37 ವರ್ಷಗಳ ಬಳಿಕ ಜೈಲಿನಿಂದ ಹೊರಬಂದ ದೇಶದ ಅತ್ಯಂತ ದೀರ್ಘಾವಧಿ ಕೈದಿ ಸಾಯಿಬಣ್ಣ

 ಬೆಂಗಳೂರು: ನಿಧಾನವಾದ ಹೆಜ್ಜೆಗಳು, ಉದ್ದನೆಯ ಬಿಳಿ ಗಡ್ಡ, ಕಾಲದ ಗುರುತು ಮೂಡಿಸಿರುವ ಬಿಳಿ ಕೂದಲಿನ 72 ವರ್ಷದ ಸಾಯಿಬಣ್ಣ ಎನ್‌. ನಾಟೀಕರ ಅವರು ಇತ್ತೀಚೆಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ದ್ವಾರದಿಂದ ಹೊರಬಂದರು. ಸುಮಾರು 37 ವರ್ಷಗಳ ಕಾಲ ಜೈಲಿನಲ್ಲಿದ್ದ ಅವರು ಕೊನೆಗೂಜೈಲಿನಿಂದ ಹೊರಬಂದಿದ್ದಾರೆ.
ಉತ್ತಮ ನಡವಳಿಕೆ ಹಾಗೂ ಪುನರ್ವಸತಿ ನೀತಿಯಡಿ ಕರ್ನಾಟಕ ಸರ್ಕಾರ ಶನಿವಾರ ಬಿಡುಗಡೆಗೊಳಿಸಿದ 24 ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿಗಳಲ್ಲಿ ಸಾಯಿಬಣ್ಣ ಕೂಡ ಒಬ್ಬರು. ಆದರೆ, ಅವರ ಬಿಡುಗಡೆ ದೇಶಾದ್ಯಂತ ಗಮನ ಸೆಳೆದಿದೆ. ಇದಕ್ಕೆ ಕಾರಣ ಅವರು ಭಾರತದಲ್ಲೇ ಅತ್ಯಂತ ದೀರ್ಘಾವಧಿ ಶಿಕ್ಷೆ ಅನುಭವಿಸಿದ ಕೈದಿ ಎಂದು ಪರಿಗಣಿಸಲ್ಪಟ್ಟಿದ್ದಾರೆ.
ಕಾರಾಗೃಹ ಇಲಾಖೆಯ ಅಧಿಕಾರಿಗಳ ಪ್ರಕಾರ, ಸಾಯಿಬಣ್ಣ ಭಾರತದ ಅತ್ಯಂತ ದೀರ್ಘಾವಧಿ ಶಿಕ್ಷೆ ಅನುಭವಿಸಿದ ಕೈದಿಯಾಗಿದ್ದಾರೆ. ಅವರ ಬಿಡುಗಡೆ ಕುರಿತು ಕಾರಾಗೃಹಗಳ ಮಹಾನಿರ್ದೇಶಕ (ಡಿಜಿಪಿ) ಅಲೋಕಕುಮಾರ ಮಾತನಾಡಿ, “ನಾನು ಬೆಳಗಾವಿ ಮತ್ತು ಕಲಬುರಗಿ ಕಾರಾಗೃಹಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಸಾಯಿಬಣ್ಣ ಅವರೊಂದಿಗೆ ಮಾತನಾಡಿದ್ದೆ. ಜೈಲಿನೊಳಗೆ ಅವರ ನಡವಳಿಕೆ ಅತ್ಯಂತ ಉತ್ತಮವಾಗಿತ್ತು,” ಎಂದು ತಿಳಿಸಿದ್ದಾರೆ.
ಅನುಮಾನವೇ ಬದುಕನ್ನು ನಾಶಪಡಿಸಿತು
ಕಲಬುರಗಿ ಜಿಲ್ಲೆಯ ಜೇವರ್ಗಿ ಮೂಲದ ಸಾಯಿಬಣ್ಣ, ಸಹಕಾರ ಸಂಘವೊಂದರಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು. ಪ್ರೌಢಶಾಲೆಯಲ್ಲೇ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದರೂ, ಸ್ಥಿರ ಉದ್ಯೋಗದೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದ ಅವರಲ್ಲಿ ತಮ್ಮ ಇಬ್ಬರು ಪತ್ನಿಯರ ನಡತೆಯ ಬಗ್ಗೆ ಬೆಳೆದ ಅನುಮಾನವೇ ಅವರ ಬದುಕನ್ನು ದುರಂತದತ್ತ ಕೊಂಡೊಯ್ದಿತು.
1988ರಲ್ಲಿ ಮೊದಲ ಪತ್ನಿಯ ಕೊಲೆ
1988ರಲ್ಲಿ ತಮ್ಮ ಮೊದಲ ಪತ್ನಿ ಮಲ್ಕವ್ವ ಅನೈತಿಕ ಸಂಬಂಧ ಹೊಂದಿದ್ದಾರೆ ಎಂಬ ಅನುಮಾನ ಸಾಯಿಬಣ್ಣ ಅವರಿಗೆ ಮೂಡಿತ್ತು. ಈ ಅನುಮಾನದ ಹಿನ್ನೆಲೆಯಲ್ಲಿ ಅವರು ಮಲ್ಕವ್ವ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದರು. ನಂತರ ಪೊಲೀಸರು ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಜೀವಾವಧಿ ಶಿಕ್ಷೆಗೆ ಗುರಿಪಡಿಸಲಾಯಿತು.
ಪೆರೋಲ್, ಎರಡನೇ ವಿವಾಹ ಮತ್ತು ಕೊಲೆ
ಮೊದಲ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ವೇಳೆ 1994ರಲ್ಲಿ ಸಾಯಿಬಣ್ಣ ಅವರಿಗೆ ಪೆರೋಲ್ ಮಂಜೂರಾಯಿತು. ಈ ಅವಧಿಯಲ್ಲಿ ಅವರು ಎರಡನೇ ಮದುವೆಯಾಗಿ ಹೊಸ ಕುಟುಂಬ ಆರಂಭಿಸಿದರು. ಬಳಿಕ ಅವರಿಗೆ  ಪುತ್ರಿಯೂ ಜನಿಸಿದಳು.
ಆದರೆ, ಮತ್ತೊಮ್ಮೆ ಪೆರೋಲ್ ಮೇಲೆ ಹೊರಬಂದಿದ್ದ ವೇಳೆ ತಮ್ಮ ಎರಡನೇ ಪತ್ನಿ ನಾಗಮ್ಮ ಕೂಡ ಅನೈತಿಕ ಸಂಬಂಧ ಹೊಂದಿದ್ದಾರೆ ಎಂಬ ಅನುಮಾನ ಅವರಿಗೆ ಕಾಡಿತು. ಕೋಪೋದ್ರಿಕ್ತರಾದ ಅವರು ತೀಕ್ಷ್ಣವಾದ ಆಯುಧದಿಂದ ನಾಗಮ್ಮ ಅವರನ್ನು ಕೊಚ್ಚಿ ಕೊಲೆ ಮಾಡಿದರು ಎನ್ನಲಾಗಿದೆ.
ಈ ವೇಳೆ ತಾಯಿಯನ್ನು ರಕ್ಷಿಸಲು ಮುಂದಾದ ಪುತ್ರಿ ವಿಜಯಲಕ್ಷ್ಮಿಯನ್ನೂ ಅವರು ಹತ್ಯೆ ಮಾಡಿದರು. ಬಳಿಕ ತಮ್ಮನ್ನೂ ತಾವೇ ಚಾಕುವಿನಿಂದ ಇರಿದು ಆತ್ಮಹತ್ಯೆಗೆ ಯತ್ನಿಸಿದರೂ, ಅದರಿಂದ ಪಾರಾದರು.
ಸುಮಾರು 37 ವರ್ಷಗಳ ಜೈಲು ಶಿಕ್ಷೆಯ ಬಳಿಕ ಬಿಡುಗಡೆಯಾದ ಸಾಯಿಬಣ್ಣ ಮೂರು ಕೊಲೆಗಳನ್ನು ಎಸಗಿದ್ದರೂ ಅವರು ಯಾವುದೇ ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನನ್ನ ಇಬ್ಬರು ಪತ್ನಿಯರೂ ನನಗೆ ಮೋಸ ಮಾಡಿದ್ದರು ಎಂಬುದಕ್ಕೆ ನನ್ನ ಬಳಿ ಸಾಕ್ಷಿ ಇದೆ. ಮೊದಲ ಪತ್ನಿಯೊಂದಿಗೆ ಸಂಬಂಧ ಹೊಂದಿದ್ದ ವ್ಯಕ್ತಿ ತಪ್ಪಿಸಿಕೊಂಡಿದ್ದರಿಂದ ನಾನು ನನ್ನ ಪತ್ನಿಯನ್ನು ಕೊಂದೆ. ಎರಡನೇ ಪತ್ನಿಯ ತಾಯಿ ಅವಳನ್ನು ತಪ್ಪು ದಾರಿಗೆ ಪ್ರೇರೇಪಿಸುತ್ತಿದ್ದರು. ನನ್ನ ಪತ್ನಿ ಕುರುಡಳಾಗಿದ್ದರೂ ನನಗೆ ಸಮಸ್ಯೆ ಇರಲಿಲ್ಲ. ಆದರೆ, ಆಕೆ ನಿಷ್ಠಾವಂತಳಾಗಿರುವುದು ಮಾತ್ರ ನನಗೆ ಮುಖ್ಯವಾಗಿತ್ತು,” ಎಂದು ಹೇಳಿದರು.
ಇದೇ ವೇಳೆ, ಈ ಘಟನೆಗಳಿಂದ ತಾನು ಸರ್ಕಾರಿ ಉದ್ಯೋಗವನ್ನಷ್ಟೇ ಅಲ್ಲ, ಈಗ ಒಂದು ಕೋಟಿಗೂ ಅಧಿಕ ಮೌಲ್ಯದ ಸುಮಾರು 10 ಎಕರೆ ಜಮೀನನ್ನೂ ಕಳೆದುಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ.
ಮರಣದಂಡನೆಯಿಂದ ಜೀವಾವಧಿ ಶಿಕ್ಷೆಗೆ
ಎರಡನೇ ಪತ್ನಿ ಹಾಗೂ ಪುತ್ರಿಯ ಹತ್ಯೆ ಪ್ರಕರಣದಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯ, ಅಪರಾಧದ ಕ್ರೂರತೆಯನ್ನು ಉಲ್ಲೇಖಿಸಿ 2003ರಲ್ಲಿ ಸೈಬಣ್ಣ ಅವರಿಗೆ ಮರಣದಂಡನೆ ವಿಧಿಸಿತ್ತು. ಆದರೆ, ನಂತರ ಕರ್ನಾಟಕ ಹೈಕೋರ್ಟ್ ಆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿತು.
ಜೈಲು ಜೀವನದ ವೇಳೆ ಸೈಬಣ್ಣ ಸುಮಾರು 10 ವರ್ಷಗಳ ಕಾಲ ಏಕಾಂತ ಬಂಧನದಲ್ಲಿದ್ದರು. ಈ ದೀರ್ಘಾವಧಿಯ ಏಕಾಂತ ಬಂಧನವನ್ನು ಕರ್ನಾಟಕ ಹೈಕೋರ್ಟ್ “ಕಾನೂನುಬಾಹಿರ ಹಾಗೂ ಅಮಾನವೀಯ” ಎಂದು ತೀರ್ಪು ನೀಡಿತ್ತು. ಅಲ್ಲದೆ, ಅವರ ಕ್ಷಮಾದಾನ ಅರ್ಜಿ ಇತ್ಯರ್ಥವಾಗಲು ಉಂಟಾದ ದೀರ್ಘ ವಿಳಂಬವೂ ಅವರಿಗೆ ಅನುಕೂಲಕರ ಅಂಶವಾಗಿ ಪರಿಣಮಿಸಿತು.
ಕೊನೆಗೆ, ಸುಮಾರು 37 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ಬಳಿಕ ಮಾನವೀಯ ನೆಲೆಯಲ್ಲಿ ಅವರನ್ನು ಬಿಡುಗಡೆ ಮಾಡಲಾಯಿತು.
ಉತ್ತಮ ನಡವಳಿಕೆ ಪ್ರದರ್ಶಿಸಿದ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿಗಳ ಪುನರ್ವಸತಿ ನೀತಿಯ ಭಾಗವಾಗಿ ಕರ್ನಾಟಕ ಸರ್ಕಾರ ಬಿಡುಗಡೆಗೊಳಿಸಿದ 24 ಕೈದಿಗಳಲ್ಲಿ ಸೈಬಣ್ಣ ಕೂಡ ಸೇರಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement