
ಚೆನ್ನೈ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಂದೆಯೊಬ್ಬ ತನ್ನ 9 ವರ್ಷದ ಮಗಳನ್ನು ಭೀಕರವಾಗಿ ಹತ್ಯೆ ಮಾಡಿ, ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚೆನ್ನೈನ ಚಿಂತಾದ್ರಿಪೇಟೆಯಲ್ಲಿ ನಡೆದಿದೆ. ಆರೋಪಿ ತಂದೆಯು ನೇಪಾಳದಲ್ಲಿದ್ದ ತನ್ನ ಪತ್ನಿಗೆ ವಿಡಿಯೋ ಕಾಲ್ ಮಾಡಿ, ಆಕೆಗೆ ತೋರಿಸುತ್ತಲೇ ಮಗಳನ್ನು ಕೊಂದಿರುವುದು ಇಡೀ ಘಟನೆಯ ಭೀಕರತೆಯನ್ನು ಹೆಚ್ಚಿಸಿದೆ.
ಘಟನೆಯಲ್ಲಿ ಮೃತಪಟ್ಟವರನ್ನು ನೇಪಾಳ ಮೂಲದ ಲಕ್ಷ್ಮಣ ಪ್ರಸಾದ (40) ಮತ್ತು ಆತನ ಮಗಳು ಗೀತಾ (9) ಎಂದು ಗುರುತಿಸಲಾಗಿದೆ. ಸೋಮವಾರ ತಡರಾತ್ರಿ ಈ ಕೃತ್ಯ ನಡೆದಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಲಕ್ಷ್ಮಣ ಪ್ರಸಾದ ಮಂಗಳವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ವರದಿಯ ಪ್ರಕಾರ, ಮೃತ ಲಕ್ಷ್ಮಣಪ್ರಸಾದ ಇಲ್ಲಿನ ಸರ್ಕಾರಿ ಶಾಲೆಯೊಂದರಲ್ಲಿ ಕಾವಲುಗಾರನಾಗಿ (ವಾಚ್‌ಮನ್) ಕೆಲಸ ಮಾಡುತ್ತಿದ್ದ ಹಾಗೂ ಅದೇ ಶಾಲೆಯ ಆವರಣದಲ್ಲಿ ವಾಸಿಸುತ್ತಿದ್ದ. ಆತನ ಮಗಳು ಗೀತಾ ಅದೇ ಶಾಲೆಯಲ್ಲಿ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಲಕ್ಷ್ಮಣಪ್ರಸಾದ ತನ್ನ ಪತ್ನಿಯ ನಡತೆಯ ಬಗ್ಗೆ ಸದಾ ಸಂಶಯ ಪಡುತ್ತಿದ್ದ ಎನ್ನಲಾಗಿದ್ದು, ಈ ವಿಷಯವಾಗಿ ದಂಪತಿ ನಡುವೆ ಪದೇ ಪದೇ ಜಗಳವಾಗುತ್ತಿತ್ತು. ಲಕ್ಷ್ಮಣನ ಕಿರುಕುಳ ಮತ್ತು ನಡವಳಿಕೆಯನ್ನು ಸಹಿಸಲಾರದೆ ಆತನ ಪತ್ನಿ ಇತ್ತೀಚೆಗೆ ತನ್ನ ಕಿರಿಯ ಮಗಳನ್ನು ಕರೆದುಕೊಂಡು ತಾಯ್ನಾಡಾದ ನೇಪಾಳಕ್ಕೆ ಮರಳಿದ್ದಳು.

ಪತ್ನಿಗೆ ವಿಡಿಯೋ ಕಾಲ್ ಮಾಡಿ ಮಗಳ ಕೊಲೆ:
ಪತ್ನಿ ತನ್ನನ್ನು ಬಿಟ್ಟು ಹೋಗಿದ್ದರಿಂದ ತೀವ್ರ ಆಕ್ರೋಶಗೊಂಡಿದ್ದ ಲಕ್ಷ್ಮಣ, ಸೋಮವಾರ ರಾತ್ರಿ ಶಾಲಾ ಕಟ್ಟಡದ ಎರಡನೇ ಮಹಡಿಗೆ ಮಗಳು ಗೀತಾಳನ್ನು ಕರೆದೊಯ್ದಿದ್ದಾನೆ. ಅಲ್ಲಿ ಆಕೆಯನ್ನು ಕೊಲ್ಲಲು ಮುಂದಾದ ಲಕ್ಷ್ಮಣ, ನೇಪಾಳದಲ್ಲಿದ್ದ ತನ್ನ ಪತ್ನಿಗೆ ವಿಡಿಯೋ ಕಾಲ್ ಮಾಡಿದ್ದಾನೆ. ಪತ್ನಿ ಕರೆ ಸ್ವೀಕರಿಸುತ್ತಿದ್ದಂತೆ, ಆಕೆ ನೋಡುತ್ತಿರುವಂತೆಯೇ ಮಗಳನ್ನು ಕ್ರೂರವಾಗಿ ಹತ್ಯೆ ಮಾಡಿದ್ದಾನೆ. ಮಗಳನ್ನು ಕೊಂದ ನಂತರ ಆತ ತಾನೂ ಸಹ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಬೆಳಕಿಗೆ ಬಂದಿದ್ದು ಹೇಗೆ?
ಮರುದಿನ ಶಾಲೆಯ ಸಹಾಯಕ ಸಿಬ್ಬಂದಿಯೊಬ್ಬರು ತಮ್ಮ ದಿನನಿತ್ಯದ ಕರ್ತವ್ಯದ ಭಾಗವಾಗಿ ಶಾಲೆಯ ಎರಡನೇ ಮಹಡಿಗೆ ಹೋದಾಗ ಈ ಭೀಕರ ದೃಶ್ಯ ಬೆಳಕಿಗೆ ಬಂದಿದೆ. ತಂದೆ ಮತ್ತು ಮಗಳು ಇಬ್ಬರೂ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ಆಕೆ ಕಿರುಚಾಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಶಾಲೆಯ ಇತರ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಚಿಂತಾದ್ರಿಪೇಟೆ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದ್ದಾರೆ. ತಕ್ಷಣವೇ ಲಕ್ಷ್ಮಣಪ್ರಸಾದನನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆತ ಮಂಗಳವಾರ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಬೆಚ್ಚಿಬೀಳಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ