ಪುಣೆ: ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಗಾತಕಾರಿ ಬೆಳವಣಿಗೆಯಲ್ಲಿ, ಆರೋಪಿ ಸಿಯಾ ಗೋಯಲ್ ತಂದೆ ಪ್ರವೀಣ ಗೋಯಲ್ ಅವರಿಗೆ ಹೃದಯಾಘಾತವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದೇಶಾದ್ಯಂತ ಭಾರೀ ಸದ್ದು ಮಾಡುತ್ತಿರುವ ಈ ಹೈಪ್ರೊಫೈಲ್ ಪ್ರಕರಣದ ನಡುವೆಯೇ ಈ ಘಟನೆ ಸಂಭವಿಸಿದೆ.
ಆಸ್ಪತ್ರೆಯಿಂದಲೇ ಪುಣೆ ಮೂಲದ ಸುದ್ದಿ ಸಂಸ್ಥೆ ‘ನ್ಯೂಸ್ಡಾಟ್ಜ್’ ಜೊತೆ ಮಾತನಾಡಿದ ಪ್ರವೀಣ ಗೋಯಲ್ ಅವರು, ಕೇತನ್ ಸಾವಿನಿಂದ ತಮ್ಮ ಕುಟುಂಬ ಸಂಪೂರ್ಣವಾಗಿ ಧೃತಿಗೆಟ್ಟಿದೆ ಎಂದು ಹೇಳಿದ್ದಾರೆ. ಇದೇ ವೇಳೆ, ಉದಯಪುರದಲ್ಲಿ ಸಿಯಾ ಮತ್ತು ಕೇತನ್ ಅದ್ಧೂರಿ ವಿವಾಹಕ್ಕೆ ಸಿದ್ಧತೆ ನಡೆದಿತ್ತು ಎಂಬ ವರದಿಗಳನ್ನು ಅವರು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
“ಯಾವುದೇ ವಿಮಾನ ಬುಕಿಂಗ್ ಮಾಡಿರಲಿಲ್ಲ. ಉದಯಪುರದ ಹೋಟೆಲ್ ಬುಕಿಂಗ್ ಸೇರಿದಂತೆ ಇಡೀ ಮದುವೆಗೆ 3 ರಿಂದ 5 ಕೋಟಿ ರೂಪಾಯಿ ವೆಚ್ಚವಾಗುತ್ತಿತ್ತು” ಎಂದು ಹೇಳುವ ಮೂಲಕ ಮದುವೆ ಕುರಿತು ಹರಡಿರುವ ವದಂತಿಗಳಿಗೆ ಅವರು ತೆರೆ ಎಳೆದಿದ್ದಾರೆ.
‘ಅವನು ನಮ್ಮ ಸ್ವಂತ ಮಗನಂತಿದ್ದ’ ಎಂದು ಕಣ್ಣೀರಿಟ್ಟ ಸಿಯಾ ತಂದೆ
ಕೇತನ್ ಅಗರ್ವಾಲ್ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ ಪ್ರವೀಣ, ತಮ್ಮ ಕುಟುಂಬ ಕೇತನ್ನನ್ನು ಸ್ವಂತ ಮಗನಂತೆ ನೋಡಿಕೊಳ್ಳುತ್ತಿತ್ತು ಎಂದು ಹೇಳಿ ಭಾವುಕರಾದರು. “ನಡೆದಿರುವುದು ಅತ್ಯಂತ ದುರದೃಷ್ಟಕರ ಮತ್ತು ದುರಂತದ ಘಟನೆ. ಇದನ್ನು ನಮ್ಮಿಂದ ಇಂದಿಗೂ ನಂಬಲು ಸಾಧ್ಯವಾಗುತ್ತಿಲ್ಲ. ಅವರು ತಮ್ಮ ಮಗನನ್ನು ಕಳೆದುಕೊಂಡಿದ್ದಾರೆ, ಆದರೆ ಆತ ನಮಗೂ ಮಗನೇ ಆಗಿದ್ದ. ನಾವು ಅವನನ್ನು ತುಂಬಾ ಪ್ರೀತಿಸುತ್ತಿದ್ದೆವು. ಅವನ ಮೇಲೆ ನನಗೆ ಎಷ್ಟು ಬಾಂಧವ್ಯ ಬೆಳೆದಿತ್ತೆಂದರೆ, ಅವನು ನಮ್ಮದೇ ಸ್ವಂತ ಮಗ ಎಂಬ ಭಾವನೆ ಮೂಡಿತ್ತು” ಎಂದು ಹೇಳಿದ್ದಾರೆ.
“ನಾವು ಇಷ್ಟು ಪ್ರೀತಿಪಾತ್ರ, ಭರವಸೆಯ ಮತ್ತು ಒಳ್ಳೆಯ ಹುಡುಗನನ್ನು ಕಳೆದುಕೊಂಡಿದ್ದೇವೆ. ಇದರಿಂದ ನಮಗೆ ತೀವ್ರ ಆಘಾತವಾಗಿದೆ. ಇದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ. ಭವಿಷ್ಯದ ಬಗ್ಗೆ ನಾವು ಸಾಕಷ್ಟು ಒಳ್ಳೆಯ ಕನಸುಗಳನ್ನು ಕಂಡಿದ್ದೆವು” ಎಂದು ಅವರು ಹೇಳಿದರು.
ಮದುವೆಯ ಬಗ್ಗೆ ಸಿಯಾಗೆ ಯಾವುದೇ ಅಸಮಾಧಾನ ಇರಲಿಲ್ಲ ಎಂದು ಪ್ರತಿಪಾದಿಸಿದ ಅವರು, “ಮದುವೆ ನಿಶ್ಚಯವಾದಾಗಿನಿಂದಲೂ ಅವಳು ಯಾವಾಗಲೂ ಸಂತೋಷವಾಗಿಯೇ ಇದ್ದಳು. ಸದಾ ಕೇತನ್ ಬಗ್ಗೆಯೇ ಮಾತನಾಡುತ್ತಿದ್ದಳು. ಒಂದು ವೇಳೆ ಅವರ (ಕೇತನ್ ಪೋಷಕರು) ಕಡೆಯಿಂದ ಏನಾದರೂ ಸಮಸ್ಯೆಯಾಗುತ್ತಿದೆ ಎಂಬ ಸಣ್ಣ ಸುಳಿವು ಸಿಕ್ಕಿದ್ದರೂ, ನಾವು ಅವರೊಂದಿಗೆ ಮಾತನಾಡುತ್ತಿದ್ದೆವು” ಎಂದು ತಿಳಿಸಿದ್ದಾರೆ.
ತಮ್ಮ ಮಗಳು ಸೇರಿದಂತೆ ಆರೋಪಿಗಳಿಗೆ ಸಾಧ್ಯವಾದಷ್ಟು ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ, ರಿಯಲ್ ಎಸ್ಟೇಟ್ ಏಜೆಂಟ್ ಕೇತನ್ ಅಗರ್ವಾಲ್ ಅವರನ್ನು ಕೊಲೆ ಮಾಡಿದ ಸ್ಥಳದಿಂದಲೇ ಅವರನ್ನು ಕೆಳಗೆ ಎಸೆಯಬೇಕು ಎಂದು ಸಿಯಾ ಗೋಯಲ್ ತಂದೆ ಹೇಳಿದ್ದಾರೆ.
‘ನನ್ನ ಮಗಳು ತಪ್ಪಿತಸ್ಥಳಾದರೆ ಗಲ್ಲಿಗೇರಿಸಿ’: ತಾಯಿ ಆಕ್ರೋಶ
ಇದೇ ವೇಳೆ, ಸಿಯಾ ಗೋಯಲ್ ತಾಯಿ ಪೂಜಾ ಗೋಯಲ್ ಹೇಳಿಕೆಯೊಂದನ್ನು ನೀಡಿದ್ದಾರೆ. ನ್ಯಾಯಾಲಯದಲ್ಲಿ ಮಗಳ ಮೇಲಿನ ಆರೋಪ ಸಾಬೀತಾದರೆ ಅವಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ. “ಒಂದು ವೇಳೆ ನನ್ನ ಮಗಳು ತಪ್ಪಿತಸ್ಥಳಾಗಿದ್ದರೆ, ಅವಳಿಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕು. ಅವಳು ತಪ್ಪು ಮಾಡಿದ್ದರೆ ಅವಳನ್ನು ಗಲ್ಲಿಗೇರಿಸಿ; ಒಬ್ಬ ತಾಯಿಯಾಗಿ ನಾನು ಈ ಮಾತನ್ನು ಹೇಳುತ್ತಿದ್ದೇನೆ” ಎಂದು ಪೂಜಾ ಗೋಯಲ್ ಆಕ್ರೋಶ ಹೊರಹಾಕಿದ್ದಾರೆ.
ಪ್ರಕರಣದ ಹಿನ್ನೆಲೆ:
ಜೂನ್ 18 ರಂದು ಪುಣೆ ಸಮೀಪದ ಲೋಹಗಢ ಕೋಟೆಯಲ್ಲಿ ಉದ್ಯಮಿ ಕೇತನ್ ಅಗರ್ವಾಲ್ ಅವರನ್ನು ಪ್ರಪಾತಕ್ಕೆ ತಳ್ಳಿ ಕೊಲೆ ಮಾಡಿದ ಆರೋಪದ ಮೇಲೆ ಪುಣೆ ಗ್ರಾಮಾಂತರ ಪೊಲೀಸರು ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಎನ್ನಲಾದ ಚೇತನ್ ಚೌಧರಿಯನ್ನು ಇತ್ತೀಚೆಗಷ್ಟೇ ಬಂಧಿಸಿದ್ದಾರೆ. ಇಬ್ಬರೂ ಸೇರಿ ಕೇತನ್ನನ್ನು ಕೊಲ್ಲಲು ಸಂಚು ರೂಪಿಸಿದ್ದರು ಎಂದು ತನಿಖಾಧಿಕಾರಿಗಳು ಆರೋಪಿಸಿದ್ದು, ಸದ್ಯ ಪ್ರಕರಣದ ತನಿಖೆ ನಡೆಯುತ್ತಿದೆ.


ನಿಮ್ಮ ಕಾಮೆಂಟ್ ಬರೆಯಿರಿ