ತವರು ಮನೆಯಿಂದ ಪತ್ನಿ ಮರಳಿ ಕರೆತರಲು ಹೋದ ವ್ಯಕ್ತಿಗೆ ಬೆಂಕಿ ಹಚ್ಚಿ ಹತ್ಯೆ ಮಾಡಿದ ಬಾವ, ರಕ್ಷಿಸಲು ಹೋದ ಮಹಿಳೆಯೂ ಸಾವು

ತರಣ್ ತಾರಣ್: ಪತ್ನಿಯನ್ನು ಮರಳಿ ಮನೆಗೆ ಕರೆತರಲು ಅತ್ತೆ ಮನೆಗೆ ತೆರಳಿದ್ದ ವ್ಯಕ್ತಿಗೆ ಬಾವನೇ ಬೆಂಕಿ ಹಚ್ಚಿದ್ದರಿಂದ ಆತ ಮೃತಪಟ್ಟಿದ್ದಾರೆ ಹಾಗೂ ಆತನನ್ನು ರಕ್ಷಿಸಲು ಧಾವಿಸಿದ ಮಹಿಳೆಯೂ ತೀವ್ರ ಸುಟ್ಟ ಗಾಯಗಳಿಂದ ಚಿಕಿತ್ಸೆ ವೇಳೆ ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆ ಪಂಜಾಬಿನ ತರಣ್ ತಾರಣ್ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ಲವ್‌ಪ್ರೀತ್ ಸಿಂಗ್ ಮತ್ತು ಗುರ್ಜಿತ್ ಕೌರ್ ಎಂದು ಗುರುತಿಸಲಾಗಿದೆ. ವರದಿಯ ಪ್ರಕಾರ, ಜೂನ್ 13ರಂದು ಲವ್‌ಪ್ರೀತ್ ಸಿಂಗ್ ತಮ್ಮ ಪತ್ನಿ ಸಂದೀಪ್ ಕೌರ್ ಅವರನ್ನು ಮರಳಿ ಮನೆಗೆ ಕರೆತರಲು ಅತ್ತೆ ಮನೆಗೆ ತೆರಳಿದ್ದರು. ದಂಪತಿಯ ನಡುವೆ ಉಂಟಾಗಿದ್ದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಸಂದೀಪ್ ಕೌರ್ ತಮ್ಮ ತವರು ಮನೆಗೆ ತೆರಳಿದ್ದರು ಎಂದು ತಿಳಿದುಬಂದಿದೆ.
ಈ ವೇಳೆ ಲವ್‌ಪ್ರೀತ್ ಮತ್ತು ಅವರ ಪತ್ನಿಯ ಕುಟುಂಬದ ನಡುವೆ ವಾಗ್ವಾದ ನಡೆದಿದ್ದು, ಸಂದೀಪ್ ಕೌರ್ ಅವರ ಸಹೋದರ ಸಜನ್ ಸಿಂಗ್ ಎಂಬಾತ ಲವ್‌ಪ್ರೀತ್ ಅವರ ಮೇಲೆ ದಹನಶೀಲ ದ್ರವವನ್ನು ಸುರಿದು ಬೆಂಕಿ ಹಚ್ಚಿದ ಆರೋಪ ಕೇಳಿಬಂದಿದೆ.

ಈ ದೃಶ್ಯ ಕಂಡ ಸಜನ್ ಸಿಂಗ್ ಅವರ ಸೋದರ ಸಂಬಂಧಿ (ಸಹೋದರನ ಪತ್ನಿ) ಗುರ್ಜಿತ್ ಕೌರ್ ಅವರು ಲವ್‌ಪ್ರೀತ್ ಅವರನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ, ಈ ವೇಳೆ ಅವರಿಗೂ ಬೆಂಕಿ ತಗುಲಿ ತೀವ್ರ ಸುಟ್ಟ ಗಾಯಗಳಾಗಿವೆ. ಗಂಭೀರವಾಗಿ ಗಾಯಗೊಂಡಿದ್ದ ಲವ್‌ಪ್ರೀತ್ ಸಿಂಗ್ ಹಾಗೂ ಗುರ್ಜಿತ್ ಕೌರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಆರೋಪಿ ಸಜನ್ ಸಿಂಗ್ ಅವರಿಗೂ ಸುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಈ ಭೀಕರ ಘಟನೆಯ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಏಕಾಏಕಿ ಮತ್ತೊಬ್ಬ ವ್ಯಕ್ತಿಗೆ ಬೆಂಕಿ ಹಚ್ಚುತ್ತಿರುವುದು ಕಂಡುಬರುತ್ತದೆ. ಬೆಂಕಿಗೆ ಆಹುತಿಯಾದ ವ್ಯಕ್ತಿ ಪ್ರಾಣ ಉಳಿಸಿಕೊಳ್ಳಲು ಹಾಗೂ ಬೆಂಕಿಯನ್ನು ನಂದಿಸಿಕೊಳ್ಳಲು ಆತಂಕದಿಂದ ಓಡಾಡುತ್ತಿರುವ ದೃಶ್ಯವೂ ಸೆರೆಯಾಗಿದೆ.

ಪ್ರಮುಖ ಸುದ್ದಿ :-   ವಿಡಿಯೋ | ಚಿನ್ನ, ಹಣ ದೋಚಿ ಮಹಿಳೆಯನ್ನು ಬಾವಿಗೆ ತಳ್ಳಿದ ದುಷ್ಕರ್ಮಿ; 21 ಗಂಟೆಗಳ ಕಾಲ ಸಾವಿನೊಂದಿಗೆ ಹೋರಾಡಿ ಬದುಕುಳಿದ ಮಹಿಳೆ

ಅದೇ ವೇಳೆ, ಲವ್‌ಪ್ರೀತ್ ಅವರನ್ನು ರಕ್ಷಿಸಲು ಧಾವಿಸಿದ ಮಹಿಳೆ ಕೂಡ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಕೆಲವೇ ಕ್ಷಣಗಳ ಬಳಿಕ ಮಹಿಳೆಯ ಹಿಂದೆ ನಿಂತಿದ್ದ ಮತ್ತೊಬ್ಬ ವ್ಯಕ್ತಿ ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ದೃಶ್ಯವೂ ಸೆರೆಯಾಗಿದೆ. ಬೆಂಕಿ ಕ್ಷಣಾರ್ಧದಲ್ಲೇ ವ್ಯಾಪಿಸುತ್ತಿದ್ದು, ಲವ್‌ಪ್ರೀತ್ ಹಾಗೂ ಗುರ್ಜಿತ್ ಇಬ್ಬರೂ ಬೆಂಕಿಯಿಂದ ಆವರಿಸಿಕೊಂಡ ಸ್ಥಿತಿಯಲ್ಲಿ ಆತಂಕದಿಂದ ಓಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಸಜನ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement