ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಭಾನುವಾರ ಬೆಳಿಗ್ಗೆಯಿಂದ ರಾತ್ರಿಯವರೆಗೆ ಸುರಿದ ಧಾರಾಕಾರ ಮಳೆ ಸುರಿದಿದೆ. ವಿಶೇಷವಾಗಿ ಸಿದ್ದಾಪುರ, ಹೊನ್ನಾವರ, ಕುಮಟಾ ತಾಲೂಕಿನಲ್ಲಿ ಭಾರಿ ಮಳೆಯಾಗಿದ್ದು, ಕುಮಟಾ ತಾಲೂಕಿನ ಗೋಕರ್ಣ ಭಾಗದಲ್ಲಿ ಸತತ ನಾಲ್ಕು ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ ಪುರಾಣ ಪ್ರಸಿದ್ಧ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಗರ್ಭಗುಡಿಗೂ ನೀರು ಪ್ರವೇಶಿಸಿದೆ ಎಂದು ವರದಿಯಾಗಿದೆ.
ಸಮುದ್ರದ ಅಬ್ಬರದಿಂದ ಸಂಗಮ ನಾಲಾ ಕಡಲು ಸೇರುವ ಜಾಗದಲ್ಲಿ ಮಳೆ ನೀರು ಸಮುದ್ರ ಸೇರಲಾಗದೆ ಹಿಮ್ಮುಖವಾಗಿ ಹರಿದಿದೆ. ಪರಿಣಾಮವಾಗಿ, ಸೋಮಸೂತ್ರ ನಾಲದಿಂದ ನೀರು ಸಂಗಮಕ್ಕೆ ಹೋಗಲು ಸಾಧ್ಯವಾಗದ ಕಾರಣ ನೀರು ನಿಂತು ಗರ್ಭಗುಡಿ ಪ್ರವೇಶಿಸಿದೆ.
ದೇವಸ್ಥಾನದ ಸಿಬ್ಬಂದಿ ಪಂಪ್ ಸೆಟ್ ಬಳಸಿ ನೀರನ್ನು ಹೊರಹಾಕಿದ್ದಾರೆ ಎನ್ನಲಾಗಿದೆ. ಅಲ್ಲದೆ, ಸೋಮಸೂತ್ರ ನಾಲಾಕ್ಕೆ ಗೇಟ್ ಅಳವಡಿಸಿ ಹೊರಗಿನ ಹೊಲಸು ನೀರು ಒಳಬರದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಮಳೆಯ ರಭಸಕ್ಕೆ ಗೋಕರ್ಣದ ಮಹಾಗಣಪತಿ ಮುಂಭಾಗದ ರಸ್ತೆ ಮತ್ತು ಮೇಲಿನಕೇರಿ ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು, ಸಂಚಾರಕ್ಕೆ ತೊಂದರೆಯಾಗಿತ್ತು. ಚರಂಡಿಯ ಹೂಳು ತೆಗೆಯದ ಕಾರಣ ಈ ಸಮಸ್ಯೆ ಉಂಟಾಗಿದೆ ಎಂಬ ಆರೋಪ ಕೇಳಿಬಂದಿದೆ.
ಕುಮಟಾ ತಾಲೂಕಿನ ವಾಲಗಳ್ಳಿ ಬಳಿಯ ಕುಮಟಾ-ಸಿದ್ದಾಪುರ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ನೀರು ನಿಂತು ಹೊಳೆಯಂತಾಗಿ ರಸ್ತೆಯಲ್ಲಿ ವಾಹನ ಸಂಚಾರ ದುಸ್ತರವಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ