ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಜುಲೈ 10ರ ವರೆಗೆ ಅತಿ ಭಾರಿ ಗಾಳಿಮಳೆಯಾಗುವ ಮುನ್ಸೂಚನೆ

ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಮಳೆ ಮತ್ತಷ್ಟು ಬಿರುಸುಗೊಂಡಿದ್ದು, ಭಾರತೀಯ ಹವಾಮಾನ ಇಲಾಖೆ(IMD)ಯು ಕರ್ನಾಟಕದ ಹಲವು ಭಾಗಗಳಿಗೆ ಹೊಸದಾಗಿ ಮಳೆಯ ಮುನ್ಸೂಚನೆ ನೀಡಿದೆ. ಮುಂದಿನ ಕೆಲವು ದಿನಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರಿಯಿಂದ ಅತಿ ಭಾರೀ ಮಳೆ, ಗುಡುಗು-ಮಿಂಚು, ಬಲವಾದ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.
ಹವಾಮಾನ ಇಲಾಖೆ ನೀಡಿರುವ ಇತ್ತೀಚಿನ ಮುನ್ಸೂಚನೆಯ ಪ್ರಕಾರ, ಕರಾವಳಿ ಕರ್ನಾಟಕದಲ್ಲಿ ಜುಲೈ 9ರವರೆಗೆ ಅತಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಅದೇ ವೇಳೆ ದಕ್ಷಿಣ ಒಳನಾಡು ಕರ್ನಾಟಕ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಜುಲೈ 10ರವರೆಗೆ ತೀವ್ರ ಮಳೆಯಾಗಲಿದೆ ಎಂದು ಹೇಳಿದೆ.
ಸೋಮವಾರ ಬಿಡುಗಡೆಗೊಂಡ ಹವಾಮಾನ ವರದಿಯ ಪ್ರಕಾರ, ರಾಜ್ಯದಾದ್ಯಂತ ಗುಡುಗು-ಮಿಂಚು ಹಾಗೂ ಬಲವಾದ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇದೆ. ಕೆಲವು ಪ್ರದೇಶಗಳಲ್ಲಿ ಭಾರಿಯಿಂದ ಅತಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.
ಕರಾವಳಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯ ಮುನ್ನೆಚ್ಚರಿಕೆ
ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರ (KSNDMC) ಪ್ರಕಟಿಸಿರುವ ಜಿಲ್ಲಾವಾರು ಮುನ್ಸೂಚನೆಯ ಪ್ರಕಾರ, ಕರಾವಳಿ ಕರ್ನಾಟಕದಲ್ಲಿ ಮುಂದಿನ ಒಂದು ವಾರವೂ ಮಳೆಯ ತೀವ್ರತೆ ಹೆಚ್ಚಾಗಿರಲಿದೆ. ಜುಲೈ 6ರಿಂದ ಜುಲೈ 8ರವರೆಗೆ ಅತಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಬಳಿಕ ಜುಲೈ 11ರವರೆಗೆ ಭಾರಿ ಮಳೆಯು ಮುಂದುವರಿಯಲಿದೆ. ಈ ಅವಧಿಯಲ್ಲಿ ಗುಡುಗು-ಮಿಂಚು, ಬಿರುಸಿನ ಗಾಳಿ ಉಂಟಾಗುವ ಸಾಧ್ಯತೆಯಿದೆ.
ವಿಶೇಷವಾಗಿ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆಯಾಗುವ ಸಾಧ್ಯತೆ ಇದ್ದು, ಜಲಾವೃತ, ನದಿಗಳ ನೀರಿನ ಮಟ್ಟ ಏರಿಕೆ ಹಾಗೂ ಸ್ಥಳೀಯವಾಗಿ ಪ್ರವಾಹ ಪರಿಸ್ಥಿತಿಯ ಅಪಾಯ ಎದುರಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಗೆ ವಿಶೇಷ ಮುನ್ಸೂಚನೆ
ಉತ್ತರ ಕನ್ನಡ ಜಿಲ್ಲೆಯಲ್ಲಿ ಜುಲೈ 9ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಅದರಲ್ಲೂ ಜುಲೈ 6 ಹಾಗೂ ಜುಲೈ 7ರಂದು ಅತಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ನಿವಾಸಿಗಳು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಐಎಂಡಿ (IMD) ಸೂಚಿಸಿದೆ.
ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆಯ ಅಬ್ಬರ
ಐಎಂಡಿ ನೀಡಿದ ಮುನ್ಸೂಚನೆಯಂತೆ, ಉತ್ತರ ಒಳನಾಡಿನಲ್ಲಿ ಜುಲೈ 6 ಮತ್ತು 7ರಂದು ಅತಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಜುಲೈ 11ರವರೆಗೆ ಮಳೆ ಮುಂದುವರಿಯಲಿದೆ. ಈ ಭಾಗದ ಹಲವು ಜಿಲ್ಲೆಗಳಲ್ಲಿ ಗುಡುಗು-ಮಿಂಚಿನೊಂದಿಗೆ ಮಳೆಯಾಗುವ ಸಾಧ್ಯತೆ ಇದೆ.
ಇದೇ ವೇಳೆ, ದಕ್ಷಿಣ ಒಳನಾಡಿನಲ್ಲಿ ಜುಲೈ 6ರಿಂದ ಜುಲೈ 8ರವರೆಗೆ ಅತಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಜುಲೈ 9 ಮತ್ತು 10ರಂದು ಭಾರಿ ಮಳೆಯಾಗಲಿದ್ದು, ನಂತರ ವಾರಾಂತ್ಯದ ವೇಳೆಗೆ ಮಳೆಯ ತೀವ್ರತೆ ಕ್ರಮೇಣ ಕಡಿಮೆಯಾಗುವ ಸಾಧ್ಯತೆ ಇದೆ.
ಕಳೆದ 24 ಗಂಟೆಗಳಲ್ಲಿ ದಾಖಲಾಗಿದ ಭಾರೀ ಮಳೆ
ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಕಳೆದ 24 ಗಂಟೆಗಳಲ್ಲಿ ಹಲವೆಡೆ ದಾಖಲೆ ಪ್ರಮಾಣದ ಮಳೆಯಾಗಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ–ಹೊಸಹಳ್ಳಿ ಪ್ರದೇಶದಲ್ಲಿ 143.5 ಮಿ.ಮೀ. ಮಳೆಯಾಗಿದ್ದು, ರಾಜ್ಯದಲ್ಲೇ ಅತಿ ಹೆಚ್ಚು ಮಳೆಯಾಗಿದೆ. ಉಡುಪಿ ಜಿಲ್ಲೆಯ ಅಜ್ರಿ ಪ್ರದೇಶದಲ್ಲಿ 124 ಮಿ.ಮೀ. ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿವಳ್ಳಿ ಪ್ರದೇಶದಲ್ಲಿ 111 ಮಿ.ಮೀ. ಮಳೆಯಾಗಿದೆ. ಇದಲ್ಲದೆ ಬಸರೂರು, ರಾಮನಗರ, ಕಮ್ಮರಡಿ, ಬೇಡ್ಕಣಿ, ಮುಂಬಾರು ಹಾಗೂ ಅರುವತೊಕ್ಲು ಸೇರಿದಂತೆ ಹಲವು ಪ್ರದೇಶಗಳಲ್ಲಿ 88 ಮಿ.ಮೀ.ದಿಂದ 102 ಮಿ.ಮೀ.ವರೆಗೆ ಮಳೆಯಾಗಿದೆ ಎಂದು ವರದಿ ತಿಳಿಸಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement