
ಬೆಂಗಳೂರು: ಡಿಕೆ ಶಿವಕುಮಾರ ಬುಧವಾರ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ನಡೆದ ಮೊದಲು ಸಂಪುಟ ಸಭೆಯಲ್ಲಿ ಎಲ್ಲಾ ಶಾಲಾ, ಕಾಲೇಜ್ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ನಿರ್ಧಾರ ತೆಗೆದುಕೊಂಡಿದ್ದಾರೆ. ಅಲ್ಲದೆ, 6 ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಸೇರಿದಂತೆ ಮಹತ್ವದ ನಿರ್ಣಯಗಳನ್ನು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಕೈಗೊಳ್ಳಲಾಗಿದೆ.
ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಶಾಲಾ, ಕಾಲೇಜ್ ವಿದ್ಯಾರ್ಥಿಗಳಿಗೂ ಕೂಡ ಉಚಿತ ಬಸ್ ಪಾಸ್ ನೀಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಶೀಘ್ರದಲ್ಲೇ ಉಚಿತ ಬಸ್ ಪಾಸ್ ವಿತರಿಸಲು ಅರ್ಜಿ ಕರೆಯಲಾಗುವುದು ಎಂದು ತಿಳಿಸಿದರು.
ಬೆಂಗಳೂರಿಗಷ್ಟೇ ಸೀಮಿತವಾಗಿದ್ದಬಿ ಖಾತೆಯಿಂದ ಎ ಖಾತೆ ಯೋಜನೆ ರಾಜ್ಯಾದ್ಯಂತ ವಿಸ್ತರಣೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಅನಧಿಕೃತ ಕಟ್ಟಡಗಳಿಗೆ ಎ-ಖಾತಾ ದಾಖಲೆ ನೀಡುವ ಅಭಿಯಾನವನ್ನು ಇಡೀ ರಾಜ್ಯಕ್ಕೆ ವಿಸ್ತರಿಸುತ್ತೇವೆ ಎಂದು ಮಾಹಿತಿ ನೀಡಿದರು.
ಬೆಂಗಳೂರು ನಗರದ ರಸ್ತೆಗಳ ಡಾಂಬರೀಕರಣ; 2 ಸಾವಿರ ಕೋಟಿ ಅನುದಾನ
ಬೆಂಗಳೂರಿನ ನಗರದ ಎಲ್ಲಾ ರಸ್ತೆಗಳ ಡಾಂಬರೀಕರಣಕ್ಕೆ 2 ಸಾವಿರ ಕೋಟಿ ಅನುದಾನ ನೀಡಲು ತೀರ್ಮಾನಿಸಲಾಗಿದೆ. ಮೂರ್ನಾಲ್ಕು ತಿಂಗಳಲ್ಲಿ ರಸ್ತೆ ಡಾಂಬರೀಕರಣ ಮಾಡಲು ತೀರ್ಮಾನಿಸಲಾಗಿದೆ. ಉಳಿದ ವಿಚಾರಗಳನ್ನು ಬೇರೆ ದಿನಗಳಲ್ಲಿ ಚರ್ಚೆ ಮಾಡುತ್ತೇವೆ” ಎಂದು ಮುಖ್ಯಮಂತ್ರಿಗಳು ಹೇಳಿದರು.
ಅಲ್ಲದೆ, 2,500 ಚದರ ಅಡಿಗಳ ವರೆಗೂ ಒಸಿ ವಿನಾಯಿತಿ. ಇದರೊಂದಿಗೆ 2,500 ಚ.ಅಡಿ ವಿಸ್ತೀರ್ಣ ಕಟ್ಟಡಕ್ಕೆ ಅರ್ಜಿ ಹಾಕಿದವರಿಗೆ ರಿಲೀಫ್ ಸಿಗಲಿದೆ ಎಂದು ತಿಳಿಸಿದರು.
ಖಾಸಗಿ ಕಂಪನಿಗಳ ಸಹಯೋಗದೊಂದಿಗೆ ಉದ್ಯೋಗಾವಕಾಶ
ಉದ್ಯೋಗ ಹುಡುಕುತ್ತಿರುವ ನಿರುದ್ಯೋಗಿಗಳು ಸರ್ಕಾರದಲ್ಲಿ ನೋಂದಾಯಿಸಿಕೊಳ್ಳಬೇಕು. ನಾವು ಕಂಪನಿಗಳೊಂದಿಗೆ ಮಾತನಾಡಿ ಅವರಿಗೆ ಅಗತ್ಯವಿರುವ ಉದ್ಯೋಗಗಳನ್ನು ಒದಗಿಸಲು ವ್ಯವಸ್ಥೆ ಮಾಡಲಾಗುತ್ತದೆ. ಉದ್ಯೋಗಕ್ಕಾಗಿ ಯುವ ಸಮುದಾಯಕ್ಕೆ ಸರ್ಕಾರವೇ ತರಬೇತಿ ನೀಡುತ್ತದೆ” ಎಂದು ಅವರು ಮಾಹಿತಿ ನೀಡಿದರು.
ಗ್ರಾಮಗಳಲ್ಲಿ ಭಾರತ್ ಜೋಡೋ ಯೂತ್ ಕ್ಲಬ್‌ಗಳನ್ನು ರಚಿಸಲು ನಿರ್ಧರಿಸಲಾಗಿದೆ. ಈ ಯುವ ಸಂಘಗಳಿಗೆ ಸರ್ಕಾರ 10 ಲಕ್ಷ ರೂ.ಗಳನ್ನು ನೀಡಲಿದೆ. ರಾಜ್ಯಾದ್ಯಂತ 10,000 ಭಾರತ್ ಜೋಡೋ ಕ್ಲಬ್‌ಗಳನ್ನು ರಚಿಸುವುದು ನಮ್ಮ ಗುರಿಯಾಗಿದೆ” ಎಂದು ಅವರು ಹೇಳಿದರು.



ನಿಮ್ಮ ಕಾಮೆಂಟ್ ಬರೆಯಿರಿ