ವಿಡಿಯೋ | ಬೆಂಗಳೂರು : ಹೆಲ್ಮೆಟ್ ಇಲ್ಲದೆ ಹೋಗುತ್ತಿದ್ದ ಬೈಕ್ ಸವಾರನ ತಲೆ ಮೇಲೆ ಬಿದ್ದ ಮರದ ಕೊಂಬೆ ; ಗಂಭೀರ ಗಾಯ

ಬೆಂಗಳೂರು: ಮಹಾನಗರದ ರಾಜಾಜಿನಗರದಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ, ರಸ್ತೆಯ ಬದಿಯ ಒಣ ಮರದ ಬೃಹತ್ ಕೊಂಬೆಯೊಂದು ಬೈಕ್ ಸವಾರನ ತಲೆಯ ಮೇಲೆ ಬಿದ್ದ ಪರಿಣಾಮ 52 ವರ್ಷದ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಈ ಘಟನೆ ಬುಧವಾರ ಸಂಜೆ ನಡೆದಿದೆಎಂದು ಹೇಳಲಾಗಿದೆ.
ಈ ಘಟನೆ ರಾಮಮಂದಿರ ರಸ್ತೆಯಲ್ಲಿ ನಡೆದಿದ್ದು, ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸಂಪೂರ್ಣ ದೃಶ್ಯ ಸೆರೆಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಗಾಯಗೊಂಡ ಬೈಕ್ ಸವಾರ ಸತೀಶ ಅವರು ಅಪಘಾತ ಸಂಭವಿಸಿದ ವೇಳೆ ಹೆಲ್ಮೆಟ್ ಧರಿಸಿರಲಿಲ್ಲ.
ಬಲವಾದ ಗಾಳಿಯಿಂದಾಗಿ ಮರದಿಂದ ತುಂಡಾದ ಒಣ ಹಾಗೂ ಬೃಹತ್ ಕೊಂಬೆ  ಬೈಕ್‌ನಲ್ಲಿ ಹೋಗುತ್ತಿದ್ದ ಸತೀಶ ಅವರ   ತಲೆಯ ಮೇಲೆ ಬಿದ್ದಿದೆ. ಅದು ಬಿದ್ದ ರಭಸ ಹಾಗೂ ಹೊಡೆತಕ್ಕೆ ಅವರು ಬೈಕ್‌ನ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಬಿದ್ದಿದ್ದಾರೆ.
ಅಪಘಾತವನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ಕೂಡಲೇ ಗಾಯಾಳುವಿನ ನೆರವಿಗೆ ಧಾವಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಯಶವಂತಪುರದ ಮಣಿಪಾಲ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಲಭ್ಯ ಮಾಹಿತಿ ಪ್ರಕಾರ, ಸತೀಶ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.  ಹಾಗೂ ಅವರು ಚೇತರಿಸಿಕೊಳ್ಳುತ್ತಿದ್ದಾರೆ.
ಸಿಸಿಟಿವಿಯಲ್ಲಿ ಸೆರೆಯಾದ ಈ ಘಟನೆ ಸ್ಥಳೀಯ ನಿವಾಸಿಗಳನ್ನು ಬೆಚ್ಚಿಬೀಳಿಸಿದ್ದು, ರಸ್ತೆ ಬದಿಯ ಮರಗಳ ನಿರ್ವಹಣೆ ಕುರಿತು ಗಂಭೀರ ಆತಂಕಕ್ಕೆ ಕಾರಣವಾಗಿದೆ.
ಸ್ಥಳೀಯರ ಆರೋಪದಂತೆ, ಈ ಪ್ರದೇಶದಲ್ಲಿನ ಒಣ ಹಾಗೂ ಅಪಾಯಕಾರಿಯಾದ ಮರದ ಕೊಂಬೆಗಳ ಬಗ್ಗೆ ಅರಣ್ಯ ಇಲಾಖೆ ಹಾಗೂ ಸಂಬಂಧಪಟ್ಟ ನಾಗರಿಕ ಸಂಸ್ಥೆಗಳಿಗೆ ಹಲವು ಬಾರಿ ದೂರು ನೀಡಲಾಗಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಸಂಭವಿಸಬಹುದಾದ ಅಪಾಯದ ಕುರಿತು ಮುಂಚಿತವಾಗಿ ಎಚ್ಚರಿಕೆ ನೀಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದಲೇ ಈ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement