ಪಹಲ್ಗಾಮ್ ಭಯೋತ್ಪಾದಕ ದಾಳಿ : ಎನ್‌ಐಎ ಪೂರಕ ಚಾರ್ಜ್‌ಶೀಟ್‌ನಲ್ಲಿ ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಹೆಸರು

ನವದೆಹಲಿ : ಪಹಲ್ಗಾಮ್ ಭಯೋತ್ಪಾದಕ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸೋಮವಾರ (ಜುಲೈ 6) ಪಾಕಿಸ್ತಾನ ಮೂಲದ ಉಗ್ರ ಹಾಗೂ ಲಷ್ಕರ್-ಎ-ತೊಯ್ಬಾ (LeT) ಮುಖ್ಯಸ್ಥ ಹಫೀಜ್ ಸಯೀದ್‌ನನ್ನು ಪೂರಕ ಆರೋಪಪಟ್ಟಿಯಲ್ಲಿ ಆರೋಪಿಯಾಗಿ ಹೆಸರಿಸಿದೆ.
ಜಮ್ಮುವಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಪೂರಕ ಆರೋಪಪಟ್ಟಿಯಲ್ಲಿ ಹಫೀಜ್ ಸಯೀದ್‌ನನ್ನು ವೈಯಕ್ತಿಕ ಆರೋಪಿಯಾಗಿಯೂ, ನಿಷೇಧಿತ ಉಗ್ರ ಸಂಘಟನೆ ಲಷ್ಕರ್-ಎ-ತೊಯ್ಬಾ (LeT) ಮತ್ತು ಅದರ ಸಕ್ರಿಯ ಪ್ರಾಕ್ಸಿ ಸಂಘಟನೆ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಮುಖ್ಯಸ್ಥನಾಗಿಯೂ ಆರೋಪಿಸಲಾಗಿದೆ ಎಂದು ಎನ್‌ಐಎ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಹಫೀಜ್ ಸಯೀದ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS), 2023 ಹಾಗೂ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (UAPA), 1967ರ ವಿವಿಧ ಸೆಕ್ಷನ್‌ಗಳಡಿ ಆರೋಪಗಳನ್ನು ದಾಖಲಿಸಲಾಗಿದೆ. ಭಾರತ ವಿರುದ್ಧ ಯುದ್ಧ ಸಾರುವುದು ಹಾಗೂ ಗಡಿ ಆಚೆಯಿಂದ ಭಾರತದಲ್ಲಿ ಭಯೋತ್ಪಾದಕ ಸಂಚು ರೂಪಿಸಿದ ಆರೋಪಗಳನ್ನೂ ಎನ್‌ಐಎ ಆರೋಪಪಟ್ಟಿಯಲ್ಲಿ ಸೇರಿಸಿದೆ.
ಈ ಪೂರಕ ಆರೋಪಪಟ್ಟಿಯು ಈ ಹಿಂದೆ ಸಲ್ಲಿಸಲಾಗಿದ್ದ 1,597 ಪುಟಗಳ ಮೂಲ ಆರೋಪಪಟ್ಟಿಯ ಮುಂದುವರಿದ ಭಾಗವಾಗಿದ್ದು, ಪಾಕಿಸ್ತಾನದ ಸಂಚು, ಹಫೀಜ್ ಸಯೀದ್‌ನ ಪಾತ್ರ ಹಾಗೂ ಪ್ರಕರಣದಲ್ಲಿ ಎನ್‌ಐಎ ವೈಜ್ಞಾನಿಕ ತನಿಖೆ ಮತ್ತು ಸ್ಥಳ ಪರಿಶೀಲನೆಯ ಮೂಲಕ ಸಂಗ್ರಹಿಸಿರುವ ಸಾಕ್ಷ್ಯಾಧಾರಗಳ ವಿವರಗಳನ್ನು ಒಳಗೊಂಡಿದೆ ಎಂದು ಸಂಸ್ಥೆ ತಿಳಿಸಿದೆ.
ಹಿಂದಿನ ಆರೋಪಪಟ್ಟಿಯಲ್ಲಿ ಯಾರಿದ್ದರು ?
2025ರ ಡಿಸೆಂಬರ್ 15ರಂದು ಸಲ್ಲಿಸಲಾಗಿದ್ದ ಮೊದಲ ಆರೋಪಪಟ್ಟಿಯಲ್ಲಿ ಪಾಕಿಸ್ತಾನದ ಹ್ಯಾಂಡ್ಲರ್ ಸಾಜಿದ್ ಜಾಟ್‌ನನ್ನು ಪ್ರಮುಖ ಆರೋಪಿಯಾಗಿ ಹೆಸರಿಸಲಾಗಿತ್ತು. ಜೊತೆಗೆ 2025ರ ಜುಲೈನಲ್ಲಿ ನಡೆದ ‘ಆಪರೇಷನ್ ಮಹಾದೇವ’ ವೇಳೆ ಭದ್ರತಾ ಪಡೆಗಳಿಂದ ಹತ್ಯೆಯಾದ ಮೂವರು ಉಗ್ರರು, ಬಂಧಿತ ಇಬ್ಬರು ಆರೋಪಿಗಳು ಹಾಗೂ ಉಗ್ರ ದಾಳಿಯ ಸಂಚು, ಯೋಜನೆ, ನೆರವು ಮತ್ತು ಅನುಷ್ಠಾನದಲ್ಲಿ ಪಾತ್ರವಹಿಸಿದ್ದಕ್ಕಾಗಿ ನಿಷೇಧಿತ ಲಷ್ಕರ್-ಎ-ತೊಯ್ಬಾ/ಟಿಆರ್‌ಎಫ್ (LeT/TRF) ಸಂಘಟನೆಯನ್ನು ಆರೋಪಪಟ್ಟಿಯಲ್ಲಿ ಸೇರಿಸಲಾಗಿತ್ತು.
ಪಹಲ್ಗಾಮ್ ಉಗ್ರ ದಾಳಿ
2025ರ ಏಪ್ರಿಲ್ 22ರಂದು ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಈ ಭೀಕರ ಉಗ್ರ ದಾಳಿಯಲ್ಲಿ ಧರ್ಮ ಆಧಾರಿತ ಹತ್ಯೆಗಳು ನಡೆದಿದ್ದವು. ಪಾಕಿಸ್ತಾನ ಪ್ರಾಯೋಜಿತ ಉಗ್ರರು ನಡೆಸಿದ ಈ ದಾಳಿಯಲ್ಲಿ 25 ಮಂದಿ ನಿರಪರಾಧ ಪ್ರವಾಸಿಗರು ಹಾಗೂ ಒಬ್ಬ ಸ್ಥಳೀಯ ನಾಗರಿಕ ಸಾವಿಗೀಡಾಗಿದ್ದರು.
ಪ್ರಕರಣದ ಸಂಬಂಧ ಆರಂಭದಲ್ಲಿ ಪಹಲ್ಗಾಮ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಬಳಿಕ ಜಮ್ಮು-ಕಾಶ್ಮೀರ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ ನಂತರ, ಕೇಂದ್ರ ಗೃಹ ಸಚಿವಾಲಯದ ಆದೇಶದ ಮೇರೆಗೆ ಪ್ರಕರಣವನ್ನು ಎನ್‌ಐಎಗೆ ವರ್ಗಾಯಿಸಲಾಗಿತ್ತು.
ಈ ಕುರಿತು ಎನ್‌ಐಎ ಹೇಳಿಕೆ ನೀಡಿದ್ದು, “ಭಾರತದ ನೆಲದಲ್ಲಿ ಗಡಿ ಆಚೆಯಿಂದ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕ ಸಂಚಿನ ಸಂಪೂರ್ಣ ಜಾಲವನ್ನು ಭೇದಿಸಲು ತನಿಖೆ ಇನ್ನೂ ಮುಂದುವರಿದಿದೆ” ಎಂದು ತಿಳಿಸಿದೆ.
ಭಾರತದ ಪ್ರತೀಕಾರ ಕ್ರಮ
ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತವು 2025ರ ಮೇ 7ರ ಮುಂಜಾನೆ ಸೇನಾ ಕಾರ್ಯಾಚರಣೆ ಆರಂಭಿಸಿತ್ತು. ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK) ಪ್ರದೇಶಗಳಲ್ಲಿದ್ದ ಹಲವು ಉಗ್ರರ ಮೂಲಸೌಕರ್ಯಗಳನ್ನು ಗುರಿಯಾಗಿಸಿ ಧ್ವಂಸಗೊಳಿಸಲಾಗಿತ್ತು. ನೂರಕ್ಕೂ ಹೆಚ್ಚು ಉಗ್ರರು ಸಾವಿಗೀಡಾಗಿದ್ದರು.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement