2 ತಾಸು ಹುಡುಕಿದ್ರೂ ಏನೂ ಸಿಗದ ಪೊಲೀಸರಿಗೆ ಕುಕ್ಕರ್ ಸೀಟಿಯಿಂದ ಪತ್ತೆಯಾಯ್ತು ಗಾಂಜಾ…!

ತಿರುವನಂತಪುರಂ: ಖಚಿತ ಮಾಹಿತಿ ಮೇರೆಗೆ ಮನೆ ಮೇಲೆ ದಾಳಿ ನಡೆಸಿ ಸುಮಾರು ಎರಡು ಗಂಟೆಗಳ ಕಾಲ ಜಾಲಾಡಿದರೂ ಪೊಲೀಸರಿಗೆ ಏನೂ ಪತ್ತೆಯಾಗಲಿಲ್ಲ. ಇನ್ನೇನು ಕಾರ್ಯಾಚರಣೆ ಮುಗಿಸಬೇಕು ಎನ್ನುವಷ್ಟರಲ್ಲಿ ಅಡುಗೆ ಮನೆಯಲ್ಲಿದ್ದ ಪ್ರೆಶರ್ ಕುಕ್ಕರ್ ಮಾಡಿದ ಸದ್ದು ಪೊಲೀಸರಿಗೆ ಪ್ರಕರಣ ಭೇದಿಸಲು ನೆರವಾದಪ್ರಸಂಗ ಕೇರಳದಲ್ಲಿ ನಡೆದಿದೆ. ಕುಕ್ಕರ್ ತೆರೆದು ನೋಡಿದ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.
ಪೊಲೀಸರು ಬರುತ್ತಿರುವುದನ್ನು ಗಮನಿಸಿದ ಬಿನೀಶ ಎಂಬ ವ್ಯಕ್ತಿ, ತಾನು ಬಚ್ಚಿಟ್ಟಿದ್ದ ಗಾಂಜಾ ಪೊಟ್ಟಣವನ್ನು ಪೊಲೀಸರಿಂದ ಮುಚ್ಚಿಡಲು ಅನ್ನ ಬೇಯುತ್ತಿದ್ದ ಪ್ರೆಶರ್ ಕುಕ್ಕರ್‌ನೊಳಗೆ ತುರುಕಿದ್ದ. ಆದರೆ, ಅವನ ಈ ಐಡಿಯಾ ಕೊನೆ ಕ್ಷಣದಲ್ಲಿ ಉಲ್ಟಾ ಹೊಡೆದಿದೆ.
ಕೇರಳದ ಕುನ್ನಂಕುಲಂ ವ್ಯಾಪ್ತಿಯ ಅಡುಪ್ಪೂಟ್ಟಿ ಎಂಬಲ್ಲಿನ ಮನೆಯೊಂದರಲ್ಲಿ ಗಾಂಜಾ ಸಂಗ್ರಹಿಸಿಡಲಾಗಿದೆ ಎಂದು ಕುನ್ನಂಕುಲಂ ಸಬ್ ಇನ್ಸ್‌ಪೆಕ್ಟರ್ ರಾಕೇಶಅವರಿಗೆ ರಹಸ್ಯ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಶುಕ್ರವಾರ ಮುಂಜಾನೆ ‘ಆಪರೇಷನ್ ತೂಫಾನ್’ ಹೆಸರಿನಡಿ ಆ ಮನೆಗೆ ಧಾವಿಸಿ, ತೀವ್ರ ಶೋಧ ಆರಂಭಿಸಿದರು. ಸುಮಾರು ಎರಡು ಗಂಟೆಗಳ ಕಾಲ ಇಡೀ ಮನೆಯನ್ನು ಜಾಲಾಡಿದರೂ ಪೊಲೀಸರಿಗೆ ಯಾವುದೇ ಮಾದಕ ವಸ್ತು ಪತ್ತೆಯಾಗಲಿಲ್ಲ.

ಪ್ರಮುಖ ಸುದ್ದಿ :-   ಸಂಸತ್ತಿನಲ್ಲಿ ಟಿಎಂಸಿಗೆ ಮೊದಲ ಆಘಾತ: ರಾಜ್ಯಸಭಾ ಸ್ಥಾನ-ಪಕ್ಷಕ್ಕೆ ಹಿರಿಯ ನಾಯಕ ಸುಖೇಂದು ಶೇಖರ ರಾಯ್ ರಾಜೀನಾಮೆ !

ಗಾಂಜಾದ ಸುಳಿವು ನೀಡಿದ ಕುಕ್ಕರ್ ಸಿಳ್ಳೆ!
ಪೊಲೀಸ್ ತಪಾಸಣೆ ಮುಂದುವರಿದಿದ್ದ ಸಂದರ್ಭದಲ್ಲೇ ಅಡುಗೆ ಮನೆಯಲ್ಲಿದ್ದ ಪ್ರೆಶರ್ ಕುಕ್ಕರ್ ಜೋರಾಗಿ ಸಿಳ್ಳೆ ಹಾಕಲು ಆರಂಭಿಸಿತು. ಕುಕ್ಕರ್‌ ಸೀಟಿ ಹೊಡೆಯುತ್ತಿದ್ದಂತೆಯೇ ಇಡೀ ಮನೆಯಲ್ಲಿ ವಿಚಿತ್ರ ಹಾಗೂ ತೀವ್ರವಾದ ವಾಸನೆ ಹರಡಿಕೊಂಡಿತು. ಇದರಿಂದ ಅನುಮಾನಗೊಂಡ ಪೊಲೀಸರು ತಕ್ಷಣವೇ ಅಡುಗೆ ಮನೆಗೆ ಧಾವಿಸಿ ಕುಕ್ಕರ್ ಪರಿಶೀಲಿಸಿದರು. ಕುಕ್ಕರ್ ಮುಚ್ಚಳ ತೆಗೆದಾಗ ಕುದಿಯುತ್ತಿದ್ದ ಅನ್ನದ ನಡುವೆ ಗಾಂಜಾ ಪೊಟ್ಟಣವನ್ನು ಅಡಗಿಸಿಟ್ಟಿರುವುದು ಪತ್ತೆಯಾಗಿದೆ.

ಆರೋಪಿ ಬಂಧನ, ಹಳೇ ಪ್ರಕರಣ ಮುನ್ನೆಲೆಗೆ:
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು 40 ವರ್ಷದ ಆರೋಪಿ ಬಿನೀಶನನ್ನು ಸ್ಥಳದಲ್ಲೇ ಬಂಧಿಸಿದ್ದಾರೆ. ಆತನ ವಶದಿಂದ ಒಟ್ಟು 400 ಗ್ರಾಂ ಗಾಂಜಾವನ್ನು ಜಪ್ತಿ ಮಾಡಲಾಗಿದೆ. ಬಂಧಿತ ಆರೋಪಿ ಬಿನೀಶ ಈ ಹಿಂದೆಯೂ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ. ಈತನ ವಿರುದ್ಧ ಈಗಾಗಲೇ ಎರಡು ಹಳೇ ಪ್ರಕರಣಗಳು ದಾಖಲಾಗಿವೆ. ಅಷ್ಟೇ ಅಲ್ಲದೆ, ಈ ಹಿಂದೆ ಅಬಕಾರಿ ಇನ್ಸ್‌ಪೆಕ್ಟರ್ ಮತ್ತು ಅವರ ತಂಡಕ್ಕೆ ಕತ್ತಿ ತೋರಿಸಿ, ಪ್ರಾಣ ಬೆದರಿಕೆ ಹಾಕಿದ್ದ ಮತ್ತೊಂದು ಗಂಭೀರ ಪ್ರಕರಣದಲ್ಲೂ ಈತ ಪ್ರಮುಖ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ವಿಡಿಯೋ | ಕಾರವಾರದಿಂದ ಹೊರಟಿದ್ದ ತೈಲ ಸಾಗಣೆ ಹಡಗಿಗೆ ಒಮಾನ್‌ ಕರಾವಳಿಯಲ್ಲಿ ಹೊತ್ತಿಕೊಂಡ ಬೆಂಕಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement