
ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ನಡೆಯಲಿರುವ ದ್ವೈವಾರ್ಷಿಕ ಚುನಾವಣೆಗೆ ಕಾಂಗ್ರೆಸ್ ಪಕ್ಷವು ಬುಧವಾರ (ಜೂನ್ 3) ತನ್ನ ನಾಲ್ವರು ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಿ. ಕೆ. ಹರಿಪ್ರಸಾದ, ತಿಪ್ಪಣ್ಣಪ್ಪ ಕಮಕನೂರ, ಪಿ. ವಿ. ಮೋಹನ ಮತ್ತು ಶಿವಣ್ಣ ಮಳವಳ್ಳಿ ಅವರು ಅಭ್ಯರ್ಥಿಗಳಾಗಲು ಅನುಮೋದನೆ ನೀಡಿದ್ದಾರೆ ಎಂದು ಕಾಂಗ್ರೆಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಬಿ.ಕೆ.ಹರಿಪ್ರಸಾದ, ತಿಪ್ಪಣ್ಣಪ್ಪ ಕಮಕನೂರು ಮರು ಆಯ್ಕೆ ಬಯಸಿದ್ದರೆ, ಸಿದ್ದರಾಮಯ್ಯ ಆಪ್ತ ಶಿವಣ್ಣ ಮಳವಳ್ಳಿ ಅವರಿಗೆ ಟಿಎಟ್ ನೀಡಲಾಗಿದೆ. ಪಿ.ವಿ.ಮೋಹನ ಅವರು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಎಂದು ಹೇಳಲಾಗಿದೆ.

ಜೂನ್ 30 ರಂದು ಅಧಿಕಾರಾವಧಿ ಮುಕ್ತಾಯಗೊಳ್ಳಲಿರುವ ಏಳು ಸದಸ್ಯರ ನಿವೃತ್ತಿಯಿಂದ ತೆರವಾಗುತ್ತಿರುವ ಸ್ಥಾನಗಳನ್ನು ಭರ್ತಿ ಮಾಡಲು ಈ ಚುನಾವಣೆ ನಡೆಯುತ್ತಿದೆ. ಪ್ರಸ್ತುತ ಕರ್ನಾಟಕ ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತವನ್ನು ಹೊಂದಿರುವ ಆಡಳಿತಾರೂಢ ಕಾಂಗ್ರೆಸ್ ಪಕ್ಷವು, ತೆರವಾಗಿರುವ ಏಳು ವಿಧಾನ ಪರಿಷತ್ ಸ್ಥಾನಗಳ ಪೈಕಿ ಐದು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ.
ನಾಮಪತ್ರ ಸಲ್ಲಿಸಲು ಕೊನೆಯ ದಿನ ಜೂನ್ 8 ಆಗಿದ್ದು, ಜೂನ್ 9ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಜೂನ್ 11 ಕೊನೆಯ ದಿನವಾಗಿದೆ. ಜೂನ್ 18ರಂದು ಮತದಾನ ಬೆಳಗ್ಗೆ 9:00 ರಿಂದ ಸಂಜೆ 4:00 ರವರೆಗೆ ನಡೆಯಲಿದ್ದು, ಮತ ಎಣಿಕೆ ಅಂದೇ ಸಂಜೆ 5 ರಿಂದ ನಡೆಯಲಿದ್ದು, ನಂತರ ಫಲಿತಾಂಶ ಪ್ರಕಟವಾಗಲಿದೆ.


ನಿಮ್ಮ ಕಾಮೆಂಟ್ ಬರೆಯಿರಿ