ನವದೆಹಲಿ: ಸಂಸತ್ತಿನ ಮಳೆಗಾಲ (ಮಾನ್ಸೂನ್) ಅಧಿವೇಶನವು 2026ರ ಜುಲೈ 20ರಿಂದ ಆರಂಭವಾಗಿ ಆಗಸ್ಟ್ 13ರ ವರೆಗೆ ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ ರಿಜಿಜು ಶನಿವಾರ ಪ್ರಕಟಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ರಿಜಿಜು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೇಂದ್ರ ಸರ್ಕಾರದ ಶಿಫಾರಸಿನ ಮೇರೆಗೆ ಲೋಕಸಭೆ ಮತ್ತು ರಾಜ್ಯಸಭೆಯ ಅಧಿವೇಶನವನ್ನು ಕರೆಯಲು ಅನುಮೋದನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
“2026ರ ಜುಲೈ 20ರಂದು ಅಧಿವೇಶನ ಆರಂಭವಾಗಿ, ಆಗಸ್ಟ್ 13ರವರೆಗೆ ನಡೆಯಲಿದ್ದು, ರಾಷ್ಟ್ರೀಯ ಮಹತ್ವದ ವಿಷಯಗಳ ಕುರಿತು ಅರ್ಥಪೂರ್ಣ ಚರ್ಚೆ, ಸಂವಾದ ಮತ್ತು ನಿರ್ಣಯಗಳಿಗೆ ವೇದಿಕೆಯಾಗಲಿದೆ” ಎಂದು ಅವರು ಹೇಳಿದ್ದಾರೆ.
ಹಲವು ಮಹತ್ವದ ಮಸೂದೆಗಳು ಮಂಡನೆ ಸಾಧ್ಯತೆ
ಸುಮಾರು ನಾಲ್ಕು ವಾರಗಳ ಕಾಲ ನಡೆಯಲಿರುವ ಈ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಹಲವು ಪ್ರಮುಖ ಮಸೂದೆಗಳನ್ನು ಮಂಡಿಸುವ ಸಾಧ್ಯತೆ ಇದೆ. ಅವುಗಳಲ್ಲಿ ಪ್ರಮುಖವಾಗಿ ಸಂವಿಧಾನದ 130ನೇ ತಿದ್ದುಪಡಿ ಮಸೂದೆ,
ಮಹಿಳಾ ಮೀಸಲಾತಿ ಜಾರಿ ಮಸೂದೆ, ಕ್ಷೇತ್ರ ಮರುವಿಂಗಡಣೆ (Delimitation) ಮಸೂದೆ ಹಾಗೂವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA) ತಿದ್ದುಪಡಿ ಮಸೂದೆಯ ಮಂಡನೆಯ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಇವುಗಳ ಜೊತೆಗೆ, ಬಾಕಿ ಉಳಿದಿರುವ ಹಲವು ಮಸೂದೆಗಳನ್ನು ಮಂಡಿಸಿ ಅಂಗೀಕರಿಸಿಕೊಳ್ಳಲು ಸರ್ಕಾರ ಮುಂದಾಗುವ ನಿರೀಕ್ಷೆಯಿದೆ. ಮತ್ತೊಂದೆಡೆ, ವಿಪಕ್ಷಗಳು ರಾಜಕೀಯ, ಆರ್ಥಿಕತೆ ಹಾಗೂ ರಾಷ್ಟ್ರೀಯ ಭದ್ರತೆ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸುವ ಸಾಧ್ಯತೆ ಇದೆ.
ಮೂರನೇ ಎರಡರಷ್ಟು ಬಹುಮತ ಅಗತ್ಯ
ಪ್ರಸ್ತಾವಿತ ಈ ಮಸೂದೆಗಳನ್ನು ಅಂಗೀಕರಿಸಲು ಸಂವಿಧಾನ ತಿದ್ದುಪಡಿಯಾಗಬೇಕಾಗಿರುವುದರಿಂದ ಎರಡೂ ಸದನಗಳಲ್ಲಿ ಹಾಜರಿದ್ದು ಮತ ಚಲಾಯಿಸುವ ಸದಸ್ಯರ ಕನಿಷ್ಠ ಮೂರನೇ ಎರಡರಷ್ಟು (2/3) ಬಹುಮತದ ಅಗತ್ಯವಿದೆ.
ಇದರಲ್ಲಿ ಮೂರು ಪ್ರಮುಖ ಮಸೂದೆಗಳು ಕಳೆದ ಸಂಸತ್ ಅಧಿವೇಶನದಲ್ಲಿ ಅಗತ್ಯ ಸಂಖ್ಯಾಬಲದ ಕೊರತೆಯಿಂದ ಅಂಗೀಕಾರವಾಗಿರಲಿಲ್ಲ.
ಸಂವಿಧಾನದ 130ನೇ ತಿದ್ದುಪಡಿ ಮಸೂದೆ ಏನು ಹೇಳುತ್ತದೆ?
ಪ್ರಸ್ತಾವಿತ ಸಂವಿಧಾನದ 130ನೇ ತಿದ್ದುಪಡಿ ಮಸೂದೆಯಲ್ಲಿ, ಭ್ರಷ್ಟಾಚಾರ ಸೇರಿದಂತೆ ನಿರ್ದಿಷ್ಟ ಗಂಭೀರ ಅಪರಾಧ ಪ್ರಕರಣಗಳಲ್ಲಿ ಪ್ರಧಾನಮಂತ್ರಿ ಅಥವಾ ಮುಖ್ಯಮಂತ್ರಿ 30 ದಿನಗಳಿಗಿಂತ ಹೆಚ್ಚು ಕಾಲ ಬಂಧನದಲ್ಲಿದ್ದರೆ, ಅವರನ್ನು ಸ್ವಯಂಚಾಲಿತವಾಗಿ ಹುದ್ದೆಯಿಂದ ತೆಗೆಯುವ ಅವಕಾಶ ಕಲ್ಪಿಸುವ ಪ್ರಸ್ತಾಪವಿದೆ.
ಮಹಿಳಾ ಮೀಸಲಾತಿ ಮಸೂದೆ
ಮಹಿಳಾ ಮೀಸಲಾತಿ ಮಸೂದೆಯು ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ 33 ಶೇಕಡಾ ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವ ಉದ್ದೇಶ ಹೊಂದಿದೆ.
ಈ ಮಸೂದೆಗೆ ವಿಪಕ್ಷಗಳು ಬೆಂಬಲ ವ್ಯಕ್ತಪಡಿಸಿದ್ದರೂ, ಕ್ಷೇತ್ರ ಮರುವಿಂಗಡಣೆಯ ಜೊತೆಗೆ ಮಹಿಳಾ ಮೀಸಲಾತಿಯ ಜಾರಿಗೆ ಸಂಬಂಧ ಕಲ್ಪಿಸಿರುವುದನ್ನು ತೀವ್ರವಾಗಿ ವಿರೋಧಿಸಿವೆ. ಈ ಕ್ರಮದಿಂದ ದಕ್ಷಿಣ ಭಾರತದ ರಾಜ್ಯಗಳ ಸಂಸತ್ ಪ್ರತಿನಿಧಿತ್ವ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಅವು ವಾದಿಸುತ್ತಿವೆ.
ಸರ್ಕಾರದ ಬಳಿ ಅಗತ್ಯ ಸಂಖ್ಯಾಬಲ ಇದೆಯೇ?
ಸಾಮಾನ್ಯ ಮಸೂದೆಗಳನ್ನು ಸರಳ ಬಹುಮತದಿಂದ ಅಂಗೀಕರಿಸಲು ಎನ್ಡಿಎ (NDA) ಬಳಿ ಎರಡೂ ಸದನಗಳಲ್ಲಿ ಸಾಕಷ್ಟು ಸಂಖ್ಯಾಬಲವಿದೆ. ಆದರೆ ಸಂವಿಧಾನ ತಿದ್ದುಪಡಿಗಳಿಗೆ ಅಗತ್ಯವಿರುವ ಮೂರನೇ ಎರಡರಷ್ಟು (2/3) ಬಹುಮತ ಇನ್ನೂ ಸವಾಲಾಗಿಯೇ ಉಳಿದಿದೆ.
ಆದರೆ, ಕಳೆದ ಅಧಿವೇಶನದ ನಂತರ ಎನ್ಡಿಎ ಸಂಖ್ಯಾಬಲದಲ್ಲಿ ಗಮನಾರ್ಹ ಏರಿಕೆಯಾಗಿದೆ. ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದ ಬಳಿಕ, ತೃಣಮೂಲ ಕಾಂಗ್ರೆಸ್ನ 20 ಶಾಸಕರು ರಾಷ್ಟ್ರೀಯ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (NCPI) ಸೇರಿದ್ದು, ಆ ಪಕ್ಷವು ಬಳಿಕ ಎನ್ಡಿಎಗೆ ಬೆಂಬಲ ಘೋಷಿಸಿದೆ.
ಇದಲ್ಲದೆ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ ಆರು ಲೋಕಸಭಾ ಸದಸ್ಯರು ಏಕನಾಥ ಶಿಂಧೆ ನೇತೃತ್ವದ ಶಿವಸೇನೆಯಲ್ಲಿ ವಿಲೀನಗೊಂಡಿದ್ದಾರೆ. ಇದರಿಂದ ಲೋಕಸಭೆಯಲ್ಲಿ ಎನ್ಡಿಎಯ ಪರಿಣಾಮಕಾರಿ ಸಂಖ್ಯಾಬಲ ಸುಮಾರು 330 ಸದಸ್ಯರಿಗೆ ಏರಿಕೆಯಾಗಿದೆ.
ಆದಾಗ್ಯೂ, ಇದು ಸಂವಿಧಾನ ತಿದ್ದುಪಡಿಗಳಿಗೆ ಅಗತ್ಯವಿರುವ ಎರಡರಲ್ಲಿ ಮೂರರಷ್ಟು ಬಹುಮತ ತಲುಪಲು ಇನ್ನೂ ಸಾಕಾಗುವುದಿಲ್ಲ.
ರಾಜ್ಯಸಭೆಯಲ್ಲಿಯೂ ಎನ್ಡಿಎ ಸಂಖ್ಯಾಬಲ ವೃದ್ಧಿ
ರಾಜ್ಯಸಭೆಯಲ್ಲಿಯೂ ಎನ್ಡಿಎಗೆ ಬಲ ಹೆಚ್ಚಾಗಿದೆ. ಆಮ್ ಆದ್ಮಿ ಪಕ್ಷದ ಏಳು ರಾಜ್ಯಸಭಾ ಸದಸ್ಯರು ಬಿಜೆಪಿಗೆ ಸೇರ್ಪಡೆಯಾಗಿರುವುದರಿಂದ, ಎನ್ಡಿಎ ಬಲವು 242 ಸದಸ್ಯರ ಸದನದಲ್ಲಿ 141ಕ್ಕೆ ಏರಿಕೆಯಾಗಿದೆ.
ಇದರ ಜೊತೆಗೆ, 10 ನಾಮನಿರ್ದೇಶಿತ ಹಾಗೂ ಸ್ವತಂತ್ರ ಸದಸ್ಯರ ಬೆಂಬಲ ದೊರೆತರೆ ಎನ್ಡಿಎಯ ಖಚಿತ ಸಂಖ್ಯಾಬಲ 151ಕ್ಕೆ ತಲುಪುತ್ತದೆ. ಇದು ಸರಳ ಬಹುಮತಕ್ಕೆ ಸಾಕಾದರೂ, ಸಂವಿಧಾನ ತಿದ್ದುಪಡಿಗೆ ಅಗತ್ಯವಿರುವ ಮೂರನೇ ಎರರರಷ್ಟು ಬಹುಮತಕ್ಕಿಂತ ಇನ್ನೂ 11 ಮತಗಳು ಕಡಿಮೆಯಾಗುತ್ತದೆ.
ಪ್ರಾದೇಶಿಕ ಪಕ್ಷಗಳ ಬೆಂಬಲ ನಿರ್ಣಾಯಕ
ಈ ಹಿನ್ನೆಲೆಯಲ್ಲಿ, ಸರ್ಕಾರಕ್ಕೆ ಬಿಜು ಜನತಾ ದಳ (BJD) ಹಾಗೂ ವೈಎಸ್ಆರ್ ಕಾಂಗ್ರೆಸ್ ಪಕ್ಷ (YSRCP) ಸೇರಿದಂತೆ ಪ್ರಾದೇಶಿಕ ಪಕ್ಷಗಳ ಬೆಂಬಲ ಅತ್ಯಂತ ಮಹತ್ವದ್ದಾಗಲಿದೆ.
ಈ ಹಿಂದೆ ಹಲವು ಪ್ರಮುಖ ಮಸೂದೆಗಳಿಗೆ ಈ ಪಕ್ಷಗಳು ಕೇಂದ್ರ ಸರ್ಕಾರವನ್ನು ಬೆಂಬಲಿಸಿದ್ದವು. ಇದೀಗ ಸಂವಿಧಾನ 130ನೇ ತಿದ್ದುಪಡಿ ಮಸೂದೆ, ಮಹಿಳಾ ಮೀಸಲಾತಿ ಜಾರಿ ಮಸೂದೆ ಹಾಗೂ ಕ್ಷೇತ್ರ ಮರುವಿಂಗಡಣೆ ಮಸೂದೆಗಳಿಗೆ ಸಹ ಇದೇ ರೀತಿಯ ಬೆಂಬಲ ನೀಡುತ್ತವೆಯೇ ಎಂಬುದು ಪ್ರಶ್ನೆ. ಸರ್ಕಾರಕ್ಕೆ ಈ ಪಕ್ಷಗಳ ಬೆಂಬಲವೇ ಈ ಮಸೂದೆಗಳು ಅಂಗೀಕಾರವಾಗುತ್ತವೆಯೇ ಎಂಬುದನ್ನು ನಿರ್ಧರಿಸಲಿದೆ.


ನಿಮ್ಮ ಕಾಮೆಂಟ್ ಬರೆಯಿರಿ