ನೈಜೀರಿಯಾ: ಒಂದೇ ಗ್ರಾಮದಲ್ಲಿ ಬೆಳೆದರೂ ಇಲ್ಲಿ ಗಂಸರು ಮತ್ತು ಹೆಂಗಸರು ಒಂದೇ ಭಾಷೆಯ ಎರಡು ವಿಭಿನ್ನ ರೂಪಗಳನ್ನು ಮಾತನಾಡುತ್ತಾರೆ ಎಂದರೆ ಅಚ್ಚರಿಯಾಗಬಹುದು. ದಕ್ಷಿಣ ನೈಜೀರಿಯಾದ ಉಬಾಂಗ್ (Ubang) ಗ್ರಾಮದಲ್ಲಿ ಪೀಳಿಗೆಯಿಂದ ಪೀಳಿಗೆಗೆ ಸಾಗಿಬಂದಿರುವ ಈ ವಿಶಿಷ್ಟ ಭಾಷಾ ಸಂಪ್ರದಾಯ ಇದೀಗ ಜಗತ್ತಿನ ಭಾಷಾ ತಜ್ಞರ ಗಮನ ಸೆಳೆದಿದೆ.
ಉಬಾಂಗ್ ಗ್ರಾಮದಲ್ಲಿ ಗಂಡಸರು ಮತ್ತು ಹೆಂಗಸರು ದಿನ ನಿತ್ಯ ಉಪಯೋಗಿಸುವ ಹಲವು ವಸ್ತುಗಳಿಗೆ ಬೇರೆಬೇರೆ ಪದಗಳನ್ನು ಬಳಸುತ್ತಾರೆ. ವಿಶೇಷವೆಂದರೆ, ಗಂಡಸರು ಮತ್ತು ಹೆಂಗಸರು ತಾವು ಪರಸ್ಪರ ಬಳಸುವ ಪದಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತಾರೆ. ಯಾಕೆಂದರೆ ಪ್ರತಿಯೊಬ್ಬರೂ ತಮ್ಮ ಲಿಂಗಕ್ಕೆ ಸಂಬಂಧಿಸಿದ ಪದಗಳನ್ನೇ ಬಳಸಬೇಕೆಂಬ ಸಾಮಾಜಿಕ ಸಂಪ್ರದಾಯವಿದೆಯಂತೆ.
ಉದಾಹರಣೆಗೆ, ‘ಯಮ್’ (Yam) ಎನ್ನುವ ತರಕಾರಿಗೆ ಹೆಂಗಸರು “ಇರುಯಿ” (irui) ಎಂದು ಕರೆದರೆ, ಗಂಡಸರು ಅದನ್ನೇ “ಇಟಾಂಗ್” (itong) ಎಂದು ಕರೆಯುತ್ತಾರೆ. ಅದೇ ರೀತಿ ‘ಬಟ್ಟೆ’ (Clothing)ಗೆ ಮಹಿಳೆಯರು “ಅರಿಗಾ” (ariga) ಎಂದು ಹೇಳಿದರೆ, ಗಂಡಸರು ಇದಕ್ಕೆ “ಎನ್‌ಕಿ” (nki) ಎಂಬ ಪದವನ್ನು ಬಳಸುತ್ತಾರೆ. ಇಂತಹ ಅನೇಕ ಸಾಮಾನ್ಯ ಪದಗಳಿಗೆ ಪ್ರತ್ಯೇಕ ಪುರುಷರು ಹಾಗೂ ಮಹಿಳಿಯರಿಗೆ ಪ್ರತ್ಯೇಕ ಶಬ್ದಗಳು ಹಾಗೂ ರೂಪಗಳಿದ್ದರೂ, ಯಾವ ಪದಗಳು ಭಿನ್ನವಾಗಿರುವುದಕ್ಕೆ ನಿರ್ದಿಷ್ಟ ಮಾರಿ ಅಥವಾ ನಿಯಮವಿಲ್ಲ.
ಉದಾಹರಣೆಗೆ ಕೆಲವು ಶಬ್ದಗಳಿಗೆ ಉಬಾಂಗ್ ಭಾಷೆಯಲ್ಲಿ ಗಂಡಸರು ಹಾಗೂ ಹೆಂಗಸರು ಬಳಸುವ ಪ್ರತ್ಯೇಕ ಪದಗಳು
ಗಂಡಸರು ಬಳಸುವ ಪದ ಮಹಿಳೆಯರು ಬಳಸುವ ಪದ
ನಾಯಿ (Dog) ಅಬು (abu) ಅಕ್ವಾಕ್ವೆ (akwakwe)
ಮರ (Tree) ಕಿಟ್ಚಿ (kitchi) ಒಕ್ವೆಂಗ್ (okweng)
ನೀರು (Water) ಬಾಮುಯೆ (bamuie) ಅಮು (amu)
ಕಪ್ (Cup) ಎನ್‌ಕೊ (nko) ಒಗ್ಬಾಲಾ (ogbala)
ಬಟ್ಟೆ (Clothing) ಎನ್‌ಕಿ (nki) ಅರಿಗಾ (ariga)
ಪೊದೆ/ಕಾಡು (Bush) ಬಿಬಿಯಾಂಗ್ (bibiang) ಡೆಯಿರೆ (déyirè)
ಮೇಕೆ (Goat) ಇಬುಯೆ (ibue) ಓಬಿ (obi)
ಬಾಲ್ಯದಲ್ಲಿ ಎರಡೂ ರೂಪಗಳ ಕಲಿಕೆ
ಉಬಾಂಗ್ ಗ್ರಾಮದಲ್ಲಿ ಮಕ್ಕಳು ಬಾಲ್ಯದಲ್ಲೇ ಎರಡೂ ಭಾಷಾ ರೂಪಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ವಿಶೇಷವಾಗಿ ಗಂಡು ಮಕ್ಕಳು ತಮ್ಮ ಬಾಲ್ಯದ ಆರಂಭಿಕ ವರ್ಷಗಳನ್ನು ತಾಯಂದಿರು ಹಾಗೂ ಮಹಿಳಾ ಕುಟುಂಬ ಸದಸ್ಯರೊಂದಿಗೆ ಕಳೆಯುವುದರಿಂದ ಮೊದಲಿಗೆ ಮಹಿಳೆಯರ ಪದಗಳನ್ನೇ ಮಾತನಾಡುತ್ತಾರೆ. ಸುಮಾರು 10 ವರ್ಷ ವಯಸ್ಸಿಗೆ ಬಂದಾಗ ಅವರು ಸಹಜವಾಗಿ ಪುರುಷರು ಬಳಸುವ ಪದಗಳನ್ನು ಬಳಸಲು ಆರಂಭಿಸುತ್ತಾರೆ. ಈ ಬದಲಾವಣೆಯನ್ನು ಸಮುದಾಯವು ಬಾಲ್ಯದಿಂದ ಪ್ರೌಢಾವಸ್ಥೆಗೆ ಕಾಲಿಡುವ ಸಂಕೇತವೆಂದು ಪರಿಗಣಿಸುತ್ತದೆ.
ಪರಸ್ಪರಮಾತನಾಡಲು ಯಾವುದೇ ತೊಂದರೆ ಇಲ್ಲ
ಪದಗಳಲ್ಲಿ ವ್ಯತ್ಯಾಸವಿದ್ದರೂ ಗ್ರಾಮಸ್ಥರ ನಡುವೆ ಪರಸ್ಪರ ಮಾತುಕತೆಗೆ ಯಾವುದೇ ಅಡಚಣೆ ಉಂಟಾಗುವುದಿಲ್ಲ. ಪುರುಷರು ಮತ್ತು ಮಹಿಳೆಯರು ಇಬ್ಬರು ಪದಗಳನ್ನು ಅರ್ಥಮಾಡಿಕೊಳ್ಳುವ ಕಾರಣ, ದೈನಂದಿನ ಮಾತುಕತೆಗಳು ಯಾವುದೇ ಗೊಂದಲವಿಲ್ಲದೆ ಸಾಗುತ್ತವೆ. ಭಾಷಾ ತಜ್ಞರ ಪ್ರಕಾರ, ಇದು ಬಹುತೇಕ ಒಂದಕ್ಕೊಂದು ಹೊಂದಿಕೊಂಡಿರುವ ಎರಡು ಪ್ರತ್ಯೇಕ ನಿಘಂಟುಗಳಂತೆಯೇ ಕಾರ್ಯನಿರ್ವಹಿಸುತ್ತದೆ.
ಸಂಪ್ರದಾಯದ ಮೂಲ ಇನ್ನೂ ನಿಗೂಢ
ಈ ಅಪರೂಪದ ಭಾಷಾ ಸಂಪ್ರದಾಯ ಹೇಗೆ ಆರಂಭವಾಯಿತು ಎಂಬುದಕ್ಕೆ ನಿಖರವಾದ ಉತ್ತರ ಇನ್ನೂ ಲಭ್ಯವಾಗಿಲ್ಲ. ಗ್ರಾಮದ ಅನೇಕ ನಿವಾಸಿಗಳು ಇದನ್ನು ದೇವರ ವರ ಹಾಗೂ ತಮ್ಮ ಸಾಂಸ್ಕೃತಿಕ ಗುರುತಿನ ಭಾಗವೆಂದು ನಂಬುತ್ತಾರೆ. ಆದರೆ ಮಾನವಶಾಸ್ತ್ರಜ್ಞರ ಅಭಿಪ್ರಾಯದಂತೆ, ಹಿಂದೆ ಪುರುಷರು ಮತ್ತು ಮಹಿಳೆಯರು ವಿಭಿನ್ನ ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದ ಹಿನ್ನೆಲೆಯಲ್ಲಿ ಕಾಲಕ್ರಮೇಣ ಪ್ರತ್ಯೇಕ ಪದಸಂಪತ್ತು ರೂಪುಗೊಂಡಿರಬಹುದು ಎಂದು ಭಾವಿಸುತ್ತಾರೆ.
ಉಬಾಂಗ್ ಭಾಷೆಯಲ್ಲಿ ಎಲ್ಲ ಪದಗಳೂ ವಿಭಿನ್ನವಾಗಿಲ್ಲ. ವಾಸ್ತವವಾಗಿ ಪುರುಷರು ಮತ್ತು ಮಹಿಳೆಯರು ಬಹುಪಾಲು ಪದಗಳನ್ನು ಒಂದೇ ರೀತಿಯಲ್ಲಿ ಬಳಸುತ್ತಾರೆ. ಕೆಲವೇ ನಿರ್ದಿಷ್ಟ ಪದಗಳಲ್ಲಿ ಮಾತ್ರ ಲಿಂಗಾಧಾರಿತ ವ್ಯತ್ಯಾಸ ಕಂಡುಬರುತ್ತದೆ. ಇದೇ ಕಾರಣದಿಂದ ಅವರ ನಡುವಿನ ಸಂಭಾಷಣೆ ಸಹಜವಾಗಿ ಮತ್ತು ಸುಗಮವಾಗಿ ನಡೆಯುತ್ತದೆ.
ಅಳಿವಿನ ಅಂಚಿನಲ್ಲಿರುವ ಭಾಷಾ ಪರಂಪರೆ
ಜಗತ್ತಿನ ಅನೇಕ ಸ್ಥಳೀಯ ಭಾಷೆಗಳಂತೆಯೇ ಉಬಾಂಗ್ ಗ್ರಾಮದ ಈ ವಿಶಿಷ್ಟ ಭಾಷಾ ಸಂಪ್ರದಾಯವೂ ಈಗ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಇತ್ತೀಚಿನ ಪೀಳಿಗೆಯ ಯುವಕರು ಇಂಗ್ಲಿಷ್ ಭಾಷೆಯನ್ನು ಹೆಚ್ಚಾಗಿ ಬಳಸುತ್ತಿರುವುದರಿಂದ, ದೈನಂದಿನ ಸಂಭಾಷಣೆಯಲ್ಲಿಯೂ ಇಂಗ್ಲಿಷ್ ಪದಗಳು ಬೆರೆತು ಬರುತ್ತಿವೆ. ಜೊತೆಗೆ ಪುರುಷರ ಮತ್ತು ಮಹಿಳೆಯರ ಈ ಎರಡೂ ಭಾಷಾ ರೂಪಗಳು ಇನ್ನೂ ಸಂಪೂರ್ಣವಾಗಿ ಲಿಖಿತ ರೂಪದಲ್ಲಿ ದಾಖಲೆಯಾಗಿಲ್ಲ. ಹೀಗಾಗಿ ಈ ಅಪರೂಪದ ಪದಸಂಪತ್ತಿನ ಕೆಲವು ಭಾಗಗಳು ಕಾಲಕ್ರಮೇಣ ಕಣ್ಮರೆಯಾಗುವ ಆತಂಕ ವ್ಯಕ್ತವಾಗಿದೆ.
ಶಾಲೆಗಳಲ್ಲಿ ಇಂಗ್ಲಿಷ್‌ಗೆ ಆದ್ಯತೆ
ಸ್ಥಳೀಯ ಶಿಕ್ಷಕರ ಪ್ರಕಾರ, ಶಾಲೆಗಳಲ್ಲಿ ಮಕ್ಕಳನ್ನು ಮಾತೃಭಾಷೆಯ ಬದಲಿಗೆ ಇಂಗ್ಲಿಷ್‌ನಲ್ಲಿ ಮಾತನಾಡಲು ಉತ್ತೇಜಿಸಲಾಗುತ್ತದೆ. ಇದರಿಂದ ಹೊಸ ತಲೆಮಾರಿನ ಮಕ್ಕಳು ತಮ್ಮ ಸಾಂಪ್ರದಾಯಿಕ ಪದಸಂಪತ್ತನ್ನು ಸಂಪೂರ್ಣವಾಗಿ ಕಲಿಯಲು ಸಾಧ್ಯವಾಗುತ್ತಿಲ್ಲ ಎಂದುಸಮುದಾಯದ ಹಲವು ಹಿರಿಯರು ಆತಂಕ ವ್ಯಕ್ತಪಡಿಸುತ್ತಾರೆ.
ಪರಂಪರೆ ಉಳಿಸಲು ಗ್ರಾಮಸ್ಥರ ಸಂಕಲ್ಪ
ಈ ವಿಶಿಷ್ಟ ಭಾಷಾ ಪರಂಪರೆಯನ್ನು ಉಳಿಸಿಕೊಳ್ಳಲು ಉಬಾಂಗ್ ಗ್ರಾಮದ ನಿವಾಸಿಗಳು ಮಕ್ಕಳಿಗೆ ಎರಡೂ ಪದಸಂಪತ್ತನ್ನು ಕಲಿಸುವ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಜೊತೆಗೆ ಭಾಷೆಯನ್ನು ಸಂರಕ್ಷಿಸುವ ಉದ್ದೇಶದಿಂದ ಪುಸ್ತಕಗಳ ರಚನೆ, ಬೋಧನಾ ಸಾಮಗ್ರಿಗಳ ಅಭಿವೃದ್ಧಿ ಹಾಗೂ ವಿಶೇಷ ಭಾಷಾ ಕೇಂದ್ರ ಸ್ಥಾಪನೆಗೆ ಸಮುದಾಯದ ಮುಖಂಡರು ಯೋಜನೆಗಳನ್ನು ರೂಪಿಸಿದ್ದಾರೆ. ತಮ್ಮ ಅಪರೂಪದ ಭಾಷಾ ಪರಂಪರೆಯನ್ನು ಮುಂದಿನ ತಲೆಮಾರುಗಳಿಗೂ ಉಳಿಸಿ ಬೆಳೆಸಬೇಕೆಂಬುದು ಅವರ ಪ್ರಮುಖ ಆಶಯವಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ