ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ಭಾರಿ ಹೈಡ್ರಾಮಾ ನಡೆದಿದ್ದು, 1998 ರಲ್ಲಿ ತೃಣಮೂಲ ಕಾಂಗ್ರೆಸ್ ಅನ್ನು ಸ್ಥಾಪಿಸಿದಾಗಿನಿಂದ ಮಮತಾ ಬ್ಯಾನರ್ಜಿ ಅವರ ಅಧಿಕಾರಕ್ಕೆ ಅತ್ಯಂತ ನೇರವಾದ ಸವಾಲಾಗಿ, ವಿಪಕ್ಷದ ನಾಯಕ ರೀತಬ್ರತಾ ಬ್ಯಾನರ್ಜಿ ನೇತೃತ್ವದ ಬಂಡಾಯ ಬಣವು ಮಮತಾ ಬ್ಯಾನರ್ಜಿ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಿದೆ.ಅವರ ಸ್ಥಾನಕ್ಕೆ ಅರೂಪ್ ರಾಯ್ ಅವರನ್ನು ನೇಮಕ ಮಾಡಿದೆ.
ಅಲ್ಲದೆ, ಅಭಿಷೇಕ್ ಬ್ಯಾನರ್ಜಿ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಅಮಾನತುಗೊಳಿಸಲಾಗಿದೆ ಹಾಗೂ 30 ಸದಸ್ಯರ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದೆ.
ವಿರೋಧ ಪಕ್ಷದ ನಾಯಕ ರಿತಬ್ರತಾ ಬ್ಯಾನರ್ಜಿ ನೇತೃತ್ವದ ಈ ಭಿನ್ನಮತೀಯ ಗುಂಪು, ತಮಗೆ ಪಕ್ಷದ ಗಣನೀಯ ಸಂಖ್ಯೆಯ ಶಾಸಕರು ಮತ್ತು ಪದಾಧಿಕಾರಿಗಳ ಬೆಂಬಲವಿದೆ ಎಂದು ಪ್ರತಿಪಾದಿಸಿದೆ. ಅತ್ಯಂತ ಆಘಾತಕಾರಿ ವಿಷಯವೆಂದರೆ, ಮಮತಾ ಬ್ಯಾನರ್ಜಿ ಅವರ ಅತ್ಯಂತ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕೋಲ್ಕತ್ತಾದ ಮಾಜಿ ಮೇಯರ್ ಫಿರ್ಹಾದ್ ಹಕೀಮ್ ಸೇರಿದಂತೆ ಹಲವು ಹಿರಿಯ ನಾಯಕರು ಈ ಬಂಡಾಯ ಪಾಳಯವನ್ನು ಸೇರಿಕೊಂಡಿದ್ದಾರೆ.
ಹೊಸ ಸರ್ಕಾರ ಬಜೆಟ್ ಮಂಡಿಸಿದ ದಿನವೇ ದಂಗೆ!
ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರವು ತನ್ನ ಚೊಚ್ಚಲ ಬಜೆಟ್ ಮಂಡಿಸುತ್ತಿದ್ದ ದಿನವೇ (ಸೋಮವಾರ) ಟಿಎಂಸಿಯಲ್ಲಿ ಈ ಬೆಳವಣಿಗೆಗಳು ಮುಂಚೂಣಿಗೆ ಬಂದಿವೆ. ಬಜೆಟ್ ಮಂಡನೆಯಾದ ಬೆನ್ನಲ್ಲೇ, ಕೋಲ್ಕತ್ತಾದ ನ್ಯೂ ಟೌನ್ ಪ್ರದೇಶದ ಪಂಚತಾರಾ ಹೋಟೆಲ್‌ನಲ್ಲಿ ಭಿನ್ನಮತೀಯ ಟಿಎಂಸಿ ಶಾಸಕರು ತುರ್ತು ಸಭೆ ನಡೆಸಿದರು. ಈ ‘ವಿಶೇಷ ಸಭೆ’ಯಲ್ಲಿ ಹಾಲಿ ಮತ್ತು ಮಾಜಿ ಶಾಸಕರು, ಜಿಲ್ಲಾಧ್ಯಕ್ಷರು ಮತ್ತು ಕೌನ್ಸಿಲರ್‌ಗಳು ಸೇರಿದಂತೆ ಸುಮಾರು 500 ಕ್ಕೂ ಹೆಚ್ಚು ತೃಣಮೂಲ ನಾಯಕರು ಭಾಗವಹಿಸಿದ್ದರು ಎಂದು ಬಂಡಾಯ ಬಣ ಹೇಳಿಕೊಂಡಿದೆ.
ಈ ಸಭೆಯಲ್ಲಿ, ಬಂಡಾಯ ಬಣ 30 ಸದಸ್ಯರ ನೂತನ ‘ರಾಷ್ಟ್ರೀಯ ಕಾರ್ಯಕಾರಿ ಸಮಿತಿ’ಯನ್ನು ರಚಿಸಿದ್ದು, ಇದೇ ಅಸಲಿ (“ರಿಯಲ್”) ತೃಣಮೂಲ ಕಾಂಗ್ರೆಸ್‌ನ ಅಧಿಕೃತ ಸಾಂಸ್ಥಿಕ ಕೇಂದ್ರಭಾಗ ಎಂದು ಘೋಷಿಸಿಕೊಂಡಿದೆ.
ಮಮತಾಗೆ ‘ಸಲಹೆಗಾರ್ತಿ’ ಹುದ್ದೆಯ ಆಫರ್!
1998 ರಲ್ಲಿ ಮಮತಾ ಬ್ಯಾನರ್ಜಿ ಅವರು ಸ್ಥಾಪಿಸಿದ ಪಕ್ಷದ ಸಂಪೂರ್ಣ ನಿಯಂತ್ರಣವನ್ನು ತಮ್ಮ ಕೈಗೆ ತೆಗೆದುಕೊಳ್ಳಲು ಈ ಬಂಡಾಯದ ಮೂಲಕ ವ್ಯವಸ್ಥಿತ ಪ್ರಯತ್ನ ನಡೆದಿದೆ. ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಧ್ವನಿ ಮತದ ಮೂಲಕ ಶಾಸಕ ಅರೂಪ್ ರಾಯ್ ಅವರನ್ನು ನೂತನ ಪಕ್ಷದ ಅಧ್ಯಕ್ಷರನ್ನಾಗಿ ಬಂಡಾಯ ಬಣ ಆಯ್ಕೆ ಮಾಡಿದೆ. ಹೊಸ ಸಂರಚನೆಯಲ್ಲಿ ಹಿರಿಯ ನಾಯಕರಿಗೆ ತಕ್ಷಣವೇ ಪ್ರಮುಖ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದೆ:
ಅಧ್ಯಕ್ಷರು: ಅರೂಪ್ ರಾಯ್
ಉಪಾಧ್ಯಕ್ಷರು: ಫಿರ್ಹಾದ್ ಹಕೀಮ್, ಅರೂಪ್ ಬಿಸ್ವಾಸ್, ರಥಿನ್ ಘೋಷ್ ಮತ್ತು ಸಬಿನಾ ಯಾಸ್ಮಿನ್
ಪ್ರಧಾನ ಕಾರ್ಯದರ್ಶಿಗಳು: ರಿತಬ್ರತಾ ಬ್ಯಾನರ್ಜಿ, ಜಾವೇದ್ ಖಾನ್ ಮತ್ತು ಸಂದೀಪನ್ ಸಹಾ
ಖಜಾಂಚಿ: ಅಕ್ರುಜ್ಜಮಾನ್ ಅನ್ಸಾರಿ
“ಟಿಎಂಸಿ ನಾಯಕರು ಮತ್ತು ಸದಸ್ಯರ ವಿಶೇಷ ಸಭೆಯು ಅರೂಪ್ ರಾಯ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದೆ. ನಾವೇ ಅಸಲಿ ಟಿಎಂಸಿ. ಈ ಪ್ರಕ್ರಿಯೆಗಳೆಲ್ಲವೂ ಪಕ್ಷದ ಸಂವಿಧಾನದಂತೆಯೇ ನಡೆದಿವೆ. ಈ ಕುರಿತು ನಾವು ಶೀಘ್ರದಲ್ಲೇ ಕೇಂದ್ರ ಚುನಾವಣಾ ಆಯೋಗಕ್ಕೆ (EC) ಔಪಚಾರಿಕವಾಗಿ ಮಾಹಿತಿ ನೀಡಲಿದ್ದೇವೆ. ತಪ್ಪು ಯಾವುದು, ಸರಿ ಯಾವುದು ಎಂಬುದನ್ನು ಆಯೋಗವೇ ನಿರ್ಧರಿಸಲಿ. ಶೀಘ್ರದಲ್ಲೇ ಜಿಲ್ಲಾ ಸಮಿತಿಗಳು, ರಾಜ್ಯ ಘಟಕ ಮತ್ತು ವಕ್ತಾರರ ಸಮಿತಿಯನ್ನು ರಚಿಸುತ್ತೇವೆ. ಒಂದು ವೇಳೆ ಮಮತಾ ಬ್ಯಾನರ್ಜಿ ಅವರಿಗೆ ಪಕ್ಷದ ಮುಖ್ಯ ಸಲಹೆಗಾರ್ತಿಯಾಗಲು ಇಷ್ಟವಿದ್ದರೆ, ಅವರಿಗೆ ನಮ್ಮ ಸದಾ ಸ್ವಾಗತವಿದೆ,” ಎಂದು ಸಭೆಯ ಬಳಿಕ ರಿತಬ್ರತಾ ಬ್ಯಾನರ್ಜಿ ತಿಳಿಸಿದ್ದಾರೆ.
ಮಮತಾ, ಅಭಿಷೇಕ್ ಚಿತ್ರಗಳೇ ಇಲ್ಲ…
ಬಂಡಾಯಗಾರರ ಈ ಸಭೆಯಲ್ಲಿ ತೃಣಮೂಲ ಕಾಂಗ್ರೆಸ್‌ನ ಅಧಿಕೃತ ಪಕ್ಷದ ಲಾಂಛನ (ಚಿಹ್ನೆ) ಪ್ರಮುಖವಾಗಿ ಪ್ರದರ್ಶಿಸಲ್ಪಟ್ಟಿತ್ತಾದರೂ, ಪಕ್ಷದ ಸರ್ವೋಚ್ಚ ನಾಯಕಿ ಮಮತಾ ಬ್ಯಾನರ್ಜಿ ಹಾಗೂ ಅವರ ಸೋದರಳಿಯ, ಸಂಸದ ಅಭಿಷೇಕ ಬ್ಯಾನರ್ಜಿ ಅವರ ಯಾವುದೇ ಪೋಸ್ಟರ್‌ಗಳು, ಚಿತ್ರಗಳು ಇರಲಿಲ್ಲ. ಪಕ್ಷದೊಳಗೆ ಸೃಷ್ಟಿಯಾಗಿರುವ “ಸಾಂವಿಧಾನಿಕ ಬಿಕ್ಕಟ್ಟಿಗೆ” ಪ್ರತಿಕ್ರಿಯೆಯಾಗಿ ತಾವು ಈ ನಿರ್ಧಾರ ಕೈಗೊಂಡಿರುವುದಾಗಿ ಬಂಡಾಯ ನಾಯಕರು ಸಮರ್ಥಿಸಿಕೊಂಡಿದ್ದಾರೆ. ಪಕ್ಷದ ಸಂವಿಧಾನದ ಪ್ರಕಾರ ಪ್ರತಿ ಮೂರು ವರ್ಷಗಳಿಗೊಮ್ಮೆ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು ಪುನರ್ರಚಿಸಬೇಕು. ಆದರೆ ಕೊನೆಯದಾಗಿ 2022 ರ ಫೆಬ್ರವರಿಯಲ್ಲಿ ಸಮಿತಿ ರಚನೆಯಾಗಿತ್ತು. ಅದರ ಅವಧಿ ಮುಗಿದಿದ್ದರೂ ಹೊಸ ಸಮಿತಿ ರಚಿಸಿರಲಿಲ್ಲ ಎಂದು ರಿತಬ್ರತಾ ಬ್ಯಾನರ್ಜಿ ವಾದಿಸಿದ್ದಾರೆ.
ಮೊದಲ ಹಂತದಲ್ಲಿ ಅರೂಪ್ ರಾಯ್, ಫಿರ್ಹಾದ್ ಹಕೀಮ್, ಅರೂಪ್ ಬಿಸ್ವಾಸ್, ಬಿಪ್ಲಬ್ ಮಿತ್ರಾ, ಅಕ್ರುಜ್ಜಮಾನ್ ಅನ್ಸಾರಿ, ಸಬಿನಾ ಯಾಸ್ಮಿನ್, ಸಂದೀಪನ್ ಸಹಾ, ರಥಿನ್ ಘೋಷ್, ಜಾವೇದ್ ಖಾನ್ ಮತ್ತು ರಿತಬ್ರತಾ ಬ್ಯಾನರ್ಜಿ ಅವರನ್ನೊಳಗೊಂಡ ಸಮಿತಿ ರಚಿಸಿ, ಬಳಿಕ ಅದನ್ನು 30 ಸದಸ್ಯರಿಗೆ ವಿಸ್ತರಿಸಲಾಗಿದೆ. ಅಷ್ಟೇ ಅಲ್ಲದೆ, ಪಕ್ಷದ ಹಣಕಾಸು ವ್ಯವಹಾರಗಳನ್ನು ತನಿಖೆ ಮಾಡಲು ಪ್ರತ್ಯೇಕ ಆಡಿಟರ್ ಒಬ್ಬರನ್ನು ನೇಮಿಸುವುದಾಗಿಯೂ ಬಣ ಪ್ರಕಟಿಸಿದೆ.
ಅಧಿಕೃತ ಟಿಎಂಸಿಯಿಂದ ಶಿಸ್ತು ಕ್ರಮದ ಚಾಟಿ
ಇತ್ತ ಬಂಡಾಯ ಬಣವು ತನ್ನ ಪರ್ಯಾಯ ರಾಜಕೀಯ ಅಸ್ತಿತ್ವವನ್ನು ಗಟ್ಟಿಗೊಳಿಸುತ್ತಿದ್ದಂತೆ, ಎಚ್ಚೆತ್ತುಕೊಂಡಿರುವ ಅಧಿಕೃತ ತೃಣಮೂಲ ಕಾಂಗ್ರೆಸ್ ನಾಯಕತ್ವವು ಭಿನ್ನಮತೀಯರ ವಿರುದ್ಧ ಕಠಿಣ ಶಿಸ್ತು ಕ್ರಮಕ್ಕೆ ಮುಂದಾಗಿದೆ.
ಪಕ್ಷದ ಶಿಸ್ತುಪಾಲನಾ ಸಮಿತಿಯು “ಉದ್ದೇಶಪೂರ್ವಕವಾಗಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ” ಆರೋಪದ ಮೇಲೆ ಪ್ರಮುಖ ನಾಯಕರಾದ ಫಿರ್ಹಾದ್ ಹಕೀಮ್, ಅರೂಪ್ ಬಿಸ್ವಾಸ್, ಅರೂಪ್ ರಾಯ್, ಜಾವೇದ್ ಖಾನ್, ರಥಿನ್ ಘೋಷ್, ಬಿಪ್ಲವ ಮಿತ್ರಾ, ಸ್ನೇಹಾಶೀಶ ಚಕ್ರವರ್ತಿ, ಸಬಿನಾ ಯಾಸ್ಮಿನ್ ಸೇರಿದಂತೆ ಹಲವರಿಗೆ ತುರ್ತು ‘ಶೋ-ಕಾಸ್’ (ಕಾರಣ ಕೇಳಿ) ನೋಟಿಸ್ ಜಾರಿ ಮಾಡಿದೆ.
ಬಂಗಾಳ ರಾಜಕಾರಣದ ದೀದಿಯ ಸಾರ್ವಭೌಮತ್ವಕ್ಕೆ ಧಕ್ಕೆ ತಂದಿರುವ ಈ ರಾಜಕೀಯ ಭೂಕಂಪವು ಮುಂಬರುವ ದಿನಗಳಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಭವಿಷ್ಯ ಹಾಗೂ ಬಂಗಾಳದ ರಾಜಕೀಯ ಸಮೀಕರಣವನ್ನು ಯಾವ ದಿಕ್ಕಿಗೆ ಕೊಂಡೊಯ್ಯುತ್ತದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ