ಚಂಡೀಗಢ: 2027ರ ಪಂಜಾಬ್ ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷಕ್ಕಿಂತ ಕಡಿಮೆ ಅವಧಿ ಉಳಿದಿರುವ ಸಂದರ್ಭದಲ್ಲಿ ಪಂಜಾಬ್ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಬಹಿರಂಗವಾಗಿದೆ. ಮಾಜಿ ಮುಖ್ಯಮಂತ್ರಿ ಚರಣಜೀತ ಸಿಂಗ್ ಚನ್ನಿ ಅವರ ಬೆಂಬಲಿಗರ ಬಣವು ತಾವು ಮುಂದಿಟ್ಟಿರುವ ಬೇಡಿಕೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ಗೆ ಒಂದು ವಾರದ ಗಡುವು ನೀಡಿದೆ.
ರಾಜ್ಯದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಹಲವು ನಾಯಕರ ದೊಡ್ಡ ಗುಂಪು ಅಮರೀಂದರ್ ಸಿಂಗ್ ರಾಜಾ ವಾರಿಂಗ್ ಅವರ ಬದಲಿಗೆ ಚರಣಜೀತ ಸಿಂಗ್ ಚನ್ನಿ ಅವರನ್ನು ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಪಿಸಿಸಿ) ಅಧ್ಯಕ್ಷರನ್ನಾಗಿ ನೇಮಿಸಲಾಗುತ್ತದೆ ಎಂದು ನಿರೀಕ್ಷಿಸಿತ್ತು. ಆದರೆ ಕಾಂಗ್ರೆಸ್ ಹೈಕಮಾಂಡ್ ರಾಜಾ ವಾರಿಂಗ್ ಅವರನ್ನೇ ರಾಜ್ಯಾಧ್ಯಕ್ಷರಾಗಿ ಮುಂದುವರಿಸಿದೆ. ಇದು ಅವರ ಅಸಮಾಧಾನಕ್ಕೆ ಕಾರಣವಾಗಿದೆ.
ಇದೇ ವೇಳೆ ಮಾಜಿ ಉಪಮುಖ್ಯಮಂತ್ರಿ ಸುಖ್ಜಿಂದರ್ ಸಿಂಗ್ ರಂಧಾವಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿರುವುದು ಕಾಂಗೆಸ್ಸಿನೊಳಗಿನ ಅಸಮಾಧಾನಕ್ಕೆ ಮತ್ತಷ್ಟು ಉಪ್ಪು ಸುರಿದಿದೆ. ವಿಧಾನಸಭೆ ಚುನಾವಣೆಗೆ ಮುನ್ನ ಪಕ್ಷದಲ್ಲಿ ಏಕತೆ ಪ್ರದರ್ಶಿಸಿ ಸಂಘಟನೆಯನ್ನು ಪುನರ್ನಿರ್ಮಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿರುವ ಹೊತ್ತಿನಲ್ಲೇ ಈ ಬೆಳವಣಿಗೆ ನಡೆದಿದೆ.
ಶುಕ್ರವಾರ ಮೊರಿಂಡಾ ಪಟ್ಟಣದ ಚಮ್ಕೌರ್ ಸಾಹಿಬ್ ವಿಧಾನಸಭಾ ಕ್ಷೇತ್ರದಲ್ಲಿರುವ ಚರಣಜೀತ ಸಿಂಗ್ ಚನ್ನಿ ಅವರ ನಿವಾಸದಲ್ಲಿ ಸುಮಾರು ಎರಡು ಡಜನ್ ಹಾಲಿ ಹಾಗೂ ಮಾಜಿ ಕಾಂಗ್ರೆಸ್ ಶಾಸಕರು, ಹಲವು ಮಾಜಿ ಸಚಿವರು ಮತ್ತು ನೂರಾರು ಕಾರ್ಯಕರ್ತರು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಸಭೆ ನಡೆಸಿದರು. ಮುಂಬರುವ ವಿಧಾನಸಭೆ ಚುನಾವಣೆಗೆ ಮುನ್ನ ಪಕ್ಷದ ವಿವಿಧ ಹುದ್ದೆಗಳಿಗೆ ಇತ್ತೀಚಿನ ನೇಮಕಾತಿಗಳ ಕುರಿತು ಕಾಂಗ್ರೆಸ್ ಹೈಕಮಾಂಡ್ ಕೈಗೊಂಡಿರುವ ನಿರ್ಧಾರಗಳ ವಿರುದ್ಧದ ಮೊದಲ ಬಹಿರಂಗ ಅಸಮಾಧಾನ ಎಂದು ಈ ಸಭೆಯನ್ನು ಪರಿಗಣಿಸಲಾಗಿದೆ.
ಸಭೆಯಲ್ಲಿ ಭಾಗವಹಿಸಿದ ನಾಯಕರು ರಾಜ್ಯದ ಕಾಂಗ್ರೆಸ್ ಕಾರ್ಯಕರ್ತರ ಆತಂಕಗಳನ್ನು ಪಕ್ಷದ ಹೈಕಮಾಂಡ್ ಮುಂದೆ ಮಂಡಿಸಲು ವಿಶೇಷ ಸಮಿತಿಯನ್ನು ರಚಿಸಲು ತೀರ್ಮಾನಿಸಿದರು. ಜೊತೆಗೆ, ಈ ಬಣದ ಪರವಾಗಿ ಮುಂದಿನ ರಾಜಕೀಯ ನಡೆ ಕುರಿತು ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಚರಣಜೀತ್ ಸಿಂಗ್ ಚನ್ನಿ ಅವರಿಗೆ ನೀಡಿದ್ದಾರೆ.
ಈ ನಾಯಕರು, ಚರಣಜೀತ್ ಸಿಂಗ್ ಚನ್ನಿ ಅವರು ಕಾಂಗ್ರೆಸ್ನ ಅತ್ಯಂತ ಪ್ರಬಲ ಜನನಾಯಕರಲ್ಲಿ ಒಬ್ಬರಾಗಿದ್ದು, ಅವರನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿದ್ದರೆ ವಿಧಾನಸಭೆ ಚುನಾವಣೆಗೆ ಮುನ್ನ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡುತ್ತಿತ್ತು ಎಂದು ಅಭಿಪ್ರಾಯಪಟ್ಟರು. ಅಲ್ಲದೆ, ತಳಮಟ್ಟದ ಜನರೊಂದಿಗೆ ಚನ್ನಿ ಹೊಂದಿರುವ ನಿಕಟ ಸಂಪರ್ಕ ಹಾಗೂ ಮುಖ್ಯಮಂತ್ರಿಯಾಗಿ ಅವರ ಅನುಭವ ಅವರನ್ನು ರಾಜ್ಯ ಘಟಕವನ್ನು ಮುನ್ನಡೆಸಲು ಸಹಜ ಆಯ್ಕೆಯಾಗಿದ್ದರು ಎಂದು ವಾದಿಸಿದರು.
ಹೈಕಮಾಂಡ್ ಜೊತೆ ಸಂವಾದ ನಡೆಸಲು ಸಮಿತಿ ರಚಿಸಲು ನಿರ್ಧರಿಸಿರುವುದರಿಂದ ಭಿನ್ನಾಭಿಪ್ರಾಯ ಹೊಂದಿರುವ ನಾಯಕರು ಸದ್ಯಕ್ಕೆ ಸಂಘರ್ಷದ ಬದಲು, ಮಾತುಕತೆಯ ಮಾರ್ಗವನ್ನೇ ಅನುಸರಿಸಲು ಬಯಸುತ್ತಿರುವುದು ಸ್ಪಷ್ಟವಾಗಿದೆ.
ಸಭೆಯಲ್ಲಿ ಮಾಜಿ ಸಚಿವರಾದ ತ್ರಿಪತ್ ರಾಜೀಂದರ್ ಸಿಂಗ್ ಬಾಜ್ವಾ, ರಾಣಾ ಗುರ್ಜೀತ್ ಸಿಂಗ್, ಸುಖ್ಬಿಂದರ್ ಸಿಂಗ್ ಸರ್ಕಾರಿಯಾ, ಭರತ ಭೂಷಣ ಆಶು, ಒಪಿ ಸೋನಿ, ಮಾಜಿ ಶಾಸಕರಾದ ಮೊಹಮ್ಮದ್ ಸಾಧಿಕ್, ಗುರ್ಪ್ರೀತ್ ಸಿಂಗ್ ಕಾಂಗರ್, ಗುರ್ಕೀರತ್ ಸಿಂಗ್ ಕೋಟ್ಲಿ, ತರ್ಸೇಮ್ ಸಿಂಗ್ ಅಟ್ಟಾರಿ, ಹರ್ಮಿಂದರ್ ಸಿಂಗ್ ಗಿಲ್ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.
ಹತ್ಯೆಗೀಡಾದ ಗಾಯಕ ಸಿಧು ಮೂಸೇವಾಲಾ ಅವರ ತಂದೆ ಬಲ್ಕೌರ್ ಸಿಂಗ್ ಹಾಗೂ ಮಾಜಿ ಸಚಿವ ಮತ್ತು ಹಾಲಿ ಶಾಸಕ ತ್ರಿಪತ್ ರಾಜೀಂದರ್ ಸಿಂಗ್ ಬಾಜ್ವಾ ಮಾತನಾಡಿ, ಪಕ್ಷದ ಹೈಕಮಾಂಡ್ ವಿರುದ್ಧ ತಮ್ಮ ಯಾವುದೇ ಸಂಘರ್ಷವಿಲ್ಲ, ಆದರೆ ರಾಜ್ಯದಲ್ಲಿ ಕಾರ್ಯಕರ್ತರ ನೈಜ ಮನೋಭಾವವನ್ನು ಹೈಕಮಾಂಡ್ ಅರ್ಥಮಾಡಿಕೊಳ್ಳಬೇಕು ಎಂಬುದು ತಮ್ಮ ಉದ್ದೇಶ ಎಂದು ಹೇಳಿದರು.
ತ್ರಿಪತ್ ರಾಜೀಂದರ್ ಸಿಂಗ್ ಬಾಜ್ವಾ, “ರಾಜ್ಯದಲ್ಲಿ ಹಲವು ಕಾಂಗ್ರೆಸ್ ನಾಯಕರು ಅಸಮಾಧಾನಗೊಂಡಿದ್ದಾರೆ. ಆದ್ದರಿಂದ ಹೈಕಮಾಂಡ್ನಿಂದ ಸಮಯ ಕೋರಿ, ರಾಜ್ಯದ ನೈಜ ಪರಿಸ್ಥಿತಿಯನ್ನು ಅದರ ಮುಂದೆ ಮಂಡಿಸಲು ತೀರ್ಮಾನಿಸಲಾಗಿದೆ. ನಮ್ಮ ಹೋರಾಟ ಹೈಕಮಾಂಡ್ ವಿರುದ್ಧವಲ್ಲ” ಎಂದು ಹೇಳಿದರು.
ಮಾಜಿ ಶಾಸಕ ಹರ್ಮಿಂದರ್ ಸಿಂಗ್ ಗಿಲ್, “ಪಕ್ಷದ ಪ್ರಮುಖ ಹುದ್ದೆಗಳಿಗೆ ನೇಮಕಾತಿಗಳನ್ನು ಅಂತಿಮಗೊಳಿಸುವ ಮುನ್ನ ಪಂಜಾಬ್ ಕಾಂಗ್ರೆಸ್ ನಾಯಕರ ಭಾವನೆಗಳಿಗೆ ಹೈಕಮಾಂಡ್ ಗೌರವ ನೀಡಬೇಕಿತ್ತು” ಎಂದು ಹೇಳಿದರು.
ಸಭೆಯಲ್ಲಿ ಪಾಲ್ಗೊಂಡ ಹಲವು ನಾಯಕರು ಕಾಂಗ್ರೆಸ್ ಹೈಕಮಾಂಡ್ ಅನ್ನು ನೇರವಾಗಿ ಟೀಕಿಸದಿದ್ದರೂ, ಇತ್ತೀಚಿನ ನಿರ್ಧಾರದಿಂದ ಪಕ್ಷದ ದೊಡ್ಡ ಪ್ರಮಾಣದ ಕಾರ್ಯಕರ್ತರು ನಿರಾಶರಾಗಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದರು. ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರದ ವಿರುದ್ಧ ಚುನಾವಣಾ ಹೋರಾಟವನ್ನು ಮುನ್ನಡೆಸಲು ಕಾಂಗ್ರೆಸ್ಗೆ ಪ್ರಬಲ ಹಾಗೂ ಎಲ್ಲರಿಗೂ ಒಪ್ಪಿಗೆಯಾಗುವ ನಾಯಕತ್ವ ಅಗತ್ಯವಿದ್ದು, ಆ ಜವಾಬ್ದಾರಿಗೆ ಚರಣಜೀತ್ ಸಿಂಗ್ ಚನ್ನಿ ಅವರೇ ಅತ್ಯಂತ ಸೂಕ್ತರು ಎಂದು ಅವರು ಪ್ರತಿಪಾದಿಸಿದರು.
ಈ ಅಸಮಾಧಾನಕ್ಕೆ ಕೆಲವು ದಿನಗಳ ಹಿಂದೆಯಷ್ಟೇ ಎಐಸಿಸಿಯು ಪಂಜಾಬ್ ಘಟಕದ ಹೊಸ ಪದಾಧಿಕಾರಿಗಳ ಪಟ್ಟಿಯನ್ನು ಪ್ರಕಟಿಸಿದ್ದೇ ಹಿನ್ನೆಲೆಯಾಗಿದೆ. ಸುಮಾರು ಒಂದು ತಿಂಗಳ ಆಂತರಿಕ ಚರ್ಚೆಯ ಬಳಿಕ ಕಾಂಗ್ರೆಸ್ ಹೈಕಮಾಂಡ್ ಅಮರೀಂದರ್ ಸಿಂಗ್ ರಾಜಾ ವಾರಿಂಗ್ ಅವರನ್ನು ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಪಿಸಿಸಿ) ಅಧ್ಯಕ್ಷರಾಗಿ ಹಾಗೂ ಪ್ರತಾಪ್ ಸಿಂಗ್ ಬಾಜ್ವಾ ಅವರನ್ನು ವಿಧಾನಸಭೆಯ ಪ್ರತಿಪಕ್ಷ ನಾಯಕರಾಗಿ ಮುಂದುವರಿಸಲು ತೀರ್ಮಾನಿಸಿತ್ತು.ಚಂಡೀಗಢ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಮನೀಶ ತಿವಾರಿ ಕೂಡ ಪಕ್ಷದ ಆಂತರಿಕ ಬೆಳವಣಿಗೆಗಳನ್ನು ಸಾರ್ವಜನಿಕವಾಗಿ ಟೀಕಿಸಿದರು. ಅವರು ‘ಎಕ್ಸ್’ನಲ್ಲಿ, ಒಬ್ಬ ವ್ಯಕ್ತಿ ಪ್ರತಿಭಾವಂತನಾಗಿದ್ದರೆ ಸಮಾಜವು ಅವನಲ್ಲಿ ಯಾವುದೋ ಒಂದು ದೋಷವನ್ನು ಹುಡುಕುತ್ತದೆ. ವ್ಯಕ್ತಿಗಳ ಹಾಗೂ ಸಂಸ್ಥೆಗಳ ಅಸುರಕ್ಷಿತ ಮನೋಭಾವಕ್ಕೆ ನನ್ನ ಬಳಿ ಯಾವುದೇ ಔಷಧಿ ಇದ್ದರೆ ಚೆನ್ನಾಗಿತ್ತು,” ಎಂದು ಬರೆದಿದ್ದಾರೆ. ಜೊತೆಗೆ, ಏನಾಗಬೇಕೋ ಅದು ಆಗಿಯೇ ತೀರುತ್ತದೆ ಎಂದು ಹೇಳುವ ಮೂಲಕ ಪಕ್ಷದ ಮೇಲಿನ ತಮ್ಮ ನಿಷ್ಠೆಯನ್ನು ಪುನರುಚ್ಚರಿಸಿದರೂ, ಹೈಕಮಾಂಡಿಗೆ ಪರೋಕ್ಷ ಸಂದೇಶವನ್ನೂ ನೀಡಿದರು.
ಇನ್ನೊಂದೆಡೆ, ಗುರ್ದಾಸ್ಪುರ ಲೋಕಸಭಾ ಕ್ಷೇತ್ರದ ಸಂಸದ ಸುಖ್ಜಿಂದರ್ ಸಿಂಗ್ ರಂಧಾವಾ ಅವರು ನವದೆಹಲಿಯ ಕರ್ತವ್ಯ ಭವನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿರುವುದು ಕಾಂಗ್ರೆಸ್ ವಲಯದಲ್ಲಿ ಹಲವು ಊಹಾಪೋಹಗಳಿಗೆ ಕಾರಣವಾಯಿತು.
ಆದರೆ ಈ ಕುರಿತು ಸ್ಪಷ್ಟನೆ ನೀಡಿದ ರಂಧಾವಾ, ಈ ಭೇಟಿ ಪೂರ್ವನಿಗದಿತವಾಗಿದ್ದು, ಪಂಜಾಬ್ನ ಭದ್ರತಾ ಪರಿಸ್ಥಿತಿಯ ಕುರಿತು ಚರ್ಚಿಸಲು ಮಾತ್ರ ನಡೆದಿತ್ತು ಎಂದು ಹೇಳಿದರು.
“ನನ್ನ ಹಿಂದಿನ ಪತ್ರದ ಕೊನೆಯ ಪ್ಯಾರಾಗ್ರಾಫ್ನಲ್ಲಿ ಪ್ರಸ್ತಾಪಿಸಿದ್ದ ವಿಷಯಗಳ ಕುರಿತು ಚರ್ಚಿಸಲು ನನ್ನನ್ನು ಕರೆಯಲಾಗಿತ್ತು. ಇಂಟೆಲಿಜೆನ್ಸ್ ಬ್ಯೂರೋ (ಐಬಿ), ಮಿಲಿಟರಿ ಇಂಟೆಲಿಜೆನ್ಸ್ (ಎಂಐ), ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (ರಾ) ಹಾಗೂ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಸೇರಿದಂತೆ ವಿವಿಧ ಕೇಂದ್ರ ಸಂಸ್ಥೆಗಳ ಕಾರ್ಯಾಚರಣೆಗಳ ಬಗ್ಗೆ ನಾನು ಉಲ್ಲೇಖಿಸಿದ್ದೆ. ಜೊತೆಗೆ, ಪಂಜಾಬ್ನಲ್ಲಿ ಸುಲಿಗೆ ಹಾಗೂ ಬೆದರಿಕೆ ಪ್ರಕರಣಗಳು ವ್ಯಾಪಕವಾಗಿ ಹೆಚ್ಚುತ್ತಿರುವುದನ್ನೂ ನಾನು ಗಮನ ಸೆಳೆದಿದ್ದೆ,” ಎಂದು ಅವರು ಹೇಳಿದರು.
ಅಲ್ಲದೆ, ಗುರ್ದಾಸ್ಪುರ ಸೇರಿದಂತೆ ಗಡಿ ಭಾಗಗಳಲ್ಲಿ ಗ್ಯಾಂಗ್ಸ್ಟರ್ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾಗಿ ರಂಧಾವಾ ತಿಳಿಸಿದರು.


ನಿಮ್ಮ ಕಾಮೆಂಟ್ ಬರೆಯಿರಿ