ನವದೆಹಲಿ/ಜಕಾರ್ತಾ : ಭಾರತ ಮತ್ತು ಇಂಡೋನೇಷ್ಯಾ ನಡುವಿನ ರಕ್ಷಣಾ ಸಹಕಾರಕ್ಕೆ ಮಹತ್ವದ ಬಲ ದೊರೆತಿದ್ದು, ಇಂಡೋನೇಷ್ಯಾ ಸೇನೆಗೆ ಭಾರತದ ಅತ್ಯಾಧುನಿಕ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳ ಪೂರೈಕೆ ಒಪ್ಪಂದಕ್ಕೆ ಮಂಗಳವಾರ ಸಹಿ ಹಾಕಲಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಇಂಡೋನೇಷ್ಯಾ ಭೇಟಿಯ ವೇಳೆ ಈ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಮೂರು ರಾಷ್ಟ್ರಗಳ ಪ್ರವಾಸದ ಮೊದಲ ಹಂತವಾಗಿ ಮೋದಿ ಇಂಡೋನೇಷ್ಯಾಗೆ ಭೇಟಿ ನೀಡಿದ್ದು, ಉಭಯ ದೇಶಗಳ ನಡುವಿನ ರಕ್ಷಣೆ, ಭದ್ರತೆ ಹಾಗೂ ಆರ್ಥಿಕ ಸಹಕಾರಕ್ಕೆ ಹೊಸ ಆಯಾಮ ದೊರೆತಿದೆ.
ಇದರೊಂದಿಗೆ, ಭಾರತದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿರುವ ಅಸ್ತ್ರ (Astra) ಬಿಯಾಂಡ್-ವಿಜುವಲ್-ರೇಂಜ್ (BVR) ಗಾಯಿಂದ ಗಾಳಿಗೆ ನೆಗೆಯುವ ಕ್ಷಿಪಣಿಗಳನ್ನೂ ಇಂಡೋನೇಷ್ಯಾ ಖರೀದಿಸಲು ಮುಂದಾಗಿದೆ. ಶತ್ರುಗಳ ಅತ್ಯಂತ ವೇಗದ ಹಾಗೂ ಚುರುಕಾದ ಯುದ್ಧವಿಮಾನಗಳನ್ನು ದೂರದಿಂದಲೇ ಪತ್ತೆಹಚ್ಚಿ ನಾಶಪಡಿಸುವ ಸಾಮರ್ಥ್ಯ ಹೊಂದಿರುವ ಈ ಕ್ಷಿಪಣಿ, ಇತ್ತೀಚಿನ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಜಾಗತಿಕ ಮಟ್ಟದಲ್ಲಿ ಅದರ ಮೇಲಿನ ವಿಶ್ವಾಸವನ್ನು ಹೆಚ್ಚಿಸಿದೆ ಎಂದು ಮೂಲಗಳು ತಿಳಿಸಿವೆ.
ಇದಲ್ಲದೆ, ಇಂಡೋನೇಷ್ಯಾಗೆ ಬ್ರಹ್ಮೋಸ್ ಕ್ಷಿಪಣಿಗಳ ಹೆಚ್ಚುವರಿ ಬ್ಯಾಟರಿಗಳನ್ನು ಪೂರೈಸುವ ಸಾಧ್ಯತೆಯೂ ಇದೆ. ಉಭಯ ರಾಷ್ಟ್ರಗಳು ಸಮುದ್ರ ಸುರಕ್ಷತೆ ಮತ್ತು ಕಡಲ ಭದ್ರತಾ ಸಹಕಾರ ಕುರಿತ ಮಹತ್ವದ ಒಪ್ಪಂದದ ಚೌಕಟ್ಟನ್ನೂ ಅಂತಿಮಗೊಳಿಸಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ಭಾರತ ಮತ್ತು ಇಂಡೋನೇಷ್ಯಾ ನಡುವಿನ ಪರಸ್ಪರ ವಿಶ್ವಾಸವು ರಕ್ಷಣೆ, ಭದ್ರತೆ ಹಾಗೂ ಸಮುದ್ರ ಸಹಕಾರವನ್ನು ಮತ್ತಷ್ಟು ಬಲಪಡಿಸುತ್ತಿದೆ. ಇಂದು ರಕ್ಷಣಾ ವಿನಿಮಯ, ವಿಪತ್ತು ನಿರ್ವಹಣೆ ಹಾಗೂ ಕೈಗಾರಿಕಾ ಸಹಕಾರ ವಿಸ್ತರಣೆಗೆ ಮಹತ್ವದ ಒಪ್ಪಂದಕ್ಕೆ ಬಂದಿದ್ದೇವೆ. ಭಾರತದ ಗುಣಮಟ್ಟದ ಮತ್ತು ಕೈಗೆಟುಕುವ ಔಷಧಗಳು ಇಂಡೋನೇಷ್ಯಾ ನಾಗರಿಕರಿಗೆ ಇನ್ನಷ್ಟು ಸುಲಭವಾಗಿ ಲಭ್ಯವಾಗಲಿವೆ. ಅಲ್ಲದೆ, ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಯ ಸಾಮರ್ಥ್ಯ ವೃದ್ಧಿಗೂ ಭಾರತ ಸಹಕಾರ ನೀಡಲಿದೆ” ಎಂದು ಹೇಳಿದರು.
ಖನಿಜ ಪೂರೈಕೆ ಸರಪಳಿ ಬಲಪಡಿಸುವ ಒಪ್ಪಂದ
ಜಾಗತಿಕ ಮಟ್ಟದಲ್ಲಿ ನಿರ್ಣಾಯಕ ಖನಿಜಗಳ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಉಕ್ಕು ಉದ್ಯಮಕ್ಕೆ ಅಗತ್ಯವಾದ ನಿರ್ಣಾಯಕ ಖನಿಜಗಳು ಹಾಗೂ ತಂತ್ರಜ್ಞಾನಗಳ ಸಹಕಾರ ಕುರಿತ ಒಪ್ಪಂದಕ್ಕೂ ಉಭಯ ರಾಷ್ಟ್ರಗಳು ಸಹಿ ಹಾಕಿವೆ. ಈ ಒಪ್ಪಂದವು ಖನಿಜ ಪೂರೈಕೆ ಸರಪಳಿಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಿದೆ.
ಚುನಾವಣಾ ತಂತ್ರಜ್ಞಾನದಲ್ಲೂ ಭಾರತದ ನೆರವು
ಭಾರತದ ಚುನಾವಣಾ ನಿರ್ವಹಣಾ ವ್ಯವಸ್ಥೆಗೆ ದೊರೆತ ಮತ್ತೊಂದು ಮಹತ್ವದ ಮಾನ್ಯತೆಯಾಗಿ, ಇಂಡೋನೇಷ್ಯಾಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಎಲೆಕ್ಟ್ರಾನಿಕ್ ಮತಯಂತ್ರಗಳ (EVM) ಅಭಿವೃದ್ಧಿಗೆ ಭಾರತ ತಾಂತ್ರಿಕ ಸಹಕಾರ ನೀಡುವ ನಿರೀಕ್ಷೆಯಿದೆ. ಈ ಮೂಲಕ ಭಾರತದ ಚುನಾವಣಾ ತಂತ್ರಜ್ಞಾನ ಪರಿಣತಿಯನ್ನು ಆಗ್ನೇಯ ಏಷ್ಯಾದ ರಾಷ್ಟ್ರಕ್ಕೆ ವಿಸ್ತರಿಸುವ ಮಹತ್ವದ ಹೆಜ್ಜೆ ಎಂದು ಈ ಕ್ರಮವನ್ನು ಪರಿಗಣಿಸಲಾಗಿದೆ.
ಭಾರತ–ಇಂಡೋನೇಷ್ಯಾ ನಡುವಿನ ಈ ಹೊಸ ಒಪ್ಪಂದಗಳು ರಕ್ಷಣಾ, ಸಮುದ್ರ ಭದ್ರತೆ, ಆರೋಗ್ಯ, ಕೈಗಾರಿಕೆ, ಖನಿಜ ಸಂಪನ್ಮೂಲ ಹಾಗೂ ಚುನಾವಣಾ ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಮಹತ್ವದ ಮೈಲಿಗಲ್ಲಾಗಿವೆ.


ನಿಮ್ಮ ಕಾಮೆಂಟ್ ಬರೆಯಿರಿ