ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಮೇಲೆ ಹಲ್ಲೆ : ಕಾರ್ಪೊರೇಟರ್ ಬಂಧನ

ಥಾಣೆ : ಕಲ್ಯಾಣ-ಡೊಂಬಿವಲಿ ಮಹಾನಗರ ಪಾಲಿಕೆ (ಕೆಡಿಎಂಸಿ) ನಡೆಸುತ್ತಿರುವ ಶಾಸ್ತ್ರಿನಗರ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಶಿವಸೇನೆ (ಏಕನಾಥ ಶಿಂಧೆ ) ಕಾರ್ಪೊರೇಟರ್ ರಮೇಶ ಮ್ಹಾತ್ರೆ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯ ಸಂಬಂಧ ಮ್ಹಾತ್ರೆ ಹಾಗೂ ಇನ್ನೂ ಐವರ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದ್ದು, ಅದರ ಮುಂದುವರಿದ ಕ್ರಮವಾಗಿ ಬಂಧನ ನಡೆದಿದೆ.
ಮಹಾರಾಷ್ಟ್ರದ   ಥಾಣೆ ಜಿಲ್ಲೆಯಲ್ಲಿರುವ ಈ ಪಾಲಿಕೆ ಆಸ್ಪತ್ರೆಯಲ್ಲಿ ನವಜಾತ ಶಿಶುವಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವುದರಿಂದ ಅದನ್ನು ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸುವಂತೆ ವೈದ್ಯರು ಕುಟುಂಬದವರಿಗೆ ಸಲಹೆ ನೀಡಿದ್ದರು. ಈ ಸಲಹೆಯ ಬಳಿಕ ಕುಟುಂಬದ ಸದಸ್ಯರು ಹಾಗೂ ವೈದ್ಯರ ನಡುವೆ ವಾಗ್ವಾದ ಉಂಟಾಗಿ, ನಂತರ ಅದು ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಮೇಲೆ ನಡೆದಿರುವ ಆರೋಪಿತ ಹಲ್ಲೆಗೆ ತಿರುಗಿದೆ ಎಂದು ತಿಳಿದುಬಂದಿದೆ.

ಸೋಮವಾರ ಸಂಜೆ ನಡೆದ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆದ ನಂತರ ಭಾರೀ ಚರ್ಚೆಗೆ ಗ್ರಾಸವಾಯಿತು. ವಿಡಿಯೊ ಹರಿದಾಡುತ್ತಿದ್ದಂತೆಯೇ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ವೈದ್ಯಕೀಯ ವಲಯದವರು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಪೊಲೀಸರ ಪ್ರಕಾರ, ನವಜಾತ ಶಿಶುವನ್ನು ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ ನಂತರ, ಕಾರ್ಪೊರೇಟರ್ ರಮೇಶ ಮ್ಹಾತ್ರೆ ಹಾಗೂ ಅವರ ಬೆಂಬಲಿಗರು ಇಬ್ಬರು ವೈದ್ಯರು ಮತ್ತು ಆಸ್ಪತ್ರೆಯ ಇತರ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಐಎಂಎ ಎಚ್ಚರಿಕೆಯ ಬಳಿಕ ಕ್ರಮ
ಘಟನೆಯ ವಿರುದ್ಧ ಸಾರ್ವಜನಿಕ ಒತ್ತಡ ಹೆಚ್ಚಾಗಿದ್ದು, ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕೂಡ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ತಕ್ಷಣವೇ ಕಾನೂನು ಕ್ರಮ ಕೈಗೊಳ್ಳದಿದ್ದರೆ ಪ್ರದೇಶದಾದ್ಯಂತ ಕ್ಲಿನಿಕ್‌ಗಳು ಮತ್ತು ಆಸ್ಪತ್ರೆಗಳನ್ನು ಬಂದ್ ಮಾಡುವುದಾಗಿ ಐಎಂಎ ಎಚ್ಚರಿಕೆ ನೀಡಿತ್ತು. ಇದರ ಬೆನ್ನಲ್ಲೇ ಮಂಗಳವಾರ ರಾತ್ರಿ ಪೊಲೀಸರು ರಮೇಶ ಮ್ಹಾತ್ರೆ ಹಾಗೂ ಇನ್ನೂ ಐವರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಪ್ರಮುಖ ಸುದ್ದಿ :-   ಇಂಡೋನೇಷ್ಯಾ ಸ್ವಾತಂತ್ರ್ಯ ಹೋರಾಟದಲ್ಲಿ ಬಿಜು ಪಟ್ನಾಯಕ್ ಪಾತ್ರ ಕೊಂಡಾಡಿದ ಪ್ರಧಾನಿ ಮೋದಿ : ಇದರ ಹಿಂದಿದೆ ಸಾಹಸದ ಕಥೆ

ಘಟನೆ  ಖಂಡಿಸಿದ ಶಿವಸೇನೆ ಸಂಸದ
ಇದೇ ವೇಳೆ, ದೆಹಲಿಯಿಂದ ಪ್ರತಿಕ್ರಿಯಿಸಿದ ಥಾಣೆ ಲೋಕಸಭಾ ಕ್ಷೇತ್ರದ ಶಿವಸೇನೆ ಸಂಸದ ನರೇಶ ಮ್ಹಾಸ್ಕೆ, ಈ ಘಟನೆಯಿಂದ ಪಕ್ಷ ಸಂಪೂರ್ಣವಾಗಿ ದೂರ ಉಳಿದಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಆರೋಪಿತ ಕಾರ್ಪೊರೇಟರ್ ವಿರುದ್ಧ ಈಗಾಗಲೇ ಶಿಸ್ತು ಕ್ರಮ ಆರಂಭಿಸಲಾಗಿದೆ ಎಂದರು.
“ಈ ಘಟನೆಗೆ ಪಕ್ಷ ಯಾವುದೇ ರೀತಿಯ ಬೆಂಬಲ ನೀಡಿಲ್ಲ, ಮುಂದೆಯೂ ನೀಡುವುದಿಲ್ಲ. ಮ್ಹಾತ್ರೆ ಹಲ್ಲೆ ನಡೆಸಿರುವುದು ನಿಜ. ಅವರು ಐದು-ಆರು ಬಾರಿ ಆಯ್ಕೆಯಾಗಿರುವ ಹಿರಿಯ ನಾಯಕನಾಗಿದ್ದರೂ, ಅವರ ಇಂತಹ ವರ್ತನೆಯನ್ನು ಪಕ್ಷ ಯಾವತ್ತೂ ಸಹಿಸುವುದಿಲ್ಲ,” ಎಂದು ಮ್ಹಾಸ್ಕೆ ಹೇಳಿದರು.
ಆರೋಪಿತ ಕಾರ್ಪೊರೇಟರ್‌ಗೆ ಪಕ್ಷದ ಉನ್ನತ ನಾಯಕತ್ವ ಈಗಾಗಲೇ ಶೋಕಾಸ್ ನೋಟಿಸ್ ಜಾರಿ ಮಾಡಿದೆ ಎಂದ ಅವರು, “ಅವರ ವಿರುದ್ಧ ಯಾವ ರೀತಿಯ ಶಿಸ್ತು ಕ್ರಮ ಕೈಗೊಳ್ಳಬೇಕು ಎಂಬುದನ್ನು ಪಕ್ಷದ ಉನ್ನತ ನಾಯಕತ್ವ ಹಾಗೂ ಶಿಸ್ತು ಸಮಿತಿ ಅಂತಿಮವಾಗಿ ನಿರ್ಧರಿಸಲಿದೆ. ಜೊತೆಗೆ, ಕಾನೂನು ಜಾರಿ ಸಂಸ್ಥೆಗಳು ಕೈಗೊಳ್ಳುವ ಕ್ರಮಕ್ಕೆ ಪಕ್ಷ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ. ಕಾನೂನು ತನ್ನ ಕೆಲಸವನ್ನು ಸ್ವತಂತ್ರವಾಗಿ ಮಾಡಲಿದೆ” ಎಂದು ಹೇಳಿದರು.

ಪ್ರಮುಖ ಸುದ್ದಿ :-   ವಿಡಿಯೋ | ಕರ್ತವ್ಯದಲ್ಲಿದ್ದ ಮಹಿಳಾ ವೈದ್ಯೆ-ಸಿಬ್ಬಂದಿ ಮೇಲೆ ಕಾರ್ಪೊರೇಟರ್ ಹಲ್ಲೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement