ನವದೆಹಲಿ: ಜುಲೈ 1ರಿಂದ ಹೋಟೆಲ್ಗಳು, ರೆಸ್ಟೋರೆಂಟ್ಗಳು ಹಾಗೂ ಸಣ್ಣ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರ ಮತ್ತು ತೈಲ ಮಾರುಕಟ್ಟೆ ಕಂಪನಿಗಳಿಂದ ನೆಮ್ಮದಿ ಸುದ್ದಿ ಸಿಕ್ಕಿದೆ.
ತೈಲ ಮಾರುಕಟ್ಟೆ ಕಂಪನಿಗಳು (OMCs) 19 ಕೆ.ಜಿ. ತೂಕದ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ₹183.50 ಇಳಿಕೆ ಮಾಡಿವೆ. ಜುಲೈ 1ರಿಂದಲೇ ಈ ಹೊಸ ದರಗಳು ಜಾರಿಗೆ ಬಂದಿದೆ. ಆದರೆ ಗೃಹ ಬಳಕೆಯ 14.2 ಕೆ.ಜಿ. ಎಲ್ಪಿಜಿ ಸಿಲಿಂಡರ್ಗಳ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಈ ವರ್ಷದ ಮೊದಲ ದರ ಇಳಿಕೆ
ಈ ವರ್ಷ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದರದಲ್ಲಿ ಇದೇ ಮೊದಲ ಬಾರಿಗೆ ಇಳಿಕೆ ಮಾಡಲಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ಹಾಗೂ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿನ ಅಸ್ಥಿರತೆಯಿಂದ ಎಲ್ಪಿಜಿ ಪೂರೈಕೆ ಕುರಿತು ಆತಂಕ ಉಂಟಾಗಿತ್ತು. ಇದರ ಪರಿಣಾಮವಾಗಿ ವಾಣಿಜ್ಯ ಎಲ್ಪಿಜಿ ದರಗಳಲ್ಲಿ ನಿರಂತರ ಏರಿಕೆ ಕಂಡುಬಂದಿತ್ತು.
ಹಾರ್ಮುಜ್ ಜಲಸಂಧಿಯ ಇಂಧನ ಪೂರೈಕೆ ಅಡಚಣೆಯ ನಂತರ ಭಾರತದಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಒಟ್ಟು ನಾಲ್ಕು ಬಾರಿ ಹೆಚ್ಚಿಸಲಾಗಿತ್ತು. ಭಾರಿ ನಷ್ಟದ ಹಿನ್ನೆಲೆಯನ್ನು ಉಲ್ಲೇಖಿಸಿ ತೈಲ ಕಂಪನಿಗಳು ಮಾರ್ಚ್ನಲ್ಲಿ 144 ರೂ., ಏಪ್ರಿಲ್ನಲ್ಲಿ 195.50 ರೂ. ಮತ್ತು ಮೇ ತಿಂಗಳಲ್ಲಿ ಬರೋಬ್ಬರಿ 993 ರೂ.ನಷ್ಟು ಬೆಲೆ ಏರಿಕೆ ಮಾಡಿದ್ದವು. ತದನಂತರ, ಜೂನ್ನಲ್ಲಿ ಮತ್ತೊಮ್ಮೆ 42 ರೂ. ಹೆಚ್ಚಿಸಲಾಗಿತ್ತು. ಹೀಗೆ ಒಟ್ಟು ನಾಲ್ಕು ಕಂತುಗಳಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 1,374.50 ರೂ.ನಷ್ಟು ಹೆಚ್ಚಿಸಲಾಗಿತ್ತು.
ಈಗ ಎಷ್ಟು ಕಡಿಮೆಯಾಗಿದೆ?
ಹೊಸ ದರ ಪರಿಷ್ಕರಣೆಯ ಬಳಿಕ ದೆಹಲಿಯಲ್ಲಿ 19 ಕೆ.ಜಿ. ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ ₹3,113.50ರಿಂದ ₹2,930ಕ್ಕೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ .3,021.00 ರೂ.ಗಳಿಗೆ ಇಳಿದಿದೆ.
ಈ ದರ ಇಳಿಕೆಯಿಂದ ವಾಣಿಜ್ಯ ಎಲ್ಪಿಜಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವ ಹೋಟೆಲ್ಗಳು, ರೆಸ್ಟೋರೆಂಟ್ಗಳು, ರಸ್ತೆ ಬದಿಯ ಊಟದ ಅಂಗಡಿಗಳು, ಬೇಕರಿಗಳು, ಕ್ಲೌಡ್ ಕಿಚನ್ಗಳು, ಕ್ಯಾಟರಿಂಗ್ ಸೇವೆಗಳು ಹಾಗೂ ಇತರೆ ಆಹಾರ ಉದ್ಯಮಗಳ ಕಾರ್ಯಾಚರಣಾ ವೆಚ್ಚ ಕಡಿಮೆಯಾಗುವ ನಿರೀಕ್ಷೆಯಿದೆ. ತಿಂಗಳಿಗೆ ಹಲವು ಸಿಲಿಂಡರ್ಗಳನ್ನು ಬಳಸುವ ಉದ್ಯಮಗಳಿಗೆ ಈ ಕ್ರಮ ತಕ್ಷಣದ ಆರ್ಥಿಕ ನೆರವಾಗಲಿದೆ.
ಖಾಸಗಿ ಕಂಪನಿಯಿಂದ ಪೆಟ್ರೋಲ್, ಡೀಸೆಲ್ ದರ ಇಳಿಕೆ
ಇದರ ನಡುವೆಯೇ ಖಾಸಗಿ ಇಂಧನ ಮಾರಾಟ ಸಂಸ್ಥೆ ನಯಾರಾ ಎನರ್ಜಿ ಕೂಡ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಮುಖವಾದ ಹಿನ್ನೆಲೆಯಲ್ಲಿ ಪೆಟ್ರೋಲ್ ದರವನ್ನು ಪ್ರತಿ ಲೀಟರ್ಗೆ ₹5 ಹಾಗೂ ಡೀಸೆಲ್ ದರವನ್ನು ₹3ರಷ್ಟು ಕಡಿತಗೊಳಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ