
ಬೆಂಗಳೂರು: ರಾಜ್ಯದಲ್ಲಿ ನೈಋತ್ಯ ಮುಂಗಾರು ತೀವ್ರಗೊಂಡ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ (IMD) ಮುಂದಿನ ಏಳು ದಿನಗಳ ಕಾಲ ರಾಜ್ಯಾದ್ಯಂತ ಮಳೆ ಮುನ್ಸೂಚನೆ ನೀಡಿದೆ. ಇತ್ತೀಚಿನ ಹವಾಮಾನ ಮುನ್ಸೂಚನೆಯ ಪ್ರಕಾರ, ರಾಜ್ಯದ ಬಹುತೇಕ ಭಾಗಗಳಲ್ಲಿ ಗುಡುಗು, ಮಿಂಚು ಹಾಗೂ ಬಲವಾದ ಗಾಳಿ ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಅದರಲ್ಲೂ ವಿಶೇಷವಾಗಿ ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಜೂನ್10ರ ವರೆಗೆ ಕೆಲವು ಕಡೆಗಳಲ್ಲಿ ಅತ್ಯಂತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ನೀಡಿರುವ ಇತ್ತೀಚಿನ ಸಲಹೆಯ ಪ್ರಕಾರ, ಕರಾವಳಿ ಕರ್ನಾಟಕ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಮುಂದಿನ ಒಂದು ವಾರದವರೆಗೆ ಭಾರೀ ಮಳೆ ಮುಂದುವರಿಯಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ನಿವಾಸಿಗಳು ಜಾಗರೂಕರಾಗಿರಲು ಸೂಚಿಸಲಾಗಿದೆ.
ಕರಾವಳಿ ಜಿಲ್ಲೆಗಳಿಗೆ ಅತ್ಯಂತ ಭಾರೀ ಮಳೆ ಮುನ್ಸೂಚನೆ:
ರಾಜ್ಯದ ಎಲ್ಲಾ ಪ್ರದೇಶಗಳಿಗೆ ಹೋಲಿಸಿದರೆ ಕರಾವಳಿ ಕರ್ನಾಟಕದಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿರಲಿದೆ. ಜೂನ್ 9 ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಅತ್ಯಂತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಭಾರೀ ಮಳೆಯು ಜೂನ್ 13 ರವರೆಗೆ ಮುಂದುವರಿಯುವ ಸಾಧ್ಯತೆಯಿದೆ. ತೀವ್ರ ಮಳೆಯಾಗುವ ಸಂದರ್ಭದಲ್ಲಿ ನೀರು ನಿಲ್ಲುವುದು (ಜಲಾವೃತ), ಸ್ಥಳೀಯವಾಗಿ ಪ್ರವಾಹದ ಪರಿಸ್ಥಿತಿ, ಸಂಚಾರ ವ್ಯತ್ಯಯ ಮತ್ತು ಮಂದ ಬೆಳಕಿನ (ಕಡಿಮೆ ದೃಷ್ಟಿಗೋಚರತೆ) ಸನ್ನಿವೇಶ ಎದುರಾಗಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಸಮುದ್ರಕ್ಕೆ ಇಳಿಯುವ ಮುನ್ನ ಮೀನುಗಾರರು ಕಡ್ಡಾಯವಾಗಿ ಹವಾಮಾನ ನವೀಕರಣಗಳನ್ನು ಗಮನಿಸುವಂತೆ ಸೂಚಿಸಲಾಗಿದೆ.
ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲೂ ಭಾರೀ ಮಳೆ:
ಉತ್ತರ ಒಳನಾಡಿನಲ್ಲಿ ಜೂನ್ 7 ರಿಂದ ಜೂನ್ 10ರ ನಡುವೆ ಗುಡುಗು ಮತ್ತು ಮಿಂಚು ಸಹಿತ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಜೂನ್ 10ರಂದು ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಅತ್ಯಂತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದ್ದು, ರೆಡ್ ಅಲರ್ಟ್ ನೀಡಲಾಗಿದೆ. ಜೂನ್ 11 ರ ನಂತರ ಮಳೆಯ ತೀವ್ರತೆ ಕ್ರಮೇಣ ಕಡಿಮೆಯಾಗಲಿದ್ದು, ಜೂನ್ 12 ಮತ್ತು ಜೂನ್ 13 ರಂದು ಯಾವುದೇ ಪ್ರಮುಖ ಮುನ್ನೆಚ್ಚರಿಕೆಗಳನ್ನು ನೀಡಿಲ್ಲ. ಮತ್ತೊಂದೆಡೆ, ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳನ್ನೊಳಗೊಂಡ ದಕ್ಷಿಣ ಒಳನಾಡಿನಲ್ಲಿ ವಾರ ಪೂರ್ತಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕೆಲವಡೆ ರೆಡ್ ಅಲರ್ಟ್ ನೀಡಲಾಗಿದೆ. ಜೂನ್ 9 ಹಾಗೂ 10 ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ.
ಉತ್ತರ ಕನ್ನಡದಲ್ಲಿ ಗರಿಷ್ಠ ಮಳೆ ದಾಖಲು:
ಜೂನ್ 7 ರ ಬೆಳಗ್ಗೆ 7:30 ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ರಾಜ್ಯದಾದ್ಯಂತ ವ್ಯಾಪಕ ಮಳೆಯಾಗಿದೆ ಎಂದು KSNDMC ಮಳೆ ದತ್ತಾಂಶ ತಿಳಿಸಿದೆ. ರಾಜ್ಯದಲ್ಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ. ಬಳ್ಳಾರಿಯ ಕಪ್ಪಗಲ್‌ನಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಅಂದರೆ 126 ಮಿಮೀ ಮಳೆಯಾಗಿದೆ. ಇದರ ಬೆನ್ನಲ್ಲೇ ಉತ್ತರ ಕನ್ನಡದ ಅಂಕೋಲಾ-ಹರವಾಡದಲ್ಲಿ 119 ಮಿಮೀ ಮತ್ತು ಉತ್ತರ ಕನ್ನಡದ ಕಲ್ಬಾಗದಲ್ಲಿ 109.5 ಮಿಮೀ ಮಳೆಯಾಗಿದೆ.
ಮಳೆ ವಿವರಗಳು ಈ ಕೆಳಗಿನಂತಿವೆ:
ಕಪ್ಪಗಲ್ (ಬಳ್ಳಾರಿ) :126 ಮಿಮೀ
ಅಂಕೋಲಾ-ಹರವಾಡ (ಅಂಕೋಲಾ, ಉತ್ತರ ಕನ್ನಡ) :119 ಮಿಮೀ
ಕಲ್ಬಾಗ (ಕುಮಟಾ, ಉತ್ತರ ಕನ್ನಡ) : 109.5 ಮಿಮೀ
ಸಿರವಾರ (ಬಳ್ಳಾರಿ): 106.5 ಮಿಮೀ
ಸಿದ್ದರಗುಡ್ಡ (ಬಳ್ಳಾರಿ): 101 ಮಿಮೀ
ಹೆಗಡೆ (ಕುಮಟಾ, ಉತ್ತರ ಕನ್ನಡ): 92 ಮಿಮೀ
ಅಗಸೂರು (ಅಂಕೋಲಾ, ಉತ್ತರ ಕನ್ನಡ): 92 ಮಿಮೀ
ಶಿರಾಯೊಗೆರೆ (ಶಿವಮೊಗ್ಗ): 89.5 ಮಿಮೀ
ಹುಲಬಾಳಿ ಗ್ರಾಮಾಂತರ ಸುಳ್ಳ (ಧಾರವಾಡ): 85.5 ಮಿಮೀ
ಕಿತ್ತೂರು ದೇಗಾಂವ (ಬೆಳಗಾವಿ): 85 ಮಿಮೀ
ಬೆಂಗಳೂರು ಹವಾಮಾನ ಮುನ್ಸೂಚನೆ:
ಬೆಂಗಳೂರಿನಲ್ಲಿ ಮುಂದಿನ ಕೆಲವು ದಿನಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು, ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಪೀಕ್ ಅವರ್ಸ್‌ನಲ್ಲಿ (ದಟ್ಟಣೆಯ ಅವಧಿಯಲ್ಲಿ) ತೀವ್ರ ಸಂಚಾರ ದಟ್ಟಣೆ ಉಂಟಾಗಬಹುದು. ಆದ್ದರಿಂದ ತೀವ್ರ ಮಳೆಯ ಸಂದರ್ಭದಲ್ಲಿ ಸಾರ್ವಜನಿಕರು ಅನಗತ್ಯ ಪ್ರಯಾಣವನ್ನು ತಪ್ಪಿಸಬೇಕು ಹಾಗೂ ಜಲಾವೃತಗೊಂಡ ರಸ್ತೆಗಳು ಮತ್ತು ತಗ್ಗು ಪ್ರದೇಶಗಳ ಬಗ್ಗೆ ಎಚ್ಚರದಿಂದಿರಬೇಕು ಎಂದು ಸಲಹೆ ನೀಡಲಾಗಿದೆ.



ನಿಮ್ಮ ಕಾಮೆಂಟ್ ಬರೆಯಿರಿ