ಸ್ಟಾಲಿನ್‌ಗೆ ಮತ್ತೊಂದು ರಾಜಕೀಯ ಹಿನ್ನಡೆ ; 9 ವರ್ಷಗಳ ಬಳಿಕ ಡಿಎಂಕೆ ಮೈತ್ರಿ ತೊರೆದ ಎಂಡಿಎಂಕೆ ಪಕ್ಷ

ಚೆನ್ನೈ: ತಮಿಳುನಾಡಿನ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ, ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ (ಎಂಡಿಎಂಕೆ) ಪಕ್ಷವು ಡಿಎಂಕೆ ಜೊತೆಗಿನ ತನ್ನ ಒಂಬತ್ತು ವರ್ಷಗಳ ಮೈತ್ರಿಯನ್ನು ಅಧಿಕೃತವಾಗಿ ಅಂತ್ಯಗೊಳಿಸಿದೆ.  ಈ ನಿರ್ಧಾರವನ್ನು ಶನಿವಾರ ನಡೆದ ಪಕ್ಷದ ಸಾಮಾನ್ಯ ಮಂಡಳಿ ಸಭೆಯಲ್ಲಿ ಕೈಗೊಳ್ಳಲಾಯಿತು.
ಆದರೆ ಆಡಳಿತಾರೂಢ ಟಿವಿಕೆ ನೇತೃತ್ವದ ಮೈತ್ರಿಕೂಟಕ್ಕೆ ಸೇರ್ಪಡೆಯ ಬಗ್ಗೆ ಪಕ್ಷ ಇವರೆಗೆ ಏನೂ ಹೇಳಿಲ್ಲ. ಸಭೆಯಲ್ಲಿ ಅಂಗೀಕರಿಸಿದ ನಿರ್ಣಯಗಳಲ್ಲಿ ಮುಖ್ಯಮಂತ್ರಿ ವಿಜಯ ನೇತೃತ್ವದ ಸರ್ಕಾರವನ್ನು ಎಂಡಿಎಂಕೆ ಸ್ವಾಗತಿಸಿದ್ದು, ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದು ಹಾಗೂ ಮೆಕೆದಾಟು ಅಣೆಕಟ್ಟು ಯೋಜನೆ ಸೇರಿದಂತೆ ತಮಿಳುನಾಡಿನ ಹಕ್ಕುಗಳ ರಕ್ಷಣೆಯಂತಹ ಪ್ರಮುಖ ಚುನಾವಣಾ ಭರವಸೆಗಳ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಅದು ಸರ್ಕಾರವನ್ನು ಒತ್ತಾಯಿಸಿದೆ.
ಆದರೆ, ಟಿವಿಕೆ ಮೈತ್ರಿಕೂಟಕ್ಕೆ ಸೇರುವ ಬಗ್ಗೆ ನಿರ್ಣಯಗಳಲ್ಲಿ ಯಾವುದೇ ಸ್ಪಷ್ಟ ಉಲ್ಲೇಖ ಮಾಡಲಾಗಿಲ್ಲ. ಆದರೂ, ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಎಂಡಿಎಂಕೆ ಪಕ್ಷವು ಟಿವಿಕೆ ಮೈತ್ರಿಕೂಟದತ್ತ ಸಾಗುತ್ತಿರುವ ಸ್ಪಷ್ಟ ಸೂಚನೆಗಳನ್ನು ನೀಡಿದಂತೆ ಅನ್ನಿಸುತ್ತಿವೆ.
ಡಿಎಂಕೆ ನೇತೃತ್ವದ ಮೈತ್ರಿಕೂಟದಿಂದ ಹೊರಬರಲು ಕಾರಣ ನೀಡಿರುವ ಎಂಡಿಎಂಕೆ, ಪಕ್ಷವನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆದಿದ್ದು, “ಎಐಎಡಿಎಂಕೆ ಮತ್ತೆ ಸರ್ಕಾರ ರಚಿಸುವಂತೆ ಮಾಡುವ ಗುಪ್ತ ಸಂಚು” ರೂಪಿಸಲಾಗಿದೆ ಎಂದು ಆರೋಪಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಡಿಎಂಕೆ ಮೈತ್ರಿಯಲ್ಲಿ ಮುಂದುವರಿಯುವುದು ಅಸಾಧ್ಯವಾಗಿತ್ತು ಎಂದು ಪಕ್ಷ ಹೇಳಿದೆ.
ಆದರೆ, ಈ ಆರೋಪವನ್ನು ಡಿಎಂಕೆ ತಳ್ಳಿಹಾಕಿದೆ. “ಎಂಡಿಎಂಕೆಗೆ ವಿಧಾನಸಭೆ ಹಾಗೂ ಸಂಸತ್ತಿನಲ್ಲಿ ಪ್ರಾತಿನಿಧ್ಯ ದೊರಕುವಂತೆ ಮಾಡಿದ್ದು ಡಿಎಂಕೆಯೇ,” ಎಂದು ಡಿಎಂಕೆ ಮುಖಂಡ ಸಯ್ಯದ್ ಹಫೀಜುಲ್ಲಾ ಹೇಳಿದ್ದಾರೆ. “ವೈಕೊ ಅವರ ಪುತ್ರ ದುರೈ ವೈಕೊ ಅವರನ್ನು ಪಕ್ಷದಲ್ಲಿ ಮುನ್ನೆಲೆಗೆ ತಂದಿರುವುದೇ ಎಂಡಿಎಂಕೆ ದುರ್ಬಲವಾಗಲು ಕಾರಣ. ಇದು ರಾಜವಂಶ ರಾಜಕಾರಣದ ವಿರುದ್ಧ ವೈಕೊ ನಡೆಸಿದ್ದ ದೀರ್ಘಕಾಲದ ಅಭಿಯಾನಕ್ಕೂ ವಿರುದ್ಧವಾಗಿದೆ,” ಎಂದು ಅವರು ಟೀಕಿಸಿದ್ದಾರೆ.
ಎಂಡಿಎಂಕೆಯ ಈ ನಿರ್ಧಾರ ಡಿಎಂಕೆಗೆ ಹಿನ್ನಡೆಯಾಗಿದ್ದರೂ, ಮತ್ತೊಂದೆಡೆ ಎಂಡಿಎಂಕೆಗೂ ರಾಜಕೀಯ ಹೊಡೆತವಾಗಿದೆ. 2026ರ ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆಯ ‘ಉದಯಿಸುತ್ತಿರುವ ಸೂರ್ಯ’ ಚಿಹ್ನೆಯಲ್ಲಿ ಗೆದ್ದಿದ್ದ ಎಂಡಿಎಂಕೆಯ ಇಬ್ಬರು ಶಾಸಕರು ಸಾಮಾನ್ಯ ಮಂಡಳಿ ಸಭೆಯನ್ನು ಬಹಿಷ್ಕರಿಸಿದ್ದಾರೆ. ತಾವು ಡಿಎಂಕೆಯೊಂದಿಗೇ ಮುಂದುವರಿಯುವುದಾಗಿ ಅವರು ಈಗಾಗಲೇ ಸೂಚಿಸಿದ್ದಾರೆ. ಇದರಿಂದಾಗಿ, ಎಂಡಿಎಂಕೆ ಅಧಿಕೃತವಾಗಿ ಟಿವಿಕೆ ಮೈತ್ರಿಕೂಟಕ್ಕೆ ಸೇರಿದರೂ, ಸರ್ಕಾರದ ಶಾಸಕರ ಸಂಖ್ಯಾಬಲದಲ್ಲಿ ತಕ್ಷಣ ಯಾವುದೇ ಹೆಚ್ಚಳವಾಗುವುದಿಲ್ಲ. ಜೊತೆಗೆ, ಶಾಸಕರ ಸ್ಥಾನಗಳು ತೆರವಾಗದ ಕಾರಣ ಉಪಚುನಾವಣೆ ನಡೆಯುವ ಪರಿಸ್ಥಿತಿಯೂ ಇಲ್ಲ.
ಎಂಡಿಎಂಕೆ ಪಕ್ಷವು ಡಿಎಂಕೆ ಮೈತ್ರಿಯಿಂದ ಹೊರಬರಲಿದೆ ಎಂಬ ಸೂಚನೆಗಳು ಈ ಹಿಂದೆಲೇ ಕಂಡುಬಂದಿದ್ದವು. ಟಿವಿಕೆ ಸರ್ಕಾರದ ವಿಶ್ವಾಸಮತ ಯಾಚನೆ ವೇಳೆ ಪಕ್ಷ ಮತದಾನದಿಂದ ದೂರ ಉಳಿದಿತ್ತು. ಬಳಿಕ ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ವೈಕೊ, ಸಂಸದ ಹಾಗೂ ಅವರ ಪುತ್ರ ದುರೈ ವೈಕೊ, ಮುಖ್ಯಮಂತ್ರಿ ವಿಜಯ ಮತ್ತು ಟಿವಿಕೆಯ ಹಿರಿಯ ನಾಯಕರೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದರು.
ಎಂಡಿಎಂಕೆಯ ನಿರ್ಗಮನದೊಂದಿಗೆ ಕಾಂಗ್ರೆಸ್, ವಿಡಿಸಿಕೆ (ವಿಡುತಲೈ ಚಿರುತೈಗಲ್ ಕಚ್ಚಿ), ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಈಗ ಡಿಎಂಕೆ ಮೈತ್ರಿಕೂಟದಿಂದ ಹೊರಬಂದಿವೆ. ಕಾಂಗ್ರೆಸ್ ಸರ್ಕಾರದಲ್ಲಿ ಎರಡು ಸಚಿವ ಸ್ಥಾನಗಳನ್ನು ಪಡೆದಿದ್ದರೆ, ವಿಡಿಸಿಕೆ ಮತ್ತು ಐಯುಎಂಎಲ್ ತಲಾ ಒಂದು ಸಚಿವ ಸ್ಥಾನವನ್ನು ಹೊಂದಿವೆ. ಸಿಪಿಐ ಹಾಗೂ ಸಿಪಿಎಂ ಪಕ್ಷಗಳು ಅಲ್ಪಮತದ ಟಿವಿಕೆ ಸರ್ಕಾರಕ್ಕೆ ಹೊರಗಿನಿಂದಲೇ ಬೆಂಬಲ ಮುಂದುವರಿಸಿವೆ.
ವೈಕೊ ಒಮ್ಮೆ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ರಾಜಕೀಯ ಉತ್ತರಾಧಿಕಾರಿಯೆಂದೇ ಪರಿಗಣಿಸಲ್ಪಟ್ಟಿದ್ದರು. ಆದರೆ 1993ರಲ್ಲಿ ಅವರ ಜನಪ್ರಿಯತೆ ವೇಗವಾಗಿ ಹೆಚ್ಚುತ್ತಿದ್ದ ಹಿನ್ನೆಲೆಯಲ್ಲಿ ಹಾಗೂ ಕರುಣಾನಿಧಿ ಅವರ ಪುತ್ರ ಎಂ.ಕೆ. ಸ್ಟಾಲಿನ್ ಅವರಿಗೆ ರಾಜಕೀಯ ಸವಾಲಾಗಬಹುದು ಎಂಬ ಭಾವನೆಯ ನಡುವೆ ಅವರನ್ನು ಡಿಎಂಕೆಯಿಂದ ಉಚ್ಚಾಟಿಸಲಾಗಿತ್ತು.
ಅದಾದ ಬಳಿಕ ವೈಕೊ ಮತ್ತು ಡಿಎಂಕೆ ನಡುವಿನ ಸಂಬಂಧ ಹಲವು ಬಾರಿ ಮೈತ್ರಿ ಹಾಗೂ ಬೇರ್ಪಡುವಿಕೆಯ ಮೂಲಕ ಏರಿಳಿತ ಕಂಡಿದೆ. ಇದೀಗ ಮತ್ತೊಮ್ಮೆ ವೈಕೊ ತಮ್ಮ ಎಂಡಿಎಂಕೆಯನ್ನು ಡಿಎಂಕೆ ಮೈತ್ರಿಯಿಂದ ಹೊರತರುವ ಮೂಲಕ ತಮಿಳುನಾಡಿನ ರಾಜಕೀಯದಲ್ಲಿ ಮತ್ತೊಂದು ಸಮೀಕರಣಕ್ಕೆ ನಾಂದಿ ಹಾಡಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement