ಒಪ್ಪಿಗೆಯಿಲ್ಲದೆ ಖಾಸಗಿ ವೀಡಿಯೊ-ಫೋಟೊ ಶೇರ್ ಮಾಡಿದ್ರೆ ಎಫ್‌ಐಆರ್ : ಪೊಲೀಸ್ ಇಲಾಖೆಯಿಂದ ಹೊಸ ಮಾರ್ಗಸೂಚಿ

ಬೆಂಗಳೂರು : ಬೇರೆಯವರ ಖಾಸಗಿ ಚಿತ್ರ, ವಿಡಿಯೋ ವೈರಲ್ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಗೃಹ ಇಲಾಖೆ ಮುಂದಾಗಿದೆ. ಬೇರೆಯವರ ಖಾಸಗಿ ಚಿತ್ರ-ವಿಡಿಯೋ ವೈರಲ್ ಮಾಡುವವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ.ಎಂ.ಎ.ಸಲೀಂ ಆದೇಶ ಹೊರಡಿಸಿದ್ದಾರೆ.
ಸಂತ್ರಸ್ತರು ಮೊದಲು ಖಾಸಗಿ ದೃಶ್ಯ ಚಿತ್ರೀಕರಣಕ್ಕೆ ಒಪ್ಪಿದ್ದರು ಎಂದ ಮಾತ್ರಕ್ಕೆ ದೂರು ಸ್ವೀಕರಿಸದೇ ಇರಬಾರದು. ಚಿತ್ರೀಕರಣದ ಒಪ್ಪಿಗೆಗೂ ಮತ್ತು ಹಂಚಿಕೆ ಅಥವಾ ಪ್ರಸಾರದ ಒಪ್ಪಿಗೆಗೂ ವ್ಯತ್ಯಾಸವಿದೆ. ಇದು ಕಾನೂನು ಪ್ರಕಾರ ಕಾಗ್ನಿಜೆನ್ಸ್ ಅಪರಾಧವಾಗುತ್ತದೆ. ಹೀಗಾಗಿ ಬೇರೆಯವರ ಖಾಸಗಿ ಚಿತ್ರ ವೈರಲ್ ಮಾಡುವವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಅವರು ಸೂಚನೆ ನೀಡಿದ್ದಾರೆ.

ಖಾಸಗಿ ವಿಷಯಗಳನ್ನು ಬಳಸಿಕೊಂಡು ಹಣ, ಲೈಂಗಿಕ ಅನುಕೂಲ ಅಥವಾ ಬೇರೆ ಲಾಭಕ್ಕಾಗಿ ಬೆದರಿಕೆ, ಸುಲಿಗೆ ಮಾಡಿದ ಪ್ರಕರಣಗಳ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಬಿಎನ್‌ಎಸ್ -2023ರ ಅಡಿಯಲ್ಲಿ ಸುಲಿಗೆ ಮತ್ತು ಕ್ರಿಮಿನಲ್ ಬೆದರಿಕೆ ಸಂಬಂಧಿತ ಸೆಕ್ಷನ್ ಗಳನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ದಾಖಲು ಮಾಡಬೇಕು ಎಂದು ಸೂಚಿಸಲಾಗಿದೆ. ಇಂತಹ ಪ್ರಕರಣಗಲ್ಲಿ ಎಲ್ಲ ಡಿಜಿಟಲ್ ಸಾಕ್ಷ್ಯವನ್ನು ಗೌಪ್ಯವಾಗಿ ಸಂರಕ್ಷಿಸಬೇಕು. ಅಲ್ಲದೆ, ಸಂತ್ರಸ್ತರ ಗುರುತನ್ನು ಗೌಪ್ಯವಾಗಿ ಇಡಬೇಕು. ದೂರುದಾರರನ್ನು ಸೂಕ್ಷ್ಮವಾಗಿ ನಡೆಸಿಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ. ದೂರುದಾರರನ್ನು ಅವಮಾನ ಮಾಡುವುದನ್ನು ತಪ್ಪಿಸಬೇಕು ಹಾಗೂ ಮಹಿಳಾ ಸಂತ್ರಸ್ತರ ದೂರನ್ನು ಮಹಿಳಾ ಅಧಿಕಾರಿಯೇ ದಾಖಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ಹೊಸಪೇಟೆ : ಗಣೇಶ ಮೂರ್ತಿ ಒಯ್ಯುವ ವೇಳೆ ವಿದ್ಯುತ್ ಸ್ಪರ್ಷ ; ಇಬ್ಬರಿಗೆ ಗಾಯ

ಭಾರತೀಯ ನ್ಯಾಯ ಸಂಹಿತೆ 2023ರ ಸೆಕ್ಷನ್ 77ರಂತೆ ಗೌಪ್ಯತೆ ಉಲ್ಲಂಘನೆಗೆ ಸಂಬಂಧಿಸಿದ ವಿಧಿಗಳು, ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 66(ಇ), 67 ಮತ್ತು 67(ಎ)ಗಳನ್ನು ಅಳವಡಿಸಬೇಕು ಎಂದು ಸೂಚಿಸಲಾಗಿದೆ. ಮಹಿಳಾ ಸಂತ್ರಸ್ತರಿದ್ದಲ್ಲಿ 77ರ ವಿಧಿಯ ಜೊತೆಗೆ ಐಟಿ ಕಾಯ್ದೆಯ ಸೆಕ್ಷನ್ ಗಳನ್ನು ಸೇರಿಸಿ ಎಫ್‌ಐಆರ್ ಕಡ್ಡಾಯವಾಗಿ ನೋಂದಣಿ ಮಾಡಬೇಕೆಂದು ನಿರ್ದೇಶನ ನೀಡಲಾಗಿದೆ.
ಬ್ಲಾಕ್‌ಮೇಲ್ ವೀಡಿಯೊಗಳು, ರಿವೆಂಜ್ ಪೋರ್ನೋಗ್ರಫಿ ಮೊದಲಾದ ಪ್ರಕರಣಗಳಲ್ಲಿ ತಕ್ಷಣ ಎಫ್‌ಐಆರ್ ದಾಖಲಿಸಬೇಕು. ಪೀಡಿತರು ಮೊದಲು ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದ್ದರು ಎಂಬ ಕಾರಣಕ್ಕೆ ದೂರು ದಾಖಲಿಸುವುದನ್ನು ನಿರಾಕರಿಸಬಾರದು. ಅಪರಾಧ ಸ್ಥಳೀಯ ವ್ಯಾಪ್ತಿಯ ಹೊರಗೆ ನಡೆದಿದ್ದರೆ ಝೀರೋ ಎಫ್‌ಐಆರ್ ದಾಖಲಿಸಿ ಸಂಬಂಧಿತ ಠಾಣೆಗೆ ವರ್ಗಾಯಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅಪರಾಧ ವಿಷಯವನ್ನು ತಕ್ಷಣವೇ ತೆಗೆದುಹಾಕಲು ಐಟಿ ನಿಯಮಗಳ ಪ್ರಕಾರ ಸಂಬಂಧಿತ ಸಂಸ್ಥೆಗಳಿಗೆ ನೋಟಿಸ್ ನೀಡಬೇಕು ಎಂದು ಸೂಚಿಸಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement