಈಶ್ವರ ಖಂಡ್ರೆ, ಬೈರತಿ ಸುರೇಶ, ಶರಣಪ್ರಕಾಶ ಪಾಟೀಲ ಅವರು ಸಹ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಡಿಕೆ ಶಿವಕುಮಾರ ರಾಜಕೀಯ ಜೀವನದ ಹಾದಿ
ಕಾಲೇಜು ದಿನಗಳಲ್ಲಿ ವಿದ್ಯಾರ್ಥಿ ನಾಯಕರಾಗಿ ರಾಜಕೀಯ ಪ್ರವೇಶ ಮಾಡಿದ್ದ ಡಿ.ಕೆ.ಶಿವಕುಮಾರ ಇಂದು ರಾಜ್ಯದ ಮುಖ್ಯಮಂತ್ರಿಯಾಗಿಅಧಿಕಾರ ಸ್ವೀಕಾರ ಮಾಡಿದ್ದಾರೆ. 8 ಬಾರಿ ಶಾಸಕರಾಗಿ, ಸಚಿವರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ, ಈ ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಇವರು ಕಾರ್ಯ ನಿರ್ವಹಿಸಿದ್ದಾರೆ.
ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್ಎಸ್‌ಯುಐ) ಮೂಲಕ ವಿದ್ಯಾರ್ಥಿ ನಾಯಕರಾಗಿ ರಾಜಕೀಯ ಪ್ರವೇಶ ಮಾಡಿದ ಅವರು1985ರಲ್ಲಿ ಸಾತನೂರು ಕ್ಷೇತ್ರದಿಂದ ಎಚ್. ಡಿ. ದೇವೇಗೌಡರ ವಿರುದ್ಧ ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದರು. 1989ರಲ್ಲಿ ಸಾತನೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. 1999-2004ರ ವರೆಗೆಎಸ್.ಎಂ.ಕೃಷ್ಣ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದರು. 2014ರಿಂದ 2018ರ ವರೆಗೆ ಅಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಇಂಧನ ಸಚಿವರಾಗಿ ಕಾರ್ಯ ನಿರ್ವಹಣೆ, 2023ರಿಂದ ಈವರೆಗೆ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ, 2020ರಿಂದ ಈವರೆಗೂ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ.



ನಿಮ್ಮ ಕಾಮೆಂಟ್ ಬರೆಯಿರಿ