ನಾಯಿ ಕಚ್ಚಿ ಹಾಳಾದ ₹690 ಚಪ್ಪಲಿ ದುರಸ್ತಿಗೆ ನಿರಾಕರಿಸಿದ ಕಂಪನಿಯಿಂದಲೇ ₹5,000 ಪರಿಹಾರ, ಹೊಸ ಚಪ್ಪಲಿ ಪಡೆದ ಗ್ರಾಹಕ…!

ಪಾಲಕ್ಕಾಡು: ದೇವಾಲಯಕ್ಕೆ ತೆರಳಿದ್ದ ವೇಳೆ ಹೊಸದಾಗಿ ಖರೀದಿಸಿದ್ದ ಚಪ್ಪಲಿಯನ್ನು ಬೀದಿ ನಾಯಿಯೊಂದು ಕಚ್ಚಿ ಹಾಳು ಮಾಡಿದ ಘಟನೆಗೆ ಸಂಬಂದಿಸಿದಂತೆ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದ, ಸಾಮಾಜಿಕ ಹಾಗೂ ಪರಿಸರ ಕಾರ್ಯಕರ್ತ ಬೋಬನ್ ಮಟ್ಟುಮಂತ ಅವರಿಗೆ ಮಹತ್ವದ ಜಯ ದೊರೆತಿದೆ. ₹690 ಮೌಲ್ಯದ ಸ್ಲಿಪ್ಪರ್ ಹಾನಿಯಾದ ಪ್ರಕರಣದಲ್ಲಿ ಅದನ್ನು ಉತ್ಪಾದಿಸಿದ ಕಂಪನಿಯು ₹5,000 ಪರಿಹಾರ ನೀಡುವುದರ ಜೊತೆಗೆ ಹೊಸ ಜೋಡಿ ಸ್ಲಿಪ್ಪರ್ ಅನ್ನು ಸಹ ನೀಡಲು ಒಪ್ಪಿಕೊಂಡಿದೆ.
ಈ ಪ್ರಕರಣದ ರಾಜಿ ಒಪ್ಪಂದವು ಜಿಲ್ಲಾ ಗ್ರಾಹಕ ನ್ಯಾಯಾಲಯದ ನಿರ್ದೇಶನದಂತೆ ನಡೆದ ಮಧ್ಯಸ್ಥಿಕೆ ಸಭೆಯಲ್ಲಿ ಅಂತಿಮಗೊಂಡಿತು. ಪ್ರತಿವಾದಿಯಾಗಿದ್ದ ಕೋಝಿಕ್ಕೋಡ್ ಮೂಲದ ಪಾದರಕ್ಷೆ ತಯಾರಿಕಾ ಕಂಪನಿಯು ಪರಿಹಾರ ನೀಡಲು ಒಪ್ಪಿತು.

ಈ ಘಟನೆಯು 2025ರ ಅಕ್ಟೋಬರ್ 20ರಂದು ನಡೆದಿದೆ. ಬೋಬನ್ ಮಟ್ಟುಮಂತ ಹಾಗೂ ಅವರ ಪತ್ನಿ ರಿಮ್ನಾ ಅವರು ಪಾಲಕ್ಕಾಡಿನ ಬಿ.ಒ.ಸಿ. ರಸ್ತೆಯಲ್ಲಿರುವ ಅಂಗಡಿಯೊಂದರಿಂದ ಹೊಸ ಸ್ಲಿಪ್ಪರ್ ಜೋಡಿಯನ್ನು ಖರೀದಿಸಿದ್ದರು. ಅದೇ ಸಂಜೆ ಹೊಸ ಸ್ಲಿಪ್ಪರ್ ಧರಿಸಿ ದಂಪತಿ ಪುತ್ತೂರು ದೇವಾಲಯಕ್ಕೆ ಭೇಟಿ ನೀಡಿದ್ದರು.
ದೇವಾಲಯದ ಸಂಪ್ರದಾಯದಂತೆ ಬೋಬನ್ ಅವರು ಪೂಜೆಗೆ ತೆರಳುವ ಮೊದಲು ಸ್ಲಿಪ್ಪರ್ ಅನ್ನು ಹೊರಗಡೆ ಬಿಟ್ಟು ದೇವಾಲಯದ ಒಳಗೆ ಹೋಗಿದ್ದರು. ಆದರೆ ಅವರು ಪೂಜೆ ಮುಗಿಸಿ ವಾಪಸ್‌ ಬಂದಾಗ ಬೀದಿ ನಾಯಿಯೊಂದು ಸ್ಲಿಪ್ಪರ್‌ನ ಪಟ್ಟಿಯನ್ನು ಕಚ್ಚಿ ಹರಿದು ಹಾಳು ಮಾಡಿರುವುದು ಕಂಡುಬಂತು.
ಮರುದಿನ ಹಾನಿಗೊಳಗಾದ ಸ್ಲಿಪ್ಪರ್ ಅನ್ನು ದುರಸ್ತಿ ಮಾಡಿಸಬೇಕೆಂಬ ಉದ್ದೇಶದಿಂದ ಬೋಬನ್ ಅವರು ಸ್ಥಳೀಯ ಚಪ್ಪಲಿ ದುರಸ್ತಿ ಅಂಗಡಿಗಳಿಗೆ ತೆರಳಿದರು. ಆದರೆ ಸ್ಲಿಪ್ಪರ್‌ನ ಪಟ್ಟಿಗೆ ಹೊಂದುವ ಅದೇ ಬಣ್ಣದ ಹಾಗೂ ಅದೇ ಮಾದರಿಯ ಕಚ್ಚಾ ವಸ್ತು ಎಲ್ಲಿಯೂ ಲಭ್ಯವಾಗಲಿಲ್ಲ. ಇದರಿಂದ ದುರಸ್ತಿ ಕಾರ್ಯ ಸಾಧ್ಯವಾಗಲಿಲ್ಲ.

ಪ್ರಮುಖ ಸುದ್ದಿ :-   ವಿಡಿಯೋ | ಚಿನ್ನ, ಹಣ ದೋಚಿ ಮಹಿಳೆಯನ್ನು ಬಾವಿಗೆ ತಳ್ಳಿದ ದುಷ್ಕರ್ಮಿ; 21 ಗಂಟೆಗಳ ಕಾಲ ಸಾವಿನೊಂದಿಗೆ ಹೋರಾಡಿ ಬದುಕುಳಿದ ಮಹಿಳೆ

ಇದಾದ ಬಳಿಕ ಬೋಬನ್ ಅವರು ನೇರವಾಗಿ ಸ್ಲಿಪ್ಪರ್‌ ತಯಾರಿಕಾ ಕಮಪನಿಯನ್ನು ವಾಟ್ಸಾಪ್ ಮೂಲಕ ಸಂಪರ್ಕಿಸಿದರು. ಸ್ಲಿಪ್ಪರ್ ಅನ್ನು ದುರಸ್ತಿ ಮಾಡುವಂತೆ ಮನವಿ ಸಲ್ಲಿಸಿದ ಅವರು, ಅದರ ಸಂಪೂರ್ಣ ವೆಚ್ಚವನ್ನು ತಾವೇ ಭರಿಸಲು ಸಿದ್ಧವಿರುವುದಾಗಿ ತಿಳಿಸಿದರು. ದುರಸ್ತಿ ಸಾಧ್ಯವಾಗದಿದ್ದರೆ ಅಗತ್ಯವಿರುವ ಕಚ್ಚಾ ವಸ್ತುವನ್ನಾದರೂ ಒದಗಿಸಿದರೆ ತಾವೇ ದುರಸ್ತಿ ಮಾಡಿಸಿಕೊಳ್ಳುವುದಾಗಿ ತಿಳಿಸಿದರು. ಆದರೆ ಸಂಸ್ಥೆ ಅವರ ಮನವಿಯನ್ನು ತಿರಸ್ಕರಿಸಿತು.
ಕಂಪನಿಯು ಇವರ ಮನವಿಯನ್ನು ತಿರಸ್ಕರಿಸಿದ ನಂತರ ಬೋಬನ್ ಅವರು ವಕೀಲ ರತೀಶ ಗೋಪಾಲನ್ ಅವರ ಮೂಲಕ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದರು. ಪ್ರಕರಣವನ್ನು ಪರಿಗಣಿಸಿದ ನ್ಯಾಯಾಲಯವು ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ, ಮಾತುಕತೆಯ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಸೂಚಿಸಿತು.
ಎರಡು ಸುತ್ತಿನ ಮಧ್ಯಸ್ಥಿಕೆ ಸಭೆಗಳ ಬಳಿಕ ಎರಡನೇ ಸಭೆಯಲ್ಲಿ ಅಂತಿಮವಾಗಿ ರಾಜಿ ಒಪ್ಪಂದಕ್ಕೆ ಬರಲಾಯಿತು. ಅದರಂತೆ ಪಾದರಕ್ಷೆ ತಯಾರಿಕಾ ಕಂಪನಿಯು ಬೋಬನ್ ಮಟ್ಟುಮಂತ ಅವರಿಗೆ ₹5,000 ಪರಿಹಾರ ನೀಡಲು ಹಾಗೂ ಹೊಸ ಜೋಡಿ ಸ್ಲಿಪ್ಪರ್ ನೀಡಲು ಒಪ್ಪಿಕೊಂಡಿತು. ಈ ಮೂಲಕ ಕೇವಲ ₹690 ಮೌಲ್ಯದ ಚಪ್ಪಲಿ ಹಾನಿಯಿಂದ ಆರಂಭವಾದ ಪ್ರಕರಣ, ಗ್ರಾಹಕರ ಹಕ್ಕುಗಳ ಪರವಾಗಿ ಮಹತ್ವದ ನ್ಯಾಯಾಂಗ ಜಯವಾಗಿ ಅಂತ್ಯಗೊಂಡಿದೆ.

ಪ್ರಮುಖ ಸುದ್ದಿ :-   ತವರು ಮನೆಯಿಂದ ಪತ್ನಿ ಮರಳಿ ಕರೆತರಲು ಹೋದ ವ್ಯಕ್ತಿಗೆ ಬೆಂಕಿ ಹಚ್ಚಿ ಹತ್ಯೆ ಮಾಡಿದ ಬಾವ, ರಕ್ಷಿಸಲು ಹೋದ ಮಹಿಳೆಯೂ ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement