ಶಿರಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ʼಮಾಧ್ಯಮ ಶ್ರೀʼ ಪ್ರಶಸ್ತಿಗೆ ಪತ್ರಕರ್ತ ರವಿ ನಾಯ್ಕ ಆಯ್ಕೆ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ವಾರ್ಷಿಕವಾಗಿ ಕೊಡಮಾಡುವ ಮಾಧ್ಯಮ ಶ್ರೀ ಪ್ರಶಸ್ತಿಗೆ ಜನಮಾಧ್ಯಮ ದಿನಪತ್ರಿಕೆಯ ಹಿರಿಯ ಉಪಸಂಪಾದಕ ರವಿ ನಾಯ್ಕ ಅವರನ್ನು ಆಯ್ಕೆ ಮಾಡಲಾಗಿದೆ.
ಇಲ್ಲಿನ ಪತ್ರಿಕಾ ಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಕೆರೆಗದ್ದೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಣಿ ಸಭೆಯಲ್ಲಿ ಮಾಧ್ಯಮ ಶ್ರೀ ಪ್ರಶಸ್ತಿಗೆ ರವಿ ನಾಯ್ಕ ಅವರನ್ನು ಸರ್ವಾಮತದಿಂದ ಆಯ್ಕೆ ಮಾಡಲಾಯಿತು.
೨೦೦೧ರಲ್ಲಿ ಪತ್ರಿಕಾ ಕ್ಷೇತ್ರಕ್ಕೆ ಕಾಲಿಟ್ಟ ರವಿ ನಾಯ್ಕ, ೨೫ ವರ್ಷಗಳಿಗೂ ಹೆಚ್ಚಿನ ಅವಧಿಯಿಂದ ಈ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ತಮ್ಮ ವೃತ್ತಿ ಆರಂಭದಿಂದಲೂ ಜನಮಾಧ್ಯಮ ಪತ್ರಿಕೆಯಲ್ಲೇ ಕೆಲಸ ಮಾಡುತ್ತಿರುವ ಅವರು ವರದಿಗಾರರಾಗಿ, ಉಪಸಂಪಾದಕರಾಗಿ, ಪ್ರಸ್ತುತ ಅದೇ ಪತ್ರಿಕೆಯಲ್ಲಿ ಹಿರಿಯ ಉಪಸಂಪಾದಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಶಿರಸಿ ತಾಲೂಕು ಯಡಳ್ಳಿ ಸಮೀಪದ ದೀಗೊಪ್ಪದ ರವಿ ನಾಯ್ಕ ಎಂಎ ಸ್ನಾತಕೋತ್ತರ ಪದವೀಧರರು. ದೀಗೊಪ್ಪದ ಗಣಪತಿ ನಾಯ್ಕ ಮತ್ತು ಸೀತಾ ನಾಯ್ಕ ದಂಪತಿ ಪುತ್ರರಾದ ಇವರು ಸರಳ, ಸಜ್ಜನಿಕೆಯ ವ್ಯಕ್ತಿತ್ವದವರಾಗಿದ್ದಾರೆ.
ಇವರಿಗೆ ಮುಂಬರುವ ಪತ್ರಿಕಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ತಾಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ ಹಿರೇಕೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕದ ಆರು ಜಿಲ್ಲೆಗಳಲ್ಲಿ ಅತ್ಯಂತ ಭಾರಿ ಮಳೆ ಮುನ್ಸೂಚನೆ ; ರೆಡ್ ಅಲರ್ಟ್ ಘೋಷಣೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement