ಬಾಗೇಪಲ್ಲಿ : ಪಾಕಿಸ್ತಾನ ಪೌರತ್ವದ ಮಾಹಿತಿ ಮುಚ್ಚಿಟ್ಟು ರೇಷನ್ ಕಾರ್ಡ್‌, ವೋಟರ್‌ ಐಡಿ ಪಡೆದಿದ್ದ ಪಾಕ್ ಮಹಿಳೆ, ಪುತ್ರನ ಬಂಧನ

ಚಿಕ್ಕಬಳ್ಳಾಪುರ : ತನ್ನ ಪಾಕಿಸ್ತಾನಿ ಪೌರತ್ವದ ಮಾಹಿತಿಯನ್ನು ಮುಚ್ಚಿಟ್ಟು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಕ್ರಮವಾಗಿ ಪಡಿತರ ಚೀಟಿ (ರೇಷನ್ ಕಾರ್ಡ್) ಹಾಗೂ ಮತದಾರರ ಗುರುತಿನ ಚೀಟಿ (ವೋಟರ್ ಐಡಿ) ಪಡೆದ ಆರೋಪದಡಿ ಪಾಕಿಸ್ತಾನ ಮೂಲದ ಮಹಿಳೆ ಹಾಗೂ ಆಕೆಯ ಪುತ್ರನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ಫರಾ ನಾಜ್ ಹಾಗೂ ಆಕೆಯ ಪುತ್ರ ಮೊಹಮ್ಮದ್ ಫರ್ದೀನ್ ಎಂದು ಗುರುತಿಸಲಾಗಿದೆ.ಪೊಲೀಸರ ಮಾಹಿತಿ ಪ್ರಕಾರ, ಬಾಗೇಪಳ್ಳಿಯ ನಿವಾಸಿಯಾಗಿರುವ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ಉದ್ಯೋಗದಲ್ಲಿದ್ದ ಮೊಹಮ್ಮದ್ ಅಯೂಬ್ ಖಾನ್ ಅವರು ಅಲ್ಲಿಯೇ ಪಾಕಿಸ್ತಾನಿ ಪ್ರಜೆ ಫರಾ ನಾಜ್ ಅವರನ್ನು ವಿವಾಹವಾಗಿದ್ದರು. ದಂಪತಿಗೆ ನಾಲ್ವರು ಮಕ್ಕಳಿದ್ದು, ಅವರಲ್ಲಿ ಮೊಹಮ್ಮದ್ ಫರ್ದೀನ್ ಪಾಕಿಸ್ತಾನದಲ್ಲಿ ಜನಿಸಿದ್ದಾನೆ.
ಅಯೂಬ್ ಖಾನ್ ಹಾಗೂ ಉಳಿದ ಮೂವರು ಮಕ್ಕಳು ಭಾರತೀಯ ಪ್ರಜೆಗಳಾಗಿದ್ದರೆ, ಫರಾ ನಾಜ್ ಮತ್ತು ಮೊಹಮ್ಮದ್ ಫರ್ದೀನ್ ಪಾಕಿಸ್ತಾನದ ಪ್ರಜೆಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ ಪೊಲೀಸರು ಈ ಕುರಿತು ಸ್ಪಷ್ಟೀಕರಣ ಕೋರಿದ ಬಳಿಕ, ಜಿಲ್ಲಾಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ತಮ್ಮ ಪೌರತ್ವಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಮುಚ್ಚಿಟ್ಟು ಪಡಿತರ ಚೀಟಿ ಪಡೆದಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ, ಪಡಿತರ ಚೀಟಿಯನ್ನು ಜಿಲ್ಲಾಧಿಕಾರಿಗಳು ರದ್ದುಗೊಳಿಸಿದ್ದಾರೆ. ಅಲ್ಲದೆ, ಸಂಬಂಧಿತ ಪ್ರಾಧಿಕಾರವು ಅವರ ಮತದಾರರ ಗುರುತಿನ ಚೀಟಿಯನ್ನೂ ರದ್ದುಗೊಳಿಸಿದೆ.
ಬಾಗೇಪಳ್ಳಿ ತಹಶೀಲ್ದಾರ್ ನೀಡಿದ ದೂರಿನ ಆಧಾರದ ಮೇಲೆ, ಫರಾ ನಾಜ್ ಹಾಗೂ ಮೊಹಮ್ಮದ್ ಫರ್ದೀನ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್), ವಿದೇಶಿಯರ ಕಾಯ್ದೆ (Foreigners Act) ಹಾಗೂ ಜನಪ್ರತಿನಿಧಿಗಳ ಕಾಯ್ದೆ (Representation of the People Act) ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರು: ʼಟಾಯ್ಲೆಟ್‌ಗೆ ಹೋಗ್ಬೇಕು' ಎಂದು ಮನೆಗೆ ನುಗ್ಗಿದ ಡೆಲಿವರಿ ಬಾಯ್ ; ಮಹಿಳೆ ಎದುರು ಅಶ್ಲೀಲ ವರ್ತನೆ ಆರೋಪ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement