
ಚೆನ್ನೈ: ತಮಿಳುನಾಡು ಭಾರತೀಯ ಜನತಾ ಪಾರ್ಟಿಯಲ್ಲಿ (BJP) ತಲ್ಲಣ ಸೃಷ್ಟಿಯಾಗಿದೆ. ತಮಿಳುನಾಡು ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ, ಪಕ್ಷದ ಇಬ್ಬರು ಪ್ರಮುಖ ನಾಯಕರು ರಾಜೀನಾಮೆ ನೀಡಿ ಹೊರನಡೆದಿದ್ದು, ಬಿಜೆಪಿಗೆ ಭಾರಿ ಆಘಾತ ಎದುರಾಗಿದೆ.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಕರು ನಾಗರಾಜನ್ ಮತ್ತು ರಾಜ್ಯ ಕಾರ್ಯದರ್ಶಿ ಸುಮತಿ ವೆಂಕಟೇಶ ಅವರು ಶುಕ್ರವಾರ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆಯನ್ನು ಖಚಿತಪಡಿಸಿರುವ ಕರು ನಾಗರಾಜನ್, ಮುಂಬರುವ ದಿನಗಳಲ್ಲಿ ಅಣ್ಣಾಮಲೈ ಅವರು ಸ್ಥಾಪಿಸಲಿರುವ ಹೊಸ ರಾಜಕೀಯ ಪಕ್ಷವನ್ನು ಸೇರುವುದಾಗಿ ಪ್ರಕಟಿಸಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ನಾಗರಾಜನ್, “ಅಣ್ಣಾಮಲೈ ಅವರು ಕೇವಲ ಮುಖ್ಯಮಂತ್ರಿ ವಿಜಯ ಮಾತ್ರವಲ್ಲದೆ, ಯಾರು ತಪ್ಪು ಮಾಡಿದರೂ ಅದನ್ನು ಧೈರ್ಯವಾಗಿ ಬೆಟ್ಟು ಮಾಡಿ ತೋರಿಸುವ ನಾಯಕ. ಅವರು ವಿವಿಧ ಕ್ಷೇತ್ರಗಳಲ್ಲಿ ಅಪಾರ ಜ್ಞಾನವನ್ನು ಹೊಂದಿರುವ ಅತ್ಯಂತ ಧೈರ್ಯಶಾಲಿ ಮತ್ತು ಸಮರ್ಥ ನಾಯಕರಾಗಿದ್ದಾರೆ” ಎಂದು ಅಣ್ಣಾಮಲೈ ನಾಯಕತ್ವವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಭಾರವಾದ ಹೃದಯದಿಂದ ತ್ಯಜಿಸಿದ್ದೇನೆ- ಸುಮತಿ ವೆಂಕಟೇಶ
ಇನ್ನೊಂದೆಡೆ, ರಾಜ್ಯ ಕಾರ್ಯದರ್ಶಿ ಸುಮತಿ ವೆಂಕಟೇಶ ಅವರು ತಮ್ಮ ರಾಜೀನಾಮೆ ಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. “”ಎಚ್ಚರಿಕೆಯಿಂದ ಯೋಚಿಸಿದ” ನಂತರ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಅತ್ಯಂತ ಭಾರವಾದ ಹೃದಯದಿಂದ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದು, ಪಕ್ಷದೊಂದಿಗಿನ ಬಾಂಧವ್ಯವನ್ನು ಕೊನೆಗೊಳಿಸುತ್ತಿದ್ದೇನೆ ” ಎಂದು ಅವರು ಬರೆದುಕೊಂಡಿದ್ದಾರೆ.
“ಬಿಜೆಪಿಯಲ್ಲಿ ಸೇವೆ ಸಲ್ಲಿಸಿದ್ದು ನನಗೆ ಹೆಮ್ಮೆಯ ಮತ್ತು ಗೌರವದ ವಿಷಯವಾಗಿದೆ. ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಜಿ ಅವರ ನಾಯಕತ್ವ ಹಾಗೂ ಬಿಜೆಪಿ ಪ್ರತಿಪಾದಿಸುವ ರಾಷ್ಟ್ರೀಯತೆ ಮತ್ತು ದೇಶಸೇವೆಯ ಆದರ್ಶಗಳಿಂದ ನಾನು ಸದಾ ಪ್ರೇರಿತಳಾಗಿದ್ದೇನೆ. ಈ ಮೌಲ್ಯಗಳು ನನ್ನ ಇಡೀ ಪ್ರಯಾಣದಲ್ಲಿ ನನಗೆ ಮಾರ್ಗದರ್ಶನ ನೀಡಿವೆ ಮತ್ತು ಮುಂದೆಯೂ ನೀಡಲಿವೆ ” ಎಂದು ಸುಮತಿ ವೆಂಕಟೇಶ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
https://x.com/SumathiVenkat18/status/2062886963653525515?ref_src=twsrc%5Etfw%7Ctwcamp%5Etweetembed%7Ctwterm%5E2062886963653525515%7Ctwgr%5E78b6e17fccf97fc269722770d21602b8319965e3%7Ctwcon%5Es1_&ref_url=https%3A%2F%2Fwww.news18.com%2Findia%2Fafter-annamalai-tamil-nadu-bjp-vice-president-karu-nagarajan-tenders-resignation-10132973.html
ಅಣ್ಣಾಮಲೈ ರಾಜೀನಾಮೆ
ಕಳೆದ ಕೆಲವು ವಾರಗಳಿಂದ ತಮಿಳುನಾಡು ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಸಸ್ಪೆನ್ಸ್‌ಗೆ ತೆರೆ ಎಳೆದಿದ್ದ ಕೆ. ಅಣ್ಣಾಮಲೈ, ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಹಾಗೂ ಸಾಂಸ್ಥಿಕ ಜವಾಬ್ದಾರಿಗಳಿಗೆ ರಾಜೀನಾಮೆ ನೀಡಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ ಅವರು ಅಣ್ಣಾಮಲೈ ರಾಜೀನಾಮೆಯನ್ನು ಅಂಗೀಕರಿಸಿದ್ದು, ಇದರೊಂದಿಗೆ ಅವರ ಆರು ವರ್ಷಗಳ ಬಿಜೆಪಿ ಸಂಬಂಧ ಕೊನೆಗೊಂಡಿದೆ.
ರಾಜೀನಾಮೆ ಪತ್ರದಲ್ಲಿ ಅಣ್ಣಾಮಲೈ ಅವರು, “ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಿಂದ ಪ್ರೇರಿತನಾಗಿ ಮತ್ತು ತಮಿಳುನಾಡಿನ ರಾಜಕೀಯ ಸಂಸ್ಕೃತಿಯನ್ನು ಬದಲಾಯಿಸುವ ಉದ್ದೇಶದಿಂದ ನಾನು ಬಿಜೆಪಿಗೆ ಸೇರಿದ್ದೆ,” ಎಂದು ತಿಳಿಸಿದ್ದಾರೆ.
ತಮಗೆ ಪ್ರಮುಖ ಜವಾಬ್ದಾರಿಗಳನ್ನು ನೀಡಿದ ಪಕ್ಷದ ವರಿಷ್ಠರಿಗೆ ಕೃತಜ್ಞತೆ ಸಲ್ಲಿಸಿರುವ ಅವರು, ಕಳೆದ 18 ತಿಂಗಳುಗಳಿಂದ ಉನ್ನತ ನಾಯಕತ್ವದೊಂದಿಗೆ ಕೆಲವು ವಿಷಯಗಳಲ್ಲಿ ತಮಗಿದ್ದ ಭಿನ್ನಾಭಿಪ್ರಾಯಗಳನ್ನು ಬಹಿರಂಗಪಡಿಸಿದ್ದಾರೆ.
“ನಮ್ಮ ಹಿರಿಯ ನಾಯಕರೊಂದಿಗೆ ನಡೆಸಿದ ಸುದೀರ್ಘ ಚರ್ಚೆಯ ನಂತರ, ತಮಿಳುನಾಡಿಗೆ ಸಂಬಂಧಿಸಿದಂತೆ ನಮ್ಮ ಮತ್ತು ವರಿಷ್ಠರ ದೃಷ್ಟಿಕೋನಗಳು ಪರಸ್ಪರ ಹೊಂದಿಕೆಯಾಗುತ್ತಿಲ್ಲ ಎಂಬ ತೀರ್ಮಾನಕ್ಕೆ ನಾನು ಬಂದಿದ್ದೇನೆ,” ಎಂದು ಅಣ್ಣಾಮಲೈ ತಮ್ಮ ರಾಜೀನಾಮೆಗೆ ಪ್ರಮುಖ ಕಾರಣವನ್ನು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಅಣ್ಣಾಮಲೈ ಬಿಜೆಪಿಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಇತರ ಪ್ರಮುಖ ನಾಯಕರು ಪಕ್ಷ ತೊರೆಯುತ್ತಿರುವುದು ತಮಿಳುನಾಡು ಬಿಜೆಪಿಯಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.



ನಿಮ್ಮ ಕಾಮೆಂಟ್ ಬರೆಯಿರಿ