ತಮಿಳುನಾಡು ಬಿಜೆಪಿಗೆ ಅಣ್ಣಾಮಲೈ ಗುಡ್‌ ಬೈ: ‘ವಿ ದ ಲೀಡರ್ಸ್’ ಆಂದೋಲನ ಘೋಷಣೆ

ಚೆನ್ನೈ: ತಮಿಳುನಾಡು ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಬಲ್ಲ ಮಹತ್ವದ ಬೆಳವಣಿಗೆಯೊಂದರಲ್ಲಿ, ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಭಾರತೀಯ ಜನತಾ ಪಕ್ಷದೊಂದಿಗೆ (BJP) ಔಪಚಾರಿಕವಾಗಿ ಸಂಬಂಧ ಕಡಿದುಕೊಂಡಿದ್ದಾರೆ. ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರು ‘ವಿ ದ ಲೀಡರ್ಸ್’ (We the Leaders) ಹೆಸರಿನ ಹೊಸ ರಾಜಕೀಯ ಆಂದೋಲನವನ್ನು ಘೋಷಿಸುವ ಮೂಲಕ ತಮ್ಮ ಸ್ವತಂತ್ರ ರಾಜಕೀಯ ಪ್ರಯಾಣವನ್ನು ಆರಂಭಿಸಿದ್ದಾರೆ.
ಶುಕ್ರವಾರ ಬಿಡುಗಡೆ ಮಾಡಿದ ವಿಡಿಯೋ ಸಂದೇಶದಲ್ಲಿ ಈ ವಿಷಯ ಪ್ರಕಟಿಸಿರುವ ಅಣ್ಣಾಮಲೈ, ತಾವೂ ಸೇರಿದಂತೆ ತಮ್ಮ ನೂತನ ಪಕ್ಷವು ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ತಾವು ಸಾರ್ವಜನಿಕ ಜೀವನಕ್ಕೆ ಬರಲು ಕಾರಣವಾದ ಮೂಲ ಉದ್ದೇಶ ಮತ್ತು ಮಿಷನ್ ಅನ್ನು ಮುಂದುವರಿಸುವ ಹಂಬಲದಿಂದಲೇ ಈ ನಿರ್ಧಾರ ಕೈಗೊಂಡಿರುವುದಾಗಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ತಿಳಿಸಿದ್ದಾರೆ.
“ತಮಿಳುನಾಡಿನಲ್ಲಿ ಸಕಾರಾತ್ಮಕ ಬದಲಾವಣೆ ತರುವ ಉದ್ದೇಶದಿಂದ ನಾನು ಬಿಜೆಪಿಗೆ ಸೇರಿದ್ದೆ. ಆದರೆ, ಈಗ ಆ ಗುರಿಯನ್ನು ಸಾಧಿಸಲು ಬೇರೆಯದೇ ಆದ ರಾಜಕೀಯ ಹಾದಿ ಅಗತ್ಯವಿದೆ ಎಂದು ನಾನು ಬಲವಾಗಿ ನಂಬಿದ್ದೇನೆ” ಎಂದು ಅವರು ಹೇಳಿದ್ದಾರೆ.
ಡಿಸೆಂಬರ್ 2025ರಲ್ಲೇ ರಾಜೀನಾಮೆ ಇಚ್ಛೆ ವ್ಯಕ್ತಪಡಿಸಿದ್ದೆ….
ತಾವು ಪಕ್ಷ ತೊರೆಯುವ ನಿರ್ಧಾರವನ್ನು 2025ರ ಡಿಸೆಂಬರ್‌ನಲ್ಲೇ ಬಿಜೆಪಿ ಹೈಕಮಾಂಡ್‌ಗೆ ತಿಳಿಸಿದ್ದಾಗಿ ಅಣ್ಣಾಮಲೈ ಬಹಿರಂಗಪಡಿಸಿದ್ದಾರೆ. ಆದರೆ, ತಮಿಳುನಾಡು ವಿಧಾನಸಭಾ ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೂ ಪಕ್ಷದಲ್ಲಿ ಮುಂದುವರಿಯುವಂತೆ ಪಕ್ಷದ ಹಿರಿಯ ನಾಯಕರು ತಮಗೆ ವಿನಂತಿಸಿದ್ದರು ಎಂದು ಅವರು ತಿಳಿಸಿದ್ದಾರೆ.
ಶುಕ್ರವಾರ ಬಿಜೆಪಿ ಕೇಂದ್ರ ನಾಯಕತ್ವವು ಅಣ್ಣಾಮಲೈ ಅವರು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ನೀಡಿದ ರಾಜೀನಾಮೆಯನ್ನು ಔಪಚಾರಿಕವಾಗಿ ಅಂಗೀಕರಿಸಿದೆ. ತಮಿಳುನಾಡಿನಲ್ಲಿ ಬಿಜೆಪಿಯ ಮೈತ್ರಿ ಕಾರ್ಯತಂತ್ರದ ಕುರಿತು ಉಂಟಾದ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ, ಕೆಲವು ತಿಂಗಳುಗಳ ಹಿಂದಷ್ಟೇ ಅವರು ತಮ್ಮ ಪಕ್ಷದ ಸಾಂಸ್ಥಿಕ ಹುದ್ದೆಗಳಿಂದ ಕೆಳಗಿಳಿದಿದ್ದರು.
ಮೈತ್ರಿ ವಿಚಾರದಲ್ಲಿ ಭಿನ್ನಾಭಿಪ್ರಾಯ: ಮೋದಿ ಬಗ್ಗೆ ಗೌರವ
ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ತಮಗೆ ಅಪಾರ ಗೌರವವಿದೆ ಎಂದು ಪುನರುಚ್ಚರಿಸಿರುವ ಅಣ್ಣಾಮಲೈ, ಕಳೆದ ಒಂದೂವರೆ ವರ್ಷಗಳಿಂದ ಕೆಲವು ವಿಷಯಗಳಲ್ಲಿ ತಮಗೆ ಬಿಜೆಪಿಯೊಂದಿಗೆ ಭಿನ್ನಾಭಿಪ್ರಾಯಗಳಿದ್ದವು ಎಂಬುದನ್ನು ಒಪ್ಪಿಕೊಂಡಿದ್ದಾರೆ.
ಮುಖ್ಯವಾಗಿ, ತಮಿಳುನಾಡಿನಲ್ಲಿ ಎಐಎಡಿಎಂಕೆ (AIADMK) ಜೊತೆ ಮೈತ್ರಿ ಮಾಡಿಕೊಳ್ಳುವ ಬದಲಿಗೆ ಬಿಜೆಪಿ ಸ್ವತಂತ್ರವಾಗಿ ಚುನಾವಣೆ ಎದುರಿಸಬೇಕಾಗಿತ್ತು ಎಂಬುದು ಅವರ ದೀರ್ಘಕಾಲದ ನಿಲುವಾಗಿತ್ತು. ಈ ಚುನಾವಣಾ ಕಾರ್ಯತಂತ್ರವೇ ಪಕ್ಷದ ನಾಯಕತ್ವ ಮತ್ತು ಅವರ ನಡುವಿನ ಭಿನ್ನಾಭಿಪ್ರಾಯಕ್ಕೆ ಮುಖ್ಯ ಕಾರಣವಾಗಿತ್ತು ಎನ್ನಲಾಗಿದೆ.
“ನಾನು ಪಕ್ಷಕ್ಕೆ ಯಾವುದೇ ರೀತಿಯಲ್ಲಿ ಸಮಸ್ಯೆಯಾಗಲು ಬಯಸಲಿಲ್ಲ. ಅದಕ್ಕಾಗಿಯೇ ದೂರ ಸರಿದು ಪ್ರತ್ಯೇಕ ಹಾದಿ ಹಿಡಿಯಲು ನಿರ್ಧರಿಸಿದೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
‘ವಿ ದ ಲೀಡರ್ಸ್’: ಪ್ರಾದೇಶಿಕ ಅಸ್ಮಿತೆಗೆ ಆದ್ಯತೆ
ತಮ್ಮ ಹೊಸ ರಾಜಕೀಯ ಪಯಣವನ್ನು “ಒಂಟಿ ಹೋರಾಟ” ಎಂದು ಬಣ್ಣಿಸಿರುವ ಅಣ್ಣಾಮಲೈ, ತಮ್ಮ ನೂತನ ಸಂಘಟನೆಯು ತಮಿಳುನಾಡಿನ ಅಸ್ಮಿತೆ ಮತ್ತು ಆಕಾಂಕ್ಷೆಗಳಿಗೆ ಬದ್ಧವಾಗಿ ಕೆಲಸ ಮಾಡಲಿದೆ ಹಾಗೂ ಸಾಮಾನ್ಯ ಜನರ ಸಮಸ್ಯೆಗಳ ಮೇಲೆ ಗಮನ ಹರಿಸಲಿದೆ ಎಂದಿದ್ದಾರೆ.
ರಾಷ್ಟ್ರೀಯ ಪಕ್ಷಗಳು ಹಲವು ಬಾರಿ ತಮಿಳುನಾಡು ಮತದಾರರ ಭಾವನೆಗಳು ಮತ್ತು ನಿರೀಕ್ಷೆಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಹೆಣಗಾಡುತ್ತವೆ ಎಂದು ವಾದಿಸಿರುವ ಅವರು, ತಮ್ಮ ಹೊಸ ಪಕ್ಷವು ಸಾರ್ವಜನಿಕ ಕಲ್ಯಾಣ ಮತ್ತು ಉತ್ತಮ ಆಡಳಿತದ ಮೇಲೆ ಕೇಂದ್ರೀಕೃತವಾಗಿರುವ ‘ಜನಕೇಂದ್ರಿತ’ ಪರ್ಯಾಯ ರಾಜಕೀಯ ವೇದಿಕೆಯಾಗಲಿದೆ ಎಂದಿದ್ದಾರೆ.
ವಂಶಪಾರಂಪರ್ಯ ರಾಜಕಾರಣಕ್ಕೆ ಟಾಂಗ್ !
ಆಡಳಿತಾರೂಢ ಡಿಎಂಕೆ (DMK) ಪಕ್ಷವನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡ ಅಣ್ಣಾಮಲೈ, ವ್ಯಕ್ತಿ ಆರಾಧನೆ ಮತ್ತು ವಂಶಪಾರಂಪರ್ಯ ರಾಜಕಾರಣವನ್ನು ತೀವ್ರವಾಗಿ ಟೀಕಿಸಿದರು. ರಾಜಕೀಯ ಎಂಬುದು ಒಂದೇ ಕುಟುಂಬದ ಸುತ್ತ ಸುತ್ತಬಾರದು, ಬದಲಿಗೆ ರಾಜಕೀಯ ಹಿನ್ನೆಲೆಯ ಆಧಾರದ ಮೇಲಲ್ಲದೆ ಸಾರ್ವಜನಿಕ ಸೇವೆಯ ಆಧಾರದ ಮೇಲೆ ನಾಯಕತ್ವವನ್ನು ಗುರುತಿಸುವಂತಾಗಬೇಕು ಎಂದು ಕರೆ ನೀಡಿದರು.
ಇದೇ ವೇಳೆ, ಈ ಹಿಂದೆ ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಹಲವು ಪ್ರಮುಖ ವ್ಯಕ್ತಿಗಳು ತಮ್ಮ ರಾಜಕೀಯ ರಂಗಪ್ರವೇಶದ ವೇಳೆ ಜೊತೆಯಾಗಲು ಆಹ್ವಾನ ನೀಡಿದ್ದರು, ಆದರೆ ತಾವಾಗಿಯೇ ಸ್ವತಂತ್ರ ವೇದಿಕೆಯನ್ನು ನಿರ್ಮಿಸಲು ನಿರ್ಧರಿಸಿ ಆ ಆಫರ್‌ಗಳನ್ನು ನಿರಾಕರಿಸಿದ್ದಾಗಿ ಅವರು ಬಹಿರಂಗಪಡಿಸಿದರು.
ಐಪಿಎಸ್‌ನಿಂದ ಸ್ವತಂತ್ರ ರಾಜಕೀಯದವರೆಗೆ…
ಕರ್ನಾಟಕ ಕೆಡರ್‌ನ ಜನಪ್ರಿಯ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಅವರು 2019 ರಲ್ಲಿ ತಮ್ಮ ಪೊಲೀಸ್ ಸೇವೆಗೆ ರಾಜೀನಾಮೆ ನೀಡಿದ್ದರು. ಬಳಿಕ 2020 ರಲ್ಲಿ ಬಿಜೆಪಿ ಸೇರಿದ ಅವರು, ಕೇವಲ ಒಂದು ವರ್ಷದ ಅವಧಿಯಲ್ಲಿ ತಮಿಳುನಾಡು ಬಿಜೆಪಿಯ ಅಧ್ಯಕ್ಷರಾಗಿ ನೇಮಕಗೊಂಡು ದಕ್ಷಿಣ ಭಾರತದಲ್ಲಿ ಬಿಜೆಪಿಯ ಪ್ರಭಾವಿ ನಾಯಕರಾಗಿ ವೇಗವಾಗಿ ಬೆಳೆದರು. ತಮಿಳುನಾಡಿನಲ್ಲಿ ಬಿಜೆಪಿಯ ಹೆಜ್ಜೆಯನ್ನು ವಿಸ್ತರಿಸಲು ಅವರು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ್ದರು.
ಇದೀಗ ಅಣ್ಣಾಮಲೈ ಅವರು ಸ್ವತಂತ್ರ ಪಕ್ಷವನ್ನು ಸ್ಥಾಪಿಸಿರುವುದು ತಮಿಳುನಾಡಿನ ಚುನಾವಣಾ ಸಮೀಕರಣಗಳನ್ನು ಮರುರೂಪಿಸಲಿದೆ ಹಾಗೂ ಈಗಾಗಲೇ ತೀವ್ರ ಪೈಪೋಟಿಯಿಂದ ಕೂಡಿರುವ ರಾಜ್ಯ ರಾಜಕಾರಣಕ್ಕೆ ಹೊಸ ಆಯಾಮವನ್ನು ನೀಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement