ಎಸ್‌ಐಆರ್ : ಚುನಾವಣಾ ಆಯೋಗದ ಬಗ್ಗೆ ಕಳವಳ ವ್ಯಕ್ತಪಡಿಸಿ ಸಿಜೆಐಗೆ ಪತ್ರ ಬರೆದ 23 ರಾಜಕೀಯ ಪಕ್ಷಗಳು

ನವದೆಹಲಿ: ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ವ್ಯಾಪಕ ಹಸ್ತಕ್ಷೇಪ ನಡೆಯುತ್ತಿದ್ದು, ಅನೇಕ ಸಂದರ್ಭಗಳಲ್ಲಿ ಚುನಾವಣಾ ಫಲಿತಾಂಶಗಳು ಜನರ ನೈಜ ಜನಾದೇಶವನ್ನು ಪ್ರತಿಬಿಂಬಿಸುತ್ತಿಲ್ಲ ಎಂದು ಆರೋಪಿಸಿ ವಿಪಕ್ಷಗಳ ಒಕ್ಕೂಟವು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಅವರಿಗೆ ಪತ್ರ ಬರೆದಿವೆ.
ಈ ಜಂಟಿ ಪತ್ರಕ್ಕೆ 23 ರಾಜಕೀಯ ಪಕ್ಷಗಳು ಮತ್ತು ಒಬ್ಬ ಸ್ವತಂತ್ರ ಸಂಸದರು ಸಹಿ ಹಾಕಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ ರಮೇಶ ತಿಳಿಸಿದ್ದಾರೆ. ಜೂನ್ 8 ರಂದು ನಡೆದ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಮುಖ್ಯ ನ್ಯಾಯಮೂರ್ತಿಗಳನ್ನು ಸಂಪರ್ಕಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಪತ್ರಕ್ಕೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ), ಸಮಾಜವಾದಿ ಪಕ್ಷ, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ), ತೃಣಮೂಲ ಕಾಂಗ್ರೆಸ್, ಎನ್‌ಸಿಪಿ (ಶರದ್ ಪವಾರ್ ಬಣ), ಆಮ್ ಆದ್ಮಿ ಪಕ್ಷ, ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ), ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) [ಸಿಪಿಐ(ಎಂ)], ಭಾರತೀಯ ಕಮ್ಯುನಿಸ್ಟ್ ಪಕ್ಷ (ಸಿಪಿಐ), ಸಿಪಿಐ(ಎಂಎಲ್), ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್), ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ (ಜೆಕೆಎನ್‌ಸಿ), ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ), ಫಾರ್ವರ್ಡ್ ಬ್ಲಾಕ್ ಸೇರಿದಂತೆ ಹಲವು ಪಕ್ಷಗಳು ಸಹಿ ಹಾಕಿವೆ.
ಪತ್ರದಲ್ಲಿ ಜಾರಿ ನಿರ್ದೇಶನಾಲಯ (ಇಡಿ), ಕೇಂದ್ರ ತನಿಖಾ ದಳ (ಸಿಬಿಐ) ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮೊದಲಾದ ಕೇಂದ್ರ ತನಿಖಾ ಸಂಸ್ಥೆಗಳು ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಅವುಗಳನ್ನು ವಿಪಕ್ಷಗಳನ್ನು ಗುರಿಯಾಗಿಸಲು ಹಾಗೂ ಚುನಾಯಿತ ಸರ್ಕಾರಗಳನ್ನು ಉರುಳಿಸಲು ಬಳಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಲಾಗಿದೆ.

ಚುನಾವಣಾ ಆಯೋಗದ ನೇಮಕಾತಿಗಳ ಬಗ್ಗೆಯೂ ವಿಪಕ್ಷಗಳು ಪ್ರಶ್ನೆ ಎತ್ತಿವೆ. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನಡೆದ ಚುನಾವಣಾ ಆಯೋಗದ ನೇಮಕಾತಿಗಳು ಅನುಮಾನಾಸ್ಪದವಾಗಿವೆ ಎಂದು ಆರೋಪಿಸಿರುವ ಪಕ್ಷಗಳು, ಬಿಹಾರ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ರಾಜ್ಯಗಳ ವಿಧಾನಸಭಾ ಚುನಾವಣೆಗಳಿಗೆ ಮುನ್ನ ಕೈಗೊಂಡಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆ ಅನಗತ್ಯವಾಗಿತ್ತು ಎಂದು ಹೇಳಿವೆ.
ಇದಲ್ಲದೆ, ಇತ್ತೀಚೆಗೆ ನಡೆದ ದೆಹಲಿ, ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳಲ್ಲಿ ಅಕ್ರಮ ಹಾಗೂ ಹಸ್ತಕ್ಷೇಪ ನಡೆದಿದೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
ಚುನಾವಣಾ ಆಯೋಗದ ನೇಮಕಾತಿಗಳ ಕುರಿತು ಉಲ್ಲೇಖಿಸಿರುವ ಪತ್ರದಲ್ಲಿ, ಬಿಜೆಪಿಯೊಂದಿಗೆ ನಿಕಟ ಸಂಬಂಧ ಹೊಂದಿರುವ ವ್ಯಕ್ತಿಗಳನ್ನೇ ಆಯೋಗಕ್ಕೆ ನೇಮಿಸಲಾಗುತ್ತಿದ್ದು, ಅವರು ಸರ್ಕಾರದ ಇಚ್ಛೆಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಅನೂಪ್ ಬರನ್ವಾಲ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿರುವ ವಿಪಕ್ಷಗಳು, ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲ್ಪಟ್ಟಿರುವ ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಚುನಾವಣಾ ಆಯುಕ್ತರ ನೇಮಕಾತಿ ಕಾಯ್ದೆ (CEC Act) ಮೂಲಕ ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಭಾರತದ ಮುಖ್ಯ ನ್ಯಾಯಮೂರ್ತಿಯನ್ನು ಹೊರಗಿಡಲಾಗಿದೆ ಎಂದು ತಿಳಿಸಿವೆ.

ಪ್ರಮುಖ ಸುದ್ದಿ :-   ಭಾರತಕ್ಕೆ ಕಚ್ಚಾ ತೈಲ ನೀಡಿ ಮತ್ತೆ ಭಾರತದಿಂದಲೇ ಪೆಟ್ರೋಲ್‌ ಖರೀದಿಸುತ್ತಿರುವ ರಷ್ಯಾ...! ಇದಕ್ಕೆ ಕಾರಣ...?

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಅವರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಬಹಿರಂಗವಾಗಿ ಬೆಂಬಲ ನೀಡುತ್ತಿರುವಂತಿದೆ ಎಂಬ ಆರೋಪವನ್ನೂ ಪತ್ರದಲ್ಲಿ ಮಾಡಲಾಗಿದೆ. ಜೊತೆಗೆ, ಆಡಳಿತಾರೂಢ ಪಕ್ಷವು ಮಾದರಿ ನೀತಿ ಸಂಹಿತೆ (Model Code of Conduct – MCC) ಉಲ್ಲಂಘಿಸಿದ ಸಂದರ್ಭಗಳಲ್ಲಿ ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಲಾಗಿದೆ.
ಬಿಹಾರದಲ್ಲಿ ಕೈಗೊಂಡಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಕುರಿತು ಪತ್ರದಲ್ಲಿ ವಿಶೇಷವಾಗಿ ಪ್ರಸ್ತಾಪಿಸಲಾಗಿದೆ. ಮತದಾರರ ಪಟ್ಟಿಯಲ್ಲಿ ಬಾಂಗ್ಲಾದೇಶದ ಅಕ್ರಮ ನುಸುಳುಕೋರರು ಸೇರಿದ್ದಾರೆ ಎಂಬ ಕಾರಣ ನೀಡಿ ಮತದಾರರ ಪಟ್ಟಿಯನ್ನು “ಶುದ್ಧೀಕರಿಸುವುದು” ಈ ಪ್ರಕ್ರಿಯೆಯ ಉದ್ದೇಶ ಎಂದು ಚುನಾವಣಾ ಆಯೋಗ ಹೇಳಿತ್ತು. ಆದರೆ, ಬಾಂಗ್ಲಾದೇಶದಿಂದ ಇಂತಹ ಅಕ್ರಮ ನುಸುಳುವಿಕೆ ನಡೆದಿರುವುದಕ್ಕೆ ಯಾವುದೇ ಅಂಕಿ-ಅಂಶಗಳಿಲ್ಲ. ಅಕ್ರಮವಾಗಿ ಭಾರತದಲ್ಲಿ ಮತದಾನದ ಹಕ್ಕು ಪಡೆದಿರುವ ಬಾಂಗ್ಲಾದೇಶಿ ನುಸುಳುಕೋರರ ಕುರಿತು ಚುನಾವಣಾ ಆಯೋಗ ಸಾರ್ವಜನಿಕವಾಗಿ ಯಾವುದೇ ಮಾಹಿತಿಯನ್ನೂ ಬಿಡುಗಡೆ ಮಾಡಿಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ.

ಪ್ರಮುಖ ಸುದ್ದಿ :-   ವಿಡಿಯೋ...| ಟೋಲ್ ಪ್ಲಾಜಾಕ್ಕೆ ಡಿಕ್ಕಿ ಹೊಡೆದು ಎಲ್‌ಪಿಜಿ ಟ್ಯಾಂಕರ್ ಸ್ಫೋಟ : ಐವರು ಸಾವು ; 2 ಕಿಮೀ ವರೆಗೆ ಗೋಚರಿಸಿದ ಬೆಂಕಿಯ ಜ್ವಾಲೆ

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಎಲ್ಲ ಮಾರ್ಗಗಳು ವಿಫಲವಾದಾಗ ಜನರು ನ್ಯಾಯಾಂಗದ ಮೇಲೆ ವಿಶ್ವಾಸ ಇಡುತ್ತಾರೆ. ನ್ಯಾಯಾಂಗವೂ ಸೂಕ್ತವಾಗಿ ಸ್ಪಂದಿಸದಿದ್ದರೆ ಅದು ಗಣರಾಜ್ಯದ ವ್ಯವಸ್ಥೆಯ ಸಂಪೂರ್ಣ ವೈಫಲ್ಯವನ್ನು ಸೂಚಿಸುತ್ತದೆ ಎಂದು ವಿಪಕ್ಷಗಳು ಪತ್ರದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿವೆ.
2027ರಲ್ಲಿ ಚುನಾವಣೆ ನಡೆಯಲಿರುವ ಉಳಿದ ರಾಜ್ಯಗಳಲ್ಲಿ ಜಾರಿಗೆ ಉದ್ದೇಶಿಸಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಸಹ ವಿಪಕ್ಷಗಳು ಮನವಿ ಮಾಡಿವೆ.
ಇಂತಹ ಪರಿಷ್ಕರಣೆಗಳನ್ನು ಆಯಾ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಕನಿಷ್ಠ ಐದು ವರ್ಷಗಳ ಅವಧಿ ಇರುವಾಗ ನಡೆಸಬೇಕು. ಆಗ ಚುನಾವಣಾ ಆಯೋಗದ ಸಿಬ್ಬಂದಿ ಮನೆಮನೆಗೆ ತೆರಳಿ ಮತದಾರರ ಭೌತಿಕ ಪರಿಶೀಲನೆ ನಡೆಸಲು ಸಾಧ್ಯವಾಗುತ್ತದೆ. ಬಿಹಾರದ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಜಾರಿಗೊಳಿಸಿರುವ ನಮೂನೆಗಳನ್ನು (Enumeration Form) ಭರ್ತಿ ಮಾಡಿ ದಾಖಲೆಗಳನ್ನು ಸಲ್ಲಿಸುವ ವಿಧಾನ ಇದುವರೆಗೆ ದೇಶದಲ್ಲಿ ಇರಲಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇದಲ್ಲದೆ, ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ಮೂಲಕ ನಡೆಯುವ ಮತದಾನದ ವಿಶ್ವಾಸಾರ್ಹತೆಯ ಬಗ್ಗೆಯೂ ವಿಪಕ್ಷಗಳು ಆತಂಕ ವ್ಯಕ್ತಪಡಿಸಿವೆ. ಅಗತ್ಯವಿರುವ ಸಂದರ್ಭಗಳಲ್ಲಿ ಮತ್ತೆ ಕಾಗದದ ಮತಪತ್ರ (Paper Ballot) ಪದ್ಧತಿಗೆ ಮರಳುವ ಕುರಿತು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement