ಜೈಪುರ : ಆಸ್ತಿ ಹಾಗೂ ಅನುಕಂಪದ ಆಧಾರದ ಮೇಲೆ ದೊರೆಯುವ ಸರ್ಕಾರಿ ಉದ್ಯೋಗವನ್ನು ತಾನು ಪಡೆಯುವ ಉದ್ದೇಶದಿಂದ 23 ವರ್ಷದ ಯುವತಿಯೊಬ್ಬಳು ತನ್ನ ಸಂಬಂಧಿಕರ ಜೊತೆ ಸೇರಿ ತಾಯಿಯನ್ನೇ ಹತ್ಯೆಗೈದು, ಅದನ್ನು ರಸ್ತೆ ಅಪಘಾತದಂತೆ ಬಿಂಬಿಸಲು ಯತ್ನಿಸಿದ್ದ ಬೆಚ್ಚಿಬೀಳಿಸುವ ಘಟನೆ ಜೈಪುರದಲ್ಲಿ ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಆಯುಷಿ, ಆಕೆಯ ಚಿಕ್ಕಪ್ಪ ಹಾಗೂ ಸೋದರ ಸಂಬಂಧಿ ಸೇರಿದಂತೆ ಒಟ್ಟು ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಪರಾರಿಯಾಗಿರುವ ಇನ್ನೊಬ್ಬ ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಪ್ರತಾಪ ನಗರದ ರವೀಂದ್ರ ನಗರ ನಿವಾಸಿ 45 ವರ್ಷದ ನೀರಜ್ ಶರ್ಮಾ ಅವರು ಜುಲೈ 3ರಂದು ಅತಿವೇಗವಾಗಿ ಬಂದ ಸ್ಕಾರ್ಪಿಯೊ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದರು. ಆರಂಭದಲ್ಲಿ ಈ ಘಟನೆಯನ್ನು ರಸ್ತೆ ಅಪಘಾತವೆಂದು ಬಿಂಬಿಸಲು ಆರೋಪಿಗಳು ಪ್ರಯತ್ನಿಸಿದ್ದರು.
ಆದರೆ, ಮೃತ ಮಹಿಳೆಯ ಸಹೋದರ ನೀರಜ್ ಶರ್ಮಾ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿದಾಗ ಇದು ಅಪಘಾತವಲ್ಲ, ಪೂರ್ವಯೋಜಿತ ಹತ್ಯೆ ಎಂಬುದು ಬಹಿರಂಗವಾಯಿತು.
ಈ ಕುರಿತು ಮಾಹಿತಿ ನೀಡಿದ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತೆ ರಂಜಿತಾ ಶರ್ಮಾ, “ಮಹಿಳೆಯ ಸಾವನ್ನು ಅಪಘಾತದಂತೆ ತೋರಿಸಲು ಆರೋಪಿಗಳು ಸಂಚು ರೂಪಿಸಿದ್ದರು. ಮಹಿಳೆಯನ್ನು ಹತ್ಯೆ ಮಾಡಲು ಸುಪಾರಿ ನೀಡಿ ದುಷ್ಕರ್ಮಿಗಳನ್ನು ನೇಮಿಸಲಾಗಿತ್ತು. ಬಳಿಕ ಅದನ್ನು ರಸ್ತೆ ಅಪಘಾತವೆಂದು ಬಿಂಬಿಸುವ ಪ್ರಯತ್ನ ನಡೆಸಲಾಗಿತ್ತು,” ಎಂದು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಸುಮಾರು ಒಂದು ವರ್ಷದ ಹಿಂದೆ ನೀರಜ್ ಶರ್ಮಾ ಅವರ ಪತಿ ವಿಜಯಕುಮಾರ ಶರ್ಮಾ ನಿಧನರಾಗಿದ್ದರು. ಅವರ ಸಾವಿನ ಬಳಿಕ ಅನುಕಂಪದ ಆಧಾರದ ಮೇಲೆ ನೀರಜ್ ಶರ್ಮಾ ಅವರಿಗೆ ನ್ಯಾಯಾಲಯದಲ್ಲಿ ಕಿರಿಯ ಲಿಪಿಕ (ಎಲ್ಡಿಸಿ) ಹುದ್ದೆ ದೊರಕಿತ್ತು.
ಆರೋಪಿ ಆಯುಷಿ ತನ್ನ ತಂದೆಯ ಮರಣದ ನಂತರ ಆ ಉದ್ಯೋಗವನ್ನು ತಾಯಿಯ ಬದಲಿಗೆ ತಾನೇ ಗಿಟ್ಟಿಸಿಕೊಳ್ಳಲು ಬಯಸಿದ್ದಳು. ಆದರೆ ತಾಯಿಯೇ ಆ ಹುದ್ದೆಯನ್ನು ಪಡೆದಿದ್ದರಿಂದ ಮನಸ್ತಾಪ ಉಂಟಾಗಿತ್ತು ಎಂದು ವಿಚಾರಣೆ ವೇಳೆ ಆರೋಪಿಯು ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕುಟುಂಬದ ಆಸ್ತಿಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮತ್ತು ಸರ್ಕಾರಿ ಉದ್ಯೋಗವನ್ನು ತಾನೇ ಪಡೆಯಬೇಕು ಎಂದು ತನ್ನ ಸ್ವಂತ ತಾಯಿಯ ಕೊಲೆಗೆ ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆಯುಷಿ ಶರ್ಮಾ ತನ್ನ ಚಿಕ್ಕಪ್ಪ ಮತ್ತು ಸೋದರಸಂಬಂಧಿಯೊಂದಿಗೆ ಸಂಚು ರೂಪಿಸಿ, 7 ಲಕ್ಷ ರೂ.ಗಳಿಗೆ ಸುಪಾರಿ ಹಂತಕರನ್ನು ನೇಮಿಸಿಕೊಂಡಿದ್ದಳು. ಕೊಲೆಯನ್ನು ರಸ್ತೆ ಅಪಘಾತದಂತೆ ಬಿಂಬಿಸಲು ನೀರಜ್ ಶರ್ಮಾ ಅವರಿಗೆ ಸ್ಕಾರ್ಪಿಯೋದಿಂದ ಡಿಕ್ಕಿ ಹೊಡೆಸಲಾಗಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿರುವ ಏಳು ಆರೋಪಿಗಳನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಯನ್ನು ಬಂಧಿಸಲು ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ