
ನವದೆಹಲಿ: ಮಧ್ಯಪ್ರದೇಶದಿಂದ ರಾಜ್ಯಸಭಾ ಚುನಾವಣೆಗೆ ಸಲ್ಲಿಕೆಯಾಗಿದ್ದ ತಮ್ಮ ನಾಮಪತ್ರ ತಿರಸ್ಕಾರಗೊಂಡಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ತೆಲಂಗಾಣದಲ್ಲಿ ಬಾಕಿ ಇರುವ ಕ್ರಿಮಿನಲ್ ಪ್ರಕರಣವೊಂದರ ವಿವರಗಳನ್ನು ನಾಮಪತ್ರದಲ್ಲಿ “ಮುಚ್ಚಿಟ್ಟಿದ್ದಾರೆ” ಎಂಬ ಆರೋಪದ ಹಿನ್ನೆಲೆಯಲ್ಲಿ, ಚುನಾವಣಾ ಅಧಿಕಾರಿ (ರಿಟರ್ನಿಂಗ್ ಆಫೀಸರ್) ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ತಿರಸ್ಕರಿಸಿದ್ದರು.
ತಮ್ಮ ನಾಮಪತ್ರ ಅನರ್ಹಗೊಳಿಸಿದ ಆದೇಶದ ವಿರುದ್ಧ ತಕ್ಷಣ ಮಧ್ಯಪ್ರವೇಶಿಸುವಂತೆ ಕೋರಿರುವ ನಟರಾಜನ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಚುನಾವಣಾಧಿಕಾರಿಯ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.
ನಟರಾಜನ್ ತಮ್ಮ ಅರ್ಜಿಯಲ್ಲಿ ಚುನಾವಣಾಧಿಕಾರಿಯ ನಿರ್ಧಾರವನ್ನು “ನಿರಂಕುಶ, ಪಕ್ಷಪಾತ ಮತ್ತು ಕಾನೂನಿಗೆ ವಿರುದ್ಧ” ಎಂದು ಹೇಳಿದ್ದಾರೆ. ಮತ್ತು ವಿಳಂಬವಿಲ್ಲದೆ ಆದೇಶವನ್ನು ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್ ಅನ್ನು ಒತ್ತಾಯಿಸಿದ್ದಾರೆ.
ನಾಮಪತ್ರ ತಿರಸ್ಕಾರವು ಕಾನೂನುಬದ್ಧವಾಗಿ ಸಮರ್ಥನೀಯವಲ್ಲ ಮತ್ತು ಚುನಾವಣಾ ಪ್ರಕ್ರಿಯೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ವಾದಿಸುತ್ತಾ ಅರ್ಜಿಯು ತುರ್ತು ಪರಿಹಾರವನ್ನು ಕೋರಿದೆ.
ಏನಿದು ತೆಲಂಗಾಣದ ಪ್ರಕರಣ?
ತೆಲಂಗಾಣದ ಮಾಜಿ ಕಾಂಗ್ರೆಸ್ ಕಾರ್ಯಕರ್ತೆಯಾದ ಎ. ಶ್ರೀಲತಾ ಎಂಬವರು ಹೈದರಾಬಾದ್‌ನ IV ಹೆಚ್ಚುವರಿ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಖಾಸಗಿ ದೂರು (ಸಂಖ್ಯೆ 4472/2025) ದಾಖಲಿಸಿದ್ದಾರೆ. ಈ ದೂರಿನಲ್ಲಿ ಮೀನಾಕ್ಷಿ ನಟರಾಜನ್ ಅವರನ್ನು 4ನೇ ಪ್ರತಿವಾದಿಯನ್ನಾಗಿ (Respondent no. 4) ಹೆಸರಿಸಲಾಗಿದೆ.
ಪ್ರಕರಣದ 1ನೇ ಪ್ರತಿವಾದಿಯ ವಿರುದ್ಧ ದೂರುದಾರ ಮಹಿಳೆ ದೌರ್ಜನ್ಯ/ಅಸಭ್ಯ ವರ್ತನೆಯ (Molestation) ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ತಾವು ಪಕ್ಷದ ಹಿರಿಯ ಪದಾಧಿಕಾರಿಗಳಿಗೆ ಈ ಬಗ್ಗೆ ಪದೇ ಪದೇ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣಕ್ಕಾಗಿ ಮೀನಾಕ್ಷಿ ನಟರಾಜನ್ ಮತ್ತು ಇತರರನ್ನು ಈ ಪ್ರಕರಣದಲ್ಲಿ ಹೊಣೆಗಾರರನ್ನಾಗಿ ಮಾಡಲಾಗಿದೆ.ಮೀನಾಕ್ಷಿ ನಟರಾಜನ್ ಅವರು ತೆಲಂಗಾಣ ಕಾಂಗ್ರೆಸ್‌ನ ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಉಸ್ತುವಾರಿಯಾಗಿದ್ದರು.
ಈ ಖಾಸಗಿ ದೂರಿಗೆ ಸಂಬಂಧಿಸಿದಂತೆ ಮೀನಾಕ್ಷಿ ನಟರಾಜನ್ ಅವರಿಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 223 ರ ಅಡಿಯಲ್ಲಿ ನೋಟಿಸ್ ಜಾರಿಯಾಗಿದೆ.
ಈ ನಿಬಂಧನೆಯ ಪ್ರಕಾರ, ಖಾಸಗಿ ದೂರಿನ ಮೇಲೆ ಉಭಯ ಪಕ್ಷಗಳ ವಾದವನ್ನು ಆಲಿಸದೆ ನ್ಯಾಯಾಲಯವು ಯಾವುದೇ ಅಪರಾಧದ ಪರಿಗಣನೆ (Cognizance) ತೆಗೆದುಕೊಳ್ಳುವಂತಿಲ್ಲ. ಇದೇ ಹಿನ್ನೆಲೆಯಲ್ಲಿ, “ನಿಮ್ಮನ್ನು ಆರೋಪಿ ಎಂದು ಪರಿಗಣಿಸಿ ಪ್ರಕರಣವನ್ನು ಏಕೆ ದಾಖಲಿಸಿಕೊಳ್ಳಬಾರದು?” ಎಂಬುದಕ್ಕೆ ವಿವರಣೆ ನೀಡಲು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ನಟರಾಜನ್ ಅವರಿಗೆ ನೋಟಿಸ್ ನೀಡಿ ಕರೆಸಿತ್ತು.
ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ಮತ್ತು ಕಾನೂನು ವಾದ
ಮತ್ತೊಂದೆಡೆ, ನಾಮಪತ್ರ ತಿರಸ್ಕರಿಸಿರುವುದರ ವಿರುದ್ಧ ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗದ (EC) ಮೊರೆ ಹೋಗಿದೆ ಎಂದು ಎಕ್ಸ್ ಮೂಲಕ ತಿಳಿಸಿದೆ. ಈ ಕುರಿತು ಕಾಂಗ್ರೆಸ್ ತನ್ನ ಪ್ರಬಲ ವಾದವನ್ನು ಮಂಡಿಸಿದೆ.
ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 33A: ಜನಪ್ರತಿನಿಧಿ ಕಾಯ್ದೆಯ (Representation of the People Act) ಸೆಕ್ಷನ್ 33A ಪ್ರಕಾರ, ಯಾವುದೇ ಅಭ್ಯರ್ಥಿಯು ತನ್ನ ಮೇಲಿರುವ ಪ್ರಕರಣಗಳ ವಿವರಗಳನ್ನು ಬಹಿರಂಗಪಡಿಸಬೇಕಿರುವುದು ಕೇವಲ ಎರಡು ಸಂದರ್ಭಗಳಲ್ಲಿ ಮಾತ್ರ. ಪ್ರಕರಣದಲ್ಲಿ ಕನಿಷ್ಠ 2 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಶಿಕ್ಷೆಯ ಅವಕಾಶ ಇರಬೇಕು. ಆ ಪ್ರಕರಣದಲ್ಲಿ ನ್ಯಾಯಾಲಯವು ಅಭ್ಯರ್ಥಿಯ ವಿರುದ್ಧ ಆರೋಪ ಹೊರಿಸಿರಬೇಕು (Charges have been framed) ಎಂದು ಕಾಂಗ್ರೆಸ್ ವಾದಿಸಿದೆ.
ಕಾಂಗ್ರೆಸ್ ಪಕ್ಷದ ಪ್ರಕಾರ, ಮೀನಾಕ್ಷಿ ನಟರಾಜನ್ ಅವರಿಗೆ ಕೇವಲ ಕೋರ್ಟ್‌ಗೆ ಹಾಜರಾಗಿ ವಿವರಣೆ ನೀಡುವಂತೆ ನೋಟಿಸ್ ಬಂದಿದೆಯೇ ಹೊರತು, ನ್ಯಾಯಾಲಯ ಇನ್ನು ಪ್ರಕರಣವನ್ನು ದಾಖಲಿಸಿಕೊಂಡಿಲ್ಲ (Cognizance ತಗೆದುಕೊಂಡಿಲ್ಲ). “ಮ್ಯಾಜಿಸ್ಟ್ರೇಟ್ ನೋಟಿಸ್ ನೀಡಿರುವುದು ಅಪರಾಧದ ಪರಿಗಣನೆ ತೆಗೆದುಕೊಳ್ಳುವ ಮುನ್ನದ ಪ್ರಕ್ರಿಯೆಯಾಗಿದೆ. ನ್ಯಾಯಾಲಯವು ಪ್ರಕರಣವನ್ನು ಅಧಿಕೃತವಾಗಿ ದಾಖಲಿಸಿಕೊಳ್ಳದ ಹೊರತು (Without cognizance), ಕಾನೂನಿನ ದೃಷ್ಟಿಯಲ್ಲಿ ಅಲ್ಲಿ ಯಾವುದೇ ಕ್ರಿಮಿನಲ್ ಪ್ರಕರಣ ಅಸ್ತಿತ್ವದಲ್ಲಿರುವುದಿಲ್ಲ. ಯಾರೋ ಒಬ್ಬರು ಮತ್ತೊಬ್ಬರ ವಿರುದ್ಧ ಕೇವಲ ಆರೋಪ ಮಾಡಿದ ತಕ್ಷಣವೇ ಅದು ಕ್ರಿಮಿನಲ್ ಪ್ರಕರಣವಾಗುವುದಿಲ್ಲ,” ಎಂದು ಕಾಂಗ್ರೆಸ್ ಹೇಳಿದೆ.
ಯಾವುದೇ ಕ್ರಿಮಿನಲ್ ಪ್ರಕರಣವೇ ಅಸ್ತಿತ್ವದಲ್ಲಿ ಇಲ್ಲದಿರುವಾಗ, ಮುಚ್ಚಿಡುವ ಪ್ರಶ್ನೆಯೇ ಬರುವುದಿಲ್ಲ. ಆದರೂ ಚುನಾವಣಾ ಅಧಿಕಾರಿ ನಾಮಪತ್ರ ತಿರಸ್ಕರಿಸಿರುವುದು ಕಾನೂನುಬಾಹಿರ ಎಂದು ಕಾಂಗ್ರೆಸ್ ದೂರಿದೆ. ಕಾಯ್ದೆಯ ಸೆಕ್ಷನ್ 33A ಪ್ರಕಾರ, ನ್ಯಾಯಾಲಯ ಪ್ರಕರಣ ದಾಖಲಿಸಿಕೊಂಡ ನಂತರವಷ್ಟೇ ತನಿಖೆ ನಡೆಯುತ್ತದೆ ಮತ್ತು ತನಿಖೆಯ ನಂತರ ಚಾರ್ಜ್ ಶೀಟ್ ಸಲ್ಲಿಕೆಯಾಗುತ್ತದೆ ಎಂದು ಪಕ್ಷವು ಪ್ರತಿಪಾದಿಸಿದೆ.



ನಿಮ್ಮ ಕಾಮೆಂಟ್ ಬರೆಯಿರಿ