
ಬೆಂಗಳೂರು/ನವದೆಹಲಿ: ಕರ್ನಾಟಕ ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಬಿಜೆಪಿ-ಜೆಡಿಎಸ್ ಪಕ್ಷಗಳ ಕ್ರಾಸ್ ವೋಟಿಂಗ್ (ಅಡ್ಡ ಮತದಾನ) ವಿಚಾರ ಇದೀಗ ತೀವ್ರ ರಾಜಕೀಯ ಕದನಕ್ಕೆ ಕಾರಣವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಇತರೆ ಪ್ರಮುಖ ನಾಯಕರಿಗೆ ತುರ್ತಾಗಿ ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದಾರೆ ಎಂದು ವರದಯಾಗಿದೆ.
ಜೂನ್ 23 ರಂದು ದೆಹಲಿಯಲ್ಲಿ ನಡೆಯಲಿರುವ ಈ ಸಭೆಯಲ್ಲಿ ಪಾಲ್ಗೊಳ್ಳುವಂತೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ ದಾಸ್ ಅಗರ್ವಾಲ್ ಅವರಿಗೂ ಸೂಚನೆ ನೀಡಲಾಗಿದ್ದು, ಹೈಕಮಾಂಡ್ ಈ ವಿದ್ಯಮಾನವನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ನಡೆದ ಮೊದಲ ಪ್ರಮುಖ ಚುನಾವಣೆಯಲ್ಲಿ ಗುರುವಾರ ವಿಧಾನ ಸೌಧದಲ್ಲಿ ನಡೆದ ಮತದಾನ ಹಾಗೂ ಸಂಜೆ ಪ್ರಕಟವಾದ ಫಲಿತಾಂಶದಲ್ಲಿ ಆಡಳಿತಾರೂಢ ಕಾಂಗ್ರೆಸ್ 5 ಸ್ಥಾನಗಳಲ್ಲಿ ಭರ್ಜರಿ ಜಯ ಸಾಧಿಸಿದೆ. ವಿಪಕ್ಷವಾದ ಬಿಜೆಪಿ 2 ಸ್ಥಾನಗಳನ್ನು ತನ್ನದಾಗಿಸಿಕೊಂಡರೆ, ಜೆಡಿಎಸ್ನ ಏಕೈಕ ಅಭ್ಯರ್ಥಿ ಗೋವಿಂದರಾಜು ಅವರು ಸೋಲುಂಡಿದ್ದಾರೆ.
ಕಾಂಗ್ರೆಸ್ಸಿನಿಂದ ತಿಪ್ಪಣ್ಣಪ್ಪ ಕಮಕನೂರ, ಪಿ.ವಿ. ಮೋಹನ, ಬಿ.ಕೆ. ಹರಿಪ್ರಸಾದ (ಕೆಪಿಸಿಸಿ ಅಧ್ಯಕ್ಷ), ಶಿವಣ್ಣ ಬಿ.ಎಸ್. ಮತ್ತು ವಿನಯ ಕಾರ್ತಿಕ ಹಾಗೂ ಬಿಜೆಪಿಯಿಂದ ಲಿಂಗರಾಜ ಪಾಟೀಲ ಹಾಗೂ ರಘು ಆರ್. ಅವರು ಆಯ್ಕೆಯಾಗಿದ್ದಾರೆ.
ಕ್ರಾಸ್ ವೋಟಿಂಗ್ ಲೆಕ್ಕಾಚಾರ: ಕಾಂಗ್ರೆಸ್ಸಿಗೆ 11 ಹೆಚ್ಚುವರಿ ಮತಗಳು
ಕಾಂಗ್ರೆಸ್ ಅಭ್ಯರ್ಥಿಗಳಿಗೆ ನಿರೀಕ್ಷೆಯಂತೆ ಬರಬೇಕಾಗಿದ್ದ ಒಟ್ಟು ಮತಗಳ ಸಂಖ್ಯೆ 140. ಆದರೆ, ಫಲಿತಾಂಶ ಬಂದಾಗ ಕಾಂಗ್ರೆಸ್ ಪರ 151 ಮತಗಳು ಚಲಾವಣೆಯಾಗಿರುವುದು ಬೆಳಕಿಗೆ ಬಂದಿದೆ. ಅಂದರೆ, ವಿರೋಧ ಪಕ್ಷಗಳ (ಬಿಜೆಪಿ ಹಾಗೂ ಜೆಡಿಎಸ್) ಒಟ್ಟು 11 ಶಾಸಕರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಹಾಕಿದ್ದಾರೆ ಎಂದು ಲೆಕ್ಕಾಚಾರ ಹಾಕಲಾಗಿದೆ.
ಕ್ರಾಸ್ ವೋಟಿಂಗ್ ‘ದುರದೃಷ್ಟಕರ’ ಎಂದ ವಿಜಯೇಂದ್ರ: ಸಿ.ಟಿ. ರವಿ ನೇತೃತ್ವದಲ್ಲಿ ತನಿಖಾ ಸಮಿತಿ
ವಿಧಾನ ಪರಿಷತ್ ಚುನಾವಣೆಯ ಈ ಫಲಿತಾಂಶ ಹಾಗೂ ಕ್ರಾಸ್ ವೋಟಿಂಗ್ ನಡೆದಿರುವುದನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಯೈ. ವಿಜಯೇಂದ್ರ ಅವರು “ಅತ್ಯಂತ ದುರದೃಷ್ಟಕರ” ಎಂದು ಕರೆದಿದ್ದಾರೆ.
“ನಮ್ಮ ಲೆಕ್ಕಾಚಾರದ ಪ್ರಕಾರ ಪಕ್ಷದಿಂದ ನಾಲ್ಕು ಕ್ರಾಸ್ ವೋಟ್ಗಳು ಆಗಿವೆ. ಪಕ್ಷ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಇದರ ಸತ್ಯಾಸತ್ಯತೆ ತಿಳಿಯಲು ಹಿರಿಯ ನಾಯಕ ಸಿ.ಟಿ. ರವಿ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಲಾಗಿದೆ. ಮಾಜಿ ಸಚಿವ ಎನ್. ಮಹೇಶ ಮತ್ತು ಶಾಸಕ ಮಹೇಶ ಟೆಂಗಿನಕಾಯಿ ಈ ಸಮಿತಿಯಲ್ಲಿದ್ದಾರೆ. ಜೂನ್ 25 ರೊಳಗೆ ಈ ಸಮಿತಿ ವರದಿ ನೀಡಲಿದ್ದು, ಮುಂದಿನ ವಾರ ನಾನು ದೆಹಲಿಗೆ ತೆರಳಿ ಹಿರಿಯ ನಾಯಕರಿಗೆ ಸಂಪೂರ್ಣ ವರದಿ ನೀಡಲಿದ್ದೇನೆ,” ಎಂದು ವಿಜಯೇಂದ್ರ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮತ್ತೊಂದೆಡೆ ವಿಧಾನಸಭೆಯ ವಿಪಕ್ಷದ ನಾಯಕ ಆರ್. ಅಶೋಕ ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, “ಪಕ್ಷಕ್ಕೆ ದ್ರೋಹ ಬಗೆದವರನ್ನು ಪತ್ತೆ ಹಚ್ಚಿ, ಅವರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು,” ಎಂದು ಹೇಳಿದ್ದಾರೆ.
ಒಟ್ಟಾರೆಯಾಗಿ, ರಾಜ್ಯದ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶವು ಆಡಳಿತಾರೂಢ ಕಾಂಗ್ರೆಸ್ಗೆ ಬಲ ತಂದಿದ್ದರೆ, ವಿಪಕ್ಷವಾದ ಬಿಜೆಪಿಯಲ್ಲಿ ದೊಡ್ಡ ಮಟ್ಟದ ಆಂತರಿಕ ಭಿನ್ನಮತ ಮತ್ತು ಹೈಕಮಾಂಡ್ ಮಟ್ಟದ ತನಿಖೆಗೆ ವೇದಿಕೆ ಸಿದ್ಧಪಡಿಸಿದೆ.



ನಿಮ್ಮ ಕಾಮೆಂಟ್ ಬರೆಯಿರಿ