ಜಾರ್ಖಂಡದಲ್ಲಿ ಲೆಕ್ಕಾಚಾರ ಉಲ್ಟಾ ; ಕಾಂಗ್ರೆಸ್‌ಗೆ ಭಾರಿ ಮುಖಭಂಗ : ಎನ್‌ಡಿಎ ಬೆಂಬಲಿತ ಪಕ್ಷೇತರ ಅಭ್ಯರ್ಥಿಗೆ ಗೆಲುವು

ರಾಂಚಿ: ಜಾರ್ಖಂಡ್‌ ವಿಧಾನಸಭೆಯಿಂದ ರಾಜ್ಯಸಭೆಯ ಎರಡು ಸ್ಥಾನಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ (JMM) ಅಭ್ಯರ್ಥಿ ಬೈದ್ಯನಾಥ ರಾಮ ಮತ್ತು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಬೆಂಬಲಿತ ಪಕ್ಷೇತರ ಅಭ್ಯರ್ಥಿ ಪರಿಮಳ ನತ್ವಾನಿ ಜಯಗಳಿಸಿದ್ದಾರೆ. ಈ ಫಲಿತಾಂಶವು ಇಂಡಿಯಾ ಮೈತ್ರಿಕೂಟದ ಒಳಗಿನ ಬಿರುಕುಗಳನ್ನು  ಬಹಿರಂಗಪಡಿಸಿತು. ಮಿಜೋರಾಂನಲ್ಲಿ ಝಡ್‌ಪಿಎಂ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಬೈದ್ಯನಾಥ ರಾಮ ಅತ್ಯಂತ ಸುಲಭವಾಗಿ ಜಯಭೇರಿ ಬಾರಿಸಿದರೆ, ನತ್ವಾನಿ ಅವರ ಗೆಲುವು ರಾಜ್ಯದ ಆಡಳಿತಾರೂಢ ಮೈತ್ರಿಕೂಟದಲ್ಲಿ ತೀವ್ರ ಕ್ರಾಸ್ ವೋಟಿಂಗ್ (ಅಡ್ಡ ಮತದಾನ) ಆರೋಪಗಳಿಗೆ ಕಾರಣವಾಗಿದೆ.
ಚುನಾವಣೆಯಲ್ಲಿ ಬೈದ್ಯನಾಥ ರಾಮ 30 ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆದು ಜಯಗಳಿಸಿದರೆ, ಗೆಲುವಿಗೆ ಕನಿಷ್ಠ ಅಗತ್ಯವಿದ್ದ 28 ಮತಗಳನ್ನು ಪಡೆಯುವಲ್ಲಿ ನತ್ವಾನಿ ಯಶಸ್ವಿಯಾಗಿದ್ದಾರೆ. ಕಣದಲ್ಲಿದ್ದ ಮೂರನೇ ಅಭ್ಯರ್ಥಿ, ಕಾಂಗ್ರೆಸ್‌ನ ಪ್ರಣವ ಝಾ ಕೇವಲ 20 ಮತಗಳನ್ನು ಪಡೆದು ಮುಖಭಂಗ ಅನುಭವಿಸಿದ್ದಾರೆ.81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಯ ಎಲ್ಲಾ ಶಾಸಕರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರಾದರೂ, ಮೂರು ಮತಗಳು ಅಸಿಂಧುಗೊಂಡಿವೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಈ ಅಸಿಂಧು ಮತಗಳು ಯಾರಿಗೆ ಸೇರಿದ್ದು ಎಂಬುದನ್ನು ಬಹಿರಂಗಪಡಿಸಿಲ್ಲ.
ಎರಡನೇ ಸ್ಥಾನಕ್ಕಾಗಿ ತೀವ್ರ ಪೈಪೋಟಿ: ನತ್ವಾನಿ ಗೆದ್ದಿದ್ದು ಹೇಗೆ?
ವಿಧಾನಸಭೆಯಲ್ಲಿ ಜೆಎಂಎಂ ಪಕ್ಷವು ಬರೋಬ್ಬರಿ 34 ಶಾಸಕರನ್ನು ಹೊಂದಿರುವುದರಿಂದ ಅದರ ಅಭ್ಯರ್ಥಿ ಬೈದ್ಯನಾಥ ರಾಮ ಅವರ ಗೆಲುವು ಮೊದಲೇ ನಿಶ್ಚಿತವಾಗಿತ್ತು. ಹೀಗಾಗಿ ಎಲ್ಲರ ಕಣ್ಣು ಎರಡನೇ ಸ್ಥಾನದ ಮೇಲಿತ್ತು. ಇಲ್ಲಿ ಕಾಂಗ್ರೆಸ್‌ನ ಪ್ರಣವ ಝಾ ಮತ್ತು ಎನ್‌ಡಿಎ ಬೆಂಬಲಿತ ನತ್ವಾನಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.
ವಾಸ್ತವವಾಗಿ, ನತ್ವಾನಿ ಅವರ ಗೆಲುವಿಗೆ ಬೇಕಾದ ಸಂಖ್ಯಾಬಲ ಎನ್‌ಡಿಎ ಮೈತ್ರಿಕೂಟದ ಬಳಿ ಇರಲಿಲ್ಲ. ಎನ್‌ಡಿಎ ಪಾಳಯದಲ್ಲಿ ಬಿಜೆಪಿ (21), ಲೋಕ ಜನಶಕ್ತಿ ಪಾರ್ಟಿ-ರಾಮವಿಲಾಸ (1), ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್-ಎಜೆಎಸ್‌ಯು (1) ಮತ್ತು ಜನತಾ ದಳ-ಯುನೈಟೆಡ್ (1) ಸೇರಿ ಒಟ್ಟು 24 ಶಾಸಕರಷ್ಟೇ ಇದ್ದರು. ಗೆಲುವಿಗೆ ಇನ್ನು 4 ಮತಗಳ ಕೊರತೆಯಿತ್ತು. ಆದರೆ, ಆಡಳಿತಾರೂಢ ಜೆಎಂಎಂ ಹಾಗೂ ಕಾಂಗ್ರೆಸ್‌ ಮೈತ್ರಿಕೂಟದ ಬಳಿ ಸಂಖ್ಯಾ ಬಲವಿತ್ತು.  ಅಂತಿಮವಾಗಿ ಆಡಳಿತಾರೂಢ ಮೈತ್ರಿಕೂಟದ ಪಾಳಯದಿಂದಲೇ 4 ಹೆಚ್ಚುವರಿ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾದ ನತ್ವಾನಿ ಭರ್ಜರಿ ಗೆಲುವು ದಾಖಲಿಸಿದರು. ಇದು ಮೈತ್ರಿಕೂಟದಲ್ಲಿ ಅಡ್ಡ ಮತದಾನ ನಡೆದಿರುವುದನ್ನು ಸ್ಪಷ್ಟಪಡಿಸಿದೆ.
ಮಿತ್ರಪಕ್ಷಗಳ ವಿರುದ್ಧ ಕಾಂಗ್ರೆಸ್ ಕೆಂಡಾಮಂಡಲ: ‘ದ್ರೋಹದ’ ಆರೋಪ
ಈ ಅನಿರೀಕ್ಷಿತ ಸೋಲಿನಿಂದ ಆಘಾತಕ್ಕೊಳಗಾಗಿರುವ ಜಾರ್ಖಂಡ್ ಕಾಂಗ್ರೆಸ್ ಉಸ್ತುವಾರಿ ಕೆ. ರಾಜು ಅವರು, ತಮ್ಮ ‘ಇಂಡಿಯಾ’ (INDIA) ಮೈತ್ರಿಕೂಟದ ಪಾಲುದಾರ ಪಕ್ಷಗಳಾದ ರಾಷ್ಟ್ರೀಯ ಜನತಾ ದಳ (RJD) ಮತ್ತು ಸಿಪಿಐ (ಎಂಎಲ್-ಎಲ್) ಲಿಬರೇಶನ್ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದು, “ನಮಗೆ ದ್ರೋಹ ಬಗೆಯಲಾಗಿದೆ” ಎಂದು ಆರೋಪಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಕೆ. ರಾಜು,”ನಾನೇ ನಮ್ಮ ಪಕ್ಷದ ಪೋಲಿಂಗ್ ಏಜೆಂಟ್ ಆಗಿದ್ದೆ. ಕಾಂಗ್ರೆಸ್‌ನ ಎಲ್ಲಾ 16 ಶಾಸಕರ ಮತಗಳು ನಮಗೆ ಪಕ್ಕಾ ಸಿಕ್ಕಿವೆ ಎಂದು ನಾನು ಲಿಖಿತವಾಗಿ ಧೃಢಪಡಿಸಬಲ್ಲೆ. ಇದರೊಂದಿಗೆ ಜೆಎಂಎಂನಿಂದ ನಮಗೆ 4 ಮತಗಳು ಬಂದಿದ್ದರಿಂದ ನಮ್ಮ ಒಟ್ಟು ಮತಗಳ ಸಂಖ್ಯೆ 20ಕ್ಕೇರಿತು. ಆದರೆ ಆರ್‌ಜೆಡಿ ಮತ್ತು ಸಿಪಿಐ (ಎಂಎಲ್-ಎಲ್) ನಮಗೆ ದ್ರೋಹ ಮಾಡಿವೆ. ಬಿಜೆಪಿ ತನ್ನ ಸ್ವಂತ ಅಭ್ಯರ್ಥಿಯನ್ನು ಕಣಕ್ಕಿಳಿಸದೆ, ಹಣದ ಬಲದಿಂದ ಗೆಲ್ಲಬಲ್ಲ ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸಿ ಈ ತಂತ್ರ ಹೂಡಿದೆ,” ಎಂದು ನೇರ ಆರೋಪ ಮಾಡಿದರು.
ಆರೋಪ ತಳ್ಳಿಹಾಕಿದ ಆರ್‌ಜೆಡಿ, ಸಿಪಿಐ (ಎಂಎಲ್)
ಕಾಂಗ್ರೆಸ್ ಮಾಡಿದ ಈ ಗಂಭೀರ ಆರೋಪವನ್ನು ಮಿತ್ರಪಕ್ಷಗಳು ತಕ್ಷಣವೇ ತಿರಸ್ಕರಿಸಿವೆ. ಜಾರ್ಖಂಡ್ ಆರ್‌ಜೆಡಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಸಂಜಯ ಪ್ರಸಾದ ಯಾದವ್ ಪ್ರತಿಕ್ರಿಯಿಸಿ, ಕಾಂಗ್ರೆಸ್ ಉಸ್ತುವಾರಿಗೆ ತಮ್ಮ ಪಕ್ಷದ ಸೈದ್ಧಾಂತಿಕ ನಿಷ್ಠೆಯ ಬಗ್ಗೆ ಅರಿವಿಲ್ಲ ಎಂದಿದ್ದಾರೆ.
“ನಾವು ಲಾಲೂ ಪ್ರಸಾದ ಯಾದವ್ ಅವರ ಶಿಷ್ಯರು. ನಾವು ಜೈಲಿಗೆ ಹೋಗಲು ಸಿದ್ಧರಿದ್ದೇವೆಯೇ ಹೊರತು ಯಾರಿಗೂ ದ್ರೋಹ ಮಾಡುವುದಿಲ್ಲ. ನಮ್ಮ ಕೇಂದ್ರ ನಾಯಕತ್ವವು ಪಾಟ್ನಾದಿಂದ ಅತ್ಯಂತ ನಂಬಿಕಸ್ಥ ನಾಯಕ ಭೋಲಾ ಯಾದವ್ ಅವರನ್ನು ಪಕ್ಷದ ಏಜೆಂಟ್ ಆಗಿ ಕಳುಹಿಸಿಕೊಟ್ಟಿತ್ತು. ನಮ್ಮ ನಿಷ್ಠೆಯನ್ನು ಸಾಬೀತುಪಡಿಸಲು ನಾವೇನು ಎದೆಯನ್ನು ಸೀಳಿ ತೋರಿಸಲು ‘ಲಾರ್ಡ್ ಹನುಮಾನ್’ ಅಲ್ಲ,” ಎಂದು ಯಾದವ್ ತಿರುಗೇಟು ನೀಡಿದರು.
ಇತ್ತ ಸಿಪಿಐ (ಎಂಎಲ್-ಎಲ್) ಶಾಸಕಾಂಗ ಪಕ್ಷದ ನಾಯಕ ಅರೂಪ್ ಚಟರ್ಜಿ ಕೂಡ ಕಾಂಗ್ರೆಸ್ ಆರೋಪವನ್ನು “ಆಧಾರರಹಿತ” ಎಂದು ತಳ್ಳಿಹಾಕಿದ್ದು, ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.
“ನಾವು ಮೈತ್ರಿಕೂಟಕ್ಕೇ ಮತ ಹಾಕಿದ್ದೇವೆ, ನಮಗೆ ಬೇರೆ ಆಯ್ಕೆಯೇ ಇರಲಿಲ್ಲ. ಇಡೀ ಪ್ರಕ್ರಿಯೆಯ ಉಸ್ತುವಾರಿಗಾಗಿ ನಮ್ಮ ಪಕ್ಷದ ನಾಯಕತ್ವವು ಹಿರಿಯ ನಾಯಕರೊಬ್ಬರನ್ನು ಪೋಲಿಂಗ್ ಏಜೆಂಟ್ ಆಗಿ ನೇಮಿಸಿತ್ತು. ಇಂತಹ ಸಂದರ್ಭಗಳಲ್ಲಿ ದೊಡ್ಡ ಪಕ್ಷಗಳು ಸಣ್ಣ ಪಕ್ಷಗಳನ್ನು ಬಲಿಪಶು ಮಾಡುವುದು ಸಾಮಾನ್ಯ. ತನ್ನ ಶಾಸಕರನ್ನು ಒಟ್ಟಾಗಿ ಇಟ್ಟುಕೊಳ್ಳಲು ತಾನು ಎಲ್ಲಿ ವಿಫಲವಾಯಿತು ಎಂಬುದನ್ನು ಕಾಂಗ್ರೆಸ್ ಮೊದಲು ತನ್ನೊಳಗೆ ಹುಡುಕಿಕೊಳ್ಳಲಿ,” ಎಂದು ಚಾಟಿ ಬೀಸಿದರು.
ನತ್ವಾನಿ ಸಾಧನೆಗೆ ಸಂದ ಜಯ: ಬಾಬುಲಾಲ್ ಮರಾಂಡಿ
ಇದೇ ವೇಳೆ, ಚುನಾವಣಾ ಫಲಿತಾಂಶವನ್ನು ಸ್ವಾಗತಿಸಿರುವ ಹಿರಿಯ ಬಿಜೆಪಿ ನಾಯಕ ಹಾಗೂ ಜಾರ್ಖಂಡ್ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಾಬುಲಾಲ್ ಮರಾಂಡಿ, ಪರಿಮಳ ನತ್ವಾನಿ ಅವರ ಗೆಲುವನ್ನು ಅವರ ಹಿಂದಿನ ಸಾಧನೆಗೆ ಸಂದ ಜಯ ಎಂದು ಬಣ್ಣಿಸಿದ್ದಾರೆ.
“ಪಕ್ಷದ ಭೇದ ಮರೆತು ಶಾಸಕರು ನತ್ವಾನಿ ಅವರಿಗೆ ಮತ ನೀಡಿದ್ದಾರೆ. ಅದಕ್ಕೆ ಅವರ ಅತ್ಯುತ್ತಮ ಟ್ರ್ಯಾಕ್ ರೆಕಾರ್ಡ್ ಕಾರಣ. 2008 ರಿಂದ 2020 ರ ನಡುವೆ ಅವರು ರಾಜ್ಯಸಭಾ ಸದಸ್ಯರಾಗಿ ಜಾರ್ಖಂಡ್‌ನಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಶಾಸಕರು ಕಣ್ಣಾರೆ ಕಂಡಿದ್ದಾರೆ. ರಾಜ್ಯದ ಪ್ರಗತಿಗೆ ಯಾರು ಸೂಕ್ತವಾಗಿ ಕೆಲಸ ಮಾಡಬಲ್ಲರು ಎಂದು ನಿರ್ಣಯಿಸುವಷ್ಟು ಜಾರ್ಖಂಡ್‌ನ ಜನಪ್ರತಿನಿಧಿಗಳು ಪ್ರಬುದ್ಧರಾಗಿದ್ದಾರೆ,” ಎಂದು ಹೇಳಿದ್ದಾರೆ.
ಮಿಜೋರಾಂನಲ್ಲಿ ಝಡ್‌ಪಿಎಂ ಪಕ್ಷದ ಅಭ್ಯರ್ಥಿ ಗೆಲುವು
ಮಿಜೋರಾಂನಲ್ಲಿ, ಏಕೈಕ ರಾಜ್ಯಸಭಾ ಸ್ಥಾನವನ್ನು ಆಡಳಿತಾರೂಢ ಜೋರಮ್ ಪೀಪಲ್ಸ್ ಮೂವ್‌ಮೆಂಟ್ (ZPM) ಅಭ್ಯರ್ಥಿ ಕೆ ಲಾಲ್ಟ್ಲುವಾಂಗ್ಕಿಮಾ ಗೆದ್ದಿದ್ದಾರೆ.  ಪಕ್ಷವು ರಾಜ್ಯಸಭೆಯಲ್ಲಿ ಮೊದಲ ಬಾರಿಗೆ ಪ್ರಾತಿನಿಧ್ಯ ಪಡೆದಿದೆ. ಚುನಾವಣೆಯು ಹೆಚ್ಚಾಗಿ ಏಕಪಕ್ಷೀಯವಾಗಿತ್ತು, ಝಡ್‌ಪಿಎಂ (ZPM) 40 ಚುನಾಯಿತ ಸ್ಥಾನಗಳನ್ನು ಹೊಂದಿರುವ ರಾಜ್ಯ ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತವನ್ನು ಹೊಂದಿತ್ತು, ಇದು ಅದರ ಅಭ್ಯರ್ಥಿಯು ಗಂಭೀರ ಸ್ಪರ್ಧೆಯಿಲ್ಲದೆ ಗೆಲುವು ಸಾಧಿಸಲು ಅವಕಾಶ ಮಾಡಿಕೊಟ್ಟಿತು. ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಸ್ಪರ್ಧೆಯಿಂದ ದೂರ ಉಳಿದಿದ್ದರಿಂದ ಫಲಿತಾಂಶವು ನಿರೀಕ್ಷಿತವಾಗಿತ್ತು.  ಇದು ಈಗ ರಾಜ್ಯ ಆಡಳಿತದಿಂದ ರಾಷ್ಟ್ರೀಯ ಸಂಸದೀಯ ಪ್ರಾತಿನಿಧ್ಯಕ್ಕೆ ತನ್ನ ಪ್ರಭಾವವನ್ನು ವಿಸ್ತರಿಸಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement