ಕೊಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅನುಭವಿಸಿದ ಹಿನ್ನಡೆಯ ನಂತರ ಪಕ್ಷದ ಸಂಘಟನೆಯನ್ನು ಪುನರ್ರಚಿಸಿದ್ದ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಇದೀಗ ಮತ್ತೊಂದು ಭಾರೀ ಆಘಾತ ಎದುರಾಗಿದೆ. ಜೂನ್ 3ರಂದು ಟಿಎಂಸಿಯ ಪಶ್ಚಿಮ ಬಂಗಾಳ ರಾಜ್ಯಾಧ್ಯಕ್ಷೆಯಾಗಿ ನೇಮಕಗೊಂಡಿದ್ದ ಚಂದ್ರಿಮಾ ಭಟ್ಟಾಚಾರ್ಯ, ಕೇವಲ ಒಂದು ತಿಂಗಳಲ್ಲೇ ಪಕ್ಷದ ಎಲ್ಲ ಹುದ್ದೆಗಳಿಗೆ ರಾಜೀನಾಮೆ ನೀಡಿ ಬಂಡಾಯ ಶಿಬಿರಕ್ಕೆ ಸೇರ್ಪಡೆಯಾಗಿದ್ದಾರೆ…!
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧದ ಹಿನ್ನಡೆಯ ಬಳಿಕ ಜೂನ್ 3ರಂದು ಮಮತಾ ಬ್ಯಾನರ್ಜಿ ಪಕ್ಷದ ಎಲ್ಲಾ ಸಮಿತಿಗಳನ್ನು ವಿಸರ್ಜಿಸಿ, ಸಂಘಟನೆಯನ್ನು ಸಂಪೂರ್ಣವಾಗಿ ಮರುರಚಿಸಿದ್ದರು. ಇದೇ ವೇಳೆ ಸುಬ್ರತ ಬಕ್ಷಿಯನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಾಯಿಸಿ ಚಂದ್ರಿಮಾ ಭಟ್ಟಾಚಾರ್ಯ ಅವರನ್ನು ಪಶ್ಚಿಮ ಬಂಗಾಳ ಟಿಎಂಸಿ ಅಧ್ಯಕ್ಷೆಯಾಗಿ ನೇಮಿಸಿದ್ದರು.
ಆದರೆ, ಕೇವಲ ಒಂದು ತಿಂಗಳ ಬಳಿಕ ಚಂದ್ರಿಮಾ ಭಟ್ಟಾಚಾರ್ಯ ಅವರು ಪಶ್ಚಿಮ ಬಂಗಾಳ ವಿಧಾನಸಭೆಯ ಪ್ರತಿಪಕ್ಷ ನಾಯಕನ ಕೊಠಡಿಯಲ್ಲಿ ಬಂಡಾಯ ಶಿಬಿರದ ನಾಯಕರೊಂದಿಗೆ ಕಾಣಿಸಿಕೊಂಡಿದ್ದು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಪಕ್ಷದ ಎಲ್ಲ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ ಕೆಲವೇ ಕ್ಷಣಗಳಲ್ಲಿ, ಮಮತಾ ಬ್ಯಾನರ್ಜಿ ವಿರುದ್ಧ ಬಂಡಾಯ ಎದ್ದಿರುವ ಹಾಗೂ ಇದೀಗ ವಿಧಾನಸಭೆಯ ಪ್ರತಿಪಕ್ಷ ನಾಯಕರಾಗಿರುವ ರಿತಬ್ರತ ಬ್ಯಾನರ್ಜಿ ಅವರ ಕೊಠಡಿಯಲ್ಲಿ ಅವರು ಇತರ ಬಂಡಾಯ ನಾಯಕರ ಜೊತೆ ಕಾಣಿಸಿಕೊಂಡರು.
ರಾಜೀನಾಮೆ ನೀಡಿದ ಬಳಿಕ ಅವರು, “ನಂಬಿಕೆ ಇಲ್ಲದಿದ್ದಾಗ, ವಿಶ್ವಾಸವಿಲ್ಲದಿದ್ದಾಗ ಒಟ್ಟಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿಯೇ ನಾವು ರಾಜೀನಾಮೆ ನೀಡಿದ್ದೇವೆ,” ಎಂದು ಸ್ಪಷ್ಟಪಡಿಸಿದರು.
ಶನಿವಾರ ಸಲ್ಲಿಸಿದ ತಮ್ಮ ರಾಜೀನಾಮೆ ಪತ್ರದಲ್ಲಿ ಚಂದ್ರಿಮಾ ಭಟ್ಟಾಚಾರ್ಯ ಅವರು ಪಕ್ಷದ ಎಲ್ಲಾ ಹುದ್ದೆಗಳಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ದು, ಜೊತೆಗೆ ಭಾರತದ ಚುನಾವಣಾ ಆಯೋಗದ ಮುಂದೆ ತೃಣಮೂಲ ಕಾಂಗ್ರೆಸ್‌ನ ಅಧಿಕೃತ ಪ್ರತಿನಿಧಿಯಾಗಿ (Authorised Person) ವಹಿಸಿಕೊಂಡಿದ್ದ ಹುದ್ದೆಗಳಿಗೂ ರಾಜೀನಾಮೆ ನೀಡಿದ್ದಾರೆ.
ಪ್ರಸ್ತುತ ಟಿಎಂಸಿ ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಯನ್ನು ಉಳಿಸಿಕೊಳ್ಳಲು ಮಮತಾ ಬ್ಯಾನರ್ಜಿ ಹೋರಾಟ ನಡೆಸುತ್ತಿದ್ದು, ಬಂಡಾಯ ಗುಂಪು ತಾವೇ “ನಿಜವಾದ ತೃಣಮೂಲ ಕಾಂಗ್ರೆಸ್” ಎಂದು ಮಾಡಿಕೊಂಡಿರುವ ಹಕ್ಕು ಪ್ರತಿಪಾದನೆಯನ್ನು ಪ್ರಶ್ನಿಸಿ ಚುನಾವಣಾ ಆಯೋಗದ ಮೊರೆ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಚಂದ್ರಿಮಾ ಭಟ್ಟಾಚಾರ್ಯ ಅವರ ರಾಜೀನಾಮೆ ಪಕ್ಷಕ್ಕೆ ಮತ್ತಷ್ಟು ಸಂಕಷ್ಟವನ್ನು ತಂದೊಡ್ಡಿದೆ.
ಚಂದ್ರಿಮಾ ಭಟ್ಟಾಚಾರ್ಯ ಅವರು ಹಲವು ವರ್ಷಗಳಿಂದ ಮಮತಾ ಬ್ಯಾನರ್ಜಿ ಅವರ ಅತ್ಯಂತ ಆಪ್ತರೆಂದು ಪರಿಗಣಿಸಲ್ಪಟ್ಟಿದ್ದರು. ಟಿಎಂಸಿ ಸರ್ಕಾರದಲ್ಲಿ ಹಣಕಾಸು, ಆರೋಗ್ಯ, ಪಂಚಾಯತ ಹಾಗೂ ಗ್ರಾಮೀಣಾಭಿವೃದ್ಧಿ ಸೇರಿದಂತೆ ಹಲವು ಪ್ರಮುಖ ಖಾತೆಗಳನ್ನು ಅವರು ನಿರ್ವಹಿಸಿದ್ದರು. ಮೂರು ಬಾರಿ ಶಾಸಕರಾಗಿದ್ದ ಭಟ್ಟಾಚಾರ್ಯ ಅವರು, 2026ರ ವಿಧಾನಸಭಾ ಚುನಾವಣೆಯಲ್ಲಿ ಡಮ್ ಡಮ್ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿಯ ಸೌರವ್ ಸಿಕ್ದಾರ್ ವಿರುದ್ಧ ಸೋಲು ಕಂಡರು.
ಇದಕ್ಕೂ ಕೆಲವು ವಾರಗಳ ಮೊದಲು ಮಮತಾ ಬ್ಯಾನರ್ಜಿ ಅವರ ಮತ್ತೊಬ್ಬ ಆಪ್ತ ನಾಯಕಿ ಹಾಗೂ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಕೂಡ ಪಕ್ಷದಿಂದ ಸಿಡಿದು ಹೋಗಿದ್ದರು. ಲೋಕಸಭೆಯಲ್ಲಿ ಟಿಎಂಸಿಯ ಮುಖ್ಯ ಸಚೇತಕ (Chief Whip) ಹುದ್ದೆಯಿಂದ ಅವರನ್ನು ಮೇ ಮಧ್ಯದಲ್ಲಿ ಮಮತಾ ಬ್ಯಾನರ್ಜಿ ತೆಗೆದುಹಾಕಿ, ಆ ಜವಾಬ್ದಾರಿಯನ್ನು ಕಲ್ಯಾಣ ಬ್ಯಾನರ್ಜಿ ಅವರಿಗೆ ನೀಡಿದ್ದರು. ಈ ನಿರ್ಧಾರದಿಂದ ಅಸಮಾಧಾನಗೊಂಡ ದಸ್ತಿದಾರ್ ಬಳಿಕ ಬಂಡಾಯದ ಭಾಗವಾಗಿದ್ದರು.
ಚಂದ್ರಿಮಾ ಭಟ್ಟಾಚಾರ್ಯ ಅವರ ನಡೆ, ಟಿಎಂಸಿ ಯುವ ಘಟಕದ ಮುಖ್ಯಸ್ಥೆಯಾಗಿ ಮರುನೇಮಕಗೊಂಡ ಕೆಲವೇ ದಿನಗಳಲ್ಲಿ ಬಂಡಾಯ ಶಿಬಿರಕ್ಕೆ ಸೇರಿದ್ದ ಸಂಸದೆ ಸಯೋನಿ ಘೋಷ್ ಅವರ ಕ್ರಮವನ್ನು ನೆನಪಿಸಿದೆ. ಜಾದವಪುರ ಸಂಸದೆ ಸಯೋನಿ ಘೋಷ್ ಅವರನ್ನು ನಂತರ ಆ ಹುದ್ದೆಯಿಂದ ತೆಗೆದುಹಾಕಿ, ಯುವ ನಾಯಕ ಅರ್ನಬ್ ಬ್ಯಾನರ್ಜಿ ಅವರನ್ನು ಯುವ ಘಟಕದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.
ಚಂದ್ರಿಮಾ ಭಟ್ಟಾಚಾರ್ಯ ಅವರ ನಿರ್ಧಾರಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಮಮತಾ ಬ್ಯಾನರ್ಜಿ ಪರ ಶಿಬಿರದ ಶಾಸಕ ಕುನಾಲ್ ಘೋಷ್, “ಮಮತಾ ಬ್ಯಾನರ್ಜಿ ಅವರ ಸರ್ಕಾರದಲ್ಲಿ ಪ್ರಮುಖ ಖಾತೆಗಳು ಮತ್ತು ಉನ್ನತ ಹುದ್ದೆಗಳ ಸೌಲಭ್ಯಗಳನ್ನು ಅನುಭವಿಸುತ್ತಿದ್ದಾಗ ಅವರು ಏಕೆ ರಾಜೀನಾಮೆ ನೀಡಲಿಲ್ಲ?” ಎಂದು ಪ್ರಶ್ನಿಸಿದರು.
ವಿಧಾನಸಭೆ ಚುನಾವಣೆಯ ಸೋಲಿನ ಬಳಿಕ ತೃಣಮೂಲ ಕಾಂಗ್ರೆಸ್ ಅಸ್ತಿತ್ವದ ಸವಾಲನ್ನು ಎದುರಿಸುತ್ತಿದೆ. ಪಕ್ಷದೊಳಗಿನ ಬಂಡಾಯ ತೀವ್ರಗೊಂಡಿದ್ದು, ಪಕ್ಷದ 80ಕ್ಕೂ ಹೆಚ್ಚು ಶಾಸಕರಲ್ಲಿ ಬಹುಪಾಲು ಮಂದಿ ರಿತಬ್ರತ ಬ್ಯಾನರ್ಜಿ ನೇತೃತ್ವದಲ್ಲಿ ಪ್ರತ್ಯೇಕ ಗುಂಪು ರಚಿಸಿದ್ದಾರೆ. ಇದೇ ವೇಳೆ ಪಕ್ಷದ 20 ಮಂದಿ ಸಂಸದರೂ ಬಂಡಾಯ ಎದ್ದು, ಅಲ್ಪ ಪರಿಚಿತವಾದ ಎನ್‌ಸಿಪಿಐ (NCPI) ಪಕ್ಷದಲ್ಲಿ ವಿಲೀನಗೊಂಡು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್‌ಡಿಎ)ಗೆ ಬೆಂಬಲ ಘೋಷಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ