
ಮುಂಬೈ : ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ತನಗೆ ಸೋಲಾದ ಕೆಲವೇ ಹೊತ್ತಿನಲ್ಲಿ ಮಗನೊಬ್ಬ ತನ್ನ 82 ವರ್ಷದ ವೃದ್ಧ ತಂದೆಯನ್ನೇ ಸಾರ್ವಜನಿಕ ರಸ್ತೆಯಲ್ಲಿ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಜಲಸಂಪನ್ಮೂಲ ಇಲಾಖೆಯ ನಿವೃತ್ತ ಉದ್ಯೋಗಿಯಾಗಿದ್ದ ಜಾಫರ್ ಕಮರುದ್ದೀನ್ ಸಯ್ಯದ್ ಪಟೇಲ್ ಎಂಬಾತ ಕೊಲೆಯಾದ ವೃದ್ಧ ಎಂದು ಹೇಳಲಾಗಿದೆ. ಅವರ ಮಗ, ವೃತ್ತಿಯಲ್ಲಿ ಮೆಡಿಕಲ್ ರೆಪ್ರೆಸೆಂಟೇಟಿವ್ (ಎಂ.ಆರ್) ಆಗಿರುವ ಅಬ್ದುಲ್ ರೆಹಮಾನ್ ಅಬ್ದುಲ್ ಜಾಫರ್ ಎಂಬಾತನೇ ಈ ಕ್ರೂರ ಕೃತ್ಯ ಎಸಗಿದ ಆರೋಪಿ.

ಮೃತ ಜಾಫರ್ ಪಟೇಲ್ ತಮ್ಮ ಸ್ವಂತ ಮನೆಯನ್ನು ಮಗನ ವಶದಿಂದ ಮರಳಿ ಪಡೆಯಲು ಕಳೆದ ಸುಮಾರು ಎರಡು ವರ್ಷಗಳಿಂದ ಸುದೀರ್ಘ ಕಾನೂನು ಹೋರಾಟ ನಡೆಸುತ್ತಿದ್ದರು. ಮಗ ಅಬ್ದುಲ್ ರೆಹಮಾನ್ ಕುಟುಂಬದ ಸದಸ್ಯರ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗುತ್ತಿದ್ದ ಹಾಗೂ ಹಲ್ಲೆ ನಡೆಸುತ್ತಿದ್ದ ಎಂದು ಪಟೇಲ್ ಆರೋಪಿಸಿದ್ದರು. ಮಗನ ಕಿರುಕುಳ ತಾಳಲಾರದೆ ಅವರು ತಮ್ಮ ಮನೆಯನ್ನು ಬಿಟ್ಟು, ಪುಣೆಯಲ್ಲಿದ್ದ ಮಗಳ ಮನೆಗೆ ಬಂದು ವಾಸ್ತವ್ಯ ಮಾಡಿದ್ದರು. ಬಳಿಕ ಮಗನನ್ನು ಮನೆಯಿಂದ ಹೊರಹಾಕಲು (ತೆರವುಗೊಳಿಸಲು) ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಸುದೀರ್ಘ ವಿಚಾರಣೆಯ ನಂತರ, ನ್ಯಾಯಾಲಯವು ವೃದ್ಧ ತಂದೆಯ ಪರವಾಗಿ ತೀರ್ಪು ನೀಡಿತ್ತು. ಮಗನನ್ನು ಮನೆಯಿಂದ ತಕ್ಷಣವೇ ಹೊರಹಾಕುವಂತೆ ಆದೇಶಿಸಿ, ಮನೆಯ ಸಂಪೂರ್ಣ ಹಕ್ಕನ್ನು ವೃದ್ಧ ತಂದೆಗೆ ಮರಳಿ ನೀಡಿ ಆದೇಶ ಹೊರಡಿಸಿತ್ತು.
ರಸ್ತೆಯಲ್ಲೇ ನಡೆದ ಭೀಕರ ಹತ್ಯೆ:
ನ್ಯಾಯಾಲಯದಿಂದ ಮಗನನ್ನು ಮನೆಯಿಂದ ಹೊರಹಾಕುವ ಆದೇಶದ ಪ್ರತಿಯನ್ನು ಪಡೆದುಕೊಂಡು ಜಾಫರ್ ಪಟೇಲ್ ಅವರು ತಮ್ಮ ಮಗಳೊಂದಿಗೆ ಆಟೋರಿಕ್ಷಾದಲ್ಲಿ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಮಾರ್ಗಮಧ್ಯದಲ್ಲೇ ಸಾರ್ವಜನಿಕ ರಸ್ತೆಯಲ್ಲೇ ಆರೋಪಿ ಅಬ್ದುಲ್ ರೆಹಮಾನ್ ಆಟೋರಿಕ್ಷಾವನ್ನು ಅಡ್ಡಗಟ್ಟಿದ್ದಾನೆ. ರೊಚ್ಚಿಗೆದ್ದಿದ್ದ ಆತ ತನ್ನ ವೃದ್ಧ ತಂದೆಯನ್ನು ಆಟೋದಿಂದ ಹೊರಗೆ ಎಳೆದೊಯ್ದು, ಚಾಕುವಿನಿಂದ ಮನಸೋಇಚ್ಛೆ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ಪಟೇಲ್ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ತಂದೆಯನ್ನು ರಕ್ಷಿಸಲು ಮುಂದಾದ ಮಗಳ ಮೇಲೂ ಆರೋಪಿ ಹಲ್ಲೆ ನಡೆಸಿದ್ದು, ಆಕೆಯೂ ಗಾಯಗೊಂಡಿದ್ದಾರೆ.
ಘಟನೆ ನಡೆದ ಕೆಲವೇ ಅಕ್ಷಣದಲ್ಲಿ ಆಗಮಿಸಿದ ಪೊಲೀಸರು ಆರೋಪಿ ಅಬ್ದುಲ್ ರೆಹಮಾನ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆಯನ್ನು ಚುರುಕುಗೊಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ