ವಿಡಿಯೋ | ಚಿನ್ನ, ಹಣ ದೋಚಿ ಮಹಿಳೆಯನ್ನು ಬಾವಿಗೆ ತಳ್ಳಿದ ದುಷ್ಕರ್ಮಿ; 21 ಗಂಟೆಗಳ ಕಾಲ ಸಾವಿನೊಂದಿಗೆ ಹೋರಾಡಿ ಬದುಕುಳಿದ ಮಹಿಳೆ

ಕರೀಂನಗರ (ತೆಲಂಗಾಣ) :  ಕೃಷಿ ಬಾವಿಯೊಳಗೆ ಬಿದ್ದಿದ್ದ 55 ವರ್ಷದ ಮಹಿಳೆಯೊಬ್ಬರು ಜೀವ ಉಳಿಸಿಕೊಳ್ಳಲು ಸುಮಾರು 20–21 ಗಂಟೆಗಳ ಕಾಲ ಹರಸಾಹಸ ನಡೆಸಿ ಬದುಕುಳಿದಿರುವ ಘಟನೆ ತೆಲಂಗಾಣದ ಕರೀಂನಗರ ಜಿಲ್ಲೆಯ ನುಸ್ತುಲಾಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಮಹಿಳೆಯನ್ನು ದರೋಡೆ ಮಾಡಿ ಆಕೆ ತನ್ನನ್ನು ಗುರುತಿಸಬಹುದು ಎಂಬ ಭಯದಿಂದ ಆಕೆಯನ್ನು ಬಾವಿಗೆ ತಳ್ಳಿದ ಆರೋಪದ ಮೇಲೆ 21 ವರ್ಷದ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಆರೋಪಿಯಾಗಿರುವ ಧಮ್ಮ ದಿನೇಶ ರೆಡ್ಡಿ (21) ಆನ್‌ಲೈನ್ ಜೂಜು, ಬೆಟ್ಟಿಂಗ್ ಹಾಗೂ ವಿವಿಧ ಸಾಲದ ಆ್ಯಪ್‌ಗಳ ಮೂಲಕ ಪಡೆದಿದ್ದ ಸಾಲ ಸೇರಿದಂತೆ ಸುಮಾರು 4 ಲಕ್ಷ ರೂಪಾಯಿ ಸಾಲದ ಹೊರೆಗೆ ಸಿಲುಕಿದ್ದ. ಸಾಲ ತೀರಿಸಲು ಆತ ದರೋಡೆಗೆ ಸಂಚು ರೂಪಿಸಿದ್ದ. ಮಹಿಳೆಯನ್ನು ದರೋಡೆ ಮಾಡಿದ ಬಳಿಕ ಆಕೆ ತನ್ನನ್ನು ಗುರುತಿಸಬಹುದು ಎಂಬ ಕಾರಣಕ್ಕೆ ಆಕೆಯನ್ನು ಕೊಲೆ ಮಾಡುವ ಉದ್ದೇಶದಿಂದ ಬಾವಿಗೆ ತಳ್ಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಪತ್ತೆ ಪ್ರಕರಣದಿಂದ ಆರಂಭವಾದ ತನಿಖೆ 
 ದಿನಗೂಲಿ ಕಾರ್ಮಿಕೆಯಾಗಿದ್ದ ತಂಗರಾಲ ಲಕ್ಷ್ಮಿ (55) ಜುಲೈ 1ರಂದು ಕೆಲಸಕ್ಕೆಂದು ಹೋದವರು ಮನೆಗೆ ಹಿಂತಿರುಗಿ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಹಿಳೆಯ ಪುತ್ರರು ಆಕೆ ಕಾಣೆಯಾದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.
ಈ ಕುರಿತು ಕರೀಂನಗರ ಪೊಲೀಸ್ ಆಯುಕ್ತ ಘೌಸ್ ಆಲಂ ಮಾತನಾಡಿ, “ಮೊದಲ ರಾತ್ರಿ ನಮಗೆ ಕಾಣೆಯಾದ ಪ್ರಕರಣದ ದೂರು ಮಾತ್ರ ಬಂದಿತ್ತು. ಮಹಿಳೆ ಮನೆಗೆ ಹಿಂದಿರುಗಿಲ್ಲ ಎಂದು ಅವರ ಪುತ್ರ ದೂರು ನೀಡಿದ್ದರು. ಆ ವೇಳೆ ಯಾರ ಮೇಲೂ ಅನುಮಾನವಿರಲಿಲ್ಲ. ಹೀಗಾಗಿ ಸಾಮಾನ್ಯ ಕಾಣೆಯಾದ ಪ್ರಕರಣ ದಾಖಲಿಸಲಾಗಿತ್ತು” ಎಂದು ತಿಳಿಸಿದ್ದಾರೆ.
ಡಯಲ್-100 ಕರೆ ಬಳಿಕ ಪ್ರಕರಣಕ್ಕೆ ಮಹತ್ವದ ತಿರುವು
ಮಾರನೆಯ ಬೆಳಿಗ್ಗೆ ನುಸ್ತುಲಾಪುರ ಗ್ರಾಮದ ಹೊರವಲಯದಿಂದ ಡಯಲ್-100ಕ್ಕೆ ಕರೆ ಬಂದಿದ್ದು, ಸ್ಥಳೀಯ ಗ್ರಾಮಸ್ಥರು ಆಳವಾದ ಕೃಷಿ ಬಾವಿಯಿಂದ ಮಹಿಳೆಯನ್ನು ಕಾಪಾಡಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಯಿತು. ಈ ಘಟನೆ ಬಳಿಕ ತನಿಖೆಗೆ ಮಹತ್ವದ ತಿರುವು ದೊರೆಯಿತು.
ಕೆಲಸ ಕೊಡಿಸುವ ನೆಪದಲ್ಲಿ ಮಹಿಳೆಯನ್ನು ಕರೆದೊಯ್ದು ದರೋಡೆ
ರಕ್ಷಿಸಲ್ಪಟ್ಟ ಬಳಿಕ ಲಕ್ಷ್ಮಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, ಅಪರಿಚಿತ ವ್ಯಕ್ತಿಯೊಬ್ಬ ತನ್ನ ಜಮೀನಿನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ತನ್ನನ್ನು ಕರೆದುಕೊಂಡು ಹೋದನೆಂದು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಆರೋಪಿಯು ಮೊದಲು ರ್ಯಾಪಿಡೋ ಬೈಕ್ ಬುಕ್ ಮಾಡಿ ಲಕ್ಷ್ಮಿಯನ್ನು ತಿಮ್ಮಾಪುರ ಗ್ರಾಮದ ಕಡೆಗೆ ಕರೆದುಕೊಂಡು ಹೋಗಿದ್ದಾನೆ. ಆದರೆ ಅಲ್ಲಿ ಸಿಸಿಟಿವಿ ಕ್ಯಾಮೆರಾಗಳು ಹಾಗೂ ಸಾರ್ವಜನಿಕರ ಓಡಾಟ ಹೆಚ್ಚಿದ್ದರಿಂದ, ನಂತರ ತನ್ನ ಸ್ವಂತ ಮೋಟಾರ್‌ ಸೈಕಲ್‌ ಮೇಲೆ ಮಹಿಳೆಯನ್ನು ಕೂರಿಸಿಕೊಂಡು ನುಸ್ತುಲಾಪುರ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ.
ಚಿನ್ನ, ಬೆಳ್ಳಿ ಹಾಗೂ ನಗದು ದರೋಡೆ
ನಿರ್ಜನ ಪ್ರದೇಶಕ್ಕೆ ತಲುಪಿದ ಬಳಿಕ ಆರೋಪಿಯು ಮಹಿಳೆಗೆ ಬೆದರಿಕೆ ಹಾಕಿ ಸುಮಾರು 5 ಗ್ರಾಂ ಚಿನ್ನದ ಆಭರಣಗಳು, 20 ಗ್ರಾಂ ಬೆಳ್ಳಿಯ ಕಾಲುಗೆಜ್ಜೆಗಳು ಹಾಗೂ ನಗದನ್ನು ದೋಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ದರೋಡೆ ಬಳಿಕ ಏಕೈಕ ಸಾಕ್ಷಿಯಾಗಿದ್ದ ಮಹಿಳೆಯನ್ನು ಜೀವಂತ ಬಿಡಬಾರದು ಎಂಬ ಉದ್ದೇಶದಿಂದ ಕೊಲೆ ಮಾಡಲು ಮುಂದಾಗಿದ್ದಾನೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ. “ದರೋಡೆ ಮಾಡಿದ ಬಳಿಕ ಮಹಿಳೆ ಬದುಕಿದ್ದರೆ ತನ್ನನ್ನು ಗುರುತಿಸಬಹುದು ಎಂಬ ಕಾರಣದಿಂದಲೇ ಆಕೆಯನ್ನು ಕೊಲ್ಲಲು ಯತ್ನಿಸಿದ್ದಾನೆ. ಇದೇ ಅವನ ಸ್ಪಷ್ಟ ಉದ್ದೇಶವಾಗಿತ್ತು, ಹೀಗಾಗಿ ಆಕೆಯನ್ನು ಸಾಯಿಸಲು ಬಾವಿಗೆ ತಳ್ಳಿದ್ದಾನೆ” ಎಂದು ಪೊಲೀಸರು ಹೇಳಿದ್ದಾರೆ.
ಜೀವ ಉಳಿಸಿಕೊಳ್ಳಲು ಹರಸಾಹಸ
ಪೊಲೀಸರ ಪ್ರಕಾರ, ಆರೋಪಿಯು ಲಕ್ಷ್ಮಿಯನ್ನು ಕೃಷಿ ಬಾವಿಗೆ ತಳ್ಳಿದ ನಂತರ ಆರಂಭದಲ್ಲಿ ಮಹಿಳೆ ಬಾವಿಯೊಳಗಿದ್ದ ಒಂದು ಹಗ್ಗವನ್ನು ಹಿಡಿದುಕೊಂಡು ತೇಲುತ್ತಿದ್ದಳು. ಇದನ್ನು ಗಮನಿಸಿದ ಆರೋಪಿಯು ಆ ಹಗ್ಗವನ್ನೇ ಕತ್ತರಿಸಿದ್ದಾನೆ.
ಆದರೆ ಲಕ್ಷ್ಮಿಗೆ ಈಜು ಬರುತ್ತಿದ್ದುದರಿಂದ ಅವರು ಮತ್ತೊಂದು ಮೋಟಾರ್ ಪೈಪ್‌ಗೆ ಅಳವಡಿಸಲಾಗಿದ್ದ ಕೇಬಲ್ ಹಿಡಿದುಕೊಂಡು ಇಡೀ ರಾತ್ರಿ ಕಳೆದಿದ್ದಾರೆ. “ಸುಮಾರು 20ರಿಂದ 21 ಗಂಟೆಗಳ ಕಾಲ ಮಹಿಳೆ ಬಾವಿಯೊಳಗೇ ಇದ್ದರು. ಪ್ರದೇಶ ಸಂಪೂರ್ಣ ನಿರ್ಜನವಾಗಿದ್ದರಿಂದ ಅವರ ಕೂಗು ಯಾರಿಗೂ ಕೇಳಿಸಲಿಲ್ಲ. ಮರುದಿನ ಬೆಳಗ್ಗೆ ಬಾವಿಯಿಂದ ಕೂಗು ಕೇಳಿ ಅಲ್ಲಿಗೆ ಬಂದ ಸ್ಥಳೀಯ ರೈತರು ಅವರನ್ನು ರಕ್ಷಿಸಿದರು” ಎಂದು ಪೊಲೀಸರು ತಿಳಿಸಿದ್ದಾರೆ.
https://x.com/muchatlu_/status/2073560259130736685
ತಾಂತ್ರಿಕ ಸಾಕ್ಷ್ಯಗಳ ಆಧಾರದಲ್ಲಿ ಆರೋಪಿ ಬಂಧನ
ಮಹಿಳೆಯ ರಕ್ಷಣೆಯ ಬಳಿಕ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿ ಆರೋಪಿಯನ್ನು ಪತ್ತೆಹಚ್ಚುವ ಕಾರ್ಯ ಆರಂಭಿಸಿದರು. ರ್ಯಾಪಿಡೋ ಬುಕ್ಕಿಂಗ್ ದಾಖಲೆಗಳು, ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಮೊಬೈಲ್ ಫೋನ್ ತಾಂತ್ರಿಕ ಮಾಹಿತಿಯನ್ನು ಪರಿಶೀಲಿಸಿ ಆರೋಪಿಯನ್ನು ಗುರುತಿಸಿ ಬಂಧಿಸಲಾಯಿತು.
“ರ್ಯಾಪಿಡೋ ಚಾಲಕರನ್ನು ವಿಚಾರಣೆ ನಡೆಸಿ, ತಾಂತ್ರಿಕ ಸಾಕ್ಷ್ಯಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಬಳಿಕ ಆರೋಪಿಯನ್ನು ಬಂಧಿಸಲಾಯಿತು. ವಿಚಾರಣೆ ವೇಳೆ ಆತ ಅಪರಾಧವನ್ನು ಒಪ್ಪಿಕೊಂಡಿದ್ದಾನೆ” ಎಂದು ಪೊಲೀಸ್ ಆಯುಕ್ತ ತಿಳಿಸಿದ್ದಾರೆ.
ಕದ್ದ ಚಿನ್ನ ಖರೀದಿಸಿದ ಜ್ಯುವೆಲ್ಲರ್ ಬಂಧನ
ತನಿಖೆಯಲ್ಲಿ ಆರೋಪಿಯು ಕಳವು ಮಾಡಿದ ಚಿನ್ನದ ಆಭರಣಗಳನ್ನು ಸ್ಥಳೀಯ ಆಭರಣ ವ್ಯಾಪಾರಿಯೊಬ್ಬರಿಗೆ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. “ಕಳವು ಮಾಡಿದ ಆಸ್ತಿಯೆಂಬುದು ತಿಳಿದಿದ್ದರೂ ಆಭರಣ ವ್ಯಾಪಾರಿಯು ಚಿನ್ನವನ್ನು ಖರೀದಿಸಿದ್ದಾನೆ. ಹೀಗಾಗಿ ಕಳವು ಆಸ್ತಿ ಸ್ವೀಕರಿಸಿದ ಆರೋಪದಡಿ ಆತನನ್ನೂ ಬಂಧಿಸಲಾಗಿದೆ” ಎಂದು ಪೊಲೀಸ್‌ ಆಯುಕ್ತ ಘೌಸ್ ಆಲಂ ತಿಳಿಸಿದ್ದಾರೆ.
ಆನ್‌ಲೈನ್ ಜೂಜು, ಬೆಟ್ಟಿಂಗ್‌ನಿಂದ 4 ಲಕ್ಷ ರೂ. ಸಾಲ
ಪೊಲೀಸರ ತನಿಖೆಯಲ್ಲಿ ಧಮ್ಮ ದಿನೇಶ ರೆಡ್ಡಿ ಆನ್‌ಲೈನ್ ಜೂಜು, ಬೆಟ್ಟಿಂಗ್ ವೇದಿಕೆಗಳು ಹಾಗೂ ವಿವಿಧ ಸಾಲದ ಆ್ಯಪ್‌ಗಳ ಮೂಲಕ ಸುಮಾರು 4 ಲಕ್ಷ ರೂಪಾಯಿ ಸಾಲದಲ್ಲಿ ಮುಳುಗಿದ್ದ ಎಂಬುದು ಬಹಿರಂಗವಾಗಿದೆ. ಇದರಿಂದ ಪಾರಾಗಲು ದರೋಡೆಗೆ ಸಂಚು ರೂಪಿಸಿ, ನಂತರ ಕೊಲೆ ಯತ್ನ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಬಂಧಿತ ಆರೋಪಿಯನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement