ವಿಕ್ಟೋರಿಯಾ (ಸೆಶೆಲ್ಸ್) : ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸೆಶೆಲ್ಸ್ ರಾಷ್ಟ್ರದ ರಾಜಧಾನಿ ವಿಕ್ಟೋರಿಯಾಗೆ ಆಗಮಿಸಿದ ಬಳಿಕ, ಶನಿವಾರ ಸೆಶೆಲ್ಸ್ ಅಧ್ಯಕ್ಷ ಪ್ಯಾಟ್ರಿಕ್ ಹರ್ಮಿನಿ ಅವರ ಜೊತೆ ವಿಕ್ಟೋರಿಯಾದಲ್ಲಿರುವ ರಾಷ್ಟ್ರೀಯ ಬೋಟಾನಿಕಲ್ ಗಾರ್ಡನ್‌ಗೆ ಭೇಟಿ ನೀಡಿದರು. ಈ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಮೋದಿ ದೊಡ್ಡ ಆಮೆಗಳ (ಜೈಂಟ್ ಟರ್ಟಾಯ್ಸ್) ಗೆ ಆಹಾರ ನೀಡುತ್ತಿರುವುದು ಗಮನ ಸೆಳೆಯಿತು. ಅದರಲ್ಲಿ ವಿಶ್ವದ ಅತ್ಯಂತ ವಯಸ್ಸಾದ ಭೂಪ್ರಾಣಿ ಎಂದು ಗುರುತಿಸಲ್ಪಟ್ಟಿರುವ ಸುಮಾರು 194 ವರ್ಷ ವಯಸ್ಸಿನ “ಜೋನಾಥನ್” ಎಂಬ ಪ್ರಸಿದ್ಧ ಆಮೆಗೂ ಅವರು ಆಹಾರ ನೀಡಿದರು.
ಸೆಶೆಲ್ಸ್ ನ್ಯಾಷನಲ್ ಬೋಟಾನಿಕಲ್ ಗಾರ್ಡನ್‌ನಲ್ಲಿರುವ ಈ ಸಂರಕ್ಷಣಾ ಪ್ರದೇಶದಲ್ಲಿ ಎರಡೂ ನಾಯಕರು ತಮ್ಮ ಭೇಟಿಯ ಸ್ಮರಣಾರ್ಥ ಸಸಿಯನ್ನು ನೆಟ್ಟರು. ಜೊತೆಗೆ ಅಲ್ಲಿನ ಸಂರಕ್ಷಣಾ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿ, ಆ ಸ್ಥಳದ ವಿಶಿಷ್ಟ ಸಸ್ಯ ಮತ್ತು ಪ್ರಾಣಿ ಜಾತಿಗಳ ಕುರಿತು ಮಾಹಿತಿ ಪಡೆದರು.
ಪ್ರಧಾನಿ ಮೋದಿ ಅವರು ಬಳಿಕ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹಂಚಿಕೊಂಡ ಸಂದೇಶದಲ್ಲಿ, “ಸೆಶೆಲ್ಸ್ ನ್ಯಾಷನಲ್ ಬೋಟಾನಿಕಲ್ ಗಾರ್ಡನ್‌ನ ಜೈಂಟ್ ಟರ್ಟಾಯ್ಸ್ ಎನ್ಕ್ಲೋಶರ್‌ಗೆ ಅಧ್ಯಕ್ಷ ಡಾ. ಪ್ಯಾಟ್ರಿಕ್ ಹೆರ್ಮಿನಿ ಅವರೊಂದಿಗೆ ಭೇಟಿ ನೀಡಿದೆವು. ಸೆಶೆಲ್ಸ್‌ಗೆ ಸ್ಥಳೀಯವಾದ ಅಲ್ಡಾಬ್ರಾ ದೊಡ್ಡ ಆಮಗಳು ಭೂಮಿಯ ಅತ್ಯಂತ ದೊಡ್ಡ ಹಾಗೂ ದೀರ್ಘಾಯುಷಿ ಜೀವಿಗಳಲ್ಲಿ ಒಂದಾಗಿವೆ. ಅವುಗಳಲ್ಲಿ ಕೆಲವು 200 ವರ್ಷಕ್ಕೂ ಹೆಚ್ಚು ಇತಿಹಾಸವನ್ನು ನೋಡಿವೆ. ಈ ಜೈಂಟ್ ಟರ್ಟಾಯ್ಸ್‌ಗಳು ಭಾರತ–ಸೆಶೆಲ್ಸ್ ಸ್ನೇಹಕ್ಕೂ ವಿಶೇಷ ಸಂಪರ್ಕ ಹೊಂದಿವೆ. 2014ರಲ್ಲಿ ಇವುಗಳಲ್ಲಿ ಎರಡು ಆಮೆಗಳು ಕೊಲ್ಕತ್ತಾದ ಅಲಿಪೋರ್ ಪ್ರಾಣಿ ಸಂಗ್ರಹಾಲಯಕ್ಕೆ ನೀಡಲಾಗಿತ್ತು. ನಂತರ ಕೆಲವನ್ನು ಹೈದರಾಬಾದ್ ಪ್ರಾಣಿ ಸಂಗ್ರಹಾಲಯಕ್ಕೂ ನೀಡಲಾಗಿದೆ,” ಎಂದು ತಿಳಿಸಿದ್ದಾರೆ.
ಈ ಭೇಟಿಯು ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಹಿನ್ನೆಲೆಯಲ್ಲಿ ಮಹತ್ವ ಪಡೆದಿದೆ. ಸೆಶೆಲ್ಸ್ ಸ್ವಾತಂತ್ರ್ಯದ 50ನೇ ವಾರ್ಷಿಕೋತ್ಸವ (ಗೋಲ್ಡನ್ ಜುಬಿಲಿ) ಆಚರಣೆಯಲ್ಲಿ ಪ್ರಧಾನಿ ಮೋದಿ ಅವರು ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಪ್ರಧಾನಿ ಮೋದಿ ಅವರ ಆಗಮನದ ವೇಳೆ ಅಧ್ಯಕ್ಷ ಪ್ಯಾಟ್ರಿಕ್ ಹರ್ಮಿನಿ ಸೇರಿದಂತೆ ಹಲವಾರು ಕ್ಯಾಬಿನೆಟ್ ಸಚಿವರು ಮತ್ತು ಹಿರಿಯ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲೇ ಸ್ವಾಗತ ಕೋರಿದರು. ಈ ಸ್ವಾಗತ ಸಮಾರಂಭದಲ್ಲಿ ಗುಜರಾತ್‌ನ ಕಚ್ ಭಾಗದ ಸಾಂಪ್ರದಾಯಿಕ ನೃತ್ಯವನ್ನೂ ಪ್ರದರ್ಶಿಸಲಾಯಿತು. ಪ್ರಧಾನಿ ಮೋದಿ ಅವರು ಸೆಶೆಲ್ಸ್‌ನಲ್ಲಿ ಭಾರತೀಯ ಸಮುದಾಯದವರನ್ನೂ ಭೇಟಿಯಾದರು.


ನಿಮ್ಮ ಕಾಮೆಂಟ್ ಬರೆಯಿರಿ