
ಜೈಪುರ: ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವ ಮುನ್ನವೇ ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಮೇಲೆ ಹಲ್ಲೆ ನಡೆಸಲಾಗಿದೆ.
ಜೈಪುರದ ಶಹೀದ್ ಸ್ಮಾರಕದಲ್ಲಿ ಮಧ್ಯಾಹ್ನ 3 ಗಂಟೆಗೆ ಶಾಂತಿಯುತ ಪ್ರತಿಭಟನೆ ನಡೆಸುವಂತೆ ಅಭಿಜೀತ್ ಕರೆ ನೀಡಿದ್ದರು. ಅದರಂತೆ ಅವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಲು ತೆರಳುತ್ತಿದ್ದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಬೆಂಬಲಿಗರು ಅಭಿಜೀತ್ ಅವರನ್ನು ಹೆಗಲ ಮೇಲೆ ಹೊತ್ತು ಸಾಗಿಸುತ್ತಿದ್ದಾಗ, ಜನಸಂದಣಿಯಲ್ಲಿದ್ದ ಕೆಲವು ಕಿಡಿಗೇಡಿಗಳು ಅವರ ಸ್ಕಾರ್ಫ್ (ಕಂಠವಸ್ತ್ರ) ಹಿಡಿದು ಜಗ್ಗಿದ್ದಾರೆ, ಅಲ್ಲದೆ ಅವರಿಗೆ ಹಲವು ಬಾರಿ ಕಪಾಳಮೋಕ್ಷ ಮಾಡಿ, ಕೆಳಗೆ ಬೀಳಿಸಲು ಯತ್ನಿಸಿದ್ದಾರೆ. ಈ ದೃಶ್ಯಗಳು ವಿಡಿಯೋಗಳಲ್ಲಿ ಸೆರೆಯಾಗಿವೆ.

ಈ ಘಟನೆಯ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸಿಜೆಪಿ (CJP) ರಾಜ್ಯ ವಕ್ತಾರ ಅಭಿಷೇಕ ಜೈನ್ ಬಿಟ್ಟು ಅವರು, ಅಹಿತಕರ ಘಟನೆಯನ್ನು ತಡೆಯುವಲ್ಲಿ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ. “ಈ ದಾಳಿ ನಡೆದಿರುವ ರೀತಿ ನೋಡಿದರೆ, ಪೊಲೀಸರು ಮತ್ತು ಸರ್ಕಾರದ ಪಾತ್ರದ ಬಗ್ಗೆ ಗಂಭೀರ ಪ್ರಶ್ನೆಗಳು ಮೂಡುತ್ತವೆ. ಸಮಾಜಘಾತುಕ ಶಕ್ತಿಗಳನ್ನು ತಡೆಯುವ ಬದಲು, ಆಡಳಿತ ವ್ಯವಸ್ಥೆಯು ಇಡೀ ಘಟನೆ ನಡೆಯಲು ಬಿಟ್ಟಿದೆ. ರಾಜಸ್ಥಾನ ಸರ್ಕಾರ ಮತ್ತು ಪೊಲೀಸರ ನಡವಳಿಕೆ ಖಂಡನೀಯವಾಗಿದ್ದು, ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.
ಇದೇ ವಿಷಯವಾಗಿ ಮಾತನಾಡಿದ ಕಾಕ್ರೋಚ್ ಜನತಾ ಪಾರ್ಟಿಯ ರಾಷ್ಟ್ರೀಯ ವಕ್ತಾರ ಅಶುತೋಷ ರಾಂಕಾ, “ಜೂನ್ ತಿಂಗಳ ಇಂತಹ ಬಿಸಿಲಿನಲ್ಲಿ, ಜನರು ಪ್ರತಿಭಟನೆಗೆ ಸೇರುವುದನ್ನು ತಪ್ಪಿಸುವ ಉದ್ದೇಶದಿಂದಲೇ ಆಡಳಿತವು ಮಧ್ಯಾಹ್ನ 3 ಗಂಟೆಗೆ ಪ್ರತಿಭಟನೆಯ ಸಮಯವನ್ನು ನಿಗದಿಪಡಿಸಿತ್ತು” ಎಂದು ದೂರಿದ್ದಾರೆ.
ಅಭಿಜೀತ್ ದೀಪ್ಕೆ ಪ್ರತಿಕ್ರಿಯೆ:
ತಮ್ಮ ಮೇಲೆ ನಡೆದ ಹಲ್ಲೆಗೆ ಪ್ರತಿಕ್ರಿಯಿಸಿದ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ, “ನಾನು ಪ್ರತಿಭಟನಾ ಸ್ಥಳಕ್ಕೆ ಪ್ರವೇಶಿಸುತ್ತಿದ್ದಂತೆ ನನ್ನ ಮೇಲೆ ಹಲ್ಲೆ ನಡೆಸಲಾಯಿತು. ನನ್ನ ಮೇಲೆ ಎಷ್ಟು ದಾಳಿಗಳು ನಡೆದರೂ ನಾನು ಯಾರ ಮೇಲೂ ಕೈ ಎತ್ತುವುದಿಲ್ಲ. ಕಾಯ್ದೆ-ಕಾನೂನು ಕೈಗೆತ್ತಿಕೊಳ್ಳುವ ಹೇಡಿಗಳು ಮಾತ್ರ ಹಿಂಸಾಚಾರದ ಮೊರೆ ಹೋಗುತ್ತಾರೆ. ಆದರೆ ನಾನು ಸುಮ್ಮನಿರುವುದಿಲ್ಲ” ಎಂದು ಗುಡುಗಿದ್ದಾರೆ.
ಬಳಿಕ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, “ಇವೆಲ್ಲವೂ ನಮ್ಮನ್ನು ಹೆದರಿಸಲು, ಬೆದರಿಸಲು ಮತ್ತು ಮೂಲ ವಿಷಯದಿಂದ ನಮ್ಮ ಗಮನವನ್ನು ಬೇರೆಡೆಗೆ ಸೆಳೆಯಲು ಮಾಡುತ್ತಿರುವ ತಂತ್ರಗಳಾಗಿವೆ. ನಾವು ಯಾವುದೇ ಕಾರಣಕ್ಕೂ ನಮ್ಮ ಹಾದಿ ತಪ್ಪಬಾರದು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ತಕ್ಷಣವೇ ರಾಜೀನಾಮೆ ನೀಡಬೇಕು ಎಂಬುದು ನಮ್ಮ ಏಕೈಕ ಆಗ್ರಹವಾಗಿದೆ ಎಂದು ಅವರು ಹೇಳಿದ್ದಾರೆ.
ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯ ಮತ್ತು ವಿದ್ಯಾರ್ಥಿಗಳ ಆತ್ಮಹತ್ಯೆಗಳಿಗೆ ಹೊಣೆ ಹೊತ್ತು ಅವರು ರಾಜೀನಾಮೆ ನೀಡಲೇಬೇಕು. ನಮ್ಮ ಮೇಲೆ ಒಮ್ಮೆ ಅಲ್ಲ, ಹತ್ತು ಬಾರಿ ದಾಳಿ ಮಾಡಿದರೂ, ಹತ್ತು ಬಾರಿ ಕಪಾಳಕ್ಕೆ ಹೊಡೆದರೂ, ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡಬೇಕು ಎಂದೇ ನಾವು ಹೇಳುತ್ತಿರುತ್ತೇವೆ. ನಾವು ಹಿಂಸೆಯ ಮೂಲಕ ಪ್ರತಿಕ್ರಿಯಿಸುವುದಿಲ್ಲ. ನಮ್ಮ ಚಳವಳಿ ಶಾಂತಿಯುತವಾಗಿದ್ದು, ಶಾಂತಿಯಿಂದಲೇ ಇದನ್ನು ಮುಂದುವರಿಸುತ್ತೇವೆ” ಎಂದು ಹೇಳಿದ್ದಾರೆ. ಜೊತೆಗೆ, “ನನ್ನನ್ನು ದ್ವೇಷಿಸುವವರಿಗೆ ‘ಗೆಟ್ ವೆಲ್ ಸೂನ್’ (ಬೇಗ ಗುಣಮುಖರಾಗಿ) ಎಂದು ಹೇಳಲು ಬಯಸುತ್ತೇನೆ” ಎಂದು ಲೇವಡಿ ಮಾಡಿದ್ದಾರೆ.
ಕಾಕ್ರೋಚ್ ಜನತಾ ಪಾರ್ಟಿ’ (CJP) ಈಗಾಗಲೇ ದೇಶಾದ್ಯಂತ ಪ್ರತಿಭಟನಾ ಅಭಿಯಾನವನ್ನು ಆರಂಭಿಸಿದೆ. ನವದೆಹಲಿಯಲ್ಲಿ ವಿದ್ಯಾರ್ಥಿ ಸಮಾವೇಶದೊಂದಿಗೆ ಆರಂಭವಾದ ಈ ಚಳವಳಿ, ನಂತರ ಅಮೃತಸರ, ಪುಣೆ, ಬೆಂಗಳೂರು, ಹೈದರಾಬಾದ್ ಮತ್ತು ಲಕ್ನೋ ನಗರಗಳಲ್ಲಿಯೂ ನಡೆದಿದೆ.
ನೀಟ್ (NEET) ಪ್ರಶ್ನೆ ಪತ್ರಿಕೆ ಪತ್ರಿಕೆ ಸೋರಿಕೆ ಮತ್ತು ಸಿಬಿಎಸ್‌ಇ ಒಎಸ್‌ಎಂ (CBSE OSM) ಸೇರಿದಂತೆ ದೇಶದ ಪರೀಕ್ಷಾ ಪದ್ಧತಿಯಲ್ಲಿ ನಡೆದಿರುವ ಅಕ್ರಮಗಳನ್ನು ಖಂಡಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡದಿದ್ದರೆ, ದೆಹಲಿಯಲ್ಲಿ ಮತ್ತೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ದೀಪ್ಕೆ ಎಚ್ಚರಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ