ಧರ್ಮಸ್ಥಳ ಪ್ರಕರಣ; ಚಿನ್ನಯ್ಯ ನನಗೆ ಕರೆ ಮಾಡಿದ್ದ, ಆದರೆ ಎಸ್‌ಐಟಿ ಸಂಪರ್ಕಿಸಲು ಹೇಳಿದ್ದೆ- ನಟ ಪ್ರಕಾಶ್ ರಾಜ

ಬೆಂಗಳೂರು : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆರೋಪಗಳು ಹಾಗೂ ‘ಚಿನ್ನಯ್ಯ’ ಎಂಬಾತ ನೀಡಿರುವ ಹೇಳಿಕೆಗಳಿಗೂ ತನಗೂ ಸಂಬಂಧವಿಲ್ಲ ಎಂದು ನಟ ಪ್ರಕಾಶ ರೈ ಹೇಳಿದ್ದಾರೆ.
ನಗರದ ಪ್ರೆಸ್ ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ತಮ್ಮ ಹೆಸರನ್ನು ಎಳೆದು ತರಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.“ಧರ್ಮಸ್ಥಳದ ಹೆಸರು ಹಾಳು ಮಾಡಲು ಕೇರಳದಿಂದ 200 ಕೋಟಿ ರೂಪಾಯಿ ಬಂದಿದೆ ಎಂದು ಚಿನ್ನಯ್ಯ ಎಂಬಾತ ಹೇಳಿಕೊಂಡಿದ್ದಾನೆ. ಅದರಲ್ಲಿಯೂ ನನ್ನ ಹೆಸರನ್ನೂ ಬಳಸಿದ್ದಾನೆ. ಆದರೆ ನಾನು ಧರ್ಮಸ್ಥಳಕ್ಕೆ ಈವರೆಗೆ ಹೋದವನಲ್ಲ, ಅಲ್ಲಿ ಯಾರನ್ನೂ ಭೇಟಿ ಮಾಡಿಲ್ಲ” ಎಂದು ತಿಳಿಸಿದರು.
ಆದರೆ, ಗಿರೀಶ ಮಟ್ಟಣ್ಣನವರ ಯಾರು ಎಂಬುದೇ ನನಗೆ ಗೊತ್ತಿಲ್ಲ. ಗಿರೀಶ ಮಟ್ಟಣ್ಣನವರ, ಮಾಸ್ಕ್‌ ಮ್ಯಾನ್‌ನನ್ನು ನಾನು ಎಂದಿಗೂ ಭೇಟಿ ಮಾಡಿಲ್ಲ ಎಂದು ಹೇಳಿದ ನಟ ಪ್ರಕಾಶ ರೈ ಈ ಹಿಂದೆ ಗಿರೀಶ ಮಟ್ಟಣ್ಣನವರ ನನಗೆ ಕರೆ ಮಾಡಿ, ಮಾಸ್ಕ್‌ ಮ್ಯಾನ್‌ ನಿಮ್ಮೊಂದಿಗೆ ಮಾತನಾಡಬೇಕು ಎನ್ನುತ್ತಿದ್ದಾರೆ ಎಂದು ತಿಳಿಸಿದ್ದರು. ನಂತರ ಆ ವ್ಯಕ್ತಿ ಮಂಡ್ಯದವನು ಎಂದು ಹೇಳಿದ್ದರು. ನಂತರ ಮಾಸ್ಕ್‌ ಮ್ಯಾನ್‌ ಚಿನ್ನಯ್ಯ ನನಗೆ ಫೋನ್‌ ಮಾಡಿದ್ದು ನಿಜ.ಚಿನ್ನಯ್ಯ ತಮಿಳಿನಲ್ಲಿ ಮಾತನಾಡಿದ ಆತ ಧರ್ಮಸ್ಥಳದಲ್ಲಿ ಸರಣಿ ಕೊಲೆಯಾಗಿದೆ  ಎಂದು ತಿಳಿಸಿದ. ಕೊಲೆಯಾಗಿರುವುದು ಸತ್ಯವಾದರೆ ಇದನ್ನು ಎಸ್‌ಐಟಿ ಮುಂದೆ ಹೇಳು. ಆಗ ಇಡೀ ಊರೇ ನಿನ್ನನ್ನ ಕೊಂಡಾಡಲಿದೆ. ನಾನು ಬಂದು ನಿನ್ನನ್ನು ತಬ್ಬಿಕೊಳ್ಳುವೆ ಎಂದು ಹೇಳಿದ್ದೆ. ಹೀಗಾಗಿ ಎಸ್ಐಟಿ ಅಧಿಕಾರಿಗಳ ಮುಂದೆ ಹೇಳುವಂತೆ ಸಲಹೆ ನೀಡಿದೆ ಎಂದರು.

ಪ್ರಮುಖ ಸುದ್ದಿ :-   ಪೋಕ್ಸೊ ಪ್ರಕರಣ | ವಚನಾನಂದ ಸ್ವಾಮೀಜಿಗೆ ನಿರೀಕ್ಷಣಾ ಜಾಮೀನು: ಆಘಾತ ವ್ಯಕ್ತಪಡಿಸಿದ ಹೈಕೋರ್ಟ್‌

ಆತ ನನ್ನನ್ನು ಭೇಟಿಯಾಗಬೇಕು ಎಂದು ಕೇಳಿದ್ದ. ನಾನು ಭೇಟಿಯಾಗುವುದು ಬೇಡ, ಏನಾದರೂ ಹೇಳಬೇಕಿದ್ದರೆ ರೆಕಾರ್ಡ್‌ ಮಾಡಿ ಕಳುಹಿಸು ಎಂದು ಹೇಳಿದ್ದೆ. ಬಳಿಕ ರೆಕಾರ್ಡ್‌ ಮಾಡಿ ಕಳುಹಿಸಿದ್ದ. ತಕ್ಷಣ ನಾನು ಅದನ್ನು ಎಸ್‌ಐಟಿ ಅಧಿಕಾರಿಗಳಿಗೆ ಕಳುಹಿಸಿದ್ದೆ. ಆದರೆ, ನಾನು ಯಾವ ಹೋರಾಟಕ್ಕೂ ಹೋಗಿಲ್ಲ, ಈ ವಿವಾದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.
ಧರ್ಮಸ್ಥಳ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಎಸ್‌ಐಟಿ ರಚನೆಗೆ ಒತ್ತಾಯಿಸಿದ್ದೆ. ಎಸ್ಐಟಿ ತನಿಖೆ ವೇಳೆ ಹೇಳಿಕೆ ನೀಡಿ ಬಳಿಕ ಉಲ್ಟಾ ಹೊಡೆದಿದ್ದಾನೆ. ಎಸ್‌ಐಟಿ ರಿಪೋರ್ಟ್‌ ಬಂದಿದ್ದು, ಮಾಸ್ಕ್‌ ಮ್ಯಾನ್‌ ಚಿನ್ನಯ್ಯ ಪೊಲೀಸ್‌ ಇಲಾಖೆಗೆ ಚಳ್ಳೆಹಣ್ಣು ತಿನ್ನಿಸಿದ್ದಾನೆ ಎಂಬುದು ಗೊತ್ತಾಗಿದೆ. ಈ ಬಗ್ಗೆ ಅಧಿಕಾರಿಗಳು ನೋಡಿಕೊಳ್ಳುತ್ತಾರೆ ಎಂದರು.

ರಿಪೋರ್ಟ್‌ನಲ್ಲಿ 30 ಹೆಣಗಳಿಗೆ ಅಲ್ಲಿ ಸಿಕ್ಕ ಮೂಳೆಗಳು ತಾಳೆಯಾಗುತ್ತಿಲ್ಲ ಎಂದು ಉಲ್ಲೇಖಿಸಲಾಗಿದೆ. ಮತ್ತೊಂದು ವರದಿಯಲ್ಲಿ 400ಕ್ಕೂ ಹೆಚ್ಚು ಸಾವು ನಡೆದಿದೆ ಎಂದು ವರದಿಯಿದೆ. ಹೀಗಾಗಿ ಈ ಸಾವುಗಳಿಗೆ ಕಾರಣ ಯಾರು ಎಂಬುವುದು ನಮಗೆ ಗೊತ್ತಾಗಬೇಕಿದೆ. ಅದನ್ನು ಮಾತ್ರ ನಾನು ಪ್ರಶ್ನಿಸಿದ್ದೇನೆ ಎಂದು ತಿಳಿಸಿದ್ದಾರೆ.
ಧರ್ಮಸ್ಥಳದ ಹೆಸರು ಹಾಳು ಮಾಡಲು ಕೇರಳದಿಂದ 200 ಕೋಟಿ ರೂಪಾಯಿ ಬಂದಿದೆ ಎಂದು ಹೇಳಿ  ಇದರಲ್ಲಿ ನನ್ನನ್ನು ಸಿಲುಕಿಸಲು ಯತ್ನಿಸಲಾಗಿದೆ. 200 ಕೋಟಿ ರೂಪಾಯಿ ಹಣವನ್ನು ನಾನೆಲ್ಲಿಂದ ತರಲಿ? ವಿಷಯವನ್ನು ತಿರುಚಿ ನನಗೆ ಧರ್ಮಸ್ಥಳದ ಮೇಲೆ ಪ್ರೀತಿ ಇಲ್ಲ, ನಾನು ಧರ್ಮ ವಿರೋಧಿ ಎಂದು ಬಣ್ಣ ಬಳಿಯುತ್ತಿದ್ದಾರೆ. ನಾನು ಎಲ್ಲರ ಭಾವನೆಗಳನ್ನು ಗೌರವಿಸುತ್ತೇನೆ ಎಂದು ಹೇಳಿದ್ದಾರೆ.
“ನಾನು ಯಾವುದೇ ದೇವಸ್ಥಾನಕ್ಕೆ ಹೋಗುವುದಿಲ್ಲ. ಆದರೆ ನನ್ನ ಪತ್ನಿ ಹೋಗುತ್ತಾಳೆ. ಅದು ಅವರವರ ನಂಬಿಕೆ ಮತ್ತು ಭಾವನೆಗೆ ಬಿಟ್ಟಿದ್ದು ಈ ದೇಶದ ಪ್ರಜೆಯಾಗಿ ಪ್ರಶ್ನಿಸುವ ಹಕ್ಕು ನನಗಿದೆ. ನಮಗೆ ಬೇಕಿರುವುದು ಸೌಜನ್ಯಾ ಸಾವು ಮತ್ತು ಆ ಸರಣಿ ಸಾವುಗಳು ಏಕೆ ಸಂಭವಿಸಿದವು ಎಂಬುದರ ಬಗ್ಗೆ ವಾಸ್ತವ. ಆದರೆ ಕೆಲವರು ವಿಷಯವನ್ನು ಸಂಪೂರ್ಣವಾಗಿ ತಿರುಚಿ ಬೇರೆ ರೀತಿಯಲ್ಲೇ ಬಿಂಬಿಸುತ್ತಿದ್ದಾರೆ. ಧರ್ಮಸ್ಥಳದ ಹೆಸರನ್ನು ಕೆಡಿಸುವ ಯಾವುದೇ ಷಡ್ಯಂತ್ರದಲ್ಲೂ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು. ನಾನು ನನ್ನ ಜೀವನದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಒಮ್ಮೆ ಭೇಟಿ ಆಗಿದ್ದೆ. ಅವರು ಅತ್ಯಂತ ಅದ್ಭುತವಾದ ಮತ್ತು ಶ್ರೇಷ್ಠ ಮನುಷ್ಯ ಎಂದು ನಟ ಪ್ರಕಾಶ ರೈ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಒಪ್ಪಿಗೆಯಿಲ್ಲದೆ ಖಾಸಗಿ ವೀಡಿಯೊ-ಫೋಟೊ ಶೇರ್ ಮಾಡಿದ್ರೆ ಎಫ್‌ಐಆರ್ : ಪೊಲೀಸ್ ಇಲಾಖೆಯಿಂದ ಹೊಸ ಮಾರ್ಗಸೂಚಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement