ನಾನು ಸಿಎಂ ಆದ ನಂತರ ರಾಮಲಿಂಗಾ ರೆಡ್ಡಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ‌ ಕೊಡ್ತೇನೆ ಅಂದ್ದಿದ್ದು ನಿಜ, ಆದರೆ…: ಸಿಎಂ ಡಿಕೆ ಶಿವಕುಮಾರ

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಖಾತೆ ಹಂಚಿಕೆ ಬೆನ್ನಲ್ಲೇ ಭಿನ್ನಮತ ಸ್ಫೋಟಗೊಂಡಿದ್ದು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರನ್ನು ಭೇಟಿಯಾಗಿ ಮನವೊಲಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ತಿಳಿಸಿದ್ದಾರೆ. ಹೈಕಮಾಂಡ್ ತೀರ್ಮಾನವನ್ನು ಅವರಿಗೆ ಮನವರಿಕೆ ಮಾಡಿಕೊಟ್ಟು, ರಾಜೀನಾಮೆ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೋರುವುದಾಗಿ ಅವರು ಹೇಳಿದ್ದಾರೆ.
ಬಿಟಿಎಂ ಲೇಔಟ್ ಶಾಸಕರಾದ ರಾಮಲಿಂಗಾರೆಡ್ಡಿ ಅವರು ತಾವು ಬಯಸಿದ್ದ ‘ಬೆಂಗಳೂರು ನಗರಾಭಿವೃದ್ಧಿ’ ಖಾತೆಯನ್ನು ನೀಡದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ಹೊಸದಾಗಿ ರಚನೆಯಾಗಿದ್ದ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು. ಅವರಿಗೆ ಪ್ರಸ್ತುತ ‘ಬೃಹತ್ ಮತ್ತು ಮಧ್ಯಮ ನೀರಾವರಿ’ ಖಾತೆಯನ್ನು ಹಂಚಿಕೆ ಮಾಡಲಾಗಿದೆ.

ಭರವಸೆ ನೀಡಿದ್ದ ಸಿಎಂ ಶಿವಕುಮಾರ
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು, ಈ ಹಿಂದೆ ರಾಮಲಿಂಗಾರೆಡ್ಡಿ ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡುವುದಾಗಿ ತಾವು ಭರವಸೆ ನೀಡಿದ್ದನ್ನು ಒಪ್ಪಿಕೊಂಡಿದ್ದಾರೆ. ಆದರೆ, ಖಾತೆ ಹಂಚಿಕೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.
“ನಾನು ಅಧಿಕಾರಕ್ಕೆ ಬಂದಾಗ ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡುವುದಾಗಿ ಈ ಹಿಂದೆ ಹೇಳಿದ್ದು ನಿಜ. ಹಾಗೆಯೇ ಅವರನ್ನು ಮನವೊಲಿಸಿ ಅವರು ಸಾರಿಗೆ ಖಾತೆ ಒಪ್ಪುವಂತೆ ಮಾಡಿದ್ದೆ. ಆದರೆ, ಈಗ ಹೈಕಮಾಂಡ್ ಈ ನಿರ್ಧಾರವನ್ನು ತಗೆದುಕೊಂಡಿದೆ,” ಎಂದು ಶಿವಕುಮಾರ ವಿವರಿಸಿದರು.
ರಾಮಲಿಂಗಾರೆಡ್ಡಿ ಅವರು ಅಸಮಾಧಾನಗೊಂಡಿದ್ದಾರೆ ಮತ್ತು ತಮ್ಮ ಕರೆಗಳಿಗೆ ಸಿಗುತ್ತಿಲ್ಲ ಎಂಬ ವರದಿಗಳ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, “ರೆಡ್ಡಿಯವರು ತಮ್ಮ ಮಕ್ಕಳ ಮನೆಗೆ ಹೋಗಿದ್ದು, ಈಗ ಹಿಂತಿರುಗುತ್ತಿದ್ದಾರೆ. ನಾನು ಖುದ್ದಾಗಿ ಹೋಗಿ ಅವರನ್ನು ಭೇಟಿಯಾಗುತ್ತೇನೆ. ಅವರು ನಮ್ಮ ಅತ್ಯಂತ ಹಿರಿಯ ನಾಯಕರು, ಎಂದು ಹೇಳಿದರು.

ಪ್ರಮುಖ ಸುದ್ದಿ :-   ತಾಯಿ ಗದರಿದ ಕೋಪಕ್ಕೆ ಕೆರೆಗೆ ಹಾರಿದ 14 ವರ್ಷದ ಮಗಳು ; ರಕ್ಷಿಸಲು ಹೋದ ತಾಯಿಯೂ ಮುಳುಗಿ ಸಾವು

ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಕೃಷ್ಣ ಬೈರೇಗೌಡ ಅವರಿಗೆ ನೀಡಿರುವ ಕುರಿತು ಮಾತನಾಡಿದ ಶಿವಕುಮಾರ, “ಕೃಷ್ಣ ಬೈರೇಗೌಡರು ಈ ಇಲಾಖೆಯನ್ನು ಕೇಳಿದ್ದರು, ಹಾಗಾಗಿ ಪಕ್ಷದ ಹೈಕಮಾಂಡ್ ಈ ನಿರ್ಧಾರ ಮಾಡಿದೆ. ನಾನು ಕೂಡ ಈ ಖಾತೆಗೆ ವಿನಂತಿಸಿದ್ದೆ. ಆದರೆ ಪಕ್ಷ ಮತ್ತು ಹೈಕಮಾಂಡ್ ನಿರ್ಧಾರ ಕೈಗೊಂಡ ಮೇಲೆ ನಾನು ಅದನ್ನು ಗೌರವಿಸಬೇಕಾಯಿತು. ನಡೆದ ವಿಷಯದ ಬಗ್ಗೆ ಈಗ ನಾನು ಅವರೊಂದಿಗೆ (ರಾಮಲಿಂಗಾರೆಡ್ಡಿ) ಮಾತನಾಡಬೇಕಿದೆ,” ಎಂದು ಹೇಳಿದರು.
ಖಾತೆ ಬದಲಾವಣೆಯ ಸಾಧ್ಯತೆಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಈ ವಿಷಯದಲ್ಲಿ ಪಕ್ಷದ ವರಿಷ್ಠರು ಮಾತ್ರ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ. “ಯಾವುದೇ ಬದಲಾವಣೆ ಇದ್ದರೂ ನಮ್ಮ ಪಕ್ಷದ ಹೈಕಮಾಂಡ್ ಮಾತ್ರ ಮಾತನಾಡಬಹುದು, ನಾನು ಏನೂ ಮಾಡಲು ಸಾಧ್ಯವಿಲ್ಲ,” ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಮುನಿಯಪ್ಪ ಅಸಮಾಧಾನ ಶಮನ
ಮತ್ತೊಬ್ಬ ಹಿರಿಯ ನಾಯಕರಾದ ಕೆ.ಎಚ್. ಮುನಿಯಪ್ಪ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ನೀಡಿರುವುದಕ್ಕೆ ಅವರು ಅಸಮಾಧಾನ ಹೊರಹಾಕಿದ್ದರು ಎನ್ನಲಾದ ವಿಷಯದ ಕುರಿತು ಮಾತನಾಡಿದ ಶಿವಕುಮಾರ, ಪಕ್ಷದ ನಾಯಕತ್ವದೊಂದಿಗೆ ಮಾತುಕತೆ ನಡೆಸಿದ ಬಳಿಕ ಈ ಸಮಸ್ಯೆ ಬಗೆಹರಿದಿದೆ ಎಂದರು.
“ಮುನಿಯಪ್ಪ ಅವರು ಒಪ್ಪಿಕೊಂಡಿದ್ದಾರೆ. ಅವರೊಂದಿಗೆ ರಾಹುಲ್ ಗಾಂಧಿ ಹಾಗೂ ನಾನು ಕೂಡ ಮಾತನಾಡಿದ್ದೇನೆ. ‘ನೀವು ಯಾವುದೇ ಖಾತೆ ನೀಡಿದರೂ ನಾವು ಸ್ವೀಕರಿಸುತ್ತೇವೆ ಮತ್ತು ಪಕ್ಷಕ್ಕಾಗಿ ಕೆಲಸ ಮಾಡುತ್ತೇವೆ’ ಎಂದು ಅವರು ಹೇಳಿದ್ದಾರೆ,” ಎಂದು ಡಿ.ಕೆ. ಶಿವಕುಮಾರ ತಿಳಿಸಿದರು.
ರಾಮಲಿಂಗಾರೆಡ್ಡಿ ಅವರ ರಾಜೀನಾಮೆ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಕೆ.ಎಚ್. ಮುನಿಯಪ್ಪ, ತಮಗೆ ಸಮಾಜ ಕಲ್ಯಾಣ, ಕೃಷಿ ಮತ್ತು ನೀರಾವರಿ ಇಲಾಖೆಗಳ ಮೇಲೆ ಆಸಕ್ತಿ ಇತ್ತು ಎಂದು ಬಹಿರಂಗಪಡಿಸಿದ್ದರು.

ಪ್ರಮುಖ ಸುದ್ದಿ :-   ತಾಯಿ ಗದರಿದ ಕೋಪಕ್ಕೆ ಕೆರೆಗೆ ಹಾರಿದ 14 ವರ್ಷದ ಮಗಳು ; ರಕ್ಷಿಸಲು ಹೋದ ತಾಯಿಯೂ ಮುಳುಗಿ ಸಾವು

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement